‘ಆಧ್ಯಾತ್ಮ ವಾಣಿಜ್ಯೀಕರಣಗೊಂಡಿದೆ’ ಎಂದಿದ್ದ ಗುರು ಭಯ್ಯೂಜಿ ಮಹರಾಜ್ ಆತ್ಮಹತ್ಯೆ
UPDATE

‘ಆಧ್ಯಾತ್ಮ ವಾಣಿಜ್ಯೀಕರಣಗೊಂಡಿದೆ’ ಎಂದಿದ್ದ ಗುರು ಭಯ್ಯೂಜಿ ಮಹರಾಜ್ ಆತ್ಮಹತ್ಯೆ

ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿದ್ದಾಗಲೇ ಭಯ್ಯೂ ಮಹರಾಜ್ ಸಾರ್ವಜನಿಕ ಬದುಕಿಗೆ ವಿದಾಯ ಹೇಳಿದ್ದರು. ಮಧ್ಯ ಪ್ರದೇಶದ ಬಿಜೆಪಿ ಸರಕಾರ ಎರಡು ತಿಂಗಳ ಹಿಂದೆ ಸಚಿವ ಸ್ಥಾನ ನೀಡಲು ಮುಂದಾಗಿತ್ತು. 

ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಆಧ್ಯಾತ್ಮಿಕ ಗುರು, ಸಾಮಾಜಿಕ ಹೋರಾಟಗಾರ, ಬಿಜೆಪಿ ಸರಕಾರದಲ್ಲಿ ಪ್ರಭಾವಿ ಸ್ಥಾನದಲ್ಲಿದ್ದ ಭಯ್ಯಾಜಿ ಮಹರಾಜ್ ಇಂದೋರ್ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ.

ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರಕಾರ ಭಯ್ಯೂ ಮಹರಾಜ್‌ಗೆ ಸಚಿವ ಸ್ಥಾನಮಾನ ನೀಡಿತ್ತು.

ಅಣ್ಣಾ ಹಜಾರೆ ನೇತೃತ್ವದಲ್ಲಿ ಜನಲೋಕಪಾಲ ಕಾಯ್ದೆಗಾಗಿ ದೇಶಾದ್ಯಂತ ಅಭಿಯಾನ ನಡೆದಾಗ ಭಯ್ಯೂಜಿ ಮಹರಾಜ್ ಸುದ್ದಿಕೇಂದ್ರಕ್ಕೆ ಬಂದಿದ್ದವರು. ಆ ಸಮಯದಲ್ಲಿ ಅವರನ್ನು ಸರಕಾರ ಮತ್ತು ಅಣ್ಣಾ ಹಜಾರೆ ನಡುವೆ ಮಧ್ಯಸ್ಥಿಕೆಗೆ ಭಯ್ಯೂ ಹೆಸರು ಕೇಳಿಬಂದಿತ್ತು. ಮಧ್ಯಪ್ರದೇಶದಿಂದ ಬಂದು ಮಹರಾಷ್ಟ್ರದಲ್ಲಿ ದೊಡ್ಡ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿದ್ದವರು ಭಯ್ಯೂ ಮಹರಾಜ್.

ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿದ್ದಾಗಲೇ ಭಯ್ಯೂ ಮಹರಾಜ್ ಸಾರ್ವಜನಿಕ ಬದುಕಿಗೆ ವಿದಾಯ ಹೇಳಿದ್ದರು. “ನಾನು ಅಂದುಕೊಂಡಿದ್ದನ್ನು ಸಾಧಿಸಲು ಜನ ಬೆಂಬಲ ನೀಡುತ್ತಿಲ್ಲ. ಆದ್ದರಿಂದ ಸಾರ್ವಜನಿಕ ಬದುಕಿನಿಂದಲೇ ದೂರ ಉಳಿಯುತ್ತೇನೆ,’’ ಎಂದು ಅವರು ಹೇಳಿಕೊಂಡಿದ್ದರು.

ಭಯ್ಯೂಜಿ ನಿಜವಾದ ಹೆಸರು ಉದಯ್ ಸಿನ್ಹಾ ದೇಶ್‌ಮುಖ್‌. ಡಿ. ವೈ. ಪಾಟೀಲ್ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ಡಿಲಿಟ್ ಪದವೀದರರು. ಬದುಕಿನ ನಡು ವಯಸ್ಸಿನಲ್ಲಿ ‘ಶ್ರೀ ಸದ್ಗುರು ದತ್ತ ಧಾರ್ಮಿಕ ಏವಂ ಪಾರಮಾರ್ತಿಕ್ ಟ್ರಸ್ಟ್‌’ ಹುಟ್ಟುಹಾಕಿದ್ದರು. ಅದರ ಅಡಿಯಲ್ಲಿ ಸೂರ್ಯೋದಯ ಎಂದು ಆಶ್ರಮ ನಡೆಸುತ್ತಿದ್ದರು. ಅವರು ಸಾರ್ವಜನಿಕ ಜೀವನ ಬಿಡುವ ಸಮಯದಲ್ಲಿ “ಇವತ್ತು ಆಧ್ಯಾತ್ಮಿಕ ಕ್ಷೇತ್ರ ಸಂಪೂರ್ಣವಾಗಿ ವಾಣಿಜ್ಯೀಕರಣಗೊಂಡಿದೆ. ಇಲ್ಲಿಗೆ ನಾನು ಅಕ್ಷರಶಃ ಹೊಂದುವುದಿಲ್ಲ,’’ ಎಂಬ ಅವರ ಮಾತನ್ನು ‘ಟಿಓಐ’ ವರದಿ ಮಾಡಿತ್ತು.

ಇದಾದ ನಂತರ, ೨ ತಿಂಗಳ ಹಿಂದಷ್ಟೆ ಮಧ್ಯಪ್ರದೇಶ ಐವರು ಸಾಧು ಸಂತ ಹಿನ್ನೆಲೆಯವರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿಲು ತೀರ್ಮಾನಿಸಿತ್ತು. ಅದರಲ್ಲಿ ಭಯ್ಯೂ ಮಹರಾಜ್ ಹೆಸರೂ ಇತ್ತು. ಅವರೀಗ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಬಹಿರಂಗವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.