ಅತೃಪ್ತರಿಗೆ ‘ಬುದ್ಧಿಮಾತು’; ಸಮ್ಮಿಶ್ರ ಸರಕಾರದ ಕಾವಲಿಗೆ ನಿಂತ ಸಿದ್ದರಾಮಯ್ಯ
UPDATE

ಅತೃಪ್ತರಿಗೆ ‘ಬುದ್ಧಿಮಾತು’; ಸಮ್ಮಿಶ್ರ ಸರಕಾರದ ಕಾವಲಿಗೆ ನಿಂತ ಸಿದ್ದರಾಮಯ್ಯ

ರಾಜ್ಯ ರಾಜಕೀಯ ಬೆಳವಣಿಗೆಗಳನ್ನು ಹತೋಟಿಗೆ ತರಲು ಯತ್ನಿಸುತ್ತಿರುವ ಸಿದ್ದರಾಮಯ್ಯ ಈ ಪ್ರಯತ್ನದಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದ್ದಾರೆ.

ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು, ಕ್ಷಣಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಮತ್ತೊಂದು ರೆಸಾರ್ಟ್ ರಾಜಕಾರಣ ಆರಂಭವಾಗುವ ಲಕ್ಷಣಗಳು ಕಾಣಿಸಿಕೊಳ್ಳುವ ಹೊತ್ತಿಗೆ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪರಿಸ್ಥಿತಿ ನಿಯಂತ್ರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಹೀಗಾಗಿ ಮತ್ತೊಂದು ಹೈಡ್ರಾಮಾಕ್ಕೆ ಸದ್ಯಕ್ಕೆ ಅಲ್ಪವಿರಾಮ ಬಿದ್ದಿದೆ.

ಸರಕಾರ ಕೆಡವುವ ಯಾವುದೇ ಕುತಂತ್ರ ನಡೆಸುವುದಿಲ್ಲ ಎಂದು ಬಿಜೆಪಿ ಹೇಳುತ್ತಿದ್ದರೂ ತೆರೆಮರೆಯಲ್ಲಿ ಹೊಸ ಸರ್ಕಾರ ರಚಿಸುವ ಕಸರತ್ತನ್ನು ಬಿಜೆಪಿ ನಡೆಸುತ್ತಿದೆ. ಚೆನ್ನೈಗೆ ಹೊರಟಿದ್ದ ಕಾಂಗ್ರೆಸ್ ಶಾಸಕರನ್ನು ವಾಪಸ್ ಕರೆಸಿಕೊಂಡಿರುವ ಕಾಂಗ್ರೆಸ್ ಮುಖಂಡರು ಅವರಿಗೆ ‘ಬುದ್ಧಿಮಾತು’ ಹೇಳುವ ಪ್ರಯತ್ನ ನಡೆಸಿದ್ದಾರೆ.

ಅತೃಪ್ತ ಕಾಂಗ್ರೆಸ್ ಶಾಸಕರ ಜತೆಗೆ ಮಾತುಕತೆ ನಡೆಸಿರುವ ಸಿದ್ದರಾಮಯ್ಯ ಸರಕಾರ ಕೆಡವುವ ಬಿಜೆಪಿಯ ಪ್ರಯತ್ನವನ್ನು ಸ್ವಲ್ಪ ದಿನಗಳ ಮಟ್ಟಿಗಂತೂ ಮುಂದೂಡಿದ್ದಾರೆ. ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೆ ಹೊರಟ ಬೆನ್ನಲ್ಲೇ ಆರಂಭವಾದ ಜಾರಕಿಹೊಳಿ ಸಹೋದರರ ಬಂಡಾಯ ರಾಜ್ಯ ರಾಜಕೀಯದಲ್ಲಿ ಅಸ್ಥಿರತೆಯ ಕಿಡಿಯನ್ನು ಹೊತ್ತಿಸಿತ್ತು. ಕಾಂಗ್ರೆಸ್‌ನಲ್ಲಿ ಉತ್ತರ ಮತ್ತು ದಕ್ಷಿಣದ ಜಿದ್ದಾಜಿದ್ದಿಗಳು ಆಗಲೇ ಶುರುವಾಗಿದ್ದವು.

ಕಾಂಗ್ರೆಸ್ ಒಳಗಿನ ಬಂಡಾಯದ ಬಿಸಿಯನ್ನು ಅರಿತ ಬಿಜೆಪಿ ಮತ್ತೊಂದು ಆಪರೇಷನ್ ಕಮಲದ ಪ್ರಯತ್ನಕ್ಕೆ ಆಗಲೇ ಮುಂದಾಗಿತ್ತು. ಆಗಿನಿಂದಲೂ ‘ಧವಳಗಿರಿ’ ಕೇಂದ್ರಿತ ಬಿಜೆಪಿ ಚಟುವಟಿಕೆಗಳು ಚುರುಕುಗೊಂಡಿವೆ. ಹೊರನೋಟಕ್ಕೆ ನಾವೇನೂ ಮಾಡುತ್ತಿದ್ದ ಎಂದು ಬಿಜೆಪಿ ಹೇಳುತ್ತಿದ್ದರೂ ಒಳಗೊಳಗೆ ಸರಕಾರ ಬೀಳಿಸಲು ಮಾಡಬೇಕಾದ ಎಲ್ಲಾ ತಂತ್ರಗಳನ್ನೂ ಬಿಜೆಪಿ ಮಾಡುತ್ತಿದೆ.

ಸರಕಾರ ಬೀಳಿಸುವ ಪ್ರಯತ್ನವನ್ನು ತಾವು ಮಾಡುತ್ತಿಲ್ಲ ಎಂದು ಬಿಜೆಪಿ ಹೇಳಿಕೊಳ್ಳುತ್ತಿದ್ದರೂ ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಸೆಳೆಯುವ ಭಾರಿ ಪ್ರಯತ್ನಗಳನ್ನು ಬಿಜೆಪಿ ನಡೆಸುತ್ತಲೇ ಇದೆ. ಇದಕ್ಕಾಗಿ ದೊಡ್ಡ ಮಟ್ಟದ ಆಮಿಷಗಳನ್ನೂ ಬಿಜೆಪಿ ಅತೃಪ್ತ ಶಾಸಕರಿಗೆ ಒಡ್ಡುತ್ತಿದೆ. ಎಂ.ಟಿ.ಬಿ. ನಾಗರಾಜ್ ಅವರನ್ನು ಸೆಳೆಯಲು ಬಿಜೆಪಿ 200 ಕೋಟಿ ರೂಪಾಯಿ ಆಮಿಷ ಒಡ್ಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ತಮ್ಮ ಮನೆಗೆ ಶಾಸಕ ಡಾ. ಸುಧಾಕರ್ ಅವರನ್ನು ಕರೆಸಿಕೊಂಡಿದ್ದ ಸಿದ್ದರಾಮಯ್ಯ ಪಕ್ಷ ಬಿಟ್ಟು ಹೋಗುವ ಪ್ರಯತ್ನ ನಡೆಸಿ ಪಕ್ಷಕ್ಕೆ ಹಾಗೂ ತಮಗೆ ಮುಜುಗರ ಉಂಟುಮಾಡಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ. ಅತೃಪ್ತ ಶಾಸಕರು ಪಕ್ಷ ಬಿಡದಂತೆ ನೋಡಿಕೊಳ್ಳುವ ಹೊಣೆಯನ್ನು ಸದ್ಯ ಸಚಿವ ಜಮೀರ್ ಅಹ್ಮದ್ ಖಾನ್‌ಗೆ ವಹಿಸಲಾಗಿದೆ. ಜಮೀರ್‌ ಹೆಗಲಿಗೆ ಈ ಜವಾಬ್ದಾರಿ ಬಿದ್ದಿರುವುದರಿಂದ ಯಾವುದೇ ಕ್ಷಣದಲ್ಲಿ ಶಾಸಕರ ರೆಸಾರ್ಟ್‌ ವಾಸ್ತವ್ಯ ಆರಂಭವಾಗಬಹುದು.

ಅತ್ತ ಹಾಸನದಲ್ಲಿ ನಡೆದಿರುವ ಜೆಡಿಎಸ್‌ ಶಾಸಕಾಂಸ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶಾಸಕರು ಆಮಿಷಕ್ಕೆ ಒಳಗಾಗದಂತೆ ಮನವಿ ಮಾಡಿದ್ದಾರೆ. ಈ ಮಧ್ಯೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, “ಪಕ್ಷದ ಶಿಸ್ತು ಉಲ್ಲಂಘಿಸಿದರೆ ಸಹಿಸುವುದಿಲ್ಲ” ಎಂದಿದ್ದಾರೆ. ಆದರೆ, ಯಾವ ಶಾಸಕರ ಒಲವು ಯಾವ ಕಡೆಗಿದೆ ಎಂಬುದನ್ನು ಈಗ ಊಹಿಸುವುದೂ ಕಷ್ಟ.

ಭಾನುವಾರದ ಮಟ್ಟಿಗಂತೂ ರಾಜ್ಯ ರಾಜಕೀಯ ನಾಟಕ ಒಂದು ಹಂತಕ್ಕೆ ಬಂದು ನಿಂತಿದೆ. ಆದರೆ, ಈ ನಾಟಕ ಇಲ್ಲಿಗೇ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಈ ನಡುವೆ ವಾರಗಳ ಹಿಂದೆ ಸತೀಶ್‌ ಜಾರಕಿಹೊಳಿ ಹೇಳಿದ್ದ, “ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು” ಎಂಬ ಮಾತು ಸದ್ಯ ರಾಜಕೀಯದ ಸುತ್ತ ಗುಂಯ್‌ ಗುಡುತ್ತಿದೆ.