ಅನಂತ್ ಕುಮಾರ್‌ಗೆ ನಿರೀಕ್ಷಿತ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್?: ಲಂಡನ್ ಚಿಕಿತ್ಸೆ, ಊಹಾಪೋಹಗಳ ಸುತ್ತ...
UPDATE

ಅನಂತ್ ಕುಮಾರ್‌ಗೆ ನಿರೀಕ್ಷಿತ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್?: ಲಂಡನ್ ಚಿಕಿತ್ಸೆ, ಊಹಾಪೋಹಗಳ ಸುತ್ತ...

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್ ತೀವ್ರ ಅನಾರೋಗ್ಯದ ಸಮಸ್ಯೆಗೆ ಒಳಗಾಗಿದ್ದಾರೆ. ಅವರೀಗ ನಿರೀಕ್ಷಿತ ಪ್ಯಾಂಕ್ರಿಯಾಟಿಕ್‌ ಕ್ಯಾನ್ಸರ್‌ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ವೈರ್‌’ ವರದಿ ಮಾಡಿದೆ.

ಕೇಂದ್ರ ಸಂಸದೀಯ ವ್ಯವಹಾರ, ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್‌ ಕುಮಾರ್‌ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಎಂಪಿ, ಪ್ರಧಾನಿ ಮೋದಿ ಸಂಪುಟದ ಪ್ರಭಾವಿ ಸಚಿವ, 59 ವರ್ಷದ ಅನಂತ ಕುಮಾರ್ ಇದೀಗ ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ಲಂಡನ್‌ನಲ್ಲಿ ತಮ್ಮ ಸಂಬಂಧಿಯೊಬ್ಬರ ಮನೆಯಲ್ಲಿ ಉಳಿದುಕೊಂಡು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ನಿರೀಕ್ಷಿತ ಪ್ಯಾಂಕ್ರಿಯಾಟಿಕ್‌ ಕ್ಯಾನ್ಸರ್‌ ಪರೀಕ್ಷೆ ಮತ್ತು ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ‘ದಿ ವೈರ್‌’ ವರದಿ ಮಾಡಿದೆ. ಆದರೆ, ‘ನ್ಯೂಸ್‌18 ಕನ್ನಡ’ ಕೆಮ್ಮು ಮತ್ತು ‘ಟೈಮ್ಸ್‌ ಆಫ್‌ ಇಂಡಿಯಾ’ ಕಫಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿವೆ. ಆದರೆ ಎರಡೂ ವರದಿಗಳು ಅವರು ಲಂಡನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದನ್ನು ದೃಢಪಡಿಸಿವೆ.

ಸುಮಾರು ಎರಡು ವಾರಗಳ ಚಿಕಿತ್ಸೆಗಾಗಿ ಅವರು ಲಂಡನ್‌ಗೆ ಬಂದಿದ್ದಾರೆ. ಒಂದೊಮ್ಮೆ ಹೆಚ್ಚಿನ ಚಿಕಿತ್ಸೆಗೆ ಅವರು ಅಮೆರಿಕಾಗೂ ತೆರಳುವ ಸಾಧ್ಯತೆಗಳಿವೆ ಎಂದು ‘ದಿ ವೈರ್‌’ ವರದಿ ಹೇಳುತ್ತಿದೆ.

ಅಂದುಕೊಂಡಂತೆ ನಡೆದಿದ್ದರೆ ಮೇನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಬೆನ್ನಲ್ಲೇ ಅವರು ಚಿಕಿತ್ಸೆಗೆ ಒಳಗಾಗಬೇಕಾಗಿತ್ತು. ಆದರೆ ಉಪಚುನಾವಣೆ, ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಂಡನೆಯಾದ ಅವಿಶ್ವಾಸ ನಿರ್ಣಯದಿಂದಾಗಿ ಅವರು ಚಿಕಿತ್ಸೆ ಪಡೆದುಕೊಳ್ಳುವುದು ತಡವಾಗಿತ್ತು. ಇದೀಗ ಕೆಲವು ವಾರದಿಂದ ಅವರು ತಮ್ಮ ಇಲಾಖೆಗಳ ಕಡತಗಳಿಗೂ ಸಹಿ ಹಾಕುತ್ತಿರಲಿಲ್ಲ ಎಂಬುದು ವರದಿಯ ಸಾರ.

ಇದೀಗ ಅವರು ಪ್ರಧಾನಿ ನರೇಂದ್ರ ಮೋದಿಯವರಿಂದ ಅನುಮತಿ ಪಡೆದು ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಖಾತೆಗಳನ್ನು ಪ್ರಧಾನಿ ಇನ್ನೂ ಬೇರೆ ಯಾವುದೇ ಸಚಿವರಿಗೆ ವಹಿಸಿಲ್ಲ. ಜತೆಗೆ ಅವರಿಗೆ ಉಂಟಾಗಿರುವ ಆರೋಗ್ಯದ ಏರುಪೇರಿನ ಬಗ್ಗೆಯೂ ಸರಕಾರ ಗೌಪ್ಯತೆ ಕಾಯ್ದುಕೊಂಡಿದೆ. ಈ ಹಿಂದೆ ಹಣಕಾಸು ಸಚಿವ ಅರುಣ್‌ ಜೇಟ್ಲಿಯವರ ಕಿಡ್ನಿ ಕಸಿಗೆ ಸಂಬಂಧಿಸಿದಂತೆ ಮೌನವಾಗಿದ್ದ ಸರಕಾರ ಇಲ್ಲೂ ಅದೇ ರೀತಿ ನಡೆದುಕೊಳ್ಳುತ್ತಿದೆ.

ಸಾಮಾನ್ಯವಾಗಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇರುವವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವುದು ಸಾರ್ವಜನಿಕರ ಹಕ್ಕಾಗಿರುತ್ತದೆ. ಇದೇ ಕಾರಣಕ್ಕೆ ಅಮೆರಿಕಾ ಮೊದಲಾದ ದೇಶದಲ್ಲಿ ಅಧ್ಯಕ್ಷರ ಆರೋಗ್ಯ ಮಾಹಿತಿಯನ್ನು ಪ್ರಕಟಿಸುವ ಸಂಪ್ರದಾಯವೂ ಇದೆ. ಆದರೆ ಜೇಟ್ಲಿ ವಿಚಾರದಲ್ಲಿ ಅವರು ಚಿಕಿತ್ಸೆಗೆ ದಾಖಲಾದ ಬಗ್ಗೆ ಮಾಧ್ಯಮಗಳಲ್ಲಿ ಪ್ರಶ್ನೆಗಳನ್ನು ಎತ್ತಿದ ನಂತರ ಅವರ ಖಾತೆಯ ಹೊಣೆಯನ್ನು ಪಿಯೂಷ್‌ ಗೋಯಲ್‌ ಅವರಿಗೆ ಹಸ್ತಾಂತರಿಸಲಾಗಿತ್ತು. ಇನ್ನು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್‌ ಅವರದ್ದೂ ಇದೇ ಕತೆ. ಅವರಿನ್ನೂ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಚಿಕಿತ್ಸೆ ಪಡೆಯುತ್ತಿರುವಾಗಲೇ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿದಿದ್ದಾರೆ.

ಇದೀಗ ಅನಂತ್‌ ಕುಮಾರ್‌ ಕೂಡ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತು ಅವರ ಚಿಕಿತ್ಸೆ ಬಗ್ಗೆಯೂ ಗೌಪ್ಯತೆ ಕಾಯ್ದುಕೊಳ್ಳಲಾಗಿದೆ. ಈ ಕುರಿತು ‘ಸಮಾಚಾರ’ಕ್ಕೆ ಪ್ರತಿಕ್ರಿಯೆ ನೀಡಿದ ಅನಂತ್ ಕುಮಾರ್ ಆಪ್ತ ಸಹಾಯಕ ನಾರಾಯಣ್ ಗಂಭೀರ್, “ಸಚಿವರು ಖಾಸಗಿ ಪ್ರವಾಸದಲ್ಲಿದ್ದಾರೆ. ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ಮಾಧ್ಯಮಗಳಲ್ಲಿ ಅವರ ಆರೋಗ್ಯದ ಕುರಿತು ಊಹಾಪೋಹದ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಕನಿಷ್ಟ ನಮ್ಮ ಪ್ರತಿಕ್ರಿಯೆಯನ್ನೂ ಪಡೆಯುತ್ತಿಲ್ಲ,” ಎಂದರು. ‘ಸಮಾಚಾರ’ ಜಯನಗರದ ಸೌತ್‌ ಎಂಡ್ ವೃತ್ತದ ಬಳಿ ಇರುವ ಅನಂತ್ ಕುಮಾರ್ ಅವರ ಸಂಸದರ ಕಚೇರಿಗೆ ಭೇಟಿ ನೀಡಿದಾಗ, ಕಚೇರಿಯಲ್ಲಿದ್ದವರು ಅಂತಹ ಯಾವುದೇ ಮಾಹಿತಿ ಇಲ್ಲ ಎಂದರು.