ಮತದಾರರಿಗೆ ಹಣ ಹಂಚಲು ಅನುಮತಿ ಕೋರಿ ಪತ್ರ: ಜಯನಗರ ಚುನಾವಣಾ ಕಣದಲ್ಲಿ ಹೊಸ ಬೆಳವಣಿಗೆ
UPDATE

ಮತದಾರರಿಗೆ ಹಣ ಹಂಚಲು ಅನುಮತಿ ಕೋರಿ ಪತ್ರ: ಜಯನಗರ ಚುನಾವಣಾ ಕಣದಲ್ಲಿ ಹೊಸ ಬೆಳವಣಿಗೆ

ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿರುವ ಪಕ್ಷೇತರ ಅಭ್ಯರ್ಥಿ, ‘ಲಂಚ ಮುಕ್ತ ಕರ್ನಾಟಕ’ ಸಂಘಟನೆಯ ನಾಯಕ ರವಿಕೃಷ್ಣಾ ರೆಡ್ಡಿ ವಿಚಿತ್ರ ಬೇಡಿಕೆಯೊಂದನ್ನು ಚುನಾವಣಾ ಆಯೋಗದ ಮುಂದಿಟ್ಟಿದ್ದಾರೆ.

ರಾಜ್ಯದಲ್ಲಿ ಬಾಕಿ ಉಳಿದಿರುವ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಕೊನೆಯ ಹಂತದ ತಿರುವುಗಳನ್ನು ತೆಗೆದುಕೊಳ್ಳುತ್ತಿದೆ. ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿರುವ ಪಕ್ಷೇತರ ಅಭ್ಯರ್ಥಿ, ‘ಲಂಚ ಮುಕ್ತ ಕರ್ನಾಟಕ’ ಸಂಘಟನೆಯ ನಾಯಕ ರವಿಕೃಷ್ಣಾ ರೆಡ್ಡಿ ವಿಚಿತ್ರ ಬೇಡಿಕೆಯೊಂದನ್ನು ಚುನಾವಣಾ ಆಯೋಗದ ಮುಂದಿಟ್ಟಿದ್ದಾರೆ.

ಮತದಾರರಿಗೆ ಒಂದು ಓಟಿಗೆ ಹಣ, ಕುಕ್ಕರ್‌, ಸೀರೆ ಹಾಗೂ ನಿಕ್ಕರ್‌ಗಳನ್ನು ಹಂಚಲು ಅನುಮತಿ ನೀಡಿ ಎಂದು ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಇದನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ ಅವರು, “ರಾಜ್ಯದಲ್ಲಿ 223 ಕ್ಷೇತ್ರಗಳಲ್ಲಿ ಚುನಾವಣೆ ಮುಗಿದಿದೆ. ಇಷ್ಟು ಕ್ಷೇತ್ರಗಳಲ್ಲಿ ರಕ್ತಪಾತಗಳಿಲ್ಲದ ಶಾಂತಿಯುತ ಮತದಾನ ನಡೆದಿದೆ. ಇದಕ್ಕಾಗಿ ಆಯೋಗವನ್ನು ಅಭಿನಂದನೆ ಸಲ್ಲಿಸುತ್ತೇನೆ. ಅದೇ ವೇಳೆ ವ್ಯಾಪಕವಾಗಿ ಹಣ, ಹೆಂಡ, ಕುಕ್ಕರ್‌, ನಿಕ್ಕರ್‌, ಸೇರೆ, ಮೂಗೂತಿಗಳನ್ನು ಹಂಚಲಾಗಿದೆ. ಇದನ್ನು ತಡೆಯುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ. ನ್ಯಾಯಸಮ್ಮತ ಹಾಗೂ ಮುಕ್ತ ಚುನಾವಣೆ ನಡೆದಿಲ್ಲ ಎಂಬುದನ್ನು ಮಾಧ್ಯಮದ ವರದಿಗಳೂ ಹೇಳಿವೆ. ಹೀಗಾಗಿ, ನಾವು ಜಯನಗರ ಮತದಾರರಿಗೆ ಒಂದು ಓಟಿಗೆ 2888 ರೂಪಾಯಿ ಅಥವಾ ಕುಕ್ಕರ್‌, ಸೇರೆ, ನಿಕ್ಕರ್‌ಗಳನ್ನು ಹಂಚಲು ತೀರ್ಮಾನಿಸಿದ್ದೇವೆ,’’ ಎಂದರು.

ಬದಲಾದ ಮನಸ್ಥಿತಿ:

ರವಿಕೃಷ್ಣಾ ರೆಡ್ಡಿ ಅಮೆರಿಕಾದಲ್ಲಿ ಎಂಜಿನಿಯರ್ ಆಗಿದ್ದವರು. ಗಾಂಧಿವಾದಿಯಾಗಿರುವ ಅವರು ರಾಜ್ಯದಲ್ಲಿ ಪಾರದರ್ಶಕ ಚುನಾವಣಾ ರಾಜಕೀಯದ ಅಭಿಲಾಷೆಯೊಂದಿಗೆ ಹೋರಾಟಕ್ಕೆ ಇಳಿದವರು. ಈ ಹಿಂದೆಯೂ ಅವರು ಚುನಾವಣೆಗಳಲ್ಲಿ ಸ್ಪರ್ಧಿಸಿ, ಅಕ್ರಮ ರಹಿತ ಪ್ರಕ್ರಿಯೆಗಳಿಗಾಗಿ ಒತ್ತಾಯಿಸಿಕೊಂಡು ಬಂದವರು. ಈ ಬಾರಿ ಜಯನಗರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅವರು ಜನರಿಂದಲೇ ಹಣ ಪಡೆಯುವ ಸಾಧ್ಯತೆಯಾದ ‘ಒಂದು ನೋಟು, ಒಂದು ಓಟು’ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅದರಿಂದ ಸುಮಾರು 11 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದ್ದರು.

ಬಿಜೆಪಿ ಅಭ್ಯರ್ಥಿ ಬಿ. ಎನ್. ವಿಜಯ್ ಕುಮಾರ್ ಅವರ ಅಕಾಲಿಕ ಸಾವಿನ ಹಿನ್ನೆಲೆಯಲ್ಲಿ ಜಯನಗರದ ಚುನಾವಣೆ ಮುಂದಕ್ಕೆ ಹೋಗಿತ್ತು. ವಿಜಯ್ ಕುಮಾರ್ ಬದಲಿಗೆ ಅವರ ಸಹೋದರ ಬಿ. ಎನ್. ಪ್ರಹ್ಲಾದ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಕಾಂಗ್ರೆಸ್‌ನಿಂದ ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಸ್ಪರ್ಧಿಸುತ್ತಿದ್ದಾರೆ. ಉಳಿದಂತೆ ಒಟ್ಟು 19 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಜೂನ್ 11ರಂದು ಇಲ್ಲಿ ಮತದಾನ ನಡೆಯಲಿದೆ.

ಹೀಗಿರುವಾಗಲೇ, ಮಂಗಳವಾರ ಮಾಧ್ಯಮಗಳ ಮೂಲಕ ರವಿಕೃಷ್ಣಾ ರೆಡ್ಡಿ ತಮ್ಮ ಬದಲಾದ ಮನಸ್ಥಿತಿಯನ್ನು ಮುಂದಿಟ್ಟಿದ್ದಾರೆ. ನೇರವಾಗಿಯೇ ಮತದಾರರಿಗೆ ಹಣ ಹಾಗೂ ಇತರೆ ಆಮಿಷಗಳನ್ನು ನೀಡಲು ಅವರು ತಯಾರಿ ನಡೆಸಿದ್ದಾರೆ.

“ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ವಿಫಲವಾಗಿದೆ. ಹಣ, ಲಿಕ್ಕರ್, ಕುಕ್ಕರ್, ನಿಕ್ಕರ್, ಸೀರೆ, ಮಾಂಸ, ಮೂಗುತಿ, ಟೋಕನ್‌ಗಳನ್ನು ಇಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಎಂಬ ವಾಸ್ತವ ಆಧಾರದ ಮೇಲೆ ಇಂತಹದೊಂದು ನಿರ್ಧಾರಕ್ಕೆ ಬದಲಾಗಿದೆ,’’ ಎಂದು ರವಿ ಕೃಷ್ಣಾ ರೆಡ್ಡಿ ತಿಳಿಸಿದರು.

ಆಯೋಗಕ್ಕೆ ಗಡವು:

ಈ ನಿಟ್ಟಿನಲ್ಲಿ ರೆಡ್ಡಿ ಈಗ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ರೆಡ್ಡಿ, ಜೂನ್ 1ರೊಳಗೆ ಮತದಾರರಿಗೆ ಹಂಚಲು ಹೊರಟಿರುವ ಹಣ ಹಾಗೂ ಆಮಿಷಗಳಿಗೆ ಅನುಮತಿ ಅಥವಾ ನಿರಾಕರಣೆ ಪತ್ರ ನೀಡುವಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ಯಾವುದೇ ಪ್ರತಿಕ್ರಿಯೆ ಬಾರದಿದ್ದರೆ ‘ಮೌನವನ್ನೇ ಸಮ್ಮಿತಿ’ ಎಂದು ತಿಳಿದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಚುನಾವಣೆ ಸಮಯದಲ್ಲಿ ಮತದಾರರಿಗೆ ಹಣ ಅಥವಾ ಆಮಿಷಗಳನ್ನು ಒಡ್ಡುವುದು ಅಪರಾಧವಾಗಲಿದೆ. ಈ ಹಿನ್ನೆಲೆಯಲ್ಲಿ, ಇದೊಂದು ಪ್ರತಿಭಟನೆಯ ಅಸ್ತ್ರವಾಗಿ ಬಳಸಬಹುದೇ ಹೊರತು, ವಾಸ್ತವದಲ್ಲಿ ಬಹಿರಂಗವಾಗಿ ಹಣ ಹಂಚಲು ಅವಕಾಶ ನೀಡುವ ಸಾಧ್ಯತೆ ಇಲ್ಲ. ಆದರೆ, ರವಿಕೃಷ್ಣಾ ರೆಡ್ಡಿ ನಡೆ, ಕೇವಲ ಶಾಂತಿಯುತ ಮತದಾನ ಮಾತ್ರವಲ್ಲ, ನ್ಯಾಯಸಮ್ಮತ ಚುನಾವಣೆಯನ್ನೂ ನಡೆಸಬೇಕಾದ ಒತ್ತಡವನ್ನು ಚುನಾವಣಾ ಆಯೋಗದ ಮೇಲೆ ಹೇರಿದೆ.