‘ರೆಡಿಮೇಡ್ ಪ್ರಶ್ನೆಗೆ ರೆಡಿಮೇಡ್ ಉತ್ತರ’; ಸಿಂಗಪುರ ಸಂವಾದದಲ್ಲಿ ರಟ್ಟಾಯ್ತೆ ಮೋದಿ ಗುಟ್ಟು?
UPDATE

‘ರೆಡಿಮೇಡ್ ಪ್ರಶ್ನೆಗೆ ರೆಡಿಮೇಡ್ ಉತ್ತರ’; ಸಿಂಗಪುರ ಸಂವಾದದಲ್ಲಿ ರಟ್ಟಾಯ್ತೆ ಮೋದಿ ಗುಟ್ಟು?

ನರೇಂದ್ರ ಮೋದಿ ಸಂವಾದಗಳಲ್ಲಿ ನೀಡುವ ಉತ್ತರಗಳ ಪ್ರಶ್ನೆಗಳೂ ಮೊದಲೇ ಸಿದ್ಧವಾಗಿರುತ್ತವೆಯೇ? ಇಂಥದ್ದೊಂದು ಪ್ರಶ್ನೆಯನ್ನು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿರುವ ವಿಡಿಯೊ ಹುಟ್ಟುಹಾಕಿದೆ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶ- ವಿದೇಶಗಳಲ್ಲಿ ನಡೆಸುವ ಸಂವಾದ ಕಾರ್ಯಕ್ರಮಗಳ ಪ್ರಶ್ನೋತ್ತರಗಳು ಮೊದಲೇ ತಯಾರಾಗಿರುತ್ತವೆಯೇ? ಇಂಥದ್ದೊಂದು ಗುಟ್ಟನ್ನು ರಟ್ಟು ಮಾಡುವಂತಿದೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿರುವ ವಿಡಿಯೊ.

ಸಿಂಗಪುರದ ನಾನ್ಯಂಗ್‌ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕಳೆದ ಶುಕ್ರವಾರ ಮೋದಿ ಅವರ ಸಂವಾದ ಕಾರ್ಯಕ್ರಮವಿತ್ತು. ಸಂವಾದದಲ್ಲಿ ಪ್ರಧಾನಿ ಮೋದಿ ಹಿಂದಿಯಲ್ಲೇ ಉತ್ತರ ಕೊಡುತ್ತಿದ್ದರು. ಏಷ್ಯಾ ಅಭಿವೃದ್ಧಿಗೆ ಸಂಬಂಧಿಸಿದ ಪ್ರಶ್ನೆಗೆ ಮೋದಿ ಅವರ ಉತ್ತರವನ್ನು ಹಿಂದಿಯಿಂದ ಇಂಗ್ಲಿಷ್‌ಗೆ ತರ್ಜುಮೆ ಮಾಡುತ್ತಿದ್ದ ಭಾಷಾಂತರಿ ಮೋದಿ ನೀಡಿದ್ದ ಉತ್ತರಕ್ಕಿಂತ ದೀರ್ಘವಾದ ಉತ್ತರ ನೀಡಿದ್ದರು.

ಮೋದಿ ಚುಟುಕಾಗಿ ಹಿಂದಿಯಲ್ಲಿ ನೀಡಿದ ಉತ್ತರ ಇಂಗ್ಲಿಷ್‌ನಲ್ಲಿ ಪ್ರಮುಖಾಂಶಗಳ ಜತೆಗೆ ದೀರ್ಘವಾಗಿದ್ದು ಹೇಗೆ ಎಂಬ ಪ್ರಶ್ನೆಯನ್ನು ರಾಹುಲ್‌ ಗಾಂಧಿ ಟ್ವೀಟ್‌ ಎತ್ತಿದೆ. “ಮೋದಿ ನಿಜವಾದ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ಒಂದು ವೇಳೆ ಅವರು ನಿಜವಾದ ಪ್ರಶ್ನೆಗಳಿಗೆ ಉತ್ತರಿಸಿದ್ದೇ ಆದಲ್ಲಿ ನಾವೆಲ್ಲರೂ ಮುಜುಗರ ಅನುಭವಿಸಬೇಕಾಗುತ್ತದೆ” ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

ರಾಹುಲ್‌ ಗಾಂಧಿ ಟ್ವೀಟ್‌ ಮಾಡಿರುವ ವಿಡಿಯೊದಲ್ಲಿ ಏಷ್ಯಾದ ಮುಂದಿರುವ ಸವಾಲುಗಳ ಬಗ್ಗೆ ಮೋದಿ ಉತ್ತರ ನೀಡುತ್ತಾರೆ. ಮೋದಿ ನೀಡುವ ಹಿಂದಿ ಭಾಷೆಯ ಉತ್ತರ ಚುಕುಟಾಗಿದೆ. ಆದರೆ, ಭಾಷಾಂತರಕಾರರು ನೀಡಿದ ಉತ್ತರ ದೀರ್ಘವಾಗಿದೆ. ಇದರಿಂದ ಯಾವ ಪ್ರಶ್ನೆಗೆ ಯಾವ ಉತ್ತರ ಎಂಬುದನ್ನು ಮೊದಲೇ ಸಿದ್ಧಮಾಡಿಟ್ಟುಕೊಂಡಂತೆ ಸಂವಾದ ನಡೆದಿದೆ ಎಂಬ ಅನುಮಾನ ಮೂಡುವುದ ಸಹಜ.

ರಾಹುಲ್‌ ಗಾಂಧಿ ಮೋದಿ ಹಣಿಯಲು ಇದನ್ನೇ ದಾಳವಾಗಿಸಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮೋದಿ ನಡೆಸುವ ಸಂವಾದಗಳ ಆಂತರ್ಯ ಏನು ಎಂಬುದಕ್ಕೆ ರಾಹುಲ್‌ ಟ್ವೀಟ್‌ ಕನ್ನಡಿ ಹಿಡಿದಿದೆ.

ಮೋದಿ ಸಿಂಗಪುರದಲ್ಲಿ ನಡೆಸಿದ ಸಂವಾದ ಮಾತ್ರ ಹೀಗೋ ಅಥವಾ ಮೋದಿ ನಡೆಸಿದ ಸಂವಾದಗಳೆಲ್ಲವೂ ಹೀಗೆ ರೆಡಿಮೇಡ್‌ ಪ್ರಶ್ನೆಗೆ ರೆಡಿಮೇಡ್‌ ಉತ್ತರಗಳೋ ಎಂಬುದಕ್ಕೆ ಖುದ್ದು ಮೋದಿ ಅವರೇ ಉತ್ತರಿಸಬೇಕಿದೆ.