ರಾಘವೇಶ್ವರ ಸ್ವಾಮಿ ಕೈ ತಪ್ಪಿದ ಗೋಕರ್ಣ: ಹೈಕೋರ್ಟ್‌ ಆದೇಶ
UPDATE

ರಾಘವೇಶ್ವರ ಸ್ವಾಮಿ ಕೈ ತಪ್ಪಿದ ಗೋಕರ್ಣ: ಹೈಕೋರ್ಟ್‌ ಆದೇಶ

ಉತ್ತರ ಕನ್ನಡಜಿಲ್ಲೆ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನವನ್ನು, ಶಿವಮೊಗ್ಗ ಜಿಲ್ಲೆ ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಶುಕ್ರವಾರ ಮಹತ್ವದ ತೀರ್ಪು ಹೊರಬಿದ್ದಿದೆ. 

ವಿವಾದಿತ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ದೇವಸ್ಥಾನವನ್ನು ಹೈಕೋರ್ಟ್‌ ಶುಕ್ರವಾರ ಸರಕಾರ ಸುಪರ್ದಿಗೆ ವಹಿಸಿದೆ.

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಪುರಾಣ ಪ್ರಸಿದ್ಧ ದೇವಸ್ಥಾನವನ್ನು ಹೊಸ ನಗರದ ರಾಮಚಂದ್ರಾಪುರ ಮಠಕ್ಕೆ ವಹಿಸಿಕೊಡಲಾಗಿತ್ತು. ಇದರ ವಿರುದ್ಧ ಗೋಕರ್ಣ ದೇವಸ್ಥಾನದಲ್ಲಿ ಅನುವಂಶೀಯವಾಗಿ ಪೂಜಾ ಕಾರ್ಯವನ್ನ ಮಾಡಿಕೊಂಡು ಬಂದ ಸುಮಾರು 33 ಕುಟುಂಬಗಳು ಕೋರ್ಟ್‌ ಮೆಟ್ಟಿಲೇರಿದ್ದವು. ಉಪಾಧಿವಂತ ಕುಟುಂಬಗಳ ಮನವಿ ಹಿನ್ನೆಲೆಯಲ್ಲಿ ಕಾರವಾರ ಜಿಲ್ಲಾ ನ್ಯಾಯಾಲಯ ಈ ಕುಟುಂಬಗಳಿಗೆ ಪೂಜೆಗೆ ಅವಕಾಶ ಕೊಡುವಂತೆ ಆದೇಶ ಹೊರಡಿಸಿತ್ತು. ಆದರೆ ಪೂಜೆಗೆ ತೆರಳಿದವರಿಗೆ ದೇವಸ್ಥಾನವನ್ನು ವಹಿಸಿಕೊಂಡಿದ್ದ ಆಡಳಿತ ಮಂಡಳಿ ಅವಕಾಶ ನೀಡರಲಿಲ್ಲ. ಇದೂ ಕೂಡ ವಿವಾದಕ್ಕೆ ಕಾರಣವಾಗಿತ್ತು. ಕೊನೆಗೆ ಜನರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಇದೀಗ ವಿಚಾರಣೆ ನಡೆಸಿದ ಹೈಕೋರ್ಟ್‌ ದೇವಸ್ಥಾನವನ್ನು ರಾಮಚಂದ್ರಾಪುರ ಮಠದ ಸುಪರ್ದಿಯಿಂದ ಸಮಿತಿಯ ಮೇಲ್ವಿಚಾರಣೆಗೆ ನೀಡಿದೆ. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಅರವಿಂದ್ ಕುಮಾರ್ ಅವರಿದ್ದ ಜಂಟಿ ಪೀಠ ಈ 256 ಪುಟಗಳ ತೀರ್ಪು ನೀಡಿದೆ. ದೇವಸ್ಥಾನವನ್ನು 12/08/2008ರಂದು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಿದ್ದ ಅಂದಿನ ಬಿ.ಎಸ್. ಯಡಿಯೂರಪ್ಪ ಸರಕಾರದ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿದೆ. ಜತೆಗೆ ದೇವಾಲಯವನ್ನು ಮುಜರಾಯಿ ಇಲಾಖೆ ಪಟ್ಟಿಯಿಂದ ಕೈಬಿಟ್ಟಿದ್ದ ಸರಕಾರದ ಆದೇಶವನ್ನು ಕೂಡ ಹೈಕೋರ್ಟ್‌ ರದ್ದುಗೊಳಿಸಿದೆ.

ಇದೀಗ ಹೈಕೋರ್ಟ್‌ ಉತ್ತರ ಕನ್ನಡ ಜಿಲ್ಲಾಧಿಕಾರಿಯವರಿಗೆ ದೇವಸ್ಥಾನವನ್ನು ವಶಕ್ಕೆ ಪಡೆದು ಉಸ್ತುವಾರಿ ನೋಡುಕೊಳ್ಳುವಂತೆ ಹೇಳಿದೆ. ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಇದರ ಉಸ್ತುವಾರಿ ನೋಡಿಕೊಳ್ಳಲಿದ್ದು ಇದರಲ್ಲಿ ಇನ್ನಿಬ್ಬರು ಉಪಾಧಿವಂತರು ಸದಸ್ಯರಾಗಿರಲಿದ್ದಾರೆ. ಜತೆಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಈ ಸಮಿತಿಯ ಸಲಹೆಗಾರರಾಗಿ ಇರಲಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಗೋಕರ್ಣದ ಮಹಾಗಣಪತಿ ದೇವಸ್ಥಾನ. 
ಗೋಕರ್ಣದ ಮಹಾಗಣಪತಿ ದೇವಸ್ಥಾನ. 

Also read: ‘ಇದು ದಶಕದ ಹೋರಾಟ’: ರಾಘವೇಶ್ವರ ಸ್ವಾಮಿಯಿಂದ ಗೋಕರ್ಣ ಕೈತಪ್ಪಿದ್ದು ಹೇಗೆ? 

Also read: 'ಹೇ ರಾಘವೇಶ್ವರ...': ಗೋಕರ್ಣ ಹಸ್ತಾಂತರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ 'ಸುಪ್ರಿಂ' ಗ್ರೀನ್ ಸಿಗ್ನಲ್!