samachara
www.samachara.com
ಮುರಿದು ಬಿದ್ದ ಮಾತುಕತೆ; ದೆಹಲಿ ಗೇಟ್‌ನಲ್ಲಿ ಮುಂದುವರಿದ ರೈತರ ಪ್ರತಿಭಟನೆ
UPDATE

ಮುರಿದು ಬಿದ್ದ ಮಾತುಕತೆ; ದೆಹಲಿ ಗೇಟ್‌ನಲ್ಲಿ ಮುಂದುವರಿದ ರೈತರ ಪ್ರತಿಭಟನೆ

ರೈತ ಮುಖಂಡರು ಹಾಗೂ ಕೇಂದ್ರ ಸಚಿವರ ನಡುವೆ ನಡೆದ ಸಂಧಾನ ಮಾತುಕತೆ ಮುರಿದುಬಿದ್ದಿದೆ. ಹೀಗಾಗಿ ದೆಹಲಿ ಗೇಟ್‌ನಲ್ಲಿ ರೈತರ ಪ್ರತಿಭಟನೆ ಮುಂದುವರಿಯಲಿದೆ.

ಕಬ್ಬಿನ ಬಾಕಿ ಪಾವತಿ, ಸಾಲಮನ್ನಾ, ಸ್ವಾಮಿನಾಥನ್ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಹಾಗೂ ಕೇಂದ್ರ ಸರಕಾರದ ನಡುವಿನ ಮಾತುಕತೆ ಮುರಿದು ಬಿದ್ದಿದೆ. ಹೀಗಾಗಿ ಪ್ರತಿಭಟನೆ ಮುಂದುವರಿಸುವುದು ಅನಿವಾರ್ಯ ಎಂದು ಭಾರತೀಯ ಕಿಸಾನ್‌ ಒಕ್ಕೂಟ (ಬಿಕೆಯು) ಹೇಳಿದೆ.

“ಪ್ರಮುಖ ಬೇಡಿಕೆಯಾದ ಸಾಲಮನ್ನಾ ಹಾಗೂ ಸ್ವಾಮಿನಾಥನ್‌ ವರದಿಯ ಜಾರಿಗೆ ಸರಕಾರ ಕೇವಲ ಭರವಸೆ ಮಾತ್ರ ನೀಡಿರುವುದರಿಂದ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ. ಸರಕಾರದ ವಿರುದ್ಧ ರೈತರ ಪ್ರತಿಭಟನೆ ಮುಂದುವರಿಯಲಿದೆ” ಎಂದು ಬಿಕೆಯು ಅಧ್ಯಕ್ಷ ನರೇಶ್‌ ಟಿಕೈತ್‌ ತಿಳಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ದೆಹಲಿ ಗೇಟ್‌ ಬಳಿಯೇ ಸಾವಿರಾರು ರೈತರನ್ನು ತಡೆದ ಪೊಲೀಸರು, ರೈತರು ದೆಹಲಿ ಪ್ರವೇಶಿದಂತೆ ನಿರ್ಬಂಧ ಹೇರಿದ್ದಾರೆ. ಉತ್ತರ ಪ್ರದೇಶ- ದೆಹಲಿ ಗಡಿಯ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳ ರಾಶಿ ಹಾಕಿಕೊಂಡಿರುವ ಪೊಲೀಸರು ರೈತರ ಮೇಲೆ ಲಾಠಿ ಪ್ರಹಾರ, ಅಶ್ರುವಾಯು, ಜಲ ಫಿರಂಗಿ ಹಾರಿಸುತ್ತಿದ್ದಾರೆ.

Also read: ಗಾಂಧಿ ಜಯಂತಿ ದಿನವೇ ರೈತರ ವಿರುದ್ಧ ತಿರುಗಿ ಬಿದ್ದ ಸರಕಾರ; ದಿಲ್ಲಿ ಪ್ರವೇಶಿದಂತೆ ಹೆದ್ದಾರಿಯಲ್ಲೇ ಪ್ರಹಾರ

ಮಧ್ಯಾಹ್ನದ ಹೊತ್ತಿಗೆ ರೈತ ಮುಖಂಡರು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಹಾಗೂ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರೊಂದಿಗೆ ಮಾತುಕತೆ ನಡೆಸಿದರು.

“11 ಪ್ರಮುಖ ಬೇಡಿಕೆಗಳಲ್ಲಿ 7 ಬೇಡಿಕೆಗಳನ್ನು ಈಡೇರಿಸಲು ಸರಕಾರ ಒಪ್ಪಿದೆ. ಉಳಿದ ಬೇಡಿಕೆಗಳ ಬಗ್ಗೆ ಪರಿಶೀಲಿಸುವುದಾಗಿ ಸರಕಾರ ಹೇಳಿದೆ. ಮುಖ್ಯವಾಗಿ ಸಾಲ ಮನ್ನಾ ಹಾಗೂ ಸ್ವಾಮಿನಾಥನ್‌ ವರದಿ ಜಾರಿಗೆ ಸರಕಾರ ಒಪ್ಪಿಲ್ಲ. ಸಾಲಮನ್ನಾ ಹಣಕಾಸಿನ ವಿಷಯವಾಗಿರುವುದರಿಂದ ಈಗಲೇ ತೀರ್ಮಾನಕ್ಕೆ ಬರುವುದು ಸಾಧ್ಯವಿಲ್ಲ ಎಂದು ಸರಕಾರ ಹೇಳಿದೆ” ಎಂದು ಬಿಕೆಯು ವಕ್ತಾರ ಯುಧ್‌ವೀರ್‌ ಸಿಂಗ್‌ ಹೇಳಿದ್ದಾರೆ.

Also read: ಅನ್ನದಾತರ ಮೇಲೆ ಪ್ರಹಾರ: ನಿಜ ಹೇಳಿ, ರೈತರು ಮುಂದಿಟ್ಟ ಈ ಬೇಡಿಕೆಗಳಲ್ಲಿ ತಪ್ಪೇನಿದೆ?