samachara
www.samachara.com
ಲಿಂಗಾಯತ ಸ್ವತಂತ್ರ ಧರ್ಮ; ರಾಜ್ಯದ ಶಿಫಾರಸು ತಿರಸ್ಕರಿಸಿದ ಕೇಂದ್ರ ಸರಕಾರ
UPDATE

ಲಿಂಗಾಯತ ಸ್ವತಂತ್ರ ಧರ್ಮ; ರಾಜ್ಯದ ಶಿಫಾರಸು ತಿರಸ್ಕರಿಸಿದ ಕೇಂದ್ರ ಸರಕಾರ

ಲಿಂಗಾಯತ, ವೀರಶೈವರು ಹಿಂದೂ ಧರ್ಮದ ಅವಿಭಾಜ್ಯ ಅಂಗ ಎಂದಿರುವ ಕೇಂದ್ರ ಸರಕಾರ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಲು ಹಿಂದೇಟು ಹಾಕಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನಕ್ಕಾಗಿ ರಾಜ್ಯ ಸರಕಾರ ಕೇಂದ್ರಕ್ಕೆ ಕಳಿಸಿದ್ದ ಶಿಫಾರಸು ತಿರಸ್ಕೃತಗೊಂಡಿದೆ. ಲಿಂಗಾಯತ, ವೀರಶೈವ ಎರಡೂ ಹಿಂದೂ ಧರ್ಮದ ಭಾಗಗಳು ಎಂದಿರುವ ಕೇಂದ್ರ ಗೃಹ ಇಲಾಖೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದಿದೆ.

ರಾಜ್ಯ ಸರಕಾರದ ಶಿಫಾರಸನ್ನು ಒಪ್ಪಲಾಗದು ಎಂದು ಕೇಂದ್ರ ಗೃಹ ಇಲಾಖೆ 2018ರ ನವೆಂಬರ್ 13ರಂದು ರಾಜ್ಯ ಸರ್ಕಾರಕ್ಕೆ ತಿಳಿಸಿರುವ ಪತ್ರವನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿದೆ. ರಾಜ್ಯ ಅಲ್ಪಸಂಖ್ಯಾತ ಆಯೋಗವು ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ವರದಿ ನೀಡಲು ತಜ್ಞರ ಸಮಿತಿ ರಚನೆಗೆ ಆದೇಶ ನೀಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆಯ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್‌ ಕೇಂದ್ರ ಸರಕಾರದ ಪತ್ರವನ್ನು ಸೋಮವಾರ ನ್ಯಾಯಪೀಠಕ್ಕೆ ಸಲ್ಲಿಸಿದ್ದಾರೆ.

“ಲಿಂಗಾಯತ, ವೀರಶೈವರು ಹಿಂದೂ ಧರ್ಮದ ಅವಿಭಾಜ್ಯ ಅಂಗ. 1871 ರ ಮೊದಲ ಜನಗಣತಿಯಲ್ಲೇ ಈ ಅಂಶ ಸ್ಪಷ್ಟವಾಗಿದೆ. ಒಂದೊಮ್ಮೆ ರಾಜ್ಯ ಸರಕಾರದ ಶಿಫಾರಸನ್ನು ಮಾನ್ಯ ಮಾಡಿದರೆ ಈಗಾಗಲೇ ಲಿಂಗಾಯತ- ವೀರಶೈವರಲ್ಲಿ ಪರಿಶಿಷ್ಟ ಜಾತಿ ಸೌಲಭ್ಯ ಪಡೆಯುತ್ತಿರುವವರು ಅದರಿಂದ ವಂಚಿತರಾಗಬೇಕಾಗುತ್ತದೆ” ಎಂಬ ಕಾರಣಗಳನ್ನು ನೀಡಿ ಕೇಂದ್ರ ಗೃಹ ಸಚಿವಾಲಯ ಶಿಫಾರಸನ್ನು ತಿರಸ್ಕರಿಸಿದೆ ಎನ್ನಲಾಗಿದೆ.

Also read: ಅಸ್ಮಿತೆಗಳ ಹುಡುಕಾಟ; ರಾಜಕೀಯ ಲೆಕ್ಕಾಚಾರ: ‘ಸ್ವತಂತ್ರ ಲಿಂಗಾಯತ ಧರ್ಮ’ ಯಾಕೆ ಬೇಕು?

ಕಾನೂನು ಹೋರಾಟಕ್ಕೆ ಚಿಂತನೆ
ಕೇಂದ್ರ ಸರಕಾರ ಪ್ರತ್ಯೇಕ ಲಿಂಗಾಯತ ಧರ್ಮದ ಶಿಫಾರಸನ್ನು ತಿರಸ್ಕರಿಸಿರುವುದರ ವಿರುದ್ಧ ಕಾನೂನು ಹೋರಾಟ ನಡೆಸಲು ಜಾಗತಿಕ ಲಿಂಗಾಯತ ಮಹಾಸಭಾ ಚಿಂತನೆ ನಡೆಸಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಹಿಂದೂ ವಿಚಾರವನ್ನು ಬೆರೆಸುತ್ತಿದೆ ಎಂದು ಲಿಂಗಾಯತ ಮುಖಂಡರು ಆರೋಪಿಸಿದ್ದಾರೆ.

“ಪ್ರತ್ಯೇಕ ಲಿಂಗಾಯತ ಧರ್ಮದ ಶಿಫಾರಸನ್ನು ಕೇಂದ್ರ ಸರಕಾರ ತಿರಸ್ಕರಿಸಬಹುದು ಎಂಬ ನಿರೀಕ್ಷೆ ನಮಗಿತ್ತು. ಆದರೆ, ಸ್ಪಷ್ಟವಾಗಿ ಯಾವ ಕಾರಣಕ್ಕೆ ಶಿಫಾರಸು ತಿರಸ್ಕರಿಸಲಾಗಿದೆ ಎಂಬುದು ರಾಜ್ಯ ಸರಕಾರಕ್ಕೆ ಬರೆದಿರುವ ಪತ್ರದಿಂದ ತಿಳಿಯಬೇಕಿದೆ. ಈ ಬಗ್ಗೆ ಕೇಂದ್ರದ ಪತ್ರದ ಪ್ರತಿ ಪಡೆದು ಅದನ್ನು ಅಧ್ಯಯನ ಮಾಡಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕೇಂದ್ರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆ ಹೋಗುವ ಚಿಂತನೆ ಇದೆ” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿ.ಬಿ. ಪಾಟೀಲ್ ಹೇಳಿದರು.

Also read: ‘ಲಿಂಗಾಯತ ಎಸ್‌ಸಿ/ಎಸ್‌ಟಿ’: ಮೀಸಲಾತಿ ಕನಸುಗಳು ಮತ್ತು ಭವಿಷ್ಯದ ಸಿಕ್ಕುಗಳು

‘ಸಮಾಚಾರ’ದ ಜತೆಗೆ ಮಾತನಾಡಿದ ಅವರು, “ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ತಾನು ಧರ್ಮ ಒಡೆಯಲು ಬಿಡುವುದಿಲ್ಲ ಎಂದು ಹೇಳುತ್ತಾ ಬರುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವ ಕಾಲದಿಂದಲೇ ಲಿಂಗಾಯತ ಪ್ರತ್ಯೇಕ ಧರ್ಮ ಎಂಬುದು ಸಾಬೀತಾಗಿದೆ. ಇದರಲ್ಲಿ ಧರ್ಮ ಒಡೆಯುವ ಮಾತೇನಿದೆ. ಆದರೆ, ಧರ್ಮದ ವಿಚಾರದಲ್ಲಿ ಅಜ್ಞಾನಿಗಳಂತೆ ವರ್ತಿಸುತ್ತಿರುವವರು ಶಿಫಾರಸು ತಿರಸ್ಕಾರವಾಗುವಂತೆ ಮಾಡಿದ್ದಾರೆ. ಆದರೆ, ಈ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ” ಎಂದಿದ್ದಾರೆ.

ಮತ್ತೊಂದು ಕಡೆ ದೆಹಲಿಯಲ್ಲಿ ಮೂರು ದಿನಗಳ ರಾಷ್ಟ್ರೀಯ ಲಿಂಗಾಯತ ಸಮಾವೇಶ ಆರಂಭವಾಗಿದ್ದು ಲಿಂಗಾಯತ ಸ್ವಾಮೀಜಿಗಳು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಕೊಡದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಲಿಂಗಾತಯ ಧರ್ಮ ಮಹಾಸಭೆ ಅಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.

Also read: ಲಿಂಗಾಯತ ಸ್ವತಂತ್ರ ಧರ್ಮ; ನಾಗಮೋಹನ್‌ ದಾಸ್‌ ವರದಿಗೆ ಸಂಪುಟ ಅಸ್ತು