ಶಬರಿಮಲೆ ಈಗ ಮಹಿಳೆಯರಿಗೆ ಮುಕ್ತ ಮುಕ್ತ, ನಿಷೇಧ ತೆರವುಗೊಳಿಸಿದ ಸುಪ್ರೀಂ ಕೋರ್ಟ್‌
UPDATE

ಶಬರಿಮಲೆ ಈಗ ಮಹಿಳೆಯರಿಗೆ ಮುಕ್ತ ಮುಕ್ತ, ನಿಷೇಧ ತೆರವುಗೊಳಿಸಿದ ಸುಪ್ರೀಂ ಕೋರ್ಟ್‌

4:1 ಬಹುಮತದ ತೀರ್ಪಿನೊಂದಿಗೆ ಮಹಿಳೆಯರಿಗೆ ಶಬರಿಮಲೆಯ ಬಾಗಿಲನ್ನು ಸುಪ್ರೀಂ ಕೋರ್ಟ್‌ ತೆರೆದು ಕೊಟ್ಟಿದೆ.

ಹಿಂದೂ ಧಾರ್ಮಿಕ ಸ್ಥಳ ಕೇರಳದ ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಮಹಿಳೆಯರಿಗೆ ಇದ್ದ ನಿಷೇಧವನ್ನು ಸುಪ್ರೀಂ ಕೋರ್ಟ್‌ ತೆರವುಗೊಳಿಸಿದೆ. ವಯಸ್ಸಿನ ಹಂಗಿಲ್ಲದೆ ಎಲ್ಲಾ ಮಹಿಳೆಯರು ಮುಕ್ತವಾಗಿ ಶಬರಿಮಲೆ ದೇವಸ್ಥಾನವನ್ನು ಪ್ರವೇಶ ಮಾಡಬಹುದಾಗಿದೆ ಎಂಬ ಐತಿಹಾಸಿಕ ತೀರ್ಪು ನೀಡಿದೆ.

‘ಕೇರಳ ಹಿಂದೂ ಸ್ಥಳಗಳಲ್ಲಿ ಸಾರ್ವಜನಿಕ ಆಚರಣೆ ನಿಯಮ 1965’ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ನಿಷೇಧ ಹೇರಿತ್ತು. ಇದು ಹಿಂದೂ ಮಹಿಳೆಯರ ಧಾರ್ಮಿಕ ಆಚರಣೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ.

ಶಬರಿಮಲೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇಗುಲ ಕೇರಳದ ಪ್ರಖ್ಯಾತ ಧಾರ್ಮಿಕ ಸ್ಥಳವಾಗಿದ್ದು ಇದನ್ನು ‘ಟ್ರಾವಂಕೂರ್‌ ದೇವಸ್ವಂ ಬೋರ್ಡ್‌’ ನಿರ್ವಹಿಸುತ್ತದೆ. ಈ ಮಂಡಳಿಯು ತಿಂಗಳ ಮುಟ್ಟು ಆರಂಭವಾದ ನಂತರದ ವಯಸ್ಸಿನ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ನಿಷೇಧವಿರಬೇಕು ಎಂದು ವಾದಿಸಿತ್ತು. ಆದರೆ ಇದನ್ನು ತಳ್ಳಿ ಹಾಕಿರುವ ಸುಪ್ರೀಂ ಕೋರ್ಟ್‌ ಎಲ್ಲಾ ವಯಸ್ಸಿನ ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಿದೆ. ದೇವಸ್ಥಾನ ಪ್ರವೇಶಕ್ಕೆ ಲಿಂಗಾಧಾರಿತ ತಾರತಮ್ಯ ಸರಿಯಲ್ಲ ಎಂದು ಕೋರ್ಟ್‌ ಹೇಳಿದೆ.

ಆರಂಭದಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕಿದ್ದ ನಿಷೇಧ ಪ್ರಶ್ನಿಸಿ ಹಲವರು ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ಕೇರಳ ಹೈಕೋರ್ಟ್‌ ಈ ನಿಷೇಧವನ್ನು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ನಂತರ ಜುಲೈ 17ರಿಂದ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಇದರ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.

ವಿಚಾರಣೆ ನಡೆಸಿದ ನ್ಯಾಯಾಧೀಶರಲ್ಲಿ ನಾಲ್ವರಾದ ಮುಖ್ಯ ನ್ಯಾ. ದೀಪಕ್‌ ಮಿಶ್ರಾ, ನ್ಯಾ. ಆರ್‌.ಎಫ್‌. ನಾರಿಮನ್‌, ಎ.ಎಂ. ಖನ್ವಿಲ್ಕರ್‌, ಡಿ.ವೈ. ಚಂದ್ರಚೂಡ್‌ ನಿಷೇಧವನ್ನು ತೆರವುಗೊಳಿಸಿ ಆದೇಶ ನೀಡಿದರೆ, ನ್ಯಾ. ಇಂದು ಮಲ್ಹೋತ್ರಾ ಮಾತ್ರ ಅರ್ಜಿ ವಿಚಾರಣೆಗೆ ಅರ್ಹವಲ್ಲ ಎಂದು ಭಿನ್ನ ತೀರ್ಪಿತ್ತಿದ್ದಾರೆ. ಹೀಗೆ 4:1 ಬಹುಮತದ ತೀರ್ಪಿನೊಂದಿಗೆ ಮಹಿಳೆಯರಿಗೆ ಶಬರಿಮಲೆಯ ಬಾಗಿಲನ್ನು ಸುಪ್ರೀಂ ಕೋರ್ಟ್‌ ತೆರೆದು ಕೊಟ್ಟಿದೆ.

ಕಾನೂನಾತ್ಮಕ ನೆಲೆಯಲ್ಲಿ ಮಹಿಳೆಯರಿಗೆ ಜಯ ಸಿಕ್ಕಿದೆ. ಆದರೆ ಕಾನೂನನ್ನು ಮೀರಿದ ಧಾರ್ಮಿಕತೆಯನ್ನು ಪಾಲಿಸುವ ಮಹಿಳೆಯರು ಈ ಕಾನೂನನ್ನು ಬೆನ್ನಿಗಿಟ್ಟುಕೊಂಡು ದೇವಸ್ಥಾನ ಪ್ರವೇಶಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.