ಬ್ಯಾಂಕ್‌ ಖಾತೆ, ಮೊಬೈಲ್‌ ನಂಬರ್‌ಗೆ ಆಧಾರ್‌ ಕಡ್ಡಾಯವಲ್ಲ: ಸುಪ್ರೀಂಕೋರ್ಟ್ ತೀರ್ಪು
UPDATE

ಬ್ಯಾಂಕ್‌ ಖಾತೆ, ಮೊಬೈಲ್‌ ನಂಬರ್‌ಗೆ ಆಧಾರ್‌ ಕಡ್ಡಾಯವಲ್ಲ: ಸುಪ್ರೀಂಕೋರ್ಟ್ ತೀರ್ಪು

ಬ್ಯಾಂಕ್‌ ಖಾತೆಗಳಿಗೆ, ಮೊಬೈಲ್‌ ನಂಬರ್‌ಗೆ ಆಧಾರ್‌ ಲಿಂಕ್‌ ಮಾಡುವುದು ಕಡ್ಡಾಯವಲ್ಲ. ಆದರೆ, ಪ್ಯಾನ್‌ ಕಾರ್ಡ್‌ಗೆ ಆಧಾರ್‌ ಲಿಂಕ್‌ ಕಡ್ಡಾಯ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಕೆಲವು ಷರತ್ತುಗಳೊಂದಿಗೆ ಆಧಾರ್‌ನ ಸಾಂವಿಧಾನಿಕ ಮಾನ್ಯತೆಯನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿದೆ. ಆಧಾರ್‌ ಯೋಜನೆಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸುಮಾರು 30 ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠವು ಬುಧವಾರ ಈ ತೀರ್ಪು ನೀಡಿದೆ.

ಆಧಾರ್‌ ಯೋಜನೆಯಿಂದ ಸಮಾಜದ ಅಂಚಿನಲ್ಲಿರುವ ಜನರಿಗೆ ಘನತೆಯ ಬದುಕು ಸಿಗುವಂತಾಗಿದೆ. ಜನ ಸಾಮಾನ್ಯರು ಸರಕಾರದ ಹಲವು ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್‌ ಯೋಜನೆಯು ಅನುಕೂಲಕರವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಆದರೆ, ಬ್ಯಾಂಕ್‌ ಖಾತೆಗಳಿಗೆ, ಮೊಬೈಲ್‌ ನಂಬರ್‌ಗೆ ಆಧಾರ್‌ ಲಿಂಕ್‌ ಮಾಡುವುದು ಕಡ್ಡಾಯವಲ್ಲ. ಆದರೆ, ಪ್ಯಾನ್‌ ಕಾರ್ಡ್‌ಗೆ ಆಧಾರ್‌ ಲಿಂಕ್‌ ಕಡ್ಡಾಯ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಹಿಂದೆ ಸುಪ್ರೀಂಕೋರ್ಟ್‌ ಎಲ್ಲಾ ಮೊಬೈಲ್‌ ನಂಬರ್‌ಗಳಿಗೂ ಆಧಾರ್‌ ಲಿಂಕ್‌ ಮಾಡುವುದು ಕಡ್ಡಾಯ ಎಂದು ಹೇಳಿತ್ತು.

ಆದರೆ, ಹೊಸ ತೀರ್ಪಿನ ಅನ್ವಯ ಹಿಂದಿನ ಆದೇಶ ಅಸಿಂಧುವಾಗಲಿದೆ. ಹೀಗಾಗಿ ಇನ್ನು ಮುಂದೆ ಬ್ಯಾಂಕ್‌ ಖಾತೆಗಳಿಗೆ ಹಾಗೂ ಮೊಬೈಲ್‌ ನಂಬರ್‌ಗಳಿಗೆ ಆಧಾರ್‌ ಲಿಂಕ್‌ ಮಾಡುವ ಅಗತ್ಯವಿಲ್ಲ.

ಯುಜಿಸಿ, ನೀಟ್‌, ಸಿಬಿಎಸ್‌ಇ ಪರೀಕ್ಷೆಗಳಿಗೆ ಆಧಾರ್‌ ಕಡ್ಡಾಯವಲ್ಲ. ಖಾಸಗಿತನ ನಾಗರಿಕರ ಮೂಲಭೂತ ಹಕ್ಕಾಗಿರುವುದರಿಂದ ನ್ಯಾಯಾಲಯದ ಅನುಮತಿ ಇಲ್ಲದೆ ಆಧಾರ್‌ ದತ್ತಾಂಶ ಮಾಹಿತಿಯನ್ನು ಸರಕಾರ ಯಾವುದೇ ಏಜೆನ್ಸಿಯ ಜತೆಗೆ ಹಂಚಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ.