ರೆಡ್ಡಿ- ಸಿಸಿಬಿ ಕಣ್ಣಾಮುಚ್ಚಾಲೆ ಅಂತ್ಯ: ವಿಚಾರಣೆಗೆ ಹಾಜರಾದ ಗಾಲಿ ಜನಾರ್ದನ
UPDATE

ರೆಡ್ಡಿ- ಸಿಸಿಬಿ ಕಣ್ಣಾಮುಚ್ಚಾಲೆ ಅಂತ್ಯ: ವಿಚಾರಣೆಗೆ ಹಾಜರಾದ ಗಾಲಿ ಜನಾರ್ದನ

ನಾನು ಹೈದ್ರಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದೇನೆ ಎಂದು ವರದಿಗಳು ಹೇಳುತ್ತಿದ್ದವು. ಮಾಧ್ಯಮಗಳ ವರದಿ ನೋಡಿ ನಗಬೇಕೋ, ಅಳಬೇಕೋ ಗೊತ್ತಾಗಲಿಲ್ಲ ಎಂದು ರೆಡ್ಡಿ ಹೇಳಿದ್ದಾರೆ.

‘ಚಿನ್ನದ ಗಟ್ಟಿಯ ರೋಚಕ ಕತೆ’ಯಲ್ಲಿ ಶನಿವಾರ ವೇದಿಕೆ ಮುಂದೆ ಬಂದಿರುವ ಆರೋಪಿ ಜನಾರ್ದನ ರೆಡ್ಡಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ವಕೀಲ ಚಂದ್ರಶೇಖರ್ ಹಾಗೂ ಗಾಲಿ ಜನಾರ್ದನ ರೆಡ್ಡಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಪ್ರಕರಣದ ಊಹಾಪೋಹಗಳಿಗೆ ಪ್ರತಿಕ್ರಿಯೆ ನೀಡುವ ಪ್ರಯತ್ನ ಮಾಡಿದ್ದಾರೆ. ಅದರ ಬೆನ್ನಲ್ಲೇ ರೆಡ್ಡಿ ಸಿಸಿಬಿ ಕಚೇರಿಗೆ ಆಗಮಿಸುವ ಮೂಲಕ ವಿಚಾರಣೆ ಎದುರಿಸುತ್ತಿದ್ದಾರೆ.

“ನಾನು ಎಲ್ಲಿಯೂ ಹೋಗಿಲ್ಲ. ಇಲ್ಲೇ ಬೆಂಗಳೂರಿನಲ್ಲಿ ಇದ್ದೇನೆ. ನಾನು ಹೈದ್ರಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದೇನೆ ಎಂದು ವರದಿಗಳು ಹೇಳುತ್ತಿದ್ದವು. ಮಾಧ್ಯಮಗಳ ವರದಿ ನೋಡಿ ನಗಬೇಕೋ, ಅಳಬೇಕೋ ಗೊತ್ತಾಗಲಿಲ್ಲ,’’ ಎಂದು ರೆಡ್ಡಿ ಹೇಳಿದ್ದಾರೆ.

ಈ ಮೂಲಕ ಕಳೆದ ಮೂರ್ನಾಲ್ಕು ದಿನಗಳ ಅಂತರದಲ್ಲಿ ತಮ್ಮ ಸುತ್ತ ಬೆಳೆದು ನಿಂತ ಸುದ್ದಿಗಳಿಗೆ ಸಮಜಾಯಿಷಿ ನೀಡಿದ್ದಾರೆ.

ಈ ನಡುವೆ, ವಿಡಿಯೋದಲ್ಲಿ ರೆಡ್ಡಿ ಹಾಗೂ ವಕೀಲರು ಸಿಸಿಬಿ ನೋಟಿಸ್ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. “ಖುದ್ದು ಪೊಲೀಸ್ ಆಯುಕ್ತರೇ ಪತ್ರಿಕಾಗೋಷ್ಠಿಯಲ್ಲಿ ಜನಾರ್ದನ ರೆಡ್ಡಿ ಹೆಸರು ಪ್ರಸ್ತಾಪಿಸಿದ್ದರು. ಪ್ರಕಟಣೆಯಲ್ಲೂ ಅದನ್ನೇ ಉಲ್ಲೇಖಿಸಿದ್ದರು. ಆದರೆ ಉಳಿದ ಆರೋಪಿಗಳಿಗೆ ನೋಟಿಸ್ ನೀಡಿದ್ದರೂ ರೆಡ್ಡಿಗೆ ಯಾವುದೇ ನೋಟಿಸ್ ಜಾರಿ ಆಗಿರಲಿಲ್ಲ. ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ನೋಟಿಸ್ ಜಾರಿಯಾಗಿದ್ದು ಭಾನುವಾರ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ,’’ ವಿಡಿಯೋದಲ್ಲಿ ವಕೀಲ ಚಂದ್ರಶೇಖರ್ ತಿಳಿಸಿದ್ದಾರೆ.

ಮಾಧ್ಯಮ ವರದಿಗಳಿಂದ ಗುಮಾನಿಗೆ ಎಡೆ ಮಾಡಿಕೊಟ್ಟಿದೆ ಎಂದು ಆರೋಪಿಸಿದ್ದಾರೆ. “ಮೊಳಕಾಲ್ಮೂರು ಕಾರ್ಯಕ್ರಮದಲ್ಲಿ ನಾನು ನನ್ನ ಮನೆಯ ಸುತ್ತ ಪೊಲೀಸರ ಚಲವಲನಗಳ ವಿಚಾರವನ್ನು ಮಾಧ್ಯಮ ಸ್ನೇಹಿತರಿಗೆ ತಿಳಿಸಿದ್ದೆ. ಪೊಲೀಸರು ಯಾಕೆ ಮಾಧ್ಯಮಗಳನ್ನು ದಿಕ್ಕು ತಪ್ಪಿಸಿದ್ದಾರೆ ಎಂಬುದು ಗೊತ್ತಿಲ್ಲ,’’ ಎಂದು ಜನಾರ್ದನ ರೆಡ್ಡಿ ಸಿಸಿಬಿ ಪೊಲೀಸರ ನಡೆಯನ್ನು ಟೀಕಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹೆಚ್ಚುವರಿ ಆಯಕ್ತ ಅಲೋಕ್ ಕುಮಾರ್, “ಈ ಕುರಿತು ಯಾವುದೇ ಮಾಹಿತಿ ಇಲ್ಲ. ಅವರು ಬಂದರೆ ಕಾನೂನಿನ ಅಡಿಯಲ್ಲಿ ವಿಚಾರಣೆ ನಡೆಸುತ್ತೇವೆ,’’ ಎಂದರು. ಹೀಗೆ, ಶನಿವಾರವೂ ರೆಡ್ಡಿ- ಸಿಸಿಬಿ ನಡುವಿನ ಕಣ್ಣಮುಚ್ಚಾಲೆ ಮುಂದುವರಿದಿದೆ.