samachara
www.samachara.com
ಸಮ್ಮಿಶ್ರ ಸರಕಾರದ ಖಾತೆ ಹಂಚಿಕೆ: ಹೊಸಬರ ಹೆಗಲಿಗೆ ಹೊಣೆ, ಅನುಭವಿಗಳಿಗೆ ಹೊಸ ನೆಲೆ
UPDATE

ಸಮ್ಮಿಶ್ರ ಸರಕಾರದ ಖಾತೆ ಹಂಚಿಕೆ: ಹೊಸಬರ ಹೆಗಲಿಗೆ ಹೊಣೆ, ಅನುಭವಿಗಳಿಗೆ ಹೊಸ ನೆಲೆ

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ಸಚಿವರಿಗೆ ಖಾತೆ ಹಂಚಿಕೆ ಮಾಡಿದೆ. ಕೆಲವರ ಪಾಲಿಗೆ ಆಡಳಿತ ಅನುಭವ ಹೊಸತು. ಅನುಭವಿಗಳಿಗೆ ಹೊಸ ಹೊಣೆಗಾರಿಕೆ. 

samachara

samachara

ಸಾಕಷ್ಟು ಸಮಯವನ್ನು ತೆಗೆದುಕೊಂಡ ಮುಖ್ಯಮಂತ್ರಿ ಕುಮಾರಸ್ವಾಮಿ ಕೊನೆಗೂ ತಮ್ಮ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ನಡೆಸಿದ್ದಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಒಟ್ಟು 25 ಸಚಿವರಿಗೆ ಖಾತೆಗಳು ದೊರೆತಿವೆ.

ಶುಕ್ರವಾರ ಮಧ್ಯಾಹ್ನ ಖಾತೆ ಹಂಚಿಕೆ ಮಾಡಿರುವ ಕುಮಾರಸ್ವಾಮಿ, ರಾಜ್ಯಪಾಲರರ ಅಂಕಿತಕ್ಕೆಂದು ಕಳುಹಿಸಿಕೊಟ್ಟಿದ್ದಾರೆ. ಹಲವಾರು ಸಚಿವರಿಗೆ ತಾವು ಬೇಡಿಕೆಯಿಟ್ಟಿದ್ದ ಖಾತೆಗಳು ದೊರೆಯದ ಕಾರಣಕ್ಕೆ ಸರಕಾರದೊಳಗೆ ಎಲ್ಲವೂ ಸಮಾಧಾನಕರವಾಗಿಲ್ಲ ಎಂದು ವರದಿಗಳು ಹೇಳುತ್ತಿವೆ.

ಯಾರ್ಯಾರಿಗೆ ಯಾವ್ಯಾವ ಖಾತೆ?

ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಮುಖ ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಹಣಕಾಸು ಖಾತೆ, ಇಂಧನ ಖಾತೆ, ಗುಪ್ತ ವಾರ್ತೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆಗಳು ಕುಮಾರಸ್ವಾಮಿ ಕೈಯಲ್ಲಿಯೇ ಇವೆ.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ಗೆ ಗೃಹ ಸಚಿವಾಲಯ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆ ದೊರೆತಿವೆ. ಎಚ್.ಡಿ. ರೇವಣ್ಣಗೆ ಲೋಕೋಪಯೋಗಿ ಖಾತೆಯ ಹೊಣೆ ಸಿಕ್ಕಿದೆ. ಕಂದಾಯ ಇಲಾಖೆ ಆರ್‌. ವಿ. ದೇಶಪಾಂಡೆ ಕೈಸೇರಿದೆ.

ಡಿ. ಕೆ. ಶಿವಕುಮಾರ್‌ ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಗಳನ್ನು ನಿರ್ವಹಿಸಬೇಕಿದೆ. ಕೆ. ಜೆ. ಜಾರ್ಜ್‌ಗೆ ಬೃಹತ್‌ ಕೈಗಾರಿಕೆ ಖಾತೆ ದೊರೆತಿದೆ. ಬಂಡೆಪ್ಪ ಕಾಶಂಪುರ್‌ ಸಹಕಾರ ಖಾತೆಯನ್ನು ಹಿಡಿದಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಕೃಷ್ಣ ಬೈರೇಗೌಡರಿಗೆ ದೊರೆತಿವೆ.

ಮೊದಲ ಬಾರಿಗೆ ಸಚಿವರಾಗಿರುವ ಸಿ. ಎಸ್‌. ಪುಟ್ಟರಾಜರವರಿಗೆ ಸಣ್ಣ ನೀರಾವರಿ ಖಾತೆ ನೀಡಿಲಾಗಿದೆ. ಬಿಎಸ್ಪಿಯಿಂದ ಗೆದ್ದಿರುವ ಎನ್‌. ಮಹೇಶ್‌ಗೆ ಪ್ರಾರ್ಥಮಿಕ ಮತ್ತು ಫ್ರೌಢಶಾಲಾ ಶಿಕ್ಷಣವನ್ನು ನೀಡಲಾಗಿದೆ. ಕಾಲೇಜು ಮೆಟ್ಟಿಲನ್ನೇ ಹತ್ತದ ಜಿ. ಟಿ. ದೇವೇಗೌಡರಿಗೆ ಉನ್ನತ ಶಿಕ್ಷಣವನ್ನು ವಹಿಸಲಾಗಿದೆ. ಡಿ. ಸಿ. ತಮ್ಮಣ್ಣರಿಗೆ ಸಾರಿಗೆ ಖಾತೆ ದೊರೆತಿದ್ದು, ಸಾರಾ ಮಹೇಶ್‌ಗೆ ಪ್ರವಾಸೋದ್ಯಮ ಇಲಾಖೆಯನ್ನು ನೀಡಲಾಗಿದೆ. ಕೆಪಿಜೆಪಿಯ ಶಂಕರ್‌ಗೆ ಅರಣ್ಯ ಇಲಾಖೆ ನೀಡಲಾಗಿದೆ.

ರಮೇಶ್ ಜಾರಕಿಹೊಳಿ ಪೌರಾಡಳಿತ ಮತ್ತು ಯುವಜನ ಕ್ರೀಡಾ ಇಲಾಖೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಂಪುಟದಲ್ಲಿನ ಏಕೈಕ ಸಚಿವೆ ಜಯಮಾಲರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಲಾಗಿದೆ. ರಾಜಶೇಖರ್‌ ಪಾಟೀಲ್‌ಗೆ ಗಣಿ ಮತ್ತು ಭೂವಿಜ್ಞಾನ ಇಲಾಕೆಯ ಜವಾಬ್ದಾರಿಯನ್ನು ವಹಿಸಲಾಗಿದೆ.

ಶಿವಾನಂದ ಪಾಟೀಲ್‌ಗೆ ಆರೋಗ್ಯ ಸಚಿವರ ಪಟ್ಟ ದೊರೆತಿದ್ದು, ವೆಂಕಟರಮಣಪ್ಪ ಕಾರ್ಮಿಕ ಖಾತೆಯನ್ನು ಪಡೆದಿದ್ದಾರೆ. ಪುಟ್ಟರಂಗ ಶೆಟ್ಟಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯನ್ನು ನೀಡಲಾಗಿದೆ. ಜಮೀರ್‌ ಅಹಮದ್‌ಗೆ ಅಹಾರ ಮತ್ತು ನಾಗರೀಕ ಪೂರೈಕೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಖಾತೆಗಳ ಜವಾಬ್ದಾರಿ ವಹಿಸಲಾಗಿದೆ. ಶಿವ ಶಂಕರ್‌ರೆಡ್ಡಿ ಕೃಷಿ ಖಾತೆ ಪಡೆದಿದ್ದು, ಪ್ರಿಯಾಂಕ್‌ ಖರ್ಗೆಗೆ ಸಮಾಜ ಕಲ್ಯಾಣ ಖಾತೆಯನ್ನು ನೀಡಲಾಗಿದೆ.

ಯು.ಟಿ.ಖಾದರ್‌ಗೆ ನಗರಾಭಿವೃದ್ಧಿ ಹಾಗೂ ವಸತಿ ಖಾತೆ ದೊರೆತಿದೆ. ವೆಂಕಟರಾಮ್‌ ನಾಡಗೌಡರಿಗೆ ಪಶುಸಂಗೋಪನಾ ಮತ್ತು ಮೀನುಗಾರಿಕಾ ಖಾತೆ ನೀಡಲಾಗಿದೆ. ಎಂ.ಸಿ.ಮನಗೊಳಿಗೆ ತೋಟಗಾರಿಕಾ ಇಲಾಖೆ ಲಭಿಸಿದೆ. ಎಸ್‌.ಆರ್.ಶ್ರೀನಿವಾಸ್‌ಗೆ ಸಣ್ಣ ಕೈಗಾರಿಕೆ ಖಾತೆಯನ್ನು ನೀಡಲಾಗಿದೆ.

ಭುಗಿಲೆದ್ದ ಅಸಮಾಧಾನ:

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರಕಾರದ 25 ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡಿದ ಬೆನ್ನಲ್ಲೇ ಉಳಿದ ಹಿರಿಯ ಶಾಸಕರು ಮತ್ತು ಅವರ ಅಭಿಮಾನಿಗಳ ಕಡೆಯಿಂದ ವಿರೋಧ ವ್ಯಕ್ತವಾಗಿತ್ತು. ಎಂ.ಬಿ.ಪಾಟೀಲ್‌ ಅವರ ನೇತೃತ್ವದಲ್ಲಿ ಜನ ಕಾಂಗ್ರೆಸ್‌ ಶಾಸಕರು ಪ್ರತ್ಯೇಕವಾಗಿರಲು ಆರಂಭಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಎಂ. ಬಿ. ಪಾಟೀಲ್‌ರನ್ನು ಸಮಾಧಾನ ಪಡಿಸಲು ರಾಹುಲ್‌ ಗಾಂಧಿಯೇ ಬರುವ ಕುರಿತು ಮಾತುಕತೆಗಳಿವೆ.

ಇದು ಸಚಿವ ಸ್ಥಾನ ಸಿಗದವರಿಂದ ಉಂಟಾದ ಭಿನ್ನಮತವಾದರೆ, ಸಚಿವ ಸ್ಥಾನ ದೊರೆತವರು ತಮ್ಮಿಷ್ಟದ ಖಾತೆ ದೊರೆತಿಲ್ಲ ಎಂದು ಕ್ಯಾತೆ ತೆಗಿದಿದ್ದಾರೆ. ಉನ್ನತ ಶಿಕ್ಷಣ ಖಾತೆ ಪಡೆದಿರುವ ಜಿ.ಡಿ.ದೇವೇಗೌಡ ಮತ್ತು ಎಂ.ಸಿ.ಪುಟ್ಟರಾಜು ಬೆಂಬಲಿಗರಿಂದ ಅಸಮಾಧಾನ ವ್ಯಕ್ತವಾಗಿದೆ. ಜಿ.ಟಿ.ದೇವೇಗೌಡ ಶುಕ್ರವಾರ ರಾತ್ರಿಯೇ ತಮ್ಮ ಸರಕಾರೀ ಕಾರನ್ನು ಹಿಂತಿರುಗಿಸಿದ್ದಾರೆ. ಕಾಂಗ್ರೆಸ್‌ನಲ್ಲೂ ಕೂಡ ಅಸಮಾಧಾನ ವ್ಯಕ್ತವಾಗುತ್ತಿದೆ.

ಇದುವರೆವಿಗೂ ಸಚಿವ ಸ್ಥಾನಕ್ಕಾಗಿ ನಡೆಯುತ್ತಿದ್ದ ಶೀತಲ ಸಮರ, ಸಚಿವ ಸ್ಥಾನಗಳನ್ನು ಘೋಷಿಸಿ ಖಾತೆ ಹಂಚಿಕೆ ಮಾಡಿದ ನಂತರವೂ ಮುಂದುವರೆಯುತ್ತಿದೆ. ಈ ಗೊಂದಲ ಮತ್ತು ಭಿನ್ನಮತಗಳು ಸಧ್ಯಕ್ಕಂತೂ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ.