ಆರ್‌. ಆರ್. ನಗರ ಚುನಾವಣಾ ಫಲಿತಾಂಶ: ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಭರ್ಜರಿ ಗೆಲುವು
UPDATE

ಆರ್‌. ಆರ್. ನಗರ ಚುನಾವಣಾ ಫಲಿತಾಂಶ: ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಭರ್ಜರಿ ಗೆಲುವು

ಸೋಮವಾರ ಮತದಾನ ನಡೆದಿದ್ದ ಆರ್‌ಆರ್‌ನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಸರಿಸುಮಾರು 25,000 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ಮೊದಲ ಸುತ್ತಿನಿಂದಲೂ ಮುನ್ನಡೆಯನ್ನು ಕಾಯ್ದುಕೊಂಡು ಬಂದ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ, 18ನೇ ಸುತ್ತಿನಲ್ಲೂ ಕೂಡ ಮುನ್ನಡೆ ಗಳಿಸಿ 25,000 ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂಬ ಕಾರಣಕ್ಕೆ ಮೇ 15ರಂದು ನಡೆಯಬೇಕಿದ್ದ ಮತದಾನವನ್ನು ಮುಂದೂಡಲಾಗಿತ್ತು. ಇದೇ 28ರಂದು ಮತದಾನ ನಡೆದಿದ್ದು, ಶೇ 54.20 ರಷ್ಟು ಮತದಾನ ನಡೆದಿತ್ತು.

ಚುನಾವಣಾ ಕಣದಲ್ಲಿ ಮಾಜಿ ಶಾಸಕರಾದ ಕಾಂಗ್ರೆಸ್‌ನ ಮುನಿರತ್ನ, ಬಿಜೆಪಿಯ ತುಳಸಿ ಮುನಿರಾಜುಗೌಡ ಹಾಗೂ ಜೆಡಿಎಸ್‌ನ ಜಿ.ಎಚ್. ರಾಮಚಂದ್ರ, ನಟ ಹುಚ್ಚ ವೆಂಕಟ್‌ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಒಟ್ಟಾರೆ 14 ಅಭ್ಯರ್ಥಿಗಳು ಕಣದಲ್ಲಿದ್ದರು.

ಮೈಸೂರು ರಸ್ತೆಯ ಹಲಗೆ ವಡೇರಹಳ್ಳಿಯಲ್ಲಿನ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಂಡಿತ್ತು. ಮೊದಲಿನಿಂದಲೂ ಮುಂದಿದ್ದ ಮುನಿರತ್ನಗೆ ಹತ್ತಿರದ ಸ್ಪರ್ಧಿಯಾಗಿ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಇದ್ದರು, ಮೂರನೇ ಸ್ಥಾನದಲ್ಲಿ ಜೆಡಿಎಸ್‌ ಅಭ್ಯರ್ಥಿ ರಾಮಚಂದ್ರ ಗೌಡ ಇದ್ದರು.

ಅಕ್ರಮ ವೋಟರ್‌ ಐಡಿ ಸಂಗ್ರಹಣೆಯ ಆರೋಪ ಹೊತ್ತಿದ್ದ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಮೇಲೆ ರಾಜರಾಜೇಶ್ವರಿ ನಗರದ ಮತದಾರರು ಮುನಿಸಿಕೊಂಡಿಲ್ಲ. ಒಟ್ಟು 1,08,064 ಮತಗಳನ್ನು ತಮ್ಮದಾಗಿಸಿಕೊಂಡಿರುವ ಮುನಿರತ್ನ ಎರಡನೇ ಬಾರಿ ರಾಜರಾಜೇಶ್ವರಿನಗರದ ಶಾಸಕರಾಗಿ ಹೊರಹೊಮ್ಮಿದ್ದಾರೆ. ಮುನಿರತ್ನದ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕ್ಷೇತ್ರದ ಮೂರು ಜನ ಬಿಬಿಎಂಪಿ ಮಹಿಳಾ ಸದಸ್ಯರು ಮುನಿರತ್ನ ವಿರುದ್ಧ ತಿರುಗಿಬಿದ್ದಿದ್ದರು. ಕಾಂಗ್ರೆಸ್‌ನ ಆಶಾ ಸುರೇಶ್‌, ಜೆಡಿಎಸ್‌ನ ಮಂಜುಳಾ ನಾರಾಯಣಸ್ವಾಮಿ ಹಾಗೂ ಬಿಜೆಪಿಯ ಮಮತಾ ವಾಸುದೇವ್‌ ಮುನಿರತ್ನರನ್ನು ಗೆಲ್ಲಲು ಬಿಡುವುದಿಲ್ಲ ಎಂದು ಪಣತೊಟ್ಟಿದ್ದರು. ಆದರೆ ಕ್ಷೇತ್ರದ ಮತದಾರರು ಇವರ ಮಾತುಗಳಿಗೆ ಮನ್ನಣೆ ನೀಡಿಲ್ಲ. ಬರೋಬ್ಬರಿ 25,000ಕ್ಕೂ ಹೆಚ್ಚು ಮತಗಳ ಅಂತರದಿಂದ ಮುನಿರತ್ನರನ್ನು ಜನ ಗೆಲ್ಲಿಸಿದ್ದಾರೆ.

ಒಟ್ಟು 104 ಸ್ಥಾನಗಳನ್ನು ತನ್ನದಾಗಿಸಿಕೊಂಡದ್ದ ಬಿಜೆಪಿ, ಆರ್‌ ಆರ್ ನಗರದಲ್ಲೂ ಕೂಡ ಗೆಲ್ಲುವ ಹಪಹಪಿಯಲ್ಲಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್‌. ಯಡಿಯೂರಪ್ಪ ತುಳಸಿ ಮುನಿರಾಜು ಪರವಾಗಿ ಪ್ರಚಾರ ನಡೆಸಿದ್ದರು. ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಒಟ್ಟು 82,572 ಮತದಾರರು ತುಳಸಿ ಮುನಿರಾಜು ಕೈ ಹಿಡಿದಿದ್ದಾರೆ.

ಬಿಜೆಪಿ ಪಕ್ಷವನ್ನು ತೊರೆದು ಬಂದ ರಾಮಚಂದ್ರರಿಗೆ ಜಿಡಿಎಸ್‌ ಆರ್‌ ಆರ್‌ ನಗರದ ಟಿಕೇಟ್‌ ಕೊಟ್ಟಿತ್ತು. ಜೆಡಿಎಸ್‌ ವರಿಷ್ಠ ದೇವೇಗೌಡರೂ ಕೂಡ ರಾಮಚಂದ್ರ ಪರ ಪ್ರಚಾರ ನಡೆಸಿದ್ದರು. ಆದರೆ ಮತದಾರರು ರಾಮಚಂದ್ರರನ್ನು ಗೆಲ್ಲಿಸುವ ಮನಸು ಮಾಡಿಲ್ಲ. ಗೆದ್ದೇ ಗೆಲ್ಲುತ್ತೇನೆ ಎಂಬ ಭರವಸೆಯಲ್ಲಿದ್ದ ರಾಮಚಂದ್ರರಿಗೆ ಒಟ್ಟು 60,360 ಮತಗಳು ದೊರೆತಿದ್ದು, ಮೂರನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಳ್ಳಬೇಕಾಗಿದೆ.

ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಧುಮುಕಿ ಒಂದಷ್ಟು ಸದ್ದು ಮಾಡಿದ್ದ ಚಿತ್ರ ನಟ ವೆಂಕಟ್‌ ಬಾರಿ ಮುಖಭಂಗ ಅನುಭವಿಸುವಂತಾಗಿದೆ. ಕೇವಲ 514 ಮತಗಳನ್ನಷ್ಟೇ ಗಳಿಸಲು ಹುಚ್ಚ ವೆಂಕಟ್‌ ಶಕ್ತರಾಗಿದ್ದು, ಠೇವಣಿಯನ್ನು ಕಳೆದುಕೊಂಡಿದ್ದಾರೆ. ಇವರಿಗೆ ಹೋಲಿಸಿದರೆ ನೋಟಾ ಮತಗಳೆ ಹೆಚ್ಚಿವೆ. ರಾಜರಾಜೇಶ್ವರಿ ನಗರ ವಿಧಾನ ಸಭಾ ವ್ಯಾಪ್ತಿಯಲ್ಲಿನ 1680 ಮತದಾರರು ನೋಟಾವನ್ನು ತಮ್ಮ ಆಯ್ಕೆಯನ್ನಾಗಿಸಿಕೊಂಡಿದ್ದಾರೆ.

ಮೇ 15ರಂದು ಚುನಾವಣಾ ಫಲಿತಾಂಶ ಹೊರಬಿದ್ದಾಗ ಕಾಂಗ್ರೆಸ್‌ ಪಕ್ಷ ಒಟ್ಟಾರೆ 78 ಸ್ಥಾನಗಳಲ್ಲಷ್ಟೇ ಗೆದ್ದಿತ್ತು. ಆದರೆ ರಸ್ತೆ ಅಪಘಾತದ ವೇಳೆ ಭಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಸಿದ್ದು ನ್ಯಾಮಗೌಡ ಮೃತಪಟ್ಟಿದ್ದರು. ಈ ಕಾರಣದಿಂದಾಗಿ ಕಾಂಗ್ರೆಸ್‌ ಶಾಸಕರ ಬಲ 77ಕ್ಕೆ ಇಳಿದಿತ್ತು. ಈಗ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಭರ್ಜರಿ ಗೆಲುವು ದಾಖಲಿಸಿದ್ದು, ಕಾಂಗ್ರೆಸ್‌ ಶಾಸಕರ ಸಂಖ್ಯೆ 78ಕ್ಕೆ ಏರಿದೆ.

ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಎನ್‌.ವಿಜಯ್‌ ಕುಮಾರ್‌ ಅಕಾಲಿಕ ಮರಣದ ಕಾರಣದಿಂದಾಗಿ ಜಯನಗರ ಕ್ಷೇತ್ರದ ಚುನಾವಣೆಯೂ ಮುಂದೂಡಲ್ಪಟ್ಟಿತ್ತು. ಜೂನ್‌ ತಿಂಗಳ 11ರಂದು ಮತದಾನ ನಡೆಯಲಿದ್ದು, ಕಾಂಗ್ರೆಸ್‌ನಿಂದ ಸೌಮ್ಯಾ ರೆಡ್ಡಿ, ಬಿಜೆಪಿಯಿಂದ ವಿಜಯ್‌ ಕುಮಾರ್‌ ಸಹೋದರ ಬಿ.ಎನ್‌.ಪ್ರಾಹ್ಲಾದ್‌ ಹಾಗೂ ಜೆಡಿಎಸ್‌ನಿಂದ ಕಾಳೇಗೌಡ ಕಣದಲ್ಲಿದ್ದಾರೆ. ಇಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಉಂಟಾಗುವ ನಿರೀಕ್ಷೆಯಿದೆ. ಬಾಕಿ ಉಳಿದಿರುವ ಇದೊಂದು ಕ್ಷೇತ್ರದ ಚುನಾವಣೆ ಮುಕ್ತಾಯಗೊಂಡರೆ 2018ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂಪೂರ್ಣಗೊಂಡಂತಾಗುತ್ತದೆ.