ಪ್ರತ್ಯೇಕ ರಾಜ್ಯಕ್ಕಾಗಿ ಹಾರಾಟ, ಚೀರಾಟ ಅತ್ಯಗತ್ಯ: ಸಂವಿಧಾನದ ಅಡಿಯಲ್ಲಿ ರಚನೆ ಹೇಗೆ?
UPDATE

ಪ್ರತ್ಯೇಕ ರಾಜ್ಯಕ್ಕಾಗಿ ಹಾರಾಟ, ಚೀರಾಟ ಅತ್ಯಗತ್ಯ: ಸಂವಿಧಾನದ ಅಡಿಯಲ್ಲಿ ರಚನೆ ಹೇಗೆ?

ಸಂವಿಧಾನದ ಪ್ರಕ್ರಿಯೆಗಳ ಆಚೆಗೆ ಪ್ರತ್ಯೇಕ ರಾಜ್ಯ ರಚನೆಗೆ ಜನಾಭಿಪ್ರಾಯ ಮೂಡಿಸುವುದೇ ಪ್ರಮುಖ ಕೆಲಸವಾಗಿದೆ. ಆಗ ಮಾತ್ರ ರಾಜ್ಯ ಮತ್ತು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಹೊಸ ರಾಜ್ಯವನ್ನು ದಕ್ಕಿಸಿಕೊಳ್ಳಬಹುದು.

ಪ್ರತ್ಯೇಕ ರಾಜ್ಯದ ಕೂಗು ಉತ್ತರ ಕರ್ನಾಟಕದಲ್ಲಿ ಮೊಳಗಿ ಅದಾಗಲೇ ಹಲವು ದಶಕಗಳೇ ಕಳೆದಿವೆ. ಇದೀಗ ಮತ್ತೊಮ್ಮೆ ಈ ಧ್ವನಿ ಮೊಳಗಲಿದ್ದು ಆಗಸ್ಟ್‌ 2ರಂದು ಉತ್ತರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಹಾಗಿದ್ದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆಯಾ ಎಂಬುದು ಭವಿಷ್ಯದ ಪ್ರಶ್ನೆ. ಅದಕ್ಕೂ ಮೊದಲು, ಪ್ರತ್ಯೇಕ ರಾಜ್ಯ ಘೋಷಣೆಗೆ ಇರುವ ಕಾನೂನುಗಳೇನು? ಸಂವಿಧಾನ ಏನು ಹೇಳುತ್ತದೆ? ಅವುಗಳ ಸಂಕ್ಷಿಪ್ತ ಮಾಹಿತಿ ಇಲ್ಲಿವೆ.

ಭಾರತದ ಏಕತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯಲು ಸಂವಿಧಾನದ ಕಲಂ 3ರಲ್ಲಿ ಸಂಸತ್ತಿಗೆ ಹೊಸ ರಾಜ್ಯದ ರಚನೆಯ ಅಧಿಕಾರವನ್ನು ನೀಡಿಲಾಗಿದೆ. ಸರಳ ಬಹುಮತದೊಂದಿಗೆ ಮಸೂದೆಯನ್ನು ಅಂಗೀಕರಿಸುವ ಮೂಲಕ ಸಂಸತ್‌ ಹೊಸ ರಾಜ್ಯದ ರಚನೆ, ಈಗಿರುವ ರಾಜ್ಯದ ಗಡಿಗಳ ಬದಲಾವಣೆ ಅಥವಾ ಹೆಸರುಗಳ ಬದಲಾವಣೆ ಮಾಡಬಹುದು.

ಉದಾಹರಣೆಗೆ ಇದೀಗ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ರಚನೆಗೆ ಕರೆ ನೀಡಲಾಗಿದೆ. ಪ್ರತ್ಯೇಕ ರಾಜ್ಯವಾಗಬೇಕಾದರೆ ಮೊದಲಿಗೆ ಕರ್ನಾಟಕ ವಿಧಾನಸಭೆಯಲ್ಲಿ ಈ ಸಂಬಂಧ ನಿರ್ಣಯವನ್ನು ಮಂಡಿಸಬೇಕು. ಒಮ್ಮೆ ಇದು ಅಂಗೀಕಾರ ಪಡೆದುಕೊಂಡ ತಕ್ಷಣ ಅದನ್ನು ರಾಜ್ಯ ಸರಕಾರ ಕೇಂದ್ರಕ್ಕೆ ಕಳುಹಿಸಿಕೊಡಬೇಕು.

ವಿಧಾನ ಸಭೆ ಕಳುಹಿಸಿದ ನಿರ್ಣಯವನ್ನು ಕೇಂದ್ರ ಸರಕಾರ ಒಪ್ಪಿಕೊಳ್ಳಲೇಬೇಕು ಎಂದೇನಿಲ್ಲ. ಇದನ್ನು ತಿರಸ್ಕರಿಸಬಹುದು. ಒಂದೊಮ್ಮೆ ಕೇಂದ್ರ ಸರಕಾರ ರಾಜ್ಯದ ಶಿಫಾರಸ್ಸನ್ನು ಒಪ್ಪಿಕೊಂಡರೆ, ಅದರ ಪ್ರಕಾರ ಕರಡು ಮಸೂದೆ ರಚನೆ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ.

ಕರಡು ಮಸೂದೆಯನ್ನು ತಯಾರಿಸುವ ಮುನ್ನ ರಾಜ್ಯದ ಗಡಿ, ನೀರಿನ ಹಂಚಿಕೆ, ರಾಜಧಾನಿಯ ಸ್ಥಳ, ಹೈಕೋರ್ಟ್‌ ಮತ್ತು ರಾಜ್ಯವೊಂದಕ್ಕೆ ಬೇಕಾದ ಇತರ ಅಗತ್ಯ ಸವಲತ್ತುಗಳ ಬಗ್ಗೆ ನಿರ್ಧರಿಸಲು ಕೇಂದ್ರ ಸರಕಾರ ಆಯೋಗವೊಂದನ್ನು ರಚಿಸಬಹುದು. ಈ ಆಯೋಗದ ವರದಿಯನ್ನು ಸ್ವೀಕರಿಸಿ ಕೇಂದ್ರ ಸರಕಾರ ಮಸೂದೆಗೆ ಬೇಕಾದ ಬದಲಾವಣೆಗಳನ್ನು ಮಾಡುತ್ತದೆ. ನಂತರ ಸಂಪುಟದ ಸಚಿವರ ಸಲಹೆ ಮೇರೆಗೆ ರಾಷ್ಟ್ರಪತಿಗಳು ಕರಡು ಮಸೂದೆಯನ್ನು ಸ್ವೀಕರಿಸಿ ಹೊಸ ರಾಜ್ಯ ರಚನೆ ಪ್ರಕ್ರಿಯೆಗೆ ಚಾಲನೆ ನೀಡುತ್ತಾರೆ.

ನಂತರ ಕಾಲಮಿತಿಯನ್ನು ನಿಗದಿಗೊಳಿಸಿ ಈ ಮಸೂದೆಯನ್ನು ಕರ್ನಾಟಕ ವಿಧಾನಸಭೆಯ ವಿವೇಚನೆಗೆ, ಪರಿಶೀಲನೆಗೆ ಮತ್ತು ಅನುಮೋದನೆಗೆ ರಾಷ್ಟ್ರಪತಿಗಳು ಕಳುಹಿಸಿಕೊಡುತ್ತಾರೆ. ಹಾಗಂಥ ವಿಧಾನಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ರಾಷ್ಟ್ರಪತಿಗಳು ಪರಿಗಣನೆಗೆ ತೆಗೆದುಕೊಳ್ಳಲೇಬೇಕು ಎಂಬ ನಿಯಮವೇನಿಲ್ಲ. ಒಂದೊಮ್ಮೆ ಕಳುಹಿಸಿದ ಮಸೂದೆಗೆ ವಿರೋಧ ಇದ್ದಲ್ಲಿ ಅಥವಾ ಕಾಲಮಿತಿಯೊಳಗೆ ಪ್ರತಿಕ್ರಿಯೆ ಬರದಿದ್ದರೂ ರಾಷ್ಟ್ರಪತಿಗಳು ಹೊಸ ರಾಜ್ಯ ರಚನೆಗೆ ಮುಂದಾಗಬಹುದು.

ರಾಷ್ಟ್ರಪತಿಗಳ ಶಿಫಾರಸ್ಸಿನ ಅನ್ವಯ ಉಭಯ ಸದನಗಳಲ್ಲಿ ಮಸೂದೆಯನ್ನು ಮಂಡಿಸಲಾಗುತ್ತದೆ. ಈ ಮಸೂದೆಯನ್ನು ಸರಳ ಬಹುಮತದಲ್ಲಿ ಸಂಸತ್‌ ಅಂಗೀಕರಿಸಿದರೆ ಆಗ ಹೊಸ ರಾಜ್ಯ ಜನ್ಮ ತಾಳುತ್ತದೆ.

ಈ ಸಂವಿಧಾನದ ಪ್ರಕ್ರಿಯೆಗಳ ಆಚೆಗೆ ಉತ್ತರ ಕರ್ನಾಟಕವೂ ಸೇರಿದಂತೆ ಎಲ್ಲಾ ಪ್ರತ್ಯೇಕ ರಾಜ್ಯ ರಚನೆಗೆ ಜನಾಭಿಪ್ರಾಯ ಮೂಡಿಸುವುದೇ ಪ್ರಮುಖ ಕೆಲಸವಾಗಿದೆ. ಆಗ ಮಾತ್ರ ರಾಜ್ಯ ಮತ್ತು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಹೊಸ ರಾಜ್ಯವನ್ನು ದಕ್ಕಿಸಿಕೊಳ್ಳಬಹುದು. ಇದಕ್ಕೆ ತಾಜಾ ಉದಾಹರಣೆಯಾಗಿ ಇತ್ತೀಚೆಗೆ ರಚನೆಯಾದ ತೆಲಂಗಾಣ ರಾಜ್ಯ ನಮ್ಮ ಕಣ್ಣ ಮುಂದಿದೆ.

ಹೀಗೆ ಜನಾಭಿಪ್ರಾಯ ಸಂಗ್ರಹಗೊಂಡಾಗ ಮಾತ್ರ ಪ್ರತ್ಯೇಕ ರಾಜ್ಯ ಉದಯಗೊಳ್ಳಲು ಸಾಧ್ಯವಾಗುತ್ತದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದರೆ ಇದೇ ನಿಯಮಾವಳಿಗಳು ಪಾಲನೆಯಾಗುತ್ತದೆ. ಇವೆಲ್ಲಕ್ಕಿಂತ ಮುಂಚೆ ಆಗಬೇಕಿರುವುದು ಜನಾಭಿಪ್ರಾಯ ರೂಪಿಸುವ ಕೆಲಸ. ಇದಕ್ಕಾಗಿ ದಶಕದ ಹಿಂದೆಯೇ ಆರಂಭವಾದ ಹೋರಾಟ ಈಗ ನಿಧಾನವಾಗಿ ಕಾವು ಪಡೆದುಕೊಳ್ಳುತ್ತಿದೆ. ತೆರೆಮರೆಯಲ್ಲಿ ಒಂದಷ್ಟು ಜನ ಉರಿವ ಬೆಂಕಿಗೆ ತುಪ್ಪ ಸುರಿಯವು ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯತಂತ್ರದ ಪರಿಣಾಮಗಳು ಎಷ್ಟರ ಮಟ್ಟಿಗೆ ಬೀರುತ್ತವೆ ಎಂಬುದರ ಮೇಲೆ ಪ್ರತ್ಯೇಕ ಉತ್ತರ ಕರ್ನಾಟಕದ ಅಸ್ಥಿತ್ವ ನಿಂತಿದೆ.