samachara
www.samachara.com
ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಆರೋಗ್ಯ ಸ್ಥಿತಿ ಗಂಭೀರ
UPDATE

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಆರೋಗ್ಯ ಸ್ಥಿತಿ ಗಂಭೀರ

ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಉಸಿರಾಟದಲ್ಲಿ  ಏರುಪೇರಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

Team Samachara

ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಸ್ವಾಮೀಜಿ ಚಿಕಿತ್ಸೆ ನೋಡಿಕೊಳ್ಳುತ್ತಿರುವ ಆಪ್ತ ವೈದ್ಯ ಡಾ.ಪರಮೇಶ್ ಹೇಳಿದ್ದಾರೆ.

ಸೋಮವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸ್ವಾಮೀಜಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಭಾನುವಾರ ರಾತ್ರಿಯಿಂದ ರಕ್ತದೊತ್ತಡ ಹಾಗೂ ಉಸಿರಾಟದಲ್ಲಿ ಏರುಪೇರು ಆಗಿತ್ತು. ಅದೇ ಸ್ಥಿತಿ ಈಗಲೂ ಇದೆ. ಸ್ವಾಮೀಜಿ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದೆ. ನಾವು ತಜ್ಞ ವೈದ್ಯರ ಜೊತೆ ಸಂಪರ್ಕದಲ್ಲಿದ್ದು ಚಿಕಿತ್ಸೆ ಮುಂದುವರಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.

"ಸ್ವಾಮೀಜಿ ಅವರಿಗೆ ಪ್ರೋಟಿನ್‌ ಅಂಶ ತುಂಬಾ ಕಡಿಮೆಯಾಗಿದೆ. ಚಿಕಿತ್ಸೆ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸದ್ಯಕ್ಕೆ ಏನನ್ನೂ ಹೇಳುವ ಸ್ಥಿತಿಯಲ್ಲಿ ಇಲ್ಲ" ಎಂದು ಅವರು ಹೇಳಿದ್ದಾರೆ.

ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರಾಗಿರುವ ಕಾರಣ ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಠಕ್ಕೆ ಭೇಟಿ ನೀಡುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌, ಗೃಹ ಸಚಿವ ಎಂ.ಬಿ. ಪಾಟೀಲ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹಾಗೂ ಇತರೆ ಮಠಗಳ ಸ್ವಾಮೀಜಿಗಳು ಸಿದ್ಧಗಂಗಾ ಮಠಕ್ಕೆ ಬಂದಿದ್ದಾರೆ.

ಸಿದ್ಧಗಂಗಾ ಮಠದ ಆವರಣದಲ್ಲಿ ಪೆಂಡಾಲ್‌ ಹಾಗೂ ಬೃಹತ್‌ ಎಲ್‌ಇಡಿ ಪರದೆಗಳನ್ನು ಅಳವಡಿಸಲು ಸಿದ್ಧತೆಗಳು ನಡೆಯುತ್ತಿವೆ. ಭಕ್ತರ ದಂಡು ಮಠದ ಕಡೆಗೆ ಹರಿದು ಬರುತ್ತಿದೆ. ಮಠದ ಸುತ್ತಾ ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತುಮಕೂರಿನ ರಸ್ತೆಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ.