ನಗರ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ; ಕಾಂಗ್ರೆಸ್‌ ಮೇಲುಗೈ, ಬಿಜೆಪಿ ಪೈಪೋಟಿ, ಜೆಡಿಎಸ್‌ಗೆ ಸಮಾಧಾನ
UPDATE

ನಗರ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ; ಕಾಂಗ್ರೆಸ್‌ ಮೇಲುಗೈ, ಬಿಜೆಪಿ ಪೈಪೋಟಿ, ಜೆಡಿಎಸ್‌ಗೆ ಸಮಾಧಾನ

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಮುನ್ನಡೆಯಲ್ಲಿದ್ದರೆ, ಬಿಜೆಪಿ ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ನೀಡಿದೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿದೆ. ಬಿಜೆಪಿ ಎರಡನೇ ಸ್ಥಾನ ಹಾಗೂ ಜೆಡಿಎಸ್‌ ಮೂರನೇ ಸ್ಥಾನದಲ್ಲಿವೆ.

3 ಮಹಾನಗರ ಪಾಲಿಕೆ, 29 ನಗರಸಭೆ, 53 ಪುರಸಭೆ ಮತ್ತು 20 ಪಟ್ಟಣ ಪಂಚಾಯ್ತಿಗಳ ಒಟ್ಟು 2,709 ಸ್ಥಾನಗಳಿಗೆ ಆಗಸ್ಟ್‌ 31ರಂದು ಮತದಾನ ನಡೆದಿತ್ತು. ಈ ಪೈಕಿ 982 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಬಿಜೆಪಿ 929 ಸ್ಥಾನಗಳನ್ನು ಗೆದ್ದಿದ್ದರೆ, ಜೆಡಿಎಸ್‌ 375 ಸ್ಥಾನಗಳಲ್ಲಿ ವಿಜಯ ಸಾಧಿಸಿದೆ. ಉಳಿದಂತೆ 13 ಬಿಎಸ್‌ಪಿ ಅಭ್ಯರ್ಥಿಗಳು, 329 ಸ್ವತಂತ್ರ ಅಭ್ಯರ್ಥಿಗಳು ಹಾಗೂ 34 ಮಂದಿ ಇತರರು ಗೆದ್ದಿದ್ದಾರೆ.

ಮಹಾನಗರ ಪಾಲಿಕೆಗಳ ಹೆಚ್ಚು ಸ್ಥಾನವನ್ನು ಬಿಜೆಪಿ ಗೆದ್ದಿದೆ. ಮೈಸೂರು ಮಹಾನಗರ ಪಾಲಿಕೆಯ ಒಟ್ಟು 65 ಸ್ಥಾನಗಳ ಪೈಕಿ ಬಿಜೆಪಿ 22, ಕಾಂಗ್ರೆಸ್‌ 19, ಜೆಡಿಎಸ್‌ 17, ಬಿಎಸ್‌ಪಿ 1 ಹಾಗೂ 5 ಮಂದಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆಯ 35 ಸ್ಥಾನಗಳಲ್ಲಿ ಬಿಜೆಪಿ 20, ಕಾಂಗ್ರೆಸ್‌ 7, ಜೆಡಿಎಸ್‌ 2 ಹಾಗೂ 6 ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ. ತುಮಕೂರು ಮಹಾನಗರ ಪಾಲಿಕೆಯ 35 ಸ್ಥಾನಗಳ ಪೈಕಿ ಬಿಜೆಪಿ 12, ಕಾಂಗ್ರೆಸ್‌ 10, ಜೆಡಿಎಸ್‌ 10 ಹಾಗೂ 3 ಮಂದಿ ಸ್ವತಂತ್ರ ಅಭ್ಯರ್ಥಿಗಳು ವಿಜಯಿಗಳಾಗಿದ್ದಾರೆ.

ಬಿಜೆಪಿಯನ್ನು ದೂರ ಇಡಲು ಸಾಧ್ಯವಿರುವ ಕಡೆಗಳಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಹೊಂದಾಣಿಕೆ ಮಾಡಿಕೊಳ್ಳಲಿವೆ.
-ಎಚ್‌.ಡಿ. ದೇವೇಗೌಡ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ

29 ನಗರಸಭೆಗಳ ಒಟ್ಟು 926 ಸ್ಥಾನಗಳ ಪೈಕಿ ಬಿಜೆಪಿ 370, ಕಾಂಗ್ರೆಸ್‌ 294, ಜೆಡಿಎಸ್‌ 106, ಬಿಎಸ್‌ಪಿ 10, 123 ಸ್ವತಂತ್ರ ಅಭ್ಯರ್ಥಿಗಳು ಹಾಗೂ 23 ಇತರರು ಗೆದ್ದಿದ್ದಾರೆ. 53 ಪುರಸಭೆಗಳ ಒಟ್ಟು 1,246 ಸ್ಥಾನಗಳಲ್ಲಿ ಕಾಂಗ್ರೆಸ್‌ 514, ಬಿಜೆಪಿ 375, ಜೆಡಿಎಸ್ 210, ಬಿಎಸ್‌ಪಿ 2, 135 ಸ್ವತಂತ್ರ ಅಭ್ಯರ್ಥಿಗಳು ಹಾಗೂ 10 ಮಂದಿ ಇತರರು ಜಯಿಸಿದ್ದಾರೆ. 20 ಪಟ್ಟಣ ಪಂಚಾಯ್ತಿಗಳ 355 ಸ್ಥಾನಗಳ ಪೈಕಿ ಕಾಂಗ್ರೆಸ್‌ 138, ಬಿಜೆಪಿ 130, ಜೆಡಿಎಸ್ 29, 57 ಸ್ವತಂತ್ರ ಅಭ್ಯರ್ಥಿಗಳು ಹಾಗೂ 1 ಸ್ಥಾನದಲ್ಲಿ ಇತರೆ ಅಭ್ಯರ್ಥಿ ಗೆದ್ದಿದ್ದಾರೆ.

ಪ್ರಾಕೃತಿಕ ವಿಕೋಪದಿಂದಾಗಿ ಕೊಡಗು ಜಿಲ್ಲೆಯ 3 ಪಟ್ಟಣ ಪಂಚಾಯ್ತಿಗಳ 45 ಸ್ಥಾನಗಳ ಚುನಾವಣೆಯನ್ನು ಮುಂದೂಡಲಾಗಿದೆ. ಕಲಬುರ್ಗಿ ಜಿಲ್ಲೆಯ ಅಫ್ಜಲ್‌ಪುರ ಪುರಸಭೆಯ 19ನೇ ವಾರ್ಡ್‌ ಹಾಗೂ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ನಗರ ಸಭೆಯ 9ನೇ ವಾರ್ಡ್‌ – ಒಟ್ಟು ಎರಡು ವಾರ್ಡ್‌ಗಳಿಗೆ ಚುನಾವಣೆ ನಡೆದಿಲ್ಲ. ಅಲ್ಲದೆ ವಿವಿಧ ನಗರ ಸಭೆಗಳ 12 ವಾರ್ಡ್‌ಗಳಿಂದ ಹಾಗೂ ಪುರಸಭೆಗಳ 18 ವಾರ್ಡ್‌ಗಳಿಂದ ಒಟ್ಟು 30 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ಬಹುತೇಕ ಕಡೆಗಳಲ್ಲಿ ಬಿಜೆಪಿಯು ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ನೀಡಿದೆ. ಪುತ್ತೂರು, ಉಡುಪಿ, ಚಿತ್ರದುರ್ಗ, ಶಿರಸಿ, ಬಾಗಲಕೋಟೆ, ಇಳಕಲ್‌, ರಬಕವಿ- ಬನಹಟ್ಟಿ, ಚಾಮರಾಜನಗರ ನಗರಸಭೆಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದಿದೆ. ಆದರೆ, ಜೆಡಿಎಸ್‌ ತನ್ನ ಹಳೆಯ ‘ಪ್ರಾಂತ್ಯ’ಗಳನ್ನು ಬಿಟ್ಟು ಉಳಿದ ಕಡೆಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆದಿಲ್ಲ. ಮಂಡ್ಯ, ಹಾಸನ, ಅರಸೀಕೆರೆ ನಗರಸಭೆಗಳಲ್ಲಿ ಹಾಗೂ ಗುಬ್ಬಿ, ಕೊರಟಗೆರೆ ಪಟ್ಟಣ ಪಂಚಾಯ್ತಿಗಳಲ್ಲಿ ಮಾತ್ರ ಜೆಡಿಎಸ್‌ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ.