samachara
www.samachara.com
‘IRP +’: 3 ತಿಂಗಳಲ್ಲಿ ಫಾಲ್ಕನ್‌ ಟೈರ್ಸ್‌ ಪುನರಾರಂಭ ಸಾಧ್ಯತೆ; ಗರಿಗೆದರಿದ ನಿರೀಕ್ಷೆ
UPDATE

‘IRP +’: 3 ತಿಂಗಳಲ್ಲಿ ಫಾಲ್ಕನ್‌ ಟೈರ್ಸ್‌ ಪುನರಾರಂಭ ಸಾಧ್ಯತೆ; ಗರಿಗೆದರಿದ ನಿರೀಕ್ಷೆ

ಮೈಸೂರಿನ ಫಾಲ್ಕನ್‌ ಟೈರ್ಸ್‌ ಕಾರ್ಖಾನೆ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣುತ್ತಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ 3 ತಿಂಗಳಲ್ಲಿ ಕಾರ್ಖಾನೆ ಪುನರಾರಂಭವಾಗಲಿದೆ.

Team Samachara

ಮೈಸೂರಿನ ಫಾಲ್ಕನ್‌ ಟೈರ್ಸ್‌ ಕಾರ್ಖಾನೆಯು ಪುನರಾರಂಭವಾಗುವ ಲಕ್ಷಣಗಳು ಕಾಣುತ್ತಿವೆ. ಶನಿವಾರ ಇತ್ತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ 15-20 ದಿನಗಳಲ್ಲಿ ಕಾರ್ಖಾನೆಯ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಅತ್ತ ಮುಂಬೈನಲ್ಲಿ ನಡೆದ ಐಆರ್‌ಪಿ (Interim Resolution Professional) ಜತೆಗಿನ ಸಭೆಯಲ್ಲಿ ಕಾರ್ಖಾನೆ ಪುನರಾರಂಭಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವ ಭರವಸೆ ಸಿಕ್ಕಿದೆ.

ಶುಕ್ರವಾರ ರಾತ್ರಿ ಮೈಸೂರಿನ ಇನ್ಫೋಸಿಸ್‌ ಅತಿಥಿ ಗೃಹದಲ್ಲಿ ತಂಗಿದ್ದ ಸಿಎಂ ಕುಮಾರಸ್ವಾಮಿ ಕಾರ್ಖಾನೆಯ ಕಾರ್ಮಿಕ ಮುಖಂಡರನ್ನು ಶನಿವಾರ ಬೆಳಿಗ್ಗೆ 6.30ರ ಸುಮಾರಿಗೆ ಭೇಟಿಯಾಗಿ ಮನವಿ ಸ್ವೀಕರಿಸಿದ್ದಾರೆ. ಇನ್ಫೋಸಿಸ್‌ ಅತಿಥಿ ಗೃಹದ ಹೊರಗೆ ಕಾರ್ಮಿಕ ಮುಖಂಡರನ್ನು ಭೇಟಿ ಮಾಡಿದ ಕುಮಾರಸ್ವಾಮಿ ಮುಂದಿನ 15-20 ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿ ಭೇಟಿ ನಂತರ ಕಾರ್ಮಿಕ ಮುಖಂಡರು ಬೆಳಿಗ್ಗೆ 11.30 ಸುಮಾರಿಗೆ ಮುಂಬೈನಲ್ಲಿರುವ ಐಅರ್‌ಪಿ ಜತೆ ಆಡಿಯೊ ಕಾನ್ಫರೆನ್ಸ್‌ನಲ್ಲಿ ಸಭೆ ನಡೆಸಿದ್ದಾರೆ. ಕಾರ್ಖಾನೆಯ ಸದ್ಯದ ಸ್ಥಿತಿ ಹಾಗೂ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮುಖಂಡರು ಐಆರ್‌ಪಿಗೆ ಮಾಹಿತಿ ನೀಡಿದ್ದಾರೆ.

“ಕಾರ್ಖಾನೆಯನ್ನು ಆರಂಭಿಸಲು ಆಸಕ್ತಿ ಇರುವ ಕಂಪೆನಿಗಳು ಮುಂದೆ ಬರಬಹುದು ಎಂದು ಜುಲೈ 7ರಂದು ಐಆರ್‌ಪಿ ಪ್ರಕಟಣೆ ನೀಡಿದೆ. ಕಾರ್ಖಾನೆ ಆರಂಭಿಸಲು ಆಸಕ್ತಿ ಇರುವ ಕಂಪೆನಿಗಳು ಆಗಸ್ಟ್‌ 17ರೊಳಗೆ ಐಆರ್‌ಪಿ ಅವರಿಗೆ ಅರ್ಜಿ ಸಲ್ಲಿಸಬೇಕು. ಅಷ್ಟರೊಳಗೆ ಆಸಕ್ತ ಕಂಪೆನಿಗಳನ್ನು ಗುರುತಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಐಆರ್‌ಪಿ ಅವರು ಕೂಡಾ ಬೆಂಗಳೂರಿಗೆ ಬಂದು ಸಭೆ ನಡೆಸುವ ಭರವಸೆ ನೀಡಿದ್ದಾರೆ” ಎಂದು ಫಾಲ್ಕನ್‌ ಟೈರ್ಸ್‌ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವಣ್ಣಗೌಡ ತಿಳಿಸಿದರು.

“ಆಗಸ್ಟ್‌ 17ರೊಳಗೆ ಆಸಕ್ತ ಕಂಪೆನಿಗಳು ಅರ್ಜಿ ಸಲ್ಲಿಸಬೇಕು. ಅಕ್ಟೋಬರ್‌ 28ರೊಳಗೆ ಕಂಪೆನಿ ಪುನರಾರಂಭದ ಪ್ರಕ್ರಿಯೆಯನ್ನು ಐಆರ್‌ಪಿ ಅವರು ಮುಗಿಸಬೇಕು. ಒಂದು ವೇಳೆ ಅಕ್ಟೋಬರ್‌ 28ರೊಳಗೆ ಕಾರ್ಖಾನೆ ಪುನರಾರಂಭವಾಗದಿದ್ದರೆ ಕಾರ್ಖಾನೆ ಹರಾಜಿಗೆ ಹೋಗುತ್ತದೆ. ಆದರೆ, ಸದ್ಯದ ಬೆಳವಣಿಗೆಳನ್ನು ನೋಡಿದರೆ ಕಾರ್ಖಾನೆ ಪುನರಾರಂಭವಾಗುವ ವಿಶ್ವಾಸವಿದೆ” ಎನ್ನುತ್ತಾರೆ ಅವರು.

“ಕಾರ್ಖಾನೆ ಮುಚ್ಚಿ ಅದು ಹರಾಜಾಗುವುದಕ್ಕಿಂತ ಕಾರ್ಖಾನೆಯನ್ನು ಉಳಿಸಿಕೊಳ್ಳಬೇಕು ಎಂಬ ಬಯಕೆ ನಮ್ಮದು. ಅದಕ್ಕಾಗಿಯೇ ಇಷ್ಟು ದಿನ ಹೋರಾಡುತ್ತಾ ಬಂದಿದ್ದೇವೆ. ಇದು 2500 ಕಾರ್ಮಿಕರ ಅನ್ನದ ಪ್ರಶ್ನೆ. ಕನಿಷ್ಠ 100 ಕೋಟಿ ರೂಪಾಯಿ ಬಂಡವಾಳ ಇದ್ದರೆ ಕಾರ್ಖಾನೆ ಪುನರಾರಂಭ ಮಾಡಬಹುದು. ಈ ವಿಚಾರವನ್ನು ಐಆರ್‌ಪಿ ಅವರಿಗೂ ತಿಳಿಸಿದ್ದೇವೆ. ಯಾರೇ ಕಾರ್ಖಾನೆ ವಹಿಸಿಕೊಂಡರೂ ಒಂದು ತಿಂಗಳಲ್ಲಿ ಉತ್ಪಾದನೆ ಕೊಡುತ್ತೇವೆ ಎಂಬ ಮಾತುಕೊಟ್ಟಿದ್ದೇವೆ. ಇದಕ್ಕೆ ಐಆರ್‌ಪಿ ಅವರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ” ಎಂದು ಅವರು ಮಾಹಿತಿ ನೀಡಿದರು.

Also read: ಫಾಲ್ಕನ್‌ ಟೈರ್ಸ್‌ಗೆ ಬೀಗ: 2,500 ಅತಂತ್ರ ಕಾರ್ಮಿಕರ ಕಷ್ಟಕ್ಕೆ ಸರಕಾರ ಕುರುಡು

“ಬೆಂಗಳೂರಿನಲ್ಲಿ ಸಭೆ ನಡೆಸಲು ಐಆರ್‌ಪಿ ಒಪ್ಪಿಗೆ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಕೈಗಾರಿಕಾ ಇಲಾಖೆ ಕಾರ್ಯದರ್ಶಿಗಳು ಹಾಗೂ ಕಾರ್ಖಾನೆಯ ಕಾರ್ಮಿಕ ಮುಖಂಡರ ಜತೆಗೆ ಸಭೆ ನಿಗದಿಗೊಳಿಸುವ ಭರವಸೆ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು ಮೂರು ತಿಂಗಳಲ್ಲಿ ಕಾರ್ಖಾನೆ ಪುನರಾರಂಭ ಆಗಲಿದೆ” ಎನ್ನುತ್ತಾರೆ ಅವರು.

ಕಳೆದ ಎರಡು ವರ್ಷಗಳಿಂದ ಕಾರ್ಖಾನೆ ಉತ್ಪಾದನೆ ಸ್ಥಗಿತಗೊಂಡಿದೆ. ಅಲ್ಲಿಂದ ಇಲ್ಲಿಯವರೆಗೂ ಕಾರ್ಖಾನೆಯ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಅಲ್ಲಿಂದಲೂ ಕಾರ್ಖಾನೆ ಪುನರಾರಂಭಕ್ಕಾಗಿ ಕಾರ್ಮಿಕರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಕಾರ್ಖಾನೆ ಪುನರಾರಂಭದ ಬಗ್ಗೆ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‌ ಜುಲೈ 24ರಂದು ಮೈಸೂರಿನಲ್ಲಿ ಸಭೆ ನಡೆಸಿದ್ದರು. ಈಗ ಮುಖ್ಯಮಂತ್ರಿಗಳೂ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಅತ್ತ ಮುಂಬೈನ ಐಆರ್‌ಪಿ ಅವರೂ ಕಾರ್ಖಾನೆ ಪುನರಾರಂಭಕ್ಕೆ ಉತ್ಸುಕರಾಗಿದ್ದಾರೆ.

Also read: ಫಾಲ್ಕನ್‌ ಟೈರ್ಸ್‌ ಫಾಲೋಅಪ್‌: ಕಾರ್ಖಾನೆ ಪುನರಾರಂಭಕ್ಕೆ ಕೈಗಾರಿಕಾ ಸಚಿವರ ಭರವಸೆ

ಕಾರ್ಖಾನೆ ಪುನರಾರಂಭಕ್ಕೆ ಇದ್ದ ಕಾನೂನು ಅಡ್ಡಿಗಳೆಲ್ಲಾ ಕೊನೆಯಾಗಿವೆ. ಇನ್ನು ಬಾಕಿ ಇರುವುದು ಆಸಕ್ತ ಕಂಪೆನಿಗಳು ಐಆರ್‌ಪಿ ಮುಂದೆ ಅರ್ಜಿ ಸಲ್ಲಿಸಿ, ಕಾರ್ಖಾನೆಯನ್ನು ಪುನರಾರಂಭಿಸುವುದು. ಕಾರ್ಖಾನೆ ಮತ್ತೆ ಆರಂಭವಾಗಿ ಉತ್ಪಾದನೆ ಶುರುವಾದರೆ 2500 ಕುಟುಂಬಗಳು ನೆಮ್ಮದಿಯ ಉಸಿರು ಬಿಡಲಿವೆ.