‘ಬಿಜೆಪಿ ಬುಟ್ಟಿಗೆ ಸಮ್ಮಿಶ್ರ ಕೈ’: ಉಪ ಚುನಾವಣೆಯಲ್ಲಿ ಬಿರುಸಿನ ಮತದಾನ
UPDATE

‘ಬಿಜೆಪಿ ಬುಟ್ಟಿಗೆ ಸಮ್ಮಿಶ್ರ ಕೈ’: ಉಪ ಚುನಾವಣೆಯಲ್ಲಿ ಬಿರುಸಿನ ಮತದಾನ

ರಾಜ್ಯದ ಐದು ಕ್ಷೇತ್ರಗಳ ಉಪ ಚುನಾವಣೆಯ ಮತದಾನ ನಡೆಯುತ್ತಿದ್ದು, ‘ಮತದಾರ ಪ್ರಭುಗಳು’ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಪ್ರಕ್ರಿಯೆಯಲ್ಲಿದ್ದಾರೆ.

ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಕೂಟ ಹಾಗೂ ಬಿಜೆಪಿ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ರಾಜ್ಯದ ಮೂರು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ನಡೆಯುತ್ತಿದೆ. ಬೆಳಿಗ್ಗೆ 11 ಗಂಟೆಯ ವೇಳೆಗೆ ಬಳ್ಳಾರಿಯಲ್ಲಿ ಶೇಕಡ 24.58 ಸರಾಸರಿಯ ಗರಿಷ್ಠ ಮತದಾನವಾಗಿದೆ.

ಜಮಖಂಡಿಯಲ್ಲಿ 22.3%, ರಾಮನಗರದಲ್ಲಿ 21.51%, ಶಿವಮೊಗ್ಗದಲ್ಲಿ 17.37% ಮತ್ತು ಮಂಡ್ಯದಲ್ಲಿ 13.36% ಮತ ಚಲಾವಣೆಯಾಗಿದೆ. ಮಂಡ್ಯದಲ್ಲಿ ಆರಂಭಿಕ ಮತದಾನದ ಪ್ರಮಾಣ ಉಳಿದ ಕ್ಷೇತ್ರಗಳಿಗಿಂತ ಸಾಕಷ್ಟು ಕಡಿಮೆ ಇದೆ.

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ತಮ್ಮ ಚುನಾವಣಾ ಏಜೆಂಟ್ ಪದ್ಮನಾಭ್‌ ನೇಮಕವನ್ನು ಹಿಂಪಡೆದಿದ್ದಾರೆ. ಇದರಿಂದ ರಾಮನಗರ ವಿಧಾನಸಭಾ ಕ್ಷೇತ್ರದ 277 ಬಿಜೆಪಿ ಏಜೆಂಟ್‌ಗಳ ಮಾನ್ಯತೆ ರದ್ದಾಗಿದ್ದು ಮತಗಟ್ಟೆಗೆ ಪ್ರವೇಶ ನೀಡಲಾಗಿಲ್ಲ.

Also read: ‘ರಾಮನಗರದ ಆಪರೇಷನ್ ಖೆಡ್ಡಾ’: ಉಪಚುನಾವಣೆ ಕಣದಿಂದ ಹಿಂದೆ ಸರಿದ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ

ಇನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಸ್ಥಳೀಯರು ಚುನಾವಣೆ ಬಹಿಷ್ಕರಿಸಿದ್ದಾರೆ ಎಂದು ವರದಿಯಾಗಿದೆ. ಶಿವಮೊಗ್ಗ ತಾಲ್ಲೂಕಿನ ಹೊಳೆ ಬೆಳಗಲು ಹಾಗೂ ದೊಡ್ಡಮಟ್ಟಿ ಗ್ರಾಮಗಳ ಜನ ಮತದಾನ ಪ್ರಕ್ರಿಯೆಲ್ಲಿ ಭಾಗವಹಿಸದೆ ಚುನಾವಣೆಯಿಂದ ದೂರ ಉಳಿದಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರದ ಹರಗಿನಡೋಣಿ ಗ್ರಾಮದ ಜನರು ಶಾಶ್ವತ ಕುಡಿಯುವ ನೀರಿನ ಸೌಲಭ್ಯಕ್ಕೆ ಒತ್ತಾಯಿಸಿ ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಭೇಟಿ ನೀಡಿ ಭರವಸೆ ನೀಡಿದರೂ ಗ್ರಾಮಸ್ಥರು ಮತದಾನಕ್ಕೆ ಮುಂದಾಗಿಲ್ಲ.

ಈ ಉಪ ಚುನಾವಣೆಯಲ್ಲಿ ರಾಮನಗರ, ಮಂಡ್ಯದಲ್ಲಿ ಜೆಡಿಎಸ್‌, ಜಮಖಂಡಿಯಲ್ಲಿ ಕಾಂಗ್ರೆಸ್‌ ಗೆಲ್ಲುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್‌ ಉಗ್ರಪ್ಪ ಮತ್ತು ಬಿಜೆಪಿಯ ಶಾಂತಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಶಿವಮೊಗ್ಗದಲ್ಲಿ ಬಿಜೆಪಿ- ಜೆಡಿಎಸ್‌ ನಡುವೆ ಜಿದ್ದಾ ಜಿದ್ದಿ ನಡೆಯಲಿದೆ.

ಬಳ್ಳಾರಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ವರ್ಚಸ್ಸಿಗಿಂತ ಡಿ.ಕೆ.ಶಿವಕುಮಾರ್‌ ಮತ್ತು ಬಿ. ಶ್ರೀರಾಮುಲು ಪ್ರತಿಷ್ಠೆಯ ಮೇಲೆ ಪಕ್ಷಗಳು ಚುನಾವಣೆ ಎದುರಿಸುತ್ತಿವೆ. ಇಲ್ಲಿ ಬಿಜೆಪಿಯಿಂದ ಶ್ರೀರಾಮುಲು ಮಾತ್ರವಲ್ಲ ಮಾಜಿ ಸಚಿವ ಜನಾರ್ದನ ರೆಡ್ಡಿ ಕೂಡಾ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವಂತಿದೆ. ಒಂದು ಕಡೆಗೆ ಸಿದ್ದರಾಮಯ್ಯ, ಮತ್ತೊಂದು ಕಡೆಗೆ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ‘ಶ್ರಮ’ ಹಾಕಿದ್ದಾರೆ.

ಶಿವಮೊಗ್ಗದಲ್ಲಿ ಬಿಜೆಪಿಯ ಬಿ.ವೈ. ರಾಘವೇಂದ್ರ ಹಾಗೂ ಜೆಡಿಎಸ್‌ ಮಧು ಬಂಗಾರಪ್ಪ ಕಣದಲ್ಲಿದ್ದು ಬಿಜೆಪಿ ಕಡೆಗೆ ಹೆಚ್ಚು ಮತಗಳು ಒಲಿಯುವ ನಿರೀಕ್ಷೆಗಳಿವೆ. ಇಲ್ಲಿ ಕಣದಲ್ಲಿರುವ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಾಗಿದ್ದು, ಬಿ.ಎಸ್‌. ಯಡಿಯೂರಪ್ಪ ತಮ್ಮ ಮಗನನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಕನಸು ಕಂಡಿದ್ದರೆ, ಈ ಕನಸನ್ನು ಒಡೆಯಲು ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಎಸ್‌. ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸಿದ್ದಾರೆ.

ಜಮಖಂಡಿಯಲ್ಲಿ ಸಿದ್ದು ನ್ಯಾಮಗೌಡ ಸಾವಿನ ಅನುಕಂಪವೇ ಬಹುತೇಕ ಕಾಂಗ್ರೆಸ್‌ ಕೈ ಹಿಡಿಯಲಿದೆ. ಮಂಡ್ಯದಲ್ಲಿ ಬಿಜೆಪಿಯದ್ದು ನಾಮಕಾವಸ್ಥೆಯ ಉಮೇದುವಾರಿಕೆ. ವಕ್ಕಲಿಗರ ‘ಜಾತಿ ಪ್ರೇಮ’ ಇಲ್ಲಿ ಜೆಡಿಎಸ್‌ ಕೈ ಹಿಡಿಯಲಿದೆ.

Also read: ಪ್ರತಿಷ್ಠೆಯಾದ ಉಪ ಚುನಾವಣೆ; ಫಲಕೊಡಲಿದೆಯೇ ಜೆಡಿಎಸ್- ಕಾಂಗ್ರೆಸ್‌ ಮೈತ್ರಿ?

ರಾಮನಗರ ವಿಧಾನಸಭಾ ಕ್ಷೇತ್ರದ ಗೆಲುವನ್ನು ಜೆಡಿಎಸ್‌ ಈಗಾಗಲೇ ಖಚಿತ ಪಡಿಸಿಕೊಂಡಿದೆ. ಕಣದಲ್ಲಿದ್ದ ಬಿಜೆಪಿ ಅಭ್ಯರ್ಥಿ ತವರು ಪಕ್ಷಕ್ಕೆ ಮರಳಿದ ಬಳಿಕ ರಾಮನಗರದಲ್ಲಿ ಬಿಜೆಪಿ ಮಕಾಡೆ ಮಲಗಿದೆ. ಹೀಗಾಗಿ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿಗೆ ಇಲ್ಲಿ ನಿರಾಯಾಸ ಗೆಲುವು ಸಿಗಲಿದೆ.

ಐದೂ ಕ್ಷೇತ್ರಗಳ ಒಟ್ಟು 55,22,442 ಮಂದಿ ಮತದಾರರು ಇಂದು ಕಣದಲ್ಲಿರುವ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಮಂಗಳವಾರ (ನವೆಂಬರ್‌ 6) ಮಧ್ಯಾಹ್ನದ ವೇಳೆಗೆ ಯಾರ್ಯಾರ ಕೊರಳಿಗೆ ಗೆಲುವಿನ ಮಾಲೆ ಏರಲಿದೆ, ಯಾರ್ಯಾರ ಮುಖಗಳು ಸೋಲಿನಿಂದ ಕುಸಿಯಲಿವೆ ಎಂಬುದು ಗೊತ್ತಾಗಲಿದೆ.