samachara
www.samachara.com
ಹಸಿರು ರೈತರ ಕೆಂಪು ಪ್ರತಿಭಟನೆ: 8 ತಿಂಗಳ ಅಂತರದಲ್ಲಿ 2ನೇ ಬೃಹತ್ ಶಕ್ತಿ ಪ್ರದರ್ಶನ
UPDATE

ಹಸಿರು ರೈತರ ಕೆಂಪು ಪ್ರತಿಭಟನೆ: 8 ತಿಂಗಳ ಅಂತರದಲ್ಲಿ 2ನೇ ಬೃಹತ್ ಶಕ್ತಿ ಪ್ರದರ್ಶನ

ಥಾಣೆಯಿಂದ 30,000 ರೈತರು ಮುಂಬೈನತ್ತ ಬೃಹತ್‌ ಪಾದಯಾತ್ರೆ ಹೊರಟಿದ್ದಾರೆ. ಇಂದು ಆರಂಭವಾಗಲಿರುವ ಜಾಥಾ ಗುರುವಾರ ಮುಂಬೈನ ಅಝಾದ್‌ ಮೈದಾನ್‌ ತಲುಪಲಿದೆ.

Team Samachara

ಮಹಾರಾಷ್ಟ್ರದಲ್ಲಿ ಮತ್ತೊಂದು ಸುತ್ತಿನ ರೈತರ ಪ್ರತಿಭಟನೆ ಆರಂಭಗೊಂಡಿದೆ. ‘ಕೆಂಪು ಸಾಗರ’ದಂತೆ ರೈತರು ಮುಂಬೈ ಮಾಹಾನಗರದ ರಸ್ತೆಗಳನ್ನು ಆಕ್ರಮಿಸಿಕೊಂಡ 8 ತಿಂಗಳ ತರುವಾಯ ಮತ್ತೊಂದು ಪ್ರತಿಭಟನೆಗೆ ಮಾಯಾನಗರಿ ಅಂತಲೂ ಕರೆಸಿಕೊಳ್ಳುವ ವಾಣಿಜ್ಯ ನಗರಿ ಸಾಕ್ಷಿಯಾಗಲಿದೆ. ಥಾಣೆಯಿಂದ 30,000 ರೈತರು ಮುಂಬೈನತ್ತ ಬೃಹತ್‌ ಪಾದಯಾತ್ರೆ ಹೊರಟಿದ್ದಾರೆ. ಬುಧವಾರ ಆರಂಭಗೊಂಡಿರುವ ಜಾಥಾ ಗುರುವಾರ ಮುಂಬೈನ ಅಝಾದ್‌ ಮೈದಾನ್‌ ತಲುಪಲಿದೆ. ತಮ್ಮ ಬೇಡಿಕೆಗಳು ಇಡೇರುವವರೆಗೆ ಅಝಾದ್‌ ಮೈದಾನದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ರೈತರು ಘೋಷಿಸಿದ್ದಾರೆ.

ಸ್ವಾಮಿನಾಥನ್‌ ವರದಿಯ ಅನುಷ್ಠಾನ, ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥ, ಎಂಎಸ್‌ಪಿ ಜಾರಿಗೆ ನ್ಯಾಯಾಂಗ ವ್ಯವಸ್ಥೆಯ ರಚನೆ, ಸಂಪೂರ್ಣ ಸಾಲ ಮನ್ನಾ ಮತ್ತು ಬರ ಪರಿಹಾರ ರೈತರ ಪ್ರಮುಖ ಬೇಡಿಕೆಗಳಾಗಿವೆ. ಜತೆಗೆ ಮಾರ್ಚ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ಸಂದರ್ಭ ನೀಡಿದ ಭರವಸೆಗಳನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಇಡೇರಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಲೋಕ ಸಂಘರ್ಷ ಮೋರ್ಚಾ’ ಈ ರ್ಯಾಲಿ ಹಮ್ಮಿಕೊಂಡಿದೆ. ಸ್ವರಾಜ್‌ ಇಂಡಿಯಾದ ಯೋಗೇಂದ್ರ ಯಾದವ್‌ ಮತ್ತು ರಾಜೇಂದ್ರ ಸಿಂಗ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ಮಹಾರಾಷ್ಟ್ರ ಆಮ್‌ ಆದ್ಮಿ ಪಕ್ಷವೂ ಈ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಉತ್ತರ ಮಹಾರಾಷ್ಟ್ರ, ವಿದರ್ಭ, ಅಹಮದ್‌ನಗರ ಮತ್ತು ರಾಜ್ಯದ ಬೇರೆ ಬೇರೆ ಭಾಗಗಳ ರೈತರು ಮತ್ತು ಬುಡಕಟ್ಟು ಜನರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

2019ರಲ್ಲಿ ಲೋಕಸಭೆ ಚುನಾವಣೆಯ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಈ ವರ್ಷ ಹಲವು ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ಮೊದಲ ಬಹುದೊಡ್ಡ ರೈತರ ಪಾದಯಾತ್ರೆ ಮಾರ್ಚ್‌ನಲ್ಲಿ ಮಹಾರಾಷ್ಟ್ರದಲ್ಲಿ ನಡೆದಿತ್ತು. ರೈತರ ಬೇಡಿಕೆಗಳನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್‌ ಸರಕಾರ ಇಡೇರಿಸದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆದಿತ್ತು. ಈ ಸಂದರ್ಭದಲ್ಲಿ ರೈತರ ಬೇಡಿಕೆಗಳನ್ನು ಇಡೇರಿಸುವುದಾಗಿ ಫಡ್ನಾವಿಸ್‌ ಸರಕಾರ ಭರವಸೆ ನೀಡಿತ್ತು.

ಇದಾದ ಬೆನ್ನಿಗೆ ಕಳೆದ ತಿಂಗಳು ಉತ್ತರ ಪ್ರದೇಶದಿಂದ ಹೊರಟಿದ್ದ ರೈತರು ಕಿಸಾನ್‌ ಕ್ರಾಂತಿ ಯಾತ್ರೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನುಗ್ಗಿದ್ದರು. ಆದರೆ ದೆಹಲಿ ಪ್ರವೇಶಿಸಲು ಅನುವು ಮಾಡಿಕೊಡದ ಪೊಲೀಸರು ರೈತರನ್ನು ಜಲಫಿರಂಗಿ, ಅಶ್ರುವಾಯು ಸಿಡಿಸಿ ಹೊರವಲಯದಲ್ಲೇ ತಡೆದಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ರೈತರ ಒಂದಷ್ಟು ಬೇಡಿಕೆಗಳಿಗೆ ಅಸ್ತು ಎಂದಿದ್ದರಿಂದ ಪ್ರತಿಭಟನೆ ಕೊನೆಯಾಗಿತ್ತು. ಇದಲ್ಲದೆ ಪಂಜಾಬ್‌, ಕರ್ನಾಟಕ, ಮಧ್ಯ ಪ್ರದೇಶ, ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ರೈತರ ಪ್ರತಿಭಟನೆಗಳು ನಿರಂತರ ನಡೆಯುತ್ತಿವೆ.

*ಸಾಂದರ್ಭಿಕ ಚಿತ್ರ