samachara
www.samachara.com
ಉಲ್ಬಣಿಸಿದ ಶ್ರೀಲಂಕಾ ಬಿಕ್ಕಟ್ಟ: ಮಧ್ಯ ರಾತ್ರಿ ಸಂಸತ್‌ ವಿಸರ್ಜನೆಗೊಳಿಸಿದ ಅಧ್ಯಕ್ಷ ಸಿರಿಸೇನಾ
UPDATE

ಉಲ್ಬಣಿಸಿದ ಶ್ರೀಲಂಕಾ ಬಿಕ್ಕಟ್ಟ: ಮಧ್ಯ ರಾತ್ರಿ ಸಂಸತ್‌ ವಿಸರ್ಜನೆಗೊಳಿಸಿದ ಅಧ್ಯಕ್ಷ ಸಿರಿಸೇನಾ

ಸಂಸತ್‌ ವಿಸರ್ಜನೆಗೆ ಶುಕ್ರವಾರ ಅಧ್ಯಕ್ಷ ಸಿರಿಸೇನಾ ಸಹಿ ಹಾಕಿದ್ದಾರೆ. ಜತೆಗೆ ಹೊಸ ಚುನಾವಣೆಗೂ ದಿನ ನಿಗದಿಗೊಳಿಸಿದ್ದಾರೆ. ಜನವರಿ 5ರಂದು ಚುನಾವಣೆ ನಡೆಯಲಿದ್ದು, ಜನವರಿ 17ರಂದು ಹೊಸ ಸಂಸತ್‌ ಅಸ್ತಿತ್ವಕ್ಕೆ ಬರಲಿದೆ.

ಶ್ರೀಲಂಕಾದಲ್ಲಿ ಜಾರಿಯಲ್ಲಿರುವ ಸಾಂವಿಧಾನಿಕ ಬಿಕ್ಕಟ್ಟು ಶನಿವಾರ ಮತ್ತಷ್ಟು ಉಲ್ಬಣಿಸಿದೆ. ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಏಕಪಕ್ಷೀಯವಾಗಿ ಸಂಸತ್‌ನ್ನು ಶುಕ್ರವಾರ ಮಧ್ಯರಾತ್ರಿ ವಿಸರ್ಜನೆಗೊಳಿಸಿದ್ದಾರೆ. ಬೆನ್ನಿಗೆ ಚುನಾವಣೆಯನ್ನೂ ಘೋಷಣೆ ಮಾಡಿದ್ದಾರೆ. ಇದು ದ್ವೀಪರಾಷ್ಟ್ರದಲ್ಲಿ ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.

ಕಳೆದ ತಿಂಗಳು ಮೈತ್ರಿಪಾಲ ಸಿರಿಸೇನಾ ಪ್ರಧಾನ ಮಂತ್ರಿ ರಾಣಿಲ್‌ ವಿಕ್ರಮಸಿಂಘೆಯವರನ್ನು ವಜಾಗೊಳಿಸಿದ್ದರು. ಅವರ ಸ್ಥಾನಕ್ಕೆ ವಿವಾದಿತ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಷೆಯವರನ್ನು ನೇಮಕಗೊಳಿಸಿದ್ದರು. ಅವರ ಈ ನಿರ್ಧಾರ ಭಾರೀ ವಿವಾದಕ್ಕೆ ಕಾರಣವಾಗಿತ್ತು ಮತ್ತು ದೇಶದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗೂ ನಾಂದಿ ಹಾಡಿತ್ತು.

ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲು ನಿರಾಕರಿಸಿದ್ದ ವಿಕ್ರಮಸಿಂಘೆ ತಮಗೆ ಬಹುಮತವಿದೆ ಎಂದೇ ಪ್ರತಿಪಾದಿಸಿದ್ದರು. ಹೀಗಿರುವಾಗಲೇ ಅಧಿವೇಶನ ಕರೆಯುವ ತೀರ್ಮಾನವನ್ನು ಅಧ್ಯಕ್ಷರು ತೆಗೆದುಕೊಂಡಿದ್ದು ಬಿಕ್ಕಟ್ಟು ಶಮನವಾಗಲಿದೆ ಎಂಬ ಭರವಸೆಯನ್ನು ಮೂಡಿಸಿತ್ತು.

ಆದರೆ ಶುಕ್ರವಾರ ಸಿರಿಸೇನಾ ಬಣ ತಮಗೆ ಸಂಸತ್‌ನಲ್ಲಿ ಬೆಂಬಲವಿಲ್ಲ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿತ್ತು. ಹೀಗೊಂದು ಮಾತುಗಳು ಹೊರಬಿದ್ದ ಸ್ವಲ್ಪ ಸಮಯದಲ್ಲೇ ಸಂಸತ್‌ ವಿಸರ್ಜನೆಗೆ ಸಿರಿಸೇನಾ ಸಹಿ ಹಾಕಿದ್ದಾರೆ. ಜತೆಗೆ ಹೊಸ ಚುನಾವಣೆಗೂ ದಿನ ನಿಗದಿಗೊಳಿಸಿದ್ದಾರೆ. ಜನವರಿ 5ರಂದು ಚುನಾವಣೆ ನಡೆಯಲಿದ್ದು, ಜನವರಿ 17ರಂದು ಹೊಸ ಸಂಸತ್‌ ಅಸ್ತಿತ್ವಕ್ಕೆ ಬರಲಿದೆ.

ಸಿರಿಸೇನಾ ನಿರ್ಧಾರವನ್ನು ಮಹಿಂದಾ ರಾಜಪಕ್ಸೆ ಸ್ವಾಗತಿಸಿದ್ದಾರೆ. ‘ಜನರ ಆಶಯ ಸಾರ್ವತ್ರಿಕ ಚುನಾವಣೆಯಲ್ಲಿ ವ್ಯಕ್ತವಾಗಲಿದೆ. ಇದು ಸುಭದ್ರ ಸರಕಾರಕ್ಕೆ ಅಡಿಪಾಯವಾಗಲಿದೆ’ ಎಂದಿದ್ದಾರೆ.

ನಂಬರ್‌ ಗೇಮ್‌

ಈ ಹಿಂದೆ ನವೆಂಬರ್‌ 24ರಂದು ಅಧಿವೇಶನಕ್ಕೆ ನಡೆಸಲು ತೀರ್ಮಾನಿಸಲಾಗಿತ್ತು. ಅಧಿವೇಶನದ ಹಿನ್ನೆಲೆಯಲ್ಲಿ ಎರಡೂ ಪಾಳಯದ ಕಡೆಯವರು ಸದಸ್ಯರನ್ನು ಸೆಳೆಯಲು ಕುದುರೆ ವ್ಯಾಪಾರಕ್ಕೆ ಕೈ ಹಾಕಿದ್ದರು. 225 ಸದಸ್ಯ ಬಲದ ಸಂಸತ್‌ನಲ್ಲಿ ಬಹುಮತಕ್ಕೆ 113 ಸದಸ್ಯರು ಬೇಕಾಗಿದೆ. ಆದರೆ ಸಿರಿಸೇನಾ ಯುನೈಟೆಡ್‌ ಪೀಪಲ್ಸ್‌ ಫ್ರೀಡಂ ಅಲಯನ್ಸ್‌ (ಯುಪಿಎಫ್‌ಎ) ಬಳಿ ಕೇವಲ 96 ಸದಸ್ಯರಿದ್ದು, ಉಳಿದ ಸದಸ್ಯರನ್ನು ಹೊಂದಿಸುವ ಆಶಯ ವ್ಯಕ್ತಪಡಿಸಿತ್ತು.

ಇನ್ನೊಂದು ಕಡೆ 106 ಸದಸ್ಯರಿದ್ದರೂ ಅವರಲ್ಲಿ 8 ಜನರನ್ನು ಕಳೆದುಕೊಂಡು ವಿಕ್ರಸಿಂಘೆಯವರ ಪಕ್ಷ 98 ಸದಸ್ಯರನ್ನು ಹೊಂದಿತ್ತು. ಇವರಿಗೆ ತಮಿ‌ಳ್‌ ನ್ಯಾಷನಲ್‌ ಅಲಯನ್ಸ್‌ನ 15 ಸದಸ್ಯರು ಬೆಂಬಲ ನೀಡಿದ್ದರಿಂದ ಸಂಸತ್‌ನಲ್ಲಿ ಸ್ಪಷ್ಟ ಬಹುಮತವನ್ನು ಹೊಂದಿತ್ತು.

ಈ ಹಿನ್ನೆಲೆಯಲ್ಲಿ ಶುಕ್ರವಾರ ಮಾತನಾಡಿದ್ದ ಅಧ್ಯಕ್ಷ ಸಿರಿಸೇನಾ ಪಕ್ಷದ ವಕ್ತಾರ ಕೆಹೆಲಿಯಾ ರಂಬುಕ್‌ವಲ್ಲಾ ‘ತಮಗೆ ಸಂಸತ್‌ನಲ್ಲಿ ಬಹುಮತವಿಲ್ಲ’ ಎಂದು ಒಪ್ಪಿಕೊಂಡಿದ್ದರು. ವಿಶ್ವಾಸಮತ ಯಾಚನೆಗೂ ಮೊದಲೇ ಸೋಲು ಖಚಿತವಾಗುತ್ತಿದ್ದಂತೆ ಅಧ್ಯಕ್ಷ ಸಿರಿಸೇನಾ ವಿಧಾನಸಭೆ ವಿಸರ್ಜನೆ ಮಾಡಿ ಮರು ಚುನಾವಣೆ ಘೋಷಣೆ ಮಾಡಿದ್ದಾರೆ. ಬೆನ್ನಿಗೆ ದೇಶದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದು ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಿದೆ. ಇದು ಎಲ್ಲಿಗೆ ಬಂದು ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ.

Also read: ಅಧ್ಯಕ್ಷರ ಹತ್ಯೆ ಯತ್ನ, ಪ್ರಧಾನಿ ವಜಾ ಮತ್ತು ಅರಾಜಕ ಶ್ರೀಲಂಕಾದಲ್ಲಿ ಮಹಿಂದಾ ರಾಜಪಕ್ಷೆ ನೂತನ ಪಿಎಂ!