samachara
www.samachara.com
‘ಆಂಬಿಡೆಂಟ್ ವಂಚನೆ ಪ್ರಕರಣವನ್ನು ಮುಚ್ಚಿ ಹಾಕಲು ಸರಕಾರದಿಂದ ವ್ಯವಸ್ಥಿತ ಪ್ರಯತ್ನ’ – ರವಿಕೃಷ್ಣಾ ರೆಡ್ಡಿ 
UPDATE

‘ಆಂಬಿಡೆಂಟ್ ವಂಚನೆ ಪ್ರಕರಣವನ್ನು ಮುಚ್ಚಿ ಹಾಕಲು ಸರಕಾರದಿಂದ ವ್ಯವಸ್ಥಿತ ಪ್ರಯತ್ನ’ – ರವಿಕೃಷ್ಣಾ ರೆಡ್ಡಿ 

ಆಂಬಿಡೆಂಟ್‌ ಕಂಪನಿಯಲ್ಲಿ ಹಣ ಹೂಡಿ ಮೋಸಕ್ಕೆ ಒಳಗಾದ ಕುಟುಂಬಗಳಲ್ಲಿ ಇಲ್ಲಿಯವರೆಗೆ ಮೂವರು ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯಿದೆ.

ಆಂಬಿಡೆಂಟ್ ವಂಚನೆ ಪ್ರಕರಣವನ್ನು ಮುಚ್ಚಿ ಹಾಕಲು ಸರಕಾರ ವ್ಯವಸ್ಥಿತ ಪ್ರಯತ್ನ ನಡೆಸುತ್ತಿದೆ. ಭ್ರಷ್ಟ ರಾಜಕಾರಣಿಗಳನ್ನು ರಕ್ಷಿಸಲು ಸಂತ್ರಸ್ತರಿಗೆ ಅನ್ಯಾಯ ಮಾಡಲಾಗುತ್ತಿದ್ದು, ವಿಜಯ್ ಟಾಟಾ ಎಂಬ ಅಂತಾರಾಜ್ಯ ವಂಚಕನನ್ನು ರಕ್ಷಿಸಲು ಹಿರಿಯ ಪೊಲೀಸ್ ಅಧಿಕಾರಿಗಳ ಶಾಮೀಲಾಗಿದ್ದಾರೆ ಎಂದು ‘ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ’ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಆರೋಪಿಸಿದ್ದಾರೆ.

2016 ರಲ್ಲಿ ಬೆಂಗಳೂರಿನಲ್ಲಿ ಸಯ್ಯದ್ ಫರೀದ್ ಅಹಮದ್ ಎಂಬ ವ್ಯಕ್ತಿಯಿಂದ ಆರಂಭವಾದ ಆಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯಲ್ಲಿ ಇಲ್ಲಿಯವರೆಗೂ ಸುಮಾರು 15,000 ಕ್ಕೂ ಹೆಚ್ಚು ಅಮಾಯಕರು ಹಣ ತೊಡಗಿಸಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರು, ಕೆಳ ಮಧ್ಯಮ ವರ್ಗದವರು ಮತ್ತು ಮಧ್ಯಮ ವರ್ಗದ ಜನರು ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಸುಮಾರು 954 ಕೋಟಿ ರೂಪಾಯಿಯಷ್ಟು ಹಣವನ್ನು ಹಾಕಿ ಈಗ ವಂಚನೆಗೆ ಒಳಗಾಗಿದ್ದಾರೆ.

ಹೀಗೆ ವಂಚನೆಗೆ ಒಳಗಾದ ಜನ 2017 ರಿಂದಲೂ ನ್ಯಾಯಕ್ಕಾಗಿ ಮತ್ತು ತಮ್ಮ ಹಣಕ್ಕಾಗಿ ಹೋರಾಡುತ್ತಿದ್ದಾರೆ. ಹಲವು ನಿಷ್ಠಾವಂತ ಮತ್ತು ದಕ್ಷ ಪೊಲೀಸ್ ಅಧಿಕಾರಿಗಳ ಅತ್ಯುತ್ತಮ ತನಿಖೆ ಮತ್ತು ಕರ್ತವ್ಯ ನಿಷ್ಠೆಯ ಹೊರತಾಗಿಯೂ, ಕೆಲವು ಭ್ರಷ್ಟ ರಾಜಕಾರಣಿಗಳ ಮತ್ತು ಭ್ರಷ್ಟ ಹಿರಿಯ ಪೊಲೀಸ್ ಅಧಿಕಾರಿಗಳ ಜನದ್ರೋಹಿ ಮತ್ತು ಕರ್ತವ್ಯದ್ರೋಹಿ ಕೃತ್ಯಗಳಿಂದಾಗಿ ಇಂದಿಗೂ ಇವರಿಗೆಲ್ಲಾ ನ್ಯಾಯ ಸಿಕ್ಕಿಲ್ಲ ಎಂದು ಅವರು ದೂರಿದ್ದಾರೆ.

"ಹಣ ಹೂಡಿ ಮೋಸಕ್ಕೆ ಒಳಗಾದ ಕುಟುಂಬಗಳಲ್ಲಿ ಇಲ್ಲಿಯವರೆಗೆ ಮೂವರು ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಲಕ್ಷಾಂತರ ರೂಪಾಯಿಗಳನ್ನು ಹೂಡಿರುವ ಹಲವಾರು ಜನ ಈಗ ತಮ್ಮ ಕೌಟುಂಬಿಕ ಖರ್ಚು ವೆಚ್ಚಗಳನ್ನು ಮತ್ತು ಮಾರಣಾಂತಿಕ ಕಾಯಿಲೆಗಳಿಗೆ ಚಿಕಿತ್ಸಾ ವೆಚ್ಚಗಳನ್ನು ಭರಿಸಲಾಗದೆ ಒದ್ದಾಡುತ್ತಿದ್ದಾರೆ,” ಎಂದು ರವಿಕೃಷ್ಣಾ ರೆಡ್ಡಿ ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.

ಈ ಇಡೀ ಹಗರಣದಲ್ಲಿ ವಂಚನೆಗೊಳಗಾಗಿ ಸಂತ್ರಸ್ತರಾಗಿರುವ ಜನರಿಗೆ ನ್ಯಾಯ ಮತ್ತು ಪರಿಹಾರ ಸಿಗಬೇಕು. ಅದಕ್ಕಾಗಿ ತನ್ನ ಮೋಸ ಮತ್ತು ವಂಚನೆಯನ್ನು ಮುಚ್ಚಿ ಹಾಕಲು ಈಗಾಗಲೇ ಸಯ್ಯದ್ ಫರೀದ್ ಒಪ್ಪಿಕೊಂಡಿರುವಂತೆ ಆತ ಯಾವೆಲ್ಲಾ ಬ್ಲ್ಯಾಕ್‌ಮೇಲರ್‌ಗಳಿಗೆ, ದಲ್ಲಾಳಿಗಳಿಗೆ, ರಾಜಕಾರಣಿಗಳಿಗೆ ಮತ್ತು ಭ್ರಷ್ಟ ಪೊಲೀಸ್ ಅಧಿಕಾರಿಗಳಿಗೆ ಲಂಚ ನೀಡಿದ್ದಾನೆಯೋ ಆ ಹಣವೆಲ್ಲವೂ ವಾಪಸ್ ಆದರೆ ಮಾತ್ರ ಸಾಧ್ಯವಾಗುತ್ತದೆ ಎಂದವರು ಪ್ರತಿಪಾದಿಸಿದ್ದಾರೆ.

ವಿಜಯ್ ಟಾಟಾನ ಕಥೆ:

ವಂಚಕ ಸಯ್ಯದ್ ಫರೀದನಿಂದ ಅತಿ ಹೆಚ್ಚು ಹಣ ಪಡೆದಿರುವವರ ಪಟ್ಟಿಯಲ್ಲಿ ಇರುವ ಮೊದಲ ಹೆಸರು ವಿಜಯ್ ಟಾಟಾ. ಈ ವಿಜಯ್ ಟಾಟಾ ಸಯ್ಯದ್ ಫರೀದನ ಆಂಬಿಡೆಂಟ್ ಕಂಪನಿಯಿಂದ ತನ್ನ ಕಂಪನಿಗೆ 36 ಕೋಟಿ ರೂಪಾಯಿಗಳನ್ನು ಚೆಕ್‌ನಲ್ಲಿ ಮತ್ತು 2 ಕೋಟಿ ಹಣವನ್ನು ನಗದು ರೂಪದಲ್ಲಿ, ಹೀಗೆ ಒಟ್ಟು 38 ಕೋಟಿ ರೂಪಾಯಿಗಳನ್ನು ಪಡೆದಿರುವುದು ಈಗಾಗಲೇ ತನಿಖಾ ವರದಿಗಳಲ್ಲಿ ಬಹಿರಂಗವಾಗಿದೆ.

ಈ ವಿಜಯ್ ಟಾಟಾ ಎನ್ನುವ ವ್ಯಕ್ತಿ ಈ ಹಿಂದೆ ಕೆಲವು ಕನ್ನಡ ಸುದ್ದಿ ವಾಹಿನಿಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಡೆಸುತ್ತಿದ್ದು, ಆತ ತನ್ನ ಸುದ್ದಿವಾಹಿನಿಗಳನ್ನು ಅಕ್ರಮವಾಗಿ ಬಳಸಿಕೊಂಡು ಹಲವರಿಗೆ ಬ್ಲ್ಯಾಕ್'ಮೇಲ್ ಮಾಡಿದ್ದಾನೆ ಎನ್ನಲಾಗಿದೆ. ಅವುಗಳಲ್ಲಿ ಇಂಜಾಜ್ ಎನ್ನುವ ಕಂಪನಿಯಿಂದ 25 ಕೋಟಿಗೂ ಹೆಚ್ಚು ಹಣ ಮತ್ತು ಸಿಐಡಿಯಿಂದ ತನಿಖೆ ಆಗುತ್ತಿರುವ ಡ್ರೀಮ್ಸ್ ಜಿಕೆ ಕಂಪನಿ ಪ್ರಕರಣದಲ್ಲಿಯೂ ಈತ ಇನ್ನೊಬ್ಬ ವಂಚಕ ಆರೋಪಿ ಸಚಿನ್ ನಾಯಕನಿಂದ ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ ಎನ್ನುವುದು ತಿಳಿದು ಬಂದಿದೆ.

2008ರ ಸುಮಾರಿನಲ್ಲಿ ‘ಆರೆಂಜ್ ಪ್ರಾಪರ್ಟೀಸ್’ ಮೂಲಕ ವಿಲ್ಲಾಗಳನ್ನು ಕೊಡುತ್ತೇನೆ ಎಂದು ಈತ ಸುಮಾರು 147 ಜನರಿಂದ ಸುಮಾರು 140 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ಅವರೆಲ್ಲರಿಗೂ ವಂಚನೆ ಮಾಡಿದ್ದಾನೆ ಎನ್ನಲಾಗಿದ್ದು, ದಶಕದ ಹಿಂದಿನ ಘಟನೆಯಲ್ಲಿ ಈತನ ಮೇಲೆ 140ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆ ಪ್ರಕರಣದಲ್ಲಿ ಇಲ್ಲಿಯ ತನಕ ಯಾರಿಗೂ ನ್ಯಾಯ ಸಿಕ್ಕಿಲ್ಲ ಮತ್ತು ಅವೆಲ್ಲವೂ ಹೈಕೋರ್ಟ್‌ನಲ್ಲಿ ಇನ್ನೂ ವಿಚಾರಣೆಯ ಹಂತದಲ್ಲಿವೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಈತನ ಮೂಲ ರಾಜ್ಯವಾದ ಆಂಧ್ರಪ್ರದೇಶದಲ್ಲಿಯೂ ಮತ್ತು ಮಹಾರಾಷ್ಟ್ರದಲ್ಲಿಯೂ ಈತನ ಮೇಲೆ ಹಲವು ವಂಚನೆಯ ಪ್ರಕರಣಗಳು ದಾಖಲಾಗಿರುವ ಮಾಹಿತಿಗಳಿವೆ.

ಈತ ತನ್ನದು ರಿಯಲ್ ಎಸ್ಟೇಟ್ ಉದ್ಯಮ ಎಂದು ಹೇಳಿಕೊಂಡರೂ, ಈತನೊಬ್ಬ ಸುಲಿಗೆಕೋರ ಮತ್ತು ಬ್ಯ್ಲಾಕ್‌ಮೇಲ್‌ ನಡೆಸಿ ಪಡೆಯುವ ಹಣ ಹಾಗೂ ಜನರಿಂದ ಸುಲಿಗೆ ಮಾಡುವ ಹಣವನ್ನು ತನ್ನ ರಿಯಲ್ ಎಸ್ಟೇಟ್ ಉದ್ಯಮದ ಮೂಲಕ ವೈಟ್‌ ಮನಿಯಾಗಿ ಬದಲಿಸಿಕೊಳ್ಳುತ್ತಾನೆ ಎನ್ನಲಾಗಿದೆ. “ರಿಯಲ್ ಎಸ್ಟೇಟ್ ಉದ್ಯಮ ವಿಜಯ್‌ ಟಾಟಾ ಒಂದು ಮುಖವಾಡ ಮಾತ್ರ. ಇದು ಮಾಧ್ಯಮ ಲೋಕದ ಬಹುತೇಕರಿಗೆ ಗೊತ್ತಿರುವ ವಿಚಾರ. ಹೊರ ರಾಜ್ಯದಿಂದ ಬಂದು ಇಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಾ, ಅಮಾಯಕ ಜನರನ್ನು, ಸಂಘ ಸಂಸ್ಥೆಗಳನ್ನು, ತೆರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಬೆದರಿಸುತ್ತಾ, ಇಲ್ಲಿಯವರೆಗೂ ಈತ ಕಾನೂನಿನ ವ್ಯಾಪ್ತಿಗೆ ಸಿಗದೆ ರಾಜಾರೋಷವಾಗಿ ಇರುವುದು ನಮ್ಮ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಎತ್ತಿ ತೋರಿಸುತ್ತಿದೆ,” ಎಂದು ರವಿಕೃಷ್ಣಾ ರೆಡ್ಡಿ ಕಿರಿಕಾರಿದ್ದಾರೆ.

ತಾನು ಎಸಗಿರುವ ಯಾವುದೇ ವಂಚನೆ ಪ್ರಕರಣದಲ್ಲಿ ಇಲ್ಲಿಯವರೆಗೂ ವಿಜಯ್ ಟಾಟಾ ಬಂಧನವಾಗದಿರುವುದು ಮತ್ತು ಸೂಕ್ತವಾದ ರೀತಿಯಲ್ಲಿ ಸಂಬಂಧಪಟ್ಟ ತನಿಖಾಧಿಕಾರಿಗಳಿಂದ ಆತನ ತನಿಖೆ ಆಗದಿರುವುದಕ್ಕೆ ಕಾರಣ ಈತ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಹೊಂದಿರುವ ನಿಕಟ ಸಂಪರ್ಕ ಎಂಬುದಾಗಿ ಮೂಲಗಳು ತಿಳಿಸುತ್ತವೆ.

ಹಾಗೆಯೇ, ಈ ವಿಜಯ್ ಟಾಟಾ ತನ್ನ ಸಂಪರ್ಕದಲ್ಲಿರುವ ಕೆಲವು ಭ್ರಷ್ಟ ಅಧಿಕಾರಿಗಳ ಕುಮ್ಮಕ್ಕಿನಿಂದಾಗಿ ಸರ್ಕಾರಿ ಅಧಿಕಾರಿಗಳ ವಿರುದ್ಧವೇ ಸುಳ್ಳು ದೂರುಗಳನ್ನು ನೀಡಿ, ತನ್ನನ್ನು ವಿಚಾರಣೆ ಮಾಡಲು ಬಯಸುವ ತೆರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳ ತಲೆದಂಡಕ್ಕೂ ಕಾರಣವಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಇದು ಆತನನ್ನು ವಿಚಾರಣೆಗೆ ಒಳಪಡಿಸಬೇಕೆಂದು ಬಯಸುವ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳ ಮನೋಸ್ಥೈರ್ಯ ಕುಗ್ಗುವುದಕ್ಕೂ ಕಾರಣವಾಗಿದೆ.

ಮುಖ್ಯವಾಗಿ ಈ ಹಂತದಲ್ಲಿ ಸಯ್ಯದ್ ಫರೀದನಿಂದ ವಿಜಯ್ ಟಾಟಾ ಪಡೆದಿರುವ ಪೂರ್ತಿ 38 ಕೋಟಿ ರೂಪಾಯಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ವಾಪಸ್ ಪಡೆದಿದ್ದೇ ಆದಲ್ಲಿ ಈಗಿನ 15 ಸಾವಿರ ಸಂತ್ರಸ್ತರಿಗೆ ತಲಾ 25 ಸಾವಿರದಂತೆ ಪರಿಹಾರ ಧನವನ್ನು ಕೂಡಲೇ ವಿತರಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ನೆನ್ನೆ ಆತನ ಮನೆ ಮೇಲೆ CCB ನಡೆಸಿದ ದಾಳಿಯೂ ನಾಮಕಾವಸ್ತೆ ಮತ್ತು ಈ ವಿಚಾರವನ್ನು ನಮ್ಮ ವೇದಿಕೆ ಗಂಭೀರವಾಗಿ ಪರಿಗಣಿಸಿ ಹೋರಾಟ ರೂಪಿಸುತ್ತಿದೆ ಎನ್ನುವ ಕಾರಣಕ್ಕೆ ತರಾತುರಿಯಲ್ಲಿ ಅದನ್ನು ಮಾಡಲಾಗಿದೆ ಎಂಬ ಮಾಹಿತಿ ನಮಗೆ ಲಭ್ಯವಾಗುತ್ತಿದೆ ಎಂದು ರೆಡ್ಡಿ ಹೇಳಿದ್ದಾರೆ.

ತನಿಖೆಯಲ್ಲಿ ಲೋಪ:

ಆಂಬಿಡೆಂಟ್ ಪ್ರಕರಣದಲ್ಲಿ ಇಲ್ಲಿಯವರೆಗಿನ ತನಿಖಾ ಸಂದರ್ಭದಲ್ಲಿ ಆಗಿರುವಂತಹ ಕೆಲವು ಲೋಪಗಳು ಪೂರ್ವನಿಯೋಜಿತವಾದವು ಮತ್ತು ಈ ಹಗರಣವನ್ನು ಮುಚ್ಚಿಹಾಕಲೆಂದೇ ಮಾಡಲಾದ ಕೃತ್ಯಗಳು ಎಂಬ ಸಂಶಯಗಳನ್ನು ಗಟ್ಟಿ ಮಾಡುತ್ತಿವೆ ಎಂದಿರುವ ಅವರು ಅವುಗಳನ್ನು ಪಟ್ಟಿ ಮಾಡಿದ್ದಾರೆ.

1. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ತನಿಖೆ ಪ್ರಗತಿಯಲ್ಲಿರುವಾಗ ಸಿಸಿಬಿ ಮುಖ್ಯಸ್ಥರಾಗಿರುವ ಅಲೋಕ್ ಕುಮಾರರು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಸಂಪರ್ಕಿಸಿ ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿಯ ಪಾತ್ರ ಇರುವುದನ್ನು ತಿಳಿಸುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ 'ಜನಾರ್ಧನ ರೆಡ್ಡಿಯನ್ನು ತನಿಖೆಗೆ ಒಳಪಡಿಸುವ ಅಥವಾ ಬಂಧನಕ್ಕೆ ಒಳಪಡಿಸುವ ಕೆಲಸವನ್ನು ಯಾವುದೇ ಕಾರಣಕ್ಕೂ ಚುನಾವಣೆಯ ತನಕ ಮಾಡಬಾರದು' ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮೌಖಿಕವಾಗಿ ಅಲೋಕ್ ಕುಮಾರರಿಗೆ ಆದೇಶಿಸುತ್ತಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ನಿಜವೇ ಆಗಿದ್ದಲ್ಲಿ, ಆ ಸಂದರ್ಭದಲ್ಲಿ ಅಪರಾಧಿಗಳು ತಪ್ಪಿಸಿಕೊಳ್ಳಲು, ಸಾಕ್ಷ್ಯ ನಾಶಪಡಿಸಲು ಅಥವಾ ರಾಜಕಾರಣಿಗಳೊಂದಿಗೆ ಒಪ್ಪಂದ ಕುದುರಿಸಿಕೊಳ್ಳಲು ಸ್ವತಃ ಮುಖ್ಯಮಂತ್ರಿಯೇ ಅವಕಾಶ ಮಾಡಿಕೊಟ್ಟಂತಾಯಿತು. ಇದು ಅನೈತಿಕ ಮತ್ತು ಕಾನೂನುಬಾಹಿರ ನಡವಳಿಕೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಮತ್ತು ಸಿಸಿಬಿ ಮುಖ್ಯಸ್ಥರಿಬ್ಬರೂ ಕರ್ತವ್ಯಲೋಪ ಎಸಗಿದ್ದಾರೆ. ಈ ಲೋಪದ ಹೊಣೆಯನ್ನು ಈ ಇಬ್ಬರೂ ಹೊರಬೇಕಿದೆ ಮತ್ತು ತನಿಖೆಯ ಹಂತದಲ್ಲಿ ಮಧ್ಯ ಪ್ರವೇಶಿಸಿದ ಕಾರಣಕ್ಕೆ ಮುಖ್ಯಮಂತ್ರಿಗಳು ರಾಜ್ಯದ ಜನತೆಯ ಕ್ಷಮೆ ಕೇಳಬೇಕಿದೆ.

2. ಸಿಸಿಬಿಯ ಮುಖ್ಯಸ್ಥರಾದ ಅಲೋಕ್ ಕುಮಾರರು ತಾವು ಮಾಡುತ್ತಿರುವ ತನಿಖೆಯ ಬಗ್ಗೆ ತಮ್ಮ ಇಲಾಖೆಯ ಮೇಲಧಿಕಾರಿ ಅಥವಾ ಗೃಹ ಸಚಿವರಿಗೆ ತಿಳಿಸಬೇಕಾಗಿದೆಯೇ ಹೊರತು ಅವರನ್ನು ಬೈಪಾಸ್ ಮಾಡಿ ನೇರವಾಗಿ ಮುಖ್ಯಮಂತ್ರಿಗೆ ಮಾತನಾಡುವುದು ಆಡಳಿತ ವ್ಯವಸ್ಥೆಯ ಬಗ್ಗೆ ಹಲವು ತಪ್ಪು ಸಂದೇಶಗಳನ್ನು ಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ ಕೇವಲ ನಾಮಕಾವಾಸ್ಥೆ ಗೃಹ ಸಚಿವ ಎನ್ನುವ ಭಾವನೆ ಜನರಲ್ಲಿ ಮತ್ತು ಗೃಹ ಇಲಾಖೆಯಲ್ಲಿ ಇದೆ. ಇದು ಇಡೀ ಗೃಹ ಇಲಾಖೆಯ ಕಾರ್ಯ ನಿರ್ವಹಣೆಯ ಮೇಲೆ ಗಂಭೀರ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಈಗಲಾದರೂ ಸಿಸಿಬಿ ಮುಖ್ಯಸ್ಥರಿಗೆ ರಾಜ್ಯ ಗೃಹ ಸಚಿವರು ಕಾರಣ ಕೇಳಿ ನೋಟೀಸ್ ಕೊಡಬೇಕಿದೆ.

3. ಈ ಹಿಂದೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗಲೇ, ಅಂದರೆ 2018 ರ ಮಾರ್ಚ್ ತಿಂಗಳಿನಲ್ಲಿ, ದೇವರಜೀವನಹಳ್ಳಿ ಪೊಲೀಸ್ ಠಾಣೆಯಲ್ಲಿ ಆಂಬಿಡೆಂಟ್ ಕಂಪನಿಯ ವಂಚನೆಯ ಬಗ್ಗೆ ದೂರು ದಾಖಲಾಗಿರುತ್ತದೆ. ಆದರೆ ವಂಚಕರ ಪರವಾಗಿ ಅಂದಿನ ಗೃಹ ಸಚಿವರಾಗಿದ್ದ ರಾಮಲಿಂಗಾರೆಡ್ಡಿಯವರು ಮಾಡಿದ ಕೆಲವು ಮೌಖಿಕ ಆದೇಶಗಳಿಂದಾಗಿ ಈ ಪ್ರಕರಣದ ತನಿಖೆ ಕುಂಠಿತವಾಯಿತು ಎಂದು ಆ ಇಲಾಖೆಯ ಮೂಲಗಳು ತಿಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ಹಗರಣದಲ್ಲಿ ರಾಮಲಿಂಗಾರೆಡ್ಡಿ ಪಾತ್ರ ಏನು ಎನ್ನುವುದು ಈಗಲಾದರೂ ತನಿಖೆ ಆಗಬೇಕಿದೆ.

4. ಆಂಬಿಡೆಂಟ್ ಎನ್ನುವ ಹೆಸರಿನ ಬ್ಲೇಡ್ ಕಂಪನಿಯಲ್ಲಿ ಹಣ ಹೂಡಿದ ಅಮಾಯಕ ಜನರನ್ನು ವಂಚಿಸುವಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯ ನೇರ ಪಾತ್ರ ಇಲ್ಲದೆ ಇರಬಹುದಾದರೂ, 'ED ಯಂತಹ ಕೇಂದ್ರ ಸರ್ಕಾರದ ಸಂಸ್ಥೆಯಿಂದ ವಂಚಕ ಸಯ್ಯದ್ ಫರೀದನನ್ನು ರಕ್ಷಿಸುತ್ತೇನೆ ಮತ್ತು ಆತನ ಅವ್ಯವಹಾರಗಳನ್ನು ಮುಚ್ಚಿಹಾಕಲು ಸಹಾಯ ಮಾಡುತ್ತೇನೆ ಎಂಬ ಅಕ್ರಮ ದಲ್ಲಾಳಿ ಕೆಲಸಕ್ಕಾಗಿ ಅವರು ಮತ್ತು ಅವರ ಸಹಚರರು ಚಿನ್ನದ ರೂಪದಲ್ಲಿ ಲಂಚ ಪಡೆದುಕೊಂಡಿದ್ದಾರೆ' ಎಂಬ ಗಂಭೀರ ಆರೋಪವನ್ನು ಅವರ ಮೇಲೆ ಈಗಾಗಲೇ ಸಿಸಿಬಿ ಮಾಡಿದೆ ಮತ್ತು ಅದೇ ಕಾರಣಕ್ಕಾಗಿ ಅವರನ್ನು ಬಂಧಿಸಿಯೂ ಇತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ರೆಡ್ಡಿಯವರಿಗೆ ಜಾಮೀನು ಸಿಕ್ಕಿದೆ ಮತ್ತು ಅವರು ಈ ಪ್ರಕರಣದಲ್ಲಿ ಯಾವುದೇ ಶಿಕ್ಷೆಗೆ ಒಳಪಡುವ ಸಾಧ್ಯತೆ ಈಗ ಕಾಣಿಸುತ್ತಿಲ್ಲ. ಇದನ್ನು ನೋಡಿದರೆ ಜನಾರ್ದನ ರೆಡ್ಡಿಯನ್ನು ಬಚಾವು ಮಾಡುವ ಪಿತೂರಿಯ ಭಾಗವಾಗಿ ಈ ತಂತ್ರ ಹೆಣೆಯಲಾಗಿದೆ ಎಂದು ಕಾಣಿಸುತ್ತಿದೆ. ಇಲ್ಲವಾದಲ್ಲಿ ಸರ್ಕಾರ ಈ ಕೂಡಲೇ 2018 ರ ಜುಲೈನಲ್ಲಿ ತಿದ್ದುಪಡಿಯಾಗಿರುವ "ಭ್ರಷ್ಟಾಚಾರ ನಿಗ್ರಹ ಕಾಯ್ದೆ (ತಿದ್ದುಪಡಿ) 2018" ಅಡಿಯಲ್ಲಿ ಒಂದು ಪ್ರತ್ಯೇಕ ದೂರು ದಾಖಲಿಸಿಕೊಂಡು, ಅದರಲ್ಲಿ ಜನಾರ್ದನ ರೆಡ್ಡಿಯನ್ನು ಮೊದಲ ಆರೋಪಿಯಾಗಿ ಗುರುತಿಸಬೇಕಿದೆ ಎಂದವರು ಹೇಳಿದ್ದಾರೆ.

ತಮ್ಮ ವೈಯಕ್ತಿಕ ದೌರ್ಬಲ್ಯಗಳಿಗೆ ಬಲಿಯಾಗಿರುವ ಹಲವು ಹಿರಿಯ ಅಧಿಕಾರಿಗಳು ವಂಚಕರಿಂದ ಬ್ಲ್ಯಾಕ್‌ಮೇಲ್‌ಗೆ ಒಳಗಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇಂತಹ ಅಧಿಕಾರಿಗಳೇ ವಿಜಯ್ ಟಾಟಾನಂತಹ ವ್ಯಕ್ತಿಯನ್ನು ತಮ್ಮ ದೌರ್ಬಲ್ಯಗಳ ಕಾರಣಕ್ಕೆ-ಅದರಲ್ಲೂ ಭ್ರಷ್ಟಾಚಾರ ಮತ್ತು ಅನೈತಿಕ ಲೈಂಗಿಕ ದೌರ್ಬಲ್ಯಗಳಿಗೆ ಬಲಿಯಾಗಿ--ಆತನನ್ನು ರಕ್ಷಿಸುತ್ತಿದ್ದಾರೆ ಎನ್ನುವ ಮಾಹಿತಿ ನಮಗೆ ಸಿಕ್ಕಿದೆ. ಇದನ್ನು ಮತ್ತಷ್ಟು ಖಾತ್ರಿ ಪಡಿಸಿಕೊಂಡು ಅದನ್ನು ಜನರ ಮುಂದೆ ಇಡಲಿದ್ದೇವೆ. ಅದು ನಿಜವೇ ಆಗಿದ್ದಲ್ಲಿ ಆ ದಿಕ್ಕಿನಲ್ಲಿಯೂ ತನಿಖೆ ಆಗಬೇಕಿದೆ ಮತ್ತು ಅಂತಹ ಭ್ರಷ್ಟ ಅಧಿಕಾರಿಗಳನ್ನು ಈ ತನಿಖೆಯಿಂದ ಹೊರಗಿಡಬೇಕಿದೆ ಎಂದು ರೆಡ್ಡಿ ಗುಡುಗಿದ್ದಾರೆ.

"ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ"ಯು ಈಗ ಈ ಪ್ರಕರಣದ ಕುರಿತು ಹಲವು ಮಾಹಿತಿಗಳನ್ನು, ಮುಖ್ಯವಾಗಿ, ‘ಸಯ್ಯದ್ ಫರೀದ್ ಯಾವೆಲ್ಲಾ ರಾಜಕಾರಣಿಗಳಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಲಂಚ ನೀಡಿದ್ದಾನೆ ಹಾಗೂ ಕಾನೂನಿನಿಂದ ತಪ್ಪಿಸಿಕೊಳ್ಳಲು ವಿಜಯ್ ಟಾಟಾ ಏನೆಲ್ಲ ಅಕ್ರಮಗಳನ್ನು ಮಾಡಿದ್ದಾನೆ’ ಎನ್ನುವ ವಿವರಗಳನ್ನು ಸಂಗ್ರಹಿಸುತ್ತಿದ್ದು, ಅವೆಲ್ಲವನ್ನೂ ಸೋಮವಾರ ಇದೇ ಸ್ಥಳದಲ್ಲಿ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಜನರ ಮುಂದೆ ಇಡಲಿದ್ದೇವೆ ಎಂದವರು ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ, ಆಂಬಿಡೆಂಟ್ ಕಂಪನಿಯಿಂದ ಮತ್ತು ವಿಜಯ್ ಟಾಟಾನಿಂದ ವಂಚನೆಗೆ ಒಳಗಾಗಿರುವ ಅಥವಾ ಈ ಪ್ರಕರಣದ ಬಗ್ಗೆ ಮಾಹಿತಿ ಇರುವ ಯಾರಾದರೂ ಸರಿ ನಮ್ಮ ಸಹಾಯವಾಣಿ ಸಂಖ್ಯೆಯಾದ 8884277730 ಗೆ ಕರೆ ಮಾಡಿ ಅಥವಾ ಸಾಧ್ಯವಾದಲ್ಲಿ ನಮ್ಮ ವೇದಿಕೆಯ ಕಚೇರಿಗೆ ಖುದ್ದಾಗಿ ಬಂದು ಮಾಹಿತಿ ಕೊಡಬೇಕಾಗಿ ಅವರು ವಿನಂತಿಸಿಕೊಂಡಿದ್ದಾರೆ.

ಇದರ ನಡುವೆ, ಸರ್ಕಾರ ಈ ಕೂಡಲೇ ಕೆಲವು ಕ್ರಮಗಳನ್ನು ಕೈಗೊಂಡು ವಂಚನೆಗೊಳಗಾದ ಜನಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಯ್ಯದ್ ಫರೀದ್‌0ನಿಂದ ಯಾರೆಲ್ಲಾ ಅಕ್ರಮ ಹಣ ಪಡೆದಿದ್ದಾರೋ ಅವರೆಲ್ಲರಿಂದಲೂ ಹಣ ವಾಪಸ್ ಪಡೆಯುವ ಕ್ರಮಕ್ಕೆ ಮುಂದಾಗಬೇಕೆಂದು ನಾವು ಆಗ್ರಹಿಸುತ್ತೇವೆ. ಸೋಮವಾರದ ಒಳಗೆಯೇ ಈ ಕಾರ್ಯಕ್ಕೆ ಮುಂದಾಗಿಲ್ಲವಾದಲ್ಲಿ ಆ ಕೆಲಸವನ್ನು ಸಂತ್ರಸ್ತರ ನೆರವಿನಿಂದ ನಮ್ಮ ವೇದಿಕೆಯೇ ಮಾಡಲಿದ್ದು, ಹೋರಾಟಕ್ಕೆ ಇಳಿಯಲಿದ್ದೇವೆ ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.