ಎಚ್‌ಡಿಕೆ ಸಾಲಮನ್ನಾ ಕಸರತ್ತು; ರಾಜೀನಾಮೆ ಜತೆಗೆ ಮುಲಾಜಿನ ಮಾತಾಡಿದ ಸಿಎಂ!
UPDATE

ಎಚ್‌ಡಿಕೆ ಸಾಲಮನ್ನಾ ಕಸರತ್ತು; ರಾಜೀನಾಮೆ ಜತೆಗೆ ಮುಲಾಜಿನ ಮಾತಾಡಿದ ಸಿಎಂ!

ವಿಪಕ್ಷಗಳ ಟೀಕೆಗೆ ಸಲೀಸಿನ ಸರಕಾಗಿರುವ ರೈತರ ಸಾಲಮನ್ನಾ ವಿಚಾರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಈಗ ಮಗ್ಗುಲ ಮುಳ್ಳಾಗಿದೆ. ಈ ಮಧ್ಯೆ ಕೊಟ್ಟ ಮಾತು ಉಳಿಸಿಕೊಳ್ಳುವ ಬದ್ಧತೆಯ ಬಗ್ಗೆಯೂ ಎಚ್‌ಡಿಕೆ ಮಾತನಾಡಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸಾಲಮನ್ನಾ ವಿಚಾರ ಈಗ ಮಗ್ಗುಲ ಮುಳ್ಳಾಗಿದೆ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿಕೊಂಡಿದ್ದ ಎಚ್‌.ಡಿ. ಕುಮಾರಸ್ವಾಮಿ ಈಗ ಆ ಮಾತನ್ನು ಉಳಿಸಿಕೊಳ್ಳಲು ಕಸರತ್ತಿಗೆ ಮುಂದಾಗಿದ್ದಾರೆ.

ಜೆಡಿಎಸ್‌ ಪ್ರಣಾಳಿಕೆಯಲ್ಲಿ ಹೇಳಿದಂತೆ ಸಾಲಮನ್ನಾ ಮಾಡಲು ಹಾಗೂ ಪ್ರಣಾಳಿಕೆಯ ಇತರೆ ಭರವಸೆಗಳನ್ನು ಈಡೇರಿಸಲು ತಮಗೆ ರಾಜ್ಯದ ಜನ ಬಹುಮತ ನೀಡಿಲ್ಲ ಎಂದು ಕುಮಾರಸ್ವಾಮಿ ಈ ಹಿಂದೆ ಹೇಳಿಕೊಂಡಿದ್ದರು.

“ನಾನು ಅತಂತ್ರ ರಾಜಕೀಯ ಪರಿಸ್ಥಿತಿಯ ಸಾಂದರ್ಭಿಕ ಶಿಶು” ಎಂದು ಹೇಳಿಕೊಂಡಿದ್ದ ಕುಮಾರಸ್ವಾಮಿ, ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಸಾಲಮನ್ನಾ ಮಾಡದಿದ್ದರೆ ನಾನೇ ರಾಜೀನಾಮೆ ಕೊಟ್ಟು ಹೋಗುತ್ತೇನೆ. ರಾಜೀನಾಮೆ ಕೊಡಿ ಎಂದು ಒತ್ತಡ ಹೇರಬೇಕಾದ ಅಗತ್ಯ ಇಲ್ಲ” ಎಂದಿದ್ದಾರೆ.

“ರೈತರ ವಿಚಾರದಲ್ಲಿ ನನಗೆ ಬದ್ಧತೆ ಇದೆ. ಸಾಲಮನ್ನಾ ವಿಚಾರದ ಬಗ್ಗೆ ನನಗೆ ಸ್ಪಷ್ಟತೆ ಇದೆ. ನಾನು ಅಧಿಕಾರಕ್ಕೆ ಅಂಟಿಕೊಳ್ಳುವವನಲ್ಲ. ಕೊಟ್ಟ ಮಾತನ್ನು ಈಡೇರಿಸಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ಹುದ್ದೆಗೆ ನಾನೇ ರಾಜೀನಾಮೆ ನೀಡುತ್ತೇನೆ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Also read: ಮೈತ್ರಿ ಸರಕಾರದ ಮುಂದಿದೆ ‘ಜನಪ್ರಿಯ’ ಭರವಸೆಗಳನ್ನು ಈಡೇರಿಸುವ ಸವಾಲು; ಏನವು?

ಸಾಲಮನ್ನಾ ಸಾಧಕ ಬಾಧಕಗಳ ಬಗ್ಗೆ ಉನ್ನತ ಅಧಿಕಾರಿಗಳ ಜತೆಗೆ ಸಭೆ ನಡೆಸಿರುವ ಕುಮಾರಸ್ವಾಮಿ ತಮ್ಮ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸಾಲಮನ್ನಾ ವಿಚಾರದಲ್ಲಿ ಹೇಳಿದಂತೆ ನಡೆದುಕೊಳ್ಳದಿದ್ದರೆ ಸೋಮವಾರ ಕರ್ನಾಟಕ ಬಂದ್ ನಡೆಸುವುದಾಗಿ ವಿಪಕ್ಷ ನಾಯಕ ಬಿ,ಎಸ್‌. ಯಡಿಯೂರಪ್ಪ ಬುಧವಾರ ಸದನದಲ್ಲೇ ಸವಾಲು ಹಾಕಿದ್ದರು.

ಒಂದು ಕಡೆ ಜನರಿಗೆ ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಿಸುವುದು, ಮತ್ತೊಂದೆಡೆ ವಿಪಕ್ಷ ಸದಸ್ಯರ ಬಾಯಿ ಮುಚ್ಚಿಸುವುದು ಸದ್ಯ ಕುಮಾರಸ್ವಾಮಿ ಮುಂದಿರುವ ಸವಾಲು. ಜೆಡಿಎಸ್‌- ಕಾಂಗ್ರೆಸ್‌ ಎರಡೂ ಪಕ್ಷಗಳ ಪ್ರಣಾಳಿಕೆಗಳಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲು ಸಮನ್ವಯ ಮಾರ್ಗದಲ್ಲಿ ಪ್ರಯತ್ನಿಸುವುದಾಗಿ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಆದರೆ, ಸಾಲಮನ್ನಾ ವಿಚಾರ ಸಮನ್ವಯದಷ್ಟು ಸರಳವಾಗಿಲ್ಲ.

ನಾನು ರಾಜ್ಯದ ಆರೂವರೆ ಕೋಟಿ ಜನರ ಮುಲಾಜಿನಲಿಲ್ಲ, ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ.
- ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

53 ಸಾವಿರ ಕೋಟಿ ಸಾಲಮನ್ನಾ ಮಾಡುವುದು ಸುಲಭದ ಮಾತಲ್ಲ ಎಂಬುದು ಅಧಿಕಾರಕ್ಕೆ ಬಂದ ಬಳಿಕ ಕುಮಾರಸ್ವಾಮಿ ಅವರಿಗೆ ಅರಿವಾಗಿರುವಂತಿದೆ. ಆದರೆ, ತಾವು ನೀಡಿದ್ದ ಭರವಸೆಯಿಂದ ಜಾರಿಕೊಳ್ಳಲು ತಮಗೆ ಬಹುಮತ ಸಿಕ್ಕಿಲ್ಲ ಎಂಬ ಜಾಣ ಕಾರಣವೂ ಅವರ ಜತೆಗಿದೆ.

ಸಾಲಮನ್ನಾ ವಿಚಾರದಲ್ಲಿ ತಮಗೆ ಸ್ಪಷ್ಟತೆ ಇದೆ ಎಂದು ಹೇಳಿಕೊಂಡಿರುವ ಕುಮಾರಸ್ವಾಮಿ ಆ ಸ್ಪಷ್ಟತೆ ಏನು ಎಂಬ ಬಗ್ಗೆ ಮೌನ ಮುರಿದಿಲ್ಲ. ಅಲ್ಲದೆ ರಾಜ್ಯದ ಜನರ ಮುಲಾಜು ಮತ್ತು ಕಾಂಗ್ರೆಸ್‌ನ ಮುಲಾಜಿನ ಮಾತನಾಡಿರುವ ಕುಮಾರಸ್ವಾಮಿ ಸಾಲಮನ್ನಾ ವಿಚಾರದಲ್ಲಿ ಕೈ ಸಡಿಲ ಮಾಡುವಷ್ಟು ಸ್ವಾತಂತ್ರ್ಯ ತಮಗೆ ಇಲ್ಲ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

Also read: ಮೋದಿಯ 15 ಲಕ್ಷ, ಎಚ್‌ಡಿಕೆ ಸಾಲಮನ್ನಾ: ಚುನಾವಣಾ ಭರವಸೆಗಳು ಮತ್ತು ವಾಸ್ತವ!

ಚುನಾವಣೆಯ ಸಂದರ್ಭದಲ್ಲಿ ನೀಡುವ ಜನಪ್ರಿಯ ಭರವಸೆಗಳು ಹಾಗೂ ವಾಸ್ತವ ಪರಿಸ್ಥಿತಿಯ ನಡುವೆ ಸಾಕಷ್ಟು ಅಂತರವಿರುತ್ತದೆ. ಆದರೆ, ದೇಶ ಹಾಗೂ ರಾಜ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಕೊಟ್ಟ ಜನಪ್ರಿಯ ಭರವಸೆಗಳನ್ನು ಈಡೇರಿಸದಿದ್ದರೆ ಮಾತು ತಪ್ಪಿದ ಅಪಖ್ಯಾತಿಗೂ ಒಳಗಾಗಬೇಕಾಗುತ್ತದೆ. ಹೀಗಾಗಿಯೇ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರೈತರ ಸಾಲಮನ್ನಾ ಮಾಡುವ ತರಾತುರಿ ತೋರಿದ್ದು.

ರೈತರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸಾಲಮನ್ನಾ ಒಂದೇ ಪರಿಹಾರವಲ್ಲ ಎಂಬುದನ್ನು ರೈತ ಹೋರಾಟಗಾರರೂ ಒಪ್ಪುತ್ತಾರೆ. ಆದರೆ, ಅಧಿಕಾರಕ್ಕೇರಿದವರು ಈ ಹಿಂದೆ ಕೊಟ್ಟಿರುವ ಭರವಸೆಗಳನ್ನು ಈಡೇರಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿಯೂ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಸಾಲಮನ್ನಾ ವಿಷಯವನ್ನೇ ಮುಂದಿಟ್ಟುಕೊಂಡು ಸರಕಾರವನ್ನು ಹಣಿಯಲು ಈಗಾಗಲೇ ಯಡಿಯೂರಪ್ಪ ಹಸಿರು ಶಾಲು ಹೊದ್ದು ಸಜ್ಜಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಲಮನ್ನಾ ವಿಚಾರಕ್ಕೆ ಕಾಂಗ್ರೆಸ್‌ನಿಂದ ಯಾವ ರೀತಿಯ ಸ್ಪಂದನೆ ಸಿಗುತ್ತದೆ ಎಂಬುದೂ ಮುಖ್ಯ.

ಆದರೆ, ಸಾಲಮನ್ನಾ ವಿಚಾರದ ಬಗ್ಗೆ ಕಾಂಗ್ರೆಸ್‌ನ ರಾಜ್ಯ- ರಾಷ್ಟ್ರೀಯ ಮುಖಂಡರು ಈವರೆಗೆ ಯಾವುದೇ ಗಟ್ಟಿ ಮಾತನ್ನು ಆಡಿಲ್ಲ. ಹೀಗಾಗಿಯೇ ಕುಮಾರಸ್ವಾಮಿ ಸಾಲಮನ್ನಾ ವಿಚಾರದಲ್ಲಿ ಕಾಂಗ್ರೆಸ್‌ ಮುಲಾಜಿನ ಮಾತನ್ನಾಡಿರುವಂತೆ ಕಾಣುತ್ತದೆ. ಅದೇನೇ ಆದರೂ ಸಾಲಮನ್ನಾ ವಿಚಾರ ಸದ್ಯದ ಮಟ್ಟಿಗೆ ಕುಮಾರಸ್ವಾಮಿ ನಿದ್ರೆ ಕೆಡಿಸಿರುವುದಂತೂ ಸುಳ್ಳಲ್ಲ.