samachara
www.samachara.com
ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಇನ್ನಿಲ್ಲ
UPDATE

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಇನ್ನಿಲ್ಲ

ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಕೊನೆಯುಸಿರೆಳೆದಿದ್ದಾರೆ.

Team Samachara

ಶತಾಯುಷಿ ಶಿವಕುಮಾರ ಸ್ವಾಮೀಜಿ ತುಮಕೂರಿನ ಕ್ಯಾತ್ಸಂದ್ರದ ಸಿದ್ಧಗಂಗಾ ಮಠದಲ್ಲಿ ಸೋಮವಾರ ಕೊನೆಯುಸಿರೆಳೆದಿದ್ದಾರೆ.

111 ವರ್ಷದ ಸ್ವಾಮೀಜಿ ಕಳೆದ ತಿಂಗಳು ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಠಕ್ಕೆ ಮರಳಿದ್ದರು. ಪಿತ್ತನಾಳದ ಶಸ್ತ್ರಚಿಕಿತ್ಸೆಯ ಬಳಿಕ ಸಿದ್ಧಗಂಗಾ ಮಠದಲ್ಲೇ ವಿಶೇಷ ಐಸಿಯು ವ್ಯವಸ್ಥೆ ಮಾಡಿಕೊಂಡು ಸ್ವಾಮೀಜಿಗೆ ಚಿಕಿತ್ಸೆ ಮುಂದುವರಿಸಲಾಗಿತ್ತು.

ಬಳಿಕ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ಸ್ವಾಮೀಜಿ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚೆಗೆ ಮತ್ತೆ ಆಸ್ಪತ್ರೆಯಿಂದ ಹಳೇ ಮಠಕ್ಕೆ ಅವರನ್ನು ಸ್ಥಳಾಂತರಿಸಿ, ಮಠದಲ್ಲೆ ಚಿಕಿತ್ಸೆ ಕೊಡಲಾಗುತ್ತಿತ್ತು. ಭಾನುವಾರ ರಾತ್ರಿಯಿಂದ ಸ್ವಾಮೀಜಿ ಅವರ ಆರೋಗ್ಯ ಕ್ಷೀಣಿಸಲು ಶುರುವಾಗಿತ್ತು. ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು.

ಸೋಮವಾರ ಬೆಳಿಗ್ಗೆ ವೇಳೆಗೆ ಸ್ವಾಮೀಜಿ ಆಪ್ತ ವೈದ್ಯರೂ ಅವರ ಆರೋಗ್ಯ ಕ್ಷೀಣಿಸುತ್ತಿರುವ ಮಾಹಿತಿ ನೀಡಿದ್ದರು. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಠದ ಕಿರಿಯ ಸ್ವಾಮೀಜಿ ಹಾಗೂ ಲಿಂಗಾಯತ ಮುಖಂಡರೊಂದಿಗೆ ಸಭೆ ನಡೆಸಿ, ಮಧ್ಯಾಹ್ನ 2 ಗಂಟೆಗೆ ಸ್ವಾಮೀಜಿ ನಿಧನವನ್ನು ಮಾಧ್ಯಮಗಳ ಮುಂದೆ ಖಚಿತಪಡಿಸಿದರು.

ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಸರಕಾರಿ ರಜೆ ಘೋಷಿಸಲಾಗಿದೆ.

ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ:

ಜ್ವರದ ಕಾರಣಕ್ಕೆ ಸ್ವಾಮೀಜಿ ಅವರನ್ನು ಡಿಸೆಂಬರ್‌ 1ರಂದು ಸಿದ್ಧಗಂಗಾ ಮಠದಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಬಿಜಿಎಸ್‌ ಆಸ್ಪತ್ರೆಯಲ್ಲಿ ಒಂದು ವಾರ ಚಿಕಿತ್ಸೆ ನೀಡಿದರೂ ಸ್ವಾಮೀಜಿ ಆರೋಗ್ಯದಲ್ಲಿ ಸುಧಾರಣೆ ಕಂಡಿರಲಿಲ್ಲ. ಹೀಗಾಗಿ ಡಿಸೆಂಬರ್‌ 7ರಂದು ಏರ್‌ ಆಂಬುಲೆನ್ಸ್‌ ಮೂಲಕ ಅವರನ್ನು ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಡಿಸೆಂಬರ್‌ 8ರಂದು ರೇಲಾ ಆಸ್ಪತ್ರೆಯ ವೈದ್ಯರು ಸ್ವಾಮೀಜಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದರು. ಪಿತ್ತನಾಳದಲ್ಲಿ ಸೋಂಕಿನ ಭಾಗಕ್ಕೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಪಿತ್ತನಾಳವನ್ನು ಸಣ್ಣ ಕರುಳಿಗೆ ಜೋಡಿಸಿ, ಈ ಮೊದಲು ಪಿತ್ತನಾಳದಲ್ಲಿ ಅಳವಡಿಸಿದ್ದ ಸ್ಟೆಂಟ್‌ಗಳನ್ನು ತೆಗೆಯಲಾಗಿತ್ತು. ಈ ಶಸ್ತ್ರಚಿಕಿತ್ಸೆ ಯಶಸ್ವಿಯೂ ಆಗಿತ್ತು. ಶಸ್ತ್ರಚಿಕಿತ್ಸೆ ನಂತರ ಸುಧಾರಿಸಿಕೊಂಡಿದ್ದ ಸ್ವಾಮೀಜಿಯನ್ನು ಡಿಸೆಂಬರ್‌ 19ರಂದು ಸಿದ್ಧಗಂಗಾ ಮಠಕ್ಕೆ ತರೆತರಲಾಗಿತ್ತು.

ಸ್ವಾಮೀಜಿಯ ಚಿಕಿತ್ಸೆಗೆಂದು ಸಿದ್ಧಗಂಗಾ ಮಠದ ಹಳೆಯ ಮಠದ ಸ್ವಾಮೀಜಿ ಕೊಠಡಿಯಲ್ಲೇ ಐಸಿಯು ವ್ಯವಸ್ಥೆ ಮಾಡಲಾಗಿತ್ತು. ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಬಂದಿದ್ದ ಸ್ವಾಮೀಜಿ ಗೆಲುವಾಗಿದ್ದರು. ಮಠಕ್ಕೆ ಭೇಟಿ ನೀಡುತ್ತಿದ್ದ ಗಣ್ಯ ಭಕ್ತರ ಜತೆಗೆ ಸ್ವಾಮೀಜಿ ಮಾತನ್ನಾಡುತ್ತಿದ್ದರು.

ಆದರೆ, ಡಿಸೆಂಬರ್‌ 29 ರಂದು ಸ್ವಾಮೀಜಿಗೆ ಶ್ವಾಸಕೋಶದಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿತ್ತು. ಡಿಸೆಂಬರ್‌ 30ರ ವೇಳೆಗೆ ಶ್ವಾಸಕೋಶದ ಸೋಂಕು ಉಲ್ಬಣಿಸಿತ್ತು. “ಕಫ ಕಟ್ಟಿಕೊಂಡಿದ್ದರಿಂದ ಸೋಂಕು ಉಲ್ಬಣಿಸಿರುವುದು ರಕ್ತ ಪರೀಕ್ಷೆಯಲ್ಲಿ ದೃಢವಾಗಿದೆ” ಎಂದು ಚಿಕಿತ್ಸೆ ನಡೆಸುತ್ತಿರುವ ವೈದ್ಯರು ತಿಳಿಸಿದ್ದರು. ಹೀಗಾಗಿ ರೇಲಾ ಆಸ್ಪತ್ರೆಯ ವೈದ್ಯರ ಮಾರ್ಗದರ್ಶನದಲ್ಲಿ ಬಿಜಿಎಸ್‌ ಆಸ್ಪತ್ರೆ ಹಾಗೂ ಸಿದ್ಧಗಂಗಾ ಆಸ್ಪತ್ರೆಯ ವೈದ್ಯರ ತಂಡ ಮಠದಲ್ಲಿ ಸ್ವಾಮೀಜಿಗೆ ಚಿಕಿತ್ಸೆ ಮುಂದುವರಿಸಿತ್ತು.

ಸ್ವಾಮೀಜಿಯ ಹೊಟ್ಟೆ ಮತ್ತು ಶ್ವಾಸಕೋಶದಲ್ಲಿ ಪದೇ ಪದೇ ನೀರು ತುಂಬುತ್ತಿದ್ದರಿಂದ ಅದನ್ನು ಹೊರತೆಗೆಯುವ ಕಾರ್ಯವನ್ನು ಬಿಜಿಎಸ್‌ ಮತ್ತು ಸಿದ್ಧಗಂಗಾ ಆಸ್ಪತ್ರೆಯ ವೈದ್ಯರ ತಂಡ ನಿರಂತರವಾಗಿ ನಡೆಸುತ್ತಿತ್ತು. ಜತೆಗೆ ಆಗಾಗ ಕೃತಕ ಉಸಿರಾಟದ ಅಗತ್ಯವೂ ಬೀಳುತ್ತಿತ್ತು. ವೈದ್ಯರ ನಿರಂತರ ಪ್ರಯತ್ನದ ನಂತರವೂ ಚಿಕಿತ್ಸೆ ಫಲಕಾರಿಯಾಗದೆ ಸ್ವಾಮೀಜಿ ಅಸುನೀಗಿದ್ದಾರೆ.