ಮಾವೋವಾದಿ ನಾಯಕತ್ವ ಬದಲಾವಣೆ: ಆಂಧ್ರ ಶಾಸಕರ ಹತ್ಯೆ ರೂವಾರಿ ಸಂಘಟನೆಯ ಹೊಸ ಸಾರಥಿ
UPDATE

ಮಾವೋವಾದಿ ನಾಯಕತ್ವ ಬದಲಾವಣೆ: ಆಂಧ್ರ ಶಾಸಕರ ಹತ್ಯೆ ರೂವಾರಿ ಸಂಘಟನೆಯ ಹೊಸ ಸಾರಥಿ

72 ವರ್ಷದ ಗಣಪತಿಯವರನ್ನು ಹುದ್ದೆಯಿಂದ ಕೆಳಗಿಳಿಯುವಂತೆ ಸಿಪಿಐ ಕೇಂದ್ರ ಸಮಿತಿ ಸೂಚಿಸಿತ್ತು. ಅವರ ಸ್ಥಾನಕ್ಕೆ 62 ವರ್ಷ ವಯಸ್ಸಿನ, ನವ ಆಲೋಚನೆಗಳಿರುವ ಹೊಸ ಮುಖವನ್ನು ತರಲು ಕೇಂದ್ರ ಸಮಿತಿ ನಿರ್ಧರಿಸಿದೆ.

ಚಿತ್ರ: ಮುಪ್ಪಾಲಾ ಲಕ್ಷ್ಮಣ್‌ ರಾವ್‌ ಅಲಿಯಾಸ್‌ ಗಣಪತಿ

ನಿಷೇಧಿತ ದೇಶದ ಪ್ರಮುಖ ಬಂಡುಕೋರ ಸಂಘಟನೆ, ಸಿಪಿಐ (ಮಾವೋವಾದಿ) ಪಕ್ಷದ ನಾಯಕತ್ವ ಬದಲಾಗಿದೆ. ಸಿಪಿಐ (ಮಾವೋವಾದಿ) ಸಂಘಟನೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಪ್ಪಾಲಾ ಲಕ್ಷ್ಮಣ್‌ ರಾವ್‌ ಅಲಿಯಾಸ್‌ ಗಣಪತಿ ಕೆಳಗಿಳಿದಿದ್ದಾರೆ. ಅವರ ಜಾಗಕ್ಕೆ ಸಂಘಟನೆಯ ಎರಡನೇ ಉನ್ನತ ನಾಯಕ ನಂಬಾಲಾ ಕೇಶವ್‌ ರಾವ್‌ ಅಲಿಯಾಸ್‌ ಬಸವರಾಜ್‌ ನೇಮಕಗೊಂಡಿದ್ದಾರೆ.

ಸುಮಾರು ಎರಡು ತಿಂಗಳ ಹಿಂದೆಯೇ ಈ ಬದಲಾವಣೆ ನಡೆದಿದೆ ಎಂದು ‘ದಿ ಹಿಂದೂ’ ವರದಿ ಮಾಡಿದೆ. ಆಂಧ್ರ ಪ್ರದೇಶದಲ್ಲಿ ಸೆಪ್ಟೆಂಬರ್‌ 23ರಂದು 40 ಜನ ನಕ್ಸಲರ ತಂಡ ಅರಕು ಶಾಸಕ ಕಿದರಿ ಸರ್ವೇಶ್ವರ ರಾವ್‌ ಮತ್ತು ಮಾಜಿ ಶಾಸಕ ಶಿವೇರಿ ಸೋಮ ಅವರನ್ನು ಹತ್ಯೆ ಮಾಡಿತ್ತು. ಇದಾದ ನಂತರ ಸಂಘಟನೆಯೊಳಕ್ಕೆ ಈ ಬದಲಾವಣೆಗಳು ಕಾಣಿಸಿಕೊಂಡಿವೆ ಎಂದು ಅದು ಹೇಳಿದೆ.

ಆಂಧ್ರದ ಈ ಹತ್ಯೆ ಹಿಂದೆ ಬಸವರಾಜ್‌ ತಲೆ ಕೆಲಸ ಮಾಡಿದೆ ಎಂದುಕೊಳ್ಳಲಾಗಿದೆ. ತಳಮಟ್ಟದ ಅಗಾಧ ಜ್ಞಾನ ಮತ್ತು ಈ ರೀತಿಯ ಅನಿರೀಕ್ಷಿತ ದಾಳಿಗಳನ್ನು ನಡೆಸುತ್ತಲೇ ಬಂದ ಇತಿಹಾಸ ಬಸವರಾಜ್‌ಗಿದೆ. ಜತೆಗೆ ಈ ದಾಳಿಯ ನೇತೃತ್ವವನ್ನು ಅವರ ‘ಪೀಪಲ್ಸ್‌ ಲಿಬರೇಷನ್‌ ಗೆರಿಲ್ಲಾ ಆರ್ಮಿ’ ವಹಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಈ ದಾಳಿಯಲ್ಲೂ ಬಸವರಾಜ್‌ ಪಾಲ್ಗೊಂಡಿದ್ದಾರೆ ಎಂಬುದು ಆಂಧ್ರದ ವಿಶೇಷ ಗುಪ್ತಚರ ಇಲಾಖೆ ಅಧಿಕಾರಿಗಳ ಅಂದಾಜು. ಇಂಥಹದ್ದೊಂದು ದಾಳಿಯ ಆಸುಪಾಸಿನಲ್ಲಿ ನಕ್ಸಲರ ನಾಯಕತ್ವ ಬದಲಾಗಿದೆ ಎಂದು ಇದೇ ಅಧಿಕಾರಿಗಳು ಹೇಳಿದ್ದಾರೆ.

ಬಲವಂತದ ರಾಜೀನಾಮೆ

72 ವರ್ಷದ ಗಣಪತಿಯವರನ್ನು ಹುದ್ದೆಯಿಂದ ಕೆಳಗಿಳಿಯುವಂತೆ ಸ್ವತಃ ಸಿಪಿಐ ಕೇಂದ್ರ ಸಮಿತಿ ಸೂಚಿಸಿತ್ತು. ಅವರ ಸ್ಥಾನಕ್ಕೆ 62 ವರ್ಷ ವಯಸ್ಸಿನ, ನವ ಆಲೋಚನೆಗಳಿರುವ ಹೊಸ ಮುಖವನ್ನು ತರಲು ಕೇಂದ್ರ ಸಮಿತಿ ನಿರ್ಧರಿಸಿದೆ.

ಈ ಹಿಂದೆ ಮಾವೋವಾದಿಗಳ ಹೋರಾಟದ ವಿಭಾಗವಾದ ‘ಕೇಂದ್ರ ಸೇನಾ ಆಯೋಗ’ವನ್ನು ಬಸವರಾಜ್‌ ಮುನ್ನಡೆಸುತ್ತಿದ್ದರು. ಹೋರಾಟದ ಅಗಾಧ ಅನುಭವಗಳನ್ನು ಹೊಂದಿರುವ ಬಸವರಾಜ್‌ ದಾಳಿಯ ಸಂಚು ರೂಪಿಸುವುದರಲ್ಲಿ ನಿಷ್ಣಾತರು ಎಂದು ಹೇಳಲಾಗಿದೆ. ಇದರ ಜತೆಗೆ ಸ್ಫೋಟಕಗಳು ಮತ್ತು ಗೆರಿಲ್ಲಾ ಯುದ್ಧದ ಬಗೆಗೆ ಅಪಾರ ಅನುಭವಗಳೂ ಅವರಿಗಿವೆ.

ಬಸವರಾಜ್‌ ಕೂಡ ಆಂಧ್ರ ಪ್ರದೇಶಕ್ಕೆ ಸೇರಿದವರಾಗಿದ್ದು ಶ್ರೀಕಾಕುಳಂ ಜಿಲ್ಲೆಯವರಾಗಿದ್ದಾರೆ. ಅವರು ಎನ್‌ಐಟಿ ವಾರಂಗಲ್‌ ಕಾಲೇಜಿನಿಂದ ಇಂಜಿನಿಯರಿಂಗ್‌ ವಿಷಯದಲ್ಲಿ ಪದವಿ ಪಡೆದುಕೊಂಡಿದ್ದಾರೆ.

ಹಾಲಿ ಮಾವೋವಾದಿಗಳ ಸಂಘಟನೆಯನ್ನು ಕಟ್ಟಿ ಬೆಳೆಸುವಲ್ಲಿ ಗಣಪತಿ ಸಾಕಷ್ಟು ಶ್ರಮಿಸಿದ್ದರು. ತೆಲಂಗಾಣದ ಜಗ್ತಿಯಾಲ್‌ನ ಬಿರ್ಪುರ್‌ ಜಿಲ್ಲೆಗೆ ಸೇರಿದ ಅವರು ಕೃಷಿಕರಬ್ಬರ ಮಗನಾಗದ್ದರು. ಬಿಎಸ್‌ಸಿ ಮತ್ತು ಬಿಎಡ್‌ ಪದವಿಗಳನ್ನು ಪಡೆದಿದ್ದರು. ಸಿಪಿಐ (ಮಾವೋವಾದಿ), ಸಿಪಿಐ (ಮಾರ್ಕ್ಸಿಸ್ಟ್‌ – ಲೆನಿನಿಸ್ಟ್‌), ಪೀಪಕ್ಸ್‌ ವಾರ್‌ ಹಾಗೂ ಮಾವೋವಾದಿ ಕಮ್ಯೂನಿಸ್ಟ್‌ ಸೆಂಟರ್‌ ಆಫ್‌ ಇಂಡಿಯಾ (ಎಂಸಿಸಿಐ)ಗಳನ್ನು 2004ರಲ್ಲಿ ಒಗ್ಗೂಡಿಸುವಲ್ಲಿ ಅವರ ಪಾತ್ರ ಮಹತ್ವದಾಗಿತ್ತು. ಇದೀಗ ಸಂಘಟನೆಗಳನ್ನು ಒಗ್ಗೂಡಿಸಿ, ಹಲವು ವರ್ಷಗಳ ಕಾಲ ಮುನ್ನಡೆಸಿ ಅವರು ನಿರ್ಗಮಿಸಿದ್ದಾರೆ.

ಮಾಹಿತಿ ಮೂಲ: ದಿ ಹಿಂದೂ.

Join Samachara Official. CLICK HERE