ರಾಜರಾಜೇಶ್ವರಿ ನಗರ ಚುನಾವಣೆ: ಮತದಾನ ಕೇಂದ್ರಗಳ ಕಡೆ ಮುಖಮಾಡದ ಅರ್ಧದಷ್ಟು ಜನ
UPDATE

ರಾಜರಾಜೇಶ್ವರಿ ನಗರ ಚುನಾವಣೆ: ಮತದಾನ ಕೇಂದ್ರಗಳ ಕಡೆ ಮುಖಮಾಡದ ಅರ್ಧದಷ್ಟು ಜನ

ರಾಜರಾಜೇಶ್ವರಿ ನಗರದಲ್ಲಿ ಮತದಾನ ಪ್ರಕ್ರಿಯೆ ನೆರವೇರಿದ್ದು, ಇಲ್ಲಿಯೂ ಕೂಡ ಅರ್ಧದಷ್ಟು ನಾಗರಿಕರು ಮತದಾನಕ್ಕೆ ಮನಸು ಮಾಡಿಲ್ಲ. ಈವರೆಗೆ ಶೇ.50ರಷ್ಟು ಜನ ಮಾತ್ರವೇ ತಮ್ಮ ಮತಗಳನ್ನು ಚಲಾಯಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಾಕಿ ಉಳಿದಿದ್ದ ಎರಡು ಕ್ಷೇತ್ರಗಳ ಪೈಕಿ ಒಂದಾದ ರಾಜರಾಜೇಶ್ವರಿ ನಗರದಲ್ಲಿ ಇಂದು ಮತದಾನ ಪ್ರಕ್ರಿಯೆ ನಡೆದಿದೆ. ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡ ಮತದಾನದಲ್ಲಿ ಶೇ.50ರಷ್ಟು ನಾಗರೀಕರು ತಮ್ಮ  ಮತಗಳನ್ನು ಚಲಾಯಿಸಿದ್ದಾರೆ.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯ ಫ್ಲ್ಯಾಟ್‌ನಲ್ಲಿ ಮೇ 8ರಂದು 9 ಸಾವಿರಕ್ಕೂ ಹೆಚ್ಚು ಮತದಾರರ ಗುರುತಿನ ಚೀಟಿಗಳು ಹಾಗೂ ಮತದಾರರ ಪಟ್ಟಿಗಳು ಪತ್ತೆಯಾಗಿದ್ದವು. ಇದಲ್ಲದೆ ಟ್ರಕ್‌ ಒಂದರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಅವರ ಭಾವಚಿತ್ರವಿದ್ದ 95 ಲಕ್ಷ ರೂಪಾಯಿ ಮೌಲ್ಯದ ಟಿ-ಷರ್ಟ್‌ ಮತ್ತಿತರ ವಸ್ತುಗಳು ಮೇ 6ರಂದು ಪತ್ತೆಯಾಗಿದ್ದವು. ಇದನ್ನು ಚುನಾವಣಾ ಅಕ್ರಮ ಎಂದು ಪರಿಗಣಿಸಿದ್ದ ಚುನಾವಣಾ ಆಯೋಗ ಮತದಾನದ ದಿನಾಂಕವನ್ನು ಮುಂದೂಡಿತ್ತು. ಇಂದು ಆರ್‌ ಆರ್‌ ನಗರದ ಮತದಾನ ಪ್ರಕ್ರಿಯೆ ಮುಗಿದಿದೆ.

ಜಿದ್ದಿನ ಕಣವಾಗಿರುವ ರಾಜರಾಜೇಶ್ವರಿ ನಗರದಲ್ಲಿ ಒಟ್ಟು 14 ಅಭ್ಯರ್ಥಿಗಳಿದ್ದಾರೆ. ಮೂರೂ ಪ್ರಮುಖ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌ ಪಕ್ಷದಿಂದ ಮುನಿರತ್ನ, ಬಿಜೆಪಿಯಿಂದ ತುಳಸಿ ಮುನಿರಾಜು ಗೌಡ ಮತ್ತು ಜೆಡಿಎಸ್‌ನಿಂದ ಜಿ. ಎಚ್‌. ರಾಮಚಂದ್ರ ಚುನಾವಣಾ ಕಣದಲ್ಲಿದ್ದಾರೆ. ತಮ್ಮ ಡೈಲಾಗ್‌ಗಳಿಂದ ಹೆಸರು ಪಡೆದಿರುವ ನಟ ಹುಚ್ಚ ವೆಂಕಟ್‌ ಕೂಡ ಈ ಕ್ಷೇತ್ರದಿಂದ ಚುನಾವಣಾ ಕಣದಲ್ಲಿದ್ದಾರೆ.

ರಾಜರಾಜೇಶ್ವರಿ ನಗರದ ಒಟ್ಟು ಮತದಾರರ ಸಂಖ್ಯೆ 4,54,901 ಆಗಿದ್ದು, ಈ ಪೈಕಿ 2,38,015 ಪುರುಷರು ಮತ್ತು 2,16,821ಮಂದಿ ಮಹಿಳೆಯರಿದ್ದಾರೆ. 65 ಜನ ತೃತೀಯ ಲಿಂಗಿ ಮತದಾರರಿದ್ದಾರೆ. ಚುನಾವಣೆಗಾಗಿ ಒಟ್ಟು 421 ಮತಗಟ್ಟೆಗಳನ್ನು ತೆರೆಯಲಾಗಿತ್ತು.

ಬೆಳಗ್ಗೆಯಿಂದಲೂ ಸರತಿ ಸಾಲಿನಲ್ಲಿ ನಿಂತು ಜನ ಮತಚಲಾಯಿಸಿದರು. ಕೆಲವೆಡೆ ಮತದಾನ ಪ್ರಕ್ರಿಯೆ ನೀರಸವೆನಿಸಿತ್ತು. ಆರ್ ಆರ್ ನಗರ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿರುವವರಿಗೆ ಮತದಾನದ ವ್ಯವಸ್ಥೆ ಮಾಡಲಾಗಿತ್ತು. 300ಕ್ಕೂ ಹೆಚ್ಚು ಬಿಕ್ಷುಕರು ಸುಂಕದಕಟ್ಟೆಯ ಶ್ರೀನಿವಾಸ ನಗರದಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು. ಪುನರ್ವಸತಿ ಕೇಂದ್ರದಲ್ಲಿ 850 ಭಿಕ್ಷುಕರಿದ್ದು, ಅವರಲ್ಲಿ ಬುದ್ಧಿಮಾಂದ್ಯರನ್ನು ಹೊರತುಪಡಿಸಿ ಉಳಿದವರಿಗೆ ಮತದಾನ ಸೌಲಭ್ಯ ಕಲ್ಪಿಸಲಾಗಿತ್ತು.

ರಾಜರಾಜೇಶ್ವರಿ ನಗರ ಹಲವಾರು ಜನ ನಟ ನಟಿಯರ ವಾಸಸ್ಥಾನ. ಬಹುಪಾಲು ನಟರು ಇಂದು ಕ್ಷೇತ್ರದಲ್ಲಿ ತಮ್ಮ ಮತವನ್ನು ಚಲಾಯಿಸಿದರು. ಈ ಪೈಕಿ ನಟಿ ಅಮೂಲ್ಯ, ಮಾಳವಿಕಾ ಮತ್ತು ಅವಿನಾಶ್‌ ದಂಪತಿ, ಗಣೇಶ್‌ ಮತ್ತು ಅವರ ಪತ್ನಿ ಶಿಲ್ಪ, ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡಿರುವ ಕಾವ್ಯ ಶಾಸ್ತ್ರಿ, ಸುಚೇಂದ್ರ ಪ್ರಸಾದ್ ದಂಪತಿ ಮತ್ತಿತರರು ತಮ್ಮ ಮತ ಚಲಾಯಿಸಿದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ಗರಿಷ್ಟ ಮತದಾನವನ್ನು ಕಂಡಿತ್ತು. ಶೇ. 72ರಷ್ಟು ಜನ ತಮ್ಮ ಮತಗಳನ್ನು ಚಲಾಯಿಸಿದ್ದರು. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನ ಜನ ಮತದಾನದ ಕಡೆಗೆ ಗಮನ ಹರಿಸಿರಲಿಲ್ಲ. ಶೇ.48ರಷ್ಟು ಜನ ಮಾತ್ರ ಮನೆಯಿಂದ ಹೊರಬಂದು ತಮ್ಮ ಮತಗಳನ್ನು ಚಲಾಯಿಸಿದ್ದರು. ರಾಜರಾಜೇಶ್ವರಿ ನಗರದ ಮತದಾನ ಪ್ರಕ್ರಿಯೆಯಲ್ಲೂ ಕೂಡ ದೊಡ್ಡ ಬದಲಾವಣೆಯೇನು ಕಂಡು ಬಂದಿಲ್ಲ. ಶೇ.50ರಷ್ಟು ಜನ ಮಾತ್ರ ಮತದಾನಕ್ಕೆ ಮನಸು ಮಾಡಿದ್ದಾರೆ.

ಚುನಾವಣಾ ಅಕ್ರಮ ಬಯಲಾಗಿ ದಿನಾಂಕ ಮುಂದೂಡಲ್ಪಟ್ಟಿದ್ದರಿಂದ ಕ್ಷೇತ್ರದ ಬದಲಾಗುವ ಸಾಧ್ಯತೆಗಳಿವೆ ಎಂಬ ವಾದಗಳು ಈ ಮುಂಚೆ ಕೇಳಿಬಂದಿದ್ದವು. ಮೇ 31ರಂದು ಕ್ಷೇತ್ರದ ಫಲಿತಾಂಶ ಹೊರಬೀಳಲಿದ್ದು, ಈ ವಾದಗಳಿಗೆ ಉತ್ತರ ದೊರೆಯಲಿದೆ. ಈಗ ಜಯನಗರ ವಿಧಾನ ಸಭಾ ಕ್ಷೇತ್ರದ ಚುನಾವಣೆ ಮಾತ್ರವೇ ಬಾಕಿ ಉಳಿದಿದ್ದು, ಜೂನ್‌ 11ರಂದು ಜಯನಗರದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.