ಇಂಡೋನೇಷ್ಯಾ ಸುನಾಮಿ ದುರಂತ; 830 ದಾಟಿದ ಮೃತರ ಸಂಖ್ಯೆ
UPDATE

ಇಂಡೋನೇಷ್ಯಾ ಸುನಾಮಿ ದುರಂತ; 830 ದಾಟಿದ ಮೃತರ ಸಂಖ್ಯೆ

ಇಂಡೋನೇಷ್ಯಾದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೂಕಂಪ ಹಾಗೂ ಸುನಾಮಿಯಿಂದ ಈವರೆಗೆ 832 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.

ಇಂಡೋನೇಷ್ಯಾದಲ್ಲಿ ಸುನಾಮಿಯಿಂದ ಮೃತಪಟ್ಟವರ ಸಂಖ್ಯೆ 830 ದಾಟಿದೆ ಎಂದು ಸ್ಥಳೀಯ ವಿಪತ್ತು ನಿರ್ವಹಣಾ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.

ಪರಿಹಾರ ಕಾರ್ಯಗಳು ನಡೆಯುತ್ತಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಪಲು ನಗರ ಭೂಕಂಪ ಹಾಗೂ ಸುನಾಮಿಯಿಂದ ಸಂಪೂರ್ಣ ಜರ್ಜರಿತವಾಗಿದೆ ಎಂದು ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ವಕ್ತಾರರು ತಿಳಿಸಿದ್ದಾರೆ.

ಡೋಂಗಲ, ಸಿಗಿ, ಬೋವ್‌ಟಂಗ್‌ ಪಟ್ಟಣಗಳು ಭೂಕಂಪ ಹಾಗೂ ಸುನಾಮಿ ಹೊಡೆತಕ್ಕೆ ಸಂಪೂರ್ಣ ಹಾಳಾಗಿವೆ. ಈ ಪಟ್ಟಣಗಳಲ್ಲಿ ಸತ್ತವರ ಸಂಖ್ಯೆ ಇನ್ನೂ ನಿಖರವಾಗಿ ಗೊತ್ತಾಗಿಲ್ಲ. ಅವಶೇಷಗಳಡಿ ಶವಗಳು ಸಿಲುಕಿರುವ ಸಾಧ್ಯತೆ ಇದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಶುಕ್ರವಾರ ಸಂಜೆ ಸಂಭವಿಸಿದ 7.5ರಷ್ಟು ತೀವ್ರತೆಯ ಕಂಪನ ಹಾಗೂ ಇದರಿಂದ ಸೃಷ್ಟಿಯಾದ ಸುನಾಮಿ ಇಂಡೋನೇಷ್ಯಾದಲ್ಲಿ ಸಾವಿನ ಸೂತಕ ಸೃಷ್ಟಿಸಿದೆ.

ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ 2004ರಲ್ಲಿ ಸಂಭವಿಸಿದ್ದ 9.1 ತೀವ್ರತೆಯ ಭೂಕಂಪದಿಂದ ಸುನಾಮಿ ಉಂಟಾಗಿತ್ತು. ಭಾರತದ ಪೂರ್ವ ಕರಾವಳಿಗೂ ಈ ಸುನಾಮಿ ತೀವ್ರ ಹೊಡೆತ ಕೊಟ್ಟಿತ್ತು. 2004ರ ಸುನಾಮಿಯಿಂದ ಒಟ್ಟು ಸುಮಾರು 2.27 ಲಕ್ಷ ಜನರು ಸಾವನ್ನಪ್ಪಿದ್ದರು.