ಅಮುಥಾ ಜಯದೀಪ್‌, ಏಜಾಜ್‌ ಅಹ್ಮದ್‌ ರಾಥರ್‌, ಸಾರಿಕಾ ಚೌದರಿ ಮತ್ತು ಎನ್‌. ಸಾಯಿ ಬಾಲಾಜಿ
UPDATE

ಜೆಎನ್‌ಯುಎಸ್‌ಯು ಚುನಾವಣಾ ಫಲಿತಾಂಶ; ಈ ಬಾರಿಯೂ ಎಡ ಮೈತ್ರಿಕೂಟಕ್ಕೆ ಗೆಲುವು

ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಈ ಬಾರಿಯೂ ಎಡ ಮೈತ್ರಿಕೂಟ ಮೇಲುಗೈ ಸಾಧಿಸಿದೆ. ಸಂಘದ ಅಧ್ಯಕ್ಷರಾಗಿ ಎನ್‌. ಸಾಯಿ ಬಾಲಾಜಿ ಆಯ್ಕೆಯಾಗಿದ್ದಾರೆ.

ದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎಸ್‌ಯು) ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಈ ಬಾರಿಯೂ ಎಡ ಮೈತ್ರಿಕೂಟ ಗೆಲುವು ಸಾಧಿಸಿದೆ. ವಿದ್ಯಾರ್ಥಿ ಸಂಘದ ನಾಲ್ಕೂ ಪ್ರಮುಖ ಸ್ಥಾನಗಳನ್ನು ಎಡ ಮೈತ್ರಿಕೂಟ ತನ್ನದಾಗಿಸಿಕೊಂಡಿದೆ.

ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಎನ್‌. ಸಾಯಿ ಬಾಲಾಜಿ, ಉಪಾಧ್ಯಕ್ಷೆಯಾಗಿ ಸಾರಿಕಾ ಚೌದರಿ, ಪ್ರಧಾನ ಕಾರ್ಯದರ್ಶಿಯಾಗಿ ಏಜಾಜ್‌ ಅಹ್ಮದ್‌ ರಾಥರ್‌ ಮತ್ತು ಜಂಟಿ ಕಾರ್ಯದರ್ಶಿಯಾಗಿ ಅಮುಥಾ ಜಯದೀಪ್‌ ಆಯ್ಕೆಯಾಗಿದ್ದಾರೆ

ಶನಿವಾರ ಸಂಜೆ ಮತ ಎಣಿಗೆ ವೇಳೆ ಗದ್ದಲ ಉಂಟಾಗಿದ್ದರಿಂದ ಭಾನುವಾರಕ್ಕೆ ಮತ ಎಣಿಕೆಯನ್ನು ಮುಂದೂಡಲಾಗಿತ್ತು. ಭಾನುವಾರ ಮತ ಎಣಿಕೆಯ ವಿಷಯವನ್ನು ತಮ್ಮ ಗಮನಕ್ಕೇ ತಂದಿಲ್ಲ ಎಂದು ಸೋಲು ಕಂಡಿರುವ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಆರೋಪಿಸಿದೆ.

ಎಐಎಸ್‌ಎ ಅಭ್ಯರ್ಥಿ ಗೀತಾ ಕುಮಾರಿ ಅವರು ಎಬಿವಿಪಿ ಅಭ್ಯರ್ಥಿ ನಿಧಿ ತ್ರಿಪಾಠಿ ವಿರುದ್ಧ 464 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಗೀತಾ ಕುಮಾರಿ ಪರ 1,506 ಮತಗಳು ಚಲಾವಣೆಯಾಗಿದ್ದರೆ, ತ್ರಿಪಾಠಿ ಪರ 1,042 ಮತಗಳು ಚಲಾವಣೆಯಾಗಿದ್ದವು.

ಜೆಎನ್‌ಯು ವಿದ್ಯಾರ್ಥಿ ಸಂಘಕ್ಕೆ ಶುಕ್ರವಾರ ಚುನಾವಣೆ ನಡೆದಿತ್ತು. ಈ ಬಾರಿ ಶೇಕಡ 67.8ರಷ್ಟು ಮತದಾನ ನಡೆದಿತ್ತು. ಕಳೆದ ಆರು ವರ್ಷಗಳಲ್ಲೇ ಇದು ದಾಖಲೆಯ ಮತದಾನ ಎನ್ನಲಾಗಿದೆ. 5,185 ವಿದ್ಯಾರ್ಥಿಗಳು ಈ ಬಾರಿ ಮತ ಚಲಾಯಿಸಿದ್ದರು.

ಆಲ್‌ ಇಂಡಿಯಾ ಸ್ಟುಡೆಂಟ್ಸ್‌ ಅಸೋಸಿಯೇಷನ್‌ (ಎಐಎಸ್‌ಎ), ಸ್ಟುಡೆಂಟ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ (ಎಸ್‌ಎಫ್‌ಐ), ಡೆಮಕ್ರಟಿಕ್‌ ಸ್ಟುಡೆಂಟ್ಸ್‌ ಫೆಡರೇಷನ್ (ಡಿಎಸ್‌ಎಫ್) ಮತ್ತು ಆಲ್‌ ಇಂಡಿಯಾ ಸ್ಟುಡೆಂಟ್ಸ್‌ ಫೆಡರೇಷನ್‌ (ಎಐಎಸ್‌ಎಫ್‌) ವಿದ್ಯಾರ್ಥಿ ಸಂಘಟನೆಗಳು ಒಟ್ಟಾಗಿ ಎಡ ಮೈತ್ರಿಕೂಟ ರಚಿಸಿಕೊಂಡಿದ್ದವು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ ಎಡ ಮೈತ್ರಿಕೂಟದ ಎನ್‌. ಸಾಯಿ ಬಾಲಾಜಿ 2,151 ಮತಗಳನ್ನು ಪಡೆದಿದ್ದರೆ, ಎಬಿವಿಪಿಯ ಲಲಿತ್‌ ಪಾಂಡೆ 972 ಮತ ಗಳಿಸಿದ್ದಾರೆ.

ಉಪಾಧ್ಯಕ್ಷ ಸ್ಥಾನದ ಕಣದಲ್ಲಿದ್ದ ಎಡ ಮೈತ್ರಿಕೂಟ ಸಾರಿಕಾ ಚೌದರಿ 2,592 ಮತ ಗಳಿಸಿದ್ದರೆ, ಎಬಿವಿಪಿಯ ಗೀತಾ ಶ್ರೀ 1,013 ಮತ ಪಡೆದಿದ್ದಾರೆ.

ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದ ಎಡ ಮೈತ್ರಿಕೂಟದ ಏಜಾಜ್‌ ಅಹ್ಮದ್‌ ರಾಥರ್‌ 2,426 ಮತ ಗಳಿಸಿದ್ದರೆ, ಎಬಿವಿಪಿಯ ಗಣೇಶ್‌ 1,235 ಮತ ಪಡೆದಿದ್ದಾರೆ.

ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದವರ ಪೈಕಿ ಎಡ ಮೈತ್ರಿಕೂಟದ ಅಮುಥಾ ಜಯದೀಪ್‌ 2,047 ಮತ ಗಳಿಸಿದ್ದರೆ, ಎಬಿವಿಪಿಯ ವೆಂಕಟ್‌ ಚೌಬೆ 1,290 ಮತ ಪಡೆದಿದ್ದಾರೆ.