6 ವರ್ಷಗಳ ಹೋರಾಟ: ಐರ್ಲೆಂಡ್‌ನ ‘ಮಾರಕ’ ಗರ್ಭಪಾತ ಕಾಯ್ದೆ ಕೊನೆಗೂ ಅಂತ್ಯ
UPDATE

6 ವರ್ಷಗಳ ಹೋರಾಟ: ಐರ್ಲೆಂಡ್‌ನ ‘ಮಾರಕ’ ಗರ್ಭಪಾತ ಕಾಯ್ದೆ ಕೊನೆಗೂ ಅಂತ್ಯ

ಐರ್ಲೆಂಡ್‌ನ ಗರ್ಭಪಾತ ನಿಷೇಧ ಕಾಯ್ದೆಗೆ ಜನಮತ ಗಣನೆ ಅಂತ್ಯ ಹಾಡಿದೆ. ಆದರೆ, ಇದಕ್ಕಾಗಿ ಸವಿತಾ ಹಾಲಪ್ಪನವರ್‌ ಸೇರಿದಂತೆ ಅದೆಷ್ಟೋ ಹೆಣ್ಣುಮಕ್ಕಳು ಸಾವಿನಂಥ ದುಬಾರಿ ಬೆಲೆ ತೆರಬೇಕಾಗಿ ಬಂದಿದ್ದು ದುರಂತ.

ಕರ್ನಾಟಕ ಮೂಲದ ವೈದ್ಯೆ ಡಾ. ಸವಿತಾ ಹಾಲಪ್ಪನವರ್‌ ಸಾವಿಗೆ ಕಾರಣವಾಗಿದ್ದ ಐರ್ಲೆಂಡ್‌ನ ಗರ್ಭಪಾತ ನಿಷೇಧದ ಕಾನೂನು ಕೊನೆಗೂ ರದ್ದಾಗಿದೆ. ಶನಿವಾರ ಐರ್ಲೆಂಡ್‌ನಲ್ಲಿ ನಡೆದ ಜನಮತ ಗಣನೆಯಲ್ಲಿ ಗರ್ಭಪಾತ ನಿಷೇಧದ 8ನೇ ತಿದ್ದುಪಡಿ ರದ್ದುಪಡಿಸಲು ಶೇಕಡ 68ರಷ್ಟು ಜನ ಮತ ನೀಡಿದ್ದಾರೆ.

ಗರ್ಭದಲ್ಲಿರುವ ಭ್ರೂಣಕ್ಕೂ ಗರ್ಭಿಣಿಗೆ ಇರುವಷ್ಟೇ ಬದುಕುವ ಹಕ್ಕಿದೆ ಎಂಬ ಐರ್ಲೆಂಡ್‌ನ 8ನೇ ತಿದ್ದುಪಡಿಯ ಕಾನೂನು ತುರ್ತು ಸಂದರ್ಭದ ವೈದ್ಯಕೀಯ ಗರ್ಭಪಾತಕ್ಕೂ ತಡೆಯಾಗಿತ್ತು. ಈ ಕಾನೂನಿನ ಕಾರಣದಿಂದಾಗಿ ಹಲವು ಗರ್ಭಿಣಿಯರು ಪ್ರಾಣ ಕಳೆದುಕೊಳ್ಳುವಂತಾಗಿತ್ತು. ಇದಕ್ಕೆ ಬಲಿಯಾದವರಲ್ಲಿ ದಂತವೈದ್ಯೆ ಡಾ. ಸವಿತಾ ಹಾಲಪ್ಪನವರ್‌ ಕೂಡಾ ಒಬ್ಬರು.

ಬೆಳಗಾವಿಯ ಅಂದಾನಪ್ಪ ಯಾಳಗಿ ಅವರ ಪುತ್ರಿ ಡಾ. ಸವಿತಾ ಹಾಲಪ್ಪನವರ್ ಐರ್ಲೆಂಡ್‌ನ ಗಾಲ್ವೆಯ ಬೋಸ್ಟನ್ ಸೈಂಟಿಫಿಕ್ ಸೆಂಟರ್‌ನಲ್ಲಿ ಎಂಜಿನಿಯರ್ ಆಗಿದ್ದ ಪ್ರವೀಣ್ ಹಾಲಪ್ಪನವರ್ ಅವರನ್ನು ಮದುವೆಯಾಗಿ ಐರ್ಲೆಂಡ್‌ಗೆ ಹೋಗಿದ್ದರು. ಗರ್ಭಿಣಿಯಾಗಿದ್ದ ಸವಿತಾ ಗರ್ಭಸ್ರಾವವಾಗಿದ್ದ ಕಾರಣ ಗರ್ಭಪಾತ ಮಾಡಿಸಿಕೊಳ್ಳಲು ಮುಂದಾಗಿದ್ದರು.

ಆದರೆ, ಗರ್ಭದಲ್ಲಿರುವ ಭ್ರೂಣದ ಹೃದಯ ಬಡಿತ ನಿಲ್ಲದೆ ಗರ್ಭಪಾತ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಗಾಲ್ವೆ ವಿವಿ ಆಸ್ಪತ್ರೆ ಗರ್ಭಪಾತ ಮಾಡಲು ನಿರಾಕರಿಸಿತ್ತು. ತೀವ್ರ ರಕ್ತಸ್ರಾವದಿಂದಾದ ‘ಸೆಪ್ಟಿಸೀಮಿಯಾ’ (septicaemia) ಸೋಂಕಿನಿಂದ 2012ರ ಅಕ್ಟೋಬರ್ 28ರಂದು ಸವಿತಾ ಮೃತಪಟ್ಟಿದ್ದರು.

ಸವಿತಾ ಸಾವಿನ ಬಳಿಕ 8ನೇ ತಿದ್ದುಪಡಿ ವಿರೋಧಿಸಿ ಜನಾಂದೋಲನ ಆರಂಭವಾಯಿತು. ಗರ್ಭದಲ್ಲಿರುವ ಮಗು ಅಥವಾ ತಾಯಿಗೆ ಆರೋಗ್ಯ ಸಮಸ್ಯೆ ಎದುರಾದರೆ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಹೋರಾಟಗಾರರು ಬೇಡಿಕೆ ಇಟ್ಟಿದ್ದರು. ಸವಿತಾ ಸಾವಿನ ನಂತರದ ಈ ಹೋರಾಟಕ್ಕೆ ಈಗ ಗೆಲುವು ಸಿಕ್ಕಿದೆ.

ಗರ್ಭಪಾತ ನಿಷೇಧ ಕಾನೂನಿನಿಂದಾಗಿ ಐರ್ಲೆಂಡ್‌ನಿಂದ ಸಾವಿರಾರು ಗರ್ಭಿಣಿಯರು ಪ್ರತಿ ವರ್ಷ ಇಂಗ್ಲೆಂಡ್‌ಗೆ ಹೋಗಿ ಗರ್ಭಪಾತ ಮಾಡಿಸಿಕೊಂಡು ಬರುತ್ತಿದ್ದರು. ಇಂಗ್ಲೆಂಡ್‌ಗೆ ಹೋಗಿ ಗರ್ಭಪಾತ ಮಾಡಿಸಿಕೊಳ್ಳುವಷ್ಟು ಸ್ಥಿತಿವಂತರಲ್ಲದ ಅಸಹಾಯಕರು ಗರ್ಭಪಾತಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು. ಈ ಕಾನೂನಿನ ತೊಡಕಿಗೆ ಹಲವು ಗರ್ಭಿಣಿಯರು ಐರ್ಲೆಂಡ್‌ನಲ್ಲಿ ಬಲಿಯಾಗಿದ್ದಾರೆ.

ಗರ್ಭಪಾತ ನಿಷೇಧಕ್ಕೆ ಈವರೆಗೆ ಇದ್ದ ಕಾನೂನು ಜನವಿರೋಧದಿಂದಾಗಿ ಅಂತ್ಯ ಕಂಡಿದೆ. ಗರ್ಭಪಾತ ಕುರಿತಂತೆ ಹೊಸ ಕಾನೂನು ಈ ವರ್ಷದ ಕೊನೆಯ ವೇಳೆಗೆ ಜಾರಿಗೆ ಬರಲಿದೆ.
- ಲಿಯೊ ವರಾಡ್ಕರ್, ಐರ್ಲೆಂಡ್‌ ಪ್ರಧಾನಿ

ಏನಿದು 8ನೇ ತಿದ್ದುಪಡಿ?:

ಕ್ಯಾಥೊಲಿಕ್ ರಾಷ್ಟ್ರವಾದ ಐರ್ಲೆಂಡ್‌ನಲ್ಲಿ ಗರ್ಭಪಾತ ನಿಷೇಧಕ್ಕೆ ಶತಮಾನದಷ್ಟು ಹಿಂದಿನಿಂದಲೂ ಕಾನೂನಿನ ತೊಡಕಿತ್ತು. ಐರ್ಲೆಂಡ್‌ನ 1861ರ ಕಾಯ್ದೆಯ 58 ಮತ್ತು 59ನೇ ಸೆಕ್ಷನ್‌ಗಳ ಪ್ರಕಾರ ಗರ್ಭಪಾತ ನಿಷಿದ್ಧವಾಗಿತ್ತು. ಗರ್ಭಿಣಿ ಖುದ್ದಾಗಿ ಅಥವಾ ಔಷಧಗಳ ಮೂಲಕ ಗರ್ಭಪಾತ ಮಾಡಿಸಿಕೊಳ್ಳುವಂತಿರಲಿಲ್ಲ.

ಆದರೆ, ಗರ್ಭಪಾತಕ್ಕೆ ಸಂಬಂಧಿಸಿದಂತೆ ಐರ್ಲೆಂಡ್‌ನಲ್ಲಿ ಪರ- ವಿರೋಧ ಚರ್ಚೆಗಳು ನಡೆಯುತ್ತಲೇ ಬಂದಿದ್ದವು. 1983ರ ಸೆಪ್ಟೆಂಬರ್‌ 7ರಂದು ಗರ್ಭಪಾತಕ್ಕೆ ಸಂಬಂಧಿಸಿದಂತೆ ದೇಶದ ಸಂವಿಧಾನಕ್ಕೆ ತಿದ್ದುಪಡಿ ತರುವ ವಿಚಾರಕ್ಕೆ ಜನಮತ ಗಣನೆಯ ಮತದಾನ ನಡೆದಿತ್ತು. ಅಂದು ನಡೆದಿದ್ದ ಮತದಾನದಲ್ಲಿ ಶೇಕಡ 66.90ರಷ್ಟು ಜನ, ‘ಗರ್ಭಿಣಿಗೆ ಇರುವಷ್ಟು ಬದುಕುವ ಹಕ್ಕು ಭ್ರೂಣಕ್ಕೂ ಇದೆ’ ಎಂಬ ಪರವಾಗಿ ಮತ ಚಲಾಯಿಸಿದ್ದರು.

ಇದರಿಂದಾಗಿ ಐರ್ಲೆಂಡ್‌ನ ಸಂವಿಧಾನಕ್ಕೆ 8ನೇ ತಿದ್ದುಪಡಿ ಮೂಲಕ ಗರ್ಭಪಾತ ನಿಷೇಧದ ಕಾನೂನನ್ನು ಸೇರಿಸಲಾಗಿತ್ತು. 8ನೇ ತಿದ್ದಪಡಿಯ ಪ್ರಕಾರ ಭ್ರೂಣದ ಹೃದಯ ಬಡಿತ ನಿಲ್ಲದೆ ಗರ್ಭಪಾತ ಮಾಡುವಂತಿರಲಿಲ್ಲ. ಆದರೆ, ಈ ಕಾನೂನು ತುರ್ತು ಸಂದರ್ಭದ ವೈದ್ಯಕೀಯ ಗರ್ಭಪಾತಕ್ಕೂ ಮುಳುವಾಗಿತ್ತು.

ಸವಿತಾ ಅವರಿಗೆ ಗರ್ಭಪಾತ ಮಾಡಲು ಹಿಂದೇಟು ಹಾಕಿದ್ದ ಗಾಲ್ವೆ ವಿವಿ ಆಸ್ಪತ್ರೆಯ ವೈದ್ಯರೂ ಇದೇ ಕಾರಣಕ್ಕೆ ಗರ್ಭಪಾತ ನಿರಾಕರಿಸಿದ್ದರು. “ಸವಿತಾ ಗರ್ಭದಲ್ಲಿರುವ ಭ್ರೂಣದ ಹೃದಯ ಬಡಿತ ನಿಂತಿಲ್ಲ. ಭ್ರೂಣದ ಹೃದಯ ಬಡಿತ ನಿಂತ ನಂತರವಷ್ಟೇ ಗರ್ಭಪಾತ ಮಾಡಬಹುದು” ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದರು.

“ನಾನು ಕ್ಯಾಥೋಲಿಕ್ ಅಲ್ಲ. ಐರ್ಲೆಂಡ್‌ನವಳೂ ಅಲ್ಲ. ದಯವಿಟ್ಟು ಮಗುವನ್ನು ಹೊರಗೆ ತೆಗೆದುಬಿಡಿ” ಎಂದು ಖುದ್ದು ಸವಿತಾ ಮನವಿ ಮಾಡಿದ್ದರೂ ಕ್ಯಾಥೋಲಿಕ್‌ ರಾಷ್ಟ್ರದ ಕಾನೂನಿನ ನೆಪ ಹೇಳಿ ವೈದ್ಯರು ಗರ್ಭಪಾತ ನಿರಾಕರಿಸಿದ್ದರು. ಗರ್ಭದಲ್ಲಿದ್ದ ಭ್ರೂಣ ಸಾಯುವವರೆಗೂ ಸವಿತಾ ರಕ್ತಸ್ರಾವದ ಯಾತನೆ ಅನುಭವಿಸಿದ್ದರು.

ಎರಡು ದಿನಗಳ ಕಾಲ ತೀವ್ರ ರಕ್ತಸ್ರಾವವಾಗಿದ್ದ ಸವಿತಾ ಸ್ಥಿತಿ ಆ ವೇಳೆಗೆ ಗಂಭೀರವಾಗಿತ್ತು. ಗರ್ಭದಲ್ಲಿದ್ದ ಭ್ರೂಣ ಕೂಡಾ ಸತ್ತಿತ್ತು. ಸತ್ತ ಭ್ರೂಣವನ್ನು ವೈದ್ಯರು ಹೊರತೆಗೆದರು. ಆ ಹೊತ್ತಿಗೆ ಸವಿತಾ ಸ್ಥಿತಿ ಚಿಂತಾಜನಕವಾಗಿತ್ತು. ಸವಿತಾ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ಆದರೆ, ‘ಸೆಪ್ಟಿಸೀಮಿಯಾ’ ಸೋಂಕಿನಿಂದ ಸವಿತಾ ಮೃತಪಟ್ಟರು.

ಗರ್ಭಿಣಿಯರ ಜೀವಕ್ಕೆ ಮುಳುವಾಗಿದ್ದ ಐರ್ಲೆಂಡ್‌ನ 8ನೇ ತಿದ್ದುಪಡಿಗೆ ಕೊನೆಗೂ ಅಲ್ಲಿನ ಜನರೇ ಎಳ್ಳುನೀರು ಬಿಟ್ಟಿದ್ದಾರೆ. ಈ ಬೆಳವಣಿಗೆಯ ಬಳಿಕ ಐರ್ಲೆಂಡ್‌ನಲ್ಲಿ ಶತಮಾನದಷ್ಟು ಹಿಂದಿನಿಂದಲೂ ಇದ್ದ ಮಾರಕ ಕಾನೂನೊಂದು ಅಂತ್ಯ ಕಂಡಿದೆ. ಇದಕ್ಕಾಗಿ ಸವಿತಾ ಹಾಲಪ್ಪನವರ್‌ ಸೇರಿದಂತೆ ಅದೆಷ್ಟೋ ಹೆಣ್ಣುಮಕ್ಕಳು ಸಾವಿನಂಥ ದುಬಾರಿ ಬೆಲೆ ತೆರಬೇಕಾಗಿ ಬಂದಿದ್ದು ದುರಂತ.