ವೇದಾಂತ ಒಡೆತನದ ಸ್ಟೆರ್ಲೈಟ್‌ ಕಾರ್ಖಾನೆ ಶಾಶ್ವತವಾಗಿ ಮುಚ್ಚಲು ತಮಿಳುನಾಡು ಆದೇಶ
UPDATE

ವೇದಾಂತ ಒಡೆತನದ ಸ್ಟೆರ್ಲೈಟ್‌ ಕಾರ್ಖಾನೆ ಶಾಶ್ವತವಾಗಿ ಮುಚ್ಚಲು ತಮಿಳುನಾಡು ಆದೇಶ

ತೂತ್ತುಕುಡಿಯ ಸ್ಥಳೀಯರ ಹೋರಾಟಕ್ಕೆ ಕೊನೆಗೂ ಮಣಿದಿರುವ ತಮಿಳುನಾಡು ಸರಕಾರ ವೇದಾಂತ ಸಮೂಹದ ಸ್ಟೆರ್ಲೈಟ್‌ ತಾಮ್ರ ಕಾರ್ಖಾನೆ ಮುಚ್ಚಲು ಆದೇಶಿಸಿದೆ.

ತೂತ್ತುಕುಡಿಯ ವೇದಾಂತ ಸಮೂಹದ ಸ್ಟೆರ್ಲೈಟ್‌ ತಾಮ್ರ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚುವಂತೆ ತಮಿಳುನಾಡು ಸರಕಾರ ಸೋಮವಾರ ಆದೇಶಿಸಿದೆ.

ಸ್ಟೆರ್‌ಲೈಟ್‌ ಕಾರ್ಖಾನೆಗೆ ಬೀಗಮುದ್ರೆ ಹಾಕುವಂತೆ ತಮಿಳುನಾಡು ಸರಕಾರ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದೆ.

ಸ್ಟೆರ್‌ಲೈಟ್‌ ತಾಮ್ರ ಘಟಕದಿಂದ ಮಾಲಿನ್ಯ ಹೆಚ್ಚಾಗಿದೆ ಎಂದು ಸ್ಥಳೀಯರು ದಶಕಗಳಿಂದ ಹೋರಾಟ ನಡೆಸುತ್ತಿದ್ದರು. ಕೆಲವು ಸ್ವಯಂಸೇವಾ ಸಂಸ್ಥೆಗಳು ಘಟಕ ಮುಚ್ಚುವಂತೆ ಕೋರಿ, ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ಗೂ ಮನವಿ ಅರ್ಜಿ ಸಲ್ಲಿಸಿದ್ದವು.

Also read: ಕಾರ್ಪೋರೇಟ್ ಕಂಪನಿ ವಿರುದ್ಧ ಜನರ ಪ್ರತಿಭಟನೆ: ಪೊಲೀಸರಿಂದ ಗೋಲಿಬಾರ್

ಇತ್ತೀಚೆಗೆ ಸ್ಟೆರ್ಲೈಟ್‌ ಕಾರ್ಖಾನೆ ಮತ್ತೊಂದು ಘಟಕ ನಿರ್ಮಾಣಕ್ಕೆ ಮುಂದಾಗಿತ್ತು. ಇದರಿಂದಾಗಿ ರೊಚ್ಚಿಗೆದ್ದಿದ್ದ ಸ್ಥಳೀಯರು ಬೀದಿಗಿಳಿದು ಹೋರಾಟ ನಡೆಸಿದ್ದರು. ಮೇ 22ರಂದು ಬೀದಿಗಿಳಿದ ಹೋರಾಟರ ಸಿಟ್ಟು ಹಿಂಸಾಚಾರದ ಸ್ವರೂಪ ಪಡೆದಿತ್ತು. ಅಂದು ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ 12 ಮಂದಿ ಮೃತಪಟ್ಟಿದ್ದರು.

12 ಮಂದಿ ಸಾವಿನ ಬಳಿಕವೂ ಹೋರಾಟದ ಕಾವು ಕಡಿಮೆಯಾಗಲಿಲ್ಲ. ಮೇ 23ರಂದು ಮತ್ತೆ ಬೀದಿಗಿಳಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ಪೊಲೀಸರ ಗುಂಡೇಟಿನಿಂದ ಮೂರು ಮಂದಿ ಗಾಯಗೊಂಡಿದ್ದರು. ಈ ಪೈಕಿ ಒಬ್ಬಾತ ಸಾವನ್ನಪ್ಪಿದ್ದ.

Also read: ಹನ್ನೊಂದು ಜನರನ್ನು ಬಲಿ ಪಡೆದ ವೇದಾಂತ ಕಂಪನಿ: ಜನ ಪ್ರತಿಭಟನೆ ಸಾಗಿ ಬಂದ ಹಾದಿ

ಸೋಮವಾರ ಬೆಳಿಗ್ಗೆ ಗಾಯಾಳುಗಳನ್ನು ಭೇಟಿ ಮಾಡಿದ್ದ ತಮಿಳುನಾಡಿನ ಉಪ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ, “ಸ್ಟೆರ್ಲೈಟ್‌ ಕಾರ್ಖಾನೆಯನ್ನು ಮುಚ್ಚಬೇಕೆಂಬುದು ಹೋರಾಟಗಾರರ ಪ್ರಮುಖ ಬೇಡಿಕೆ. ಈ ಬೇಡಿಕೆಯನ್ನು ಈಡೇರಿಸಲು ಸರಕಾರ ಬದ್ಧವಾಗಿದೆ. ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲಾಗುವುದು” ಎಂದು ಹೇಳಿದ್ದರು.

ಸ್ಟೆರ್ಲೈಟ್‌ ಘಟಕ ವಿಸ್ತರಣೆಯ ವಿರುದ್ಧ ಬೀದಿಗಿಳಿದಿದ್ದ ಹೋರಾಟಗಾರರ ಮೂಲ ಆಶಯಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ. ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚುವಂತೆ ಸರಕಾರ ಆದೇಶಿಸಿದೆ. ಆದರೆ, ಈ ಆದೇಶ ಹೊರ ಬೀಳಲು 13 ಮಂದಿ ಜೀವ ತೆರಬೇಕಾಯಿತು.