samachara
www.samachara.com
- ಸಾಂದರ್ಭಿಕ ಚಿತ್ರ
- ಸಾಂದರ್ಭಿಕ ಚಿತ್ರ
UPDATE

ಸಮ್ಮಿಶ್ರ ಸರಕಾರಕ್ಕೆ ವಿಶ್ವಾಸ ಮತ; ಸದನದಲ್ಲಿ ಆರೋಪ- ಪ್ರತ್ಯಾರೋಪ

ಶುಕ್ರವಾರ ನಡೆದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ ಧ್ವನಿ ಮತದ ಮೂಲ ವಿಶ್ವಾಸ ಮತ ಸಿಕ್ಕಿದೆ.

Team Samachara

ಶುಕ್ರವಾರ ನಡೆದ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಮ್ಮಿಶ್ರ ಸರಕಾರದ ವಿಶ್ವಾಸ ಮತ ಸಾಬೀತು ಪಡಿಸಿದ್ದಾರೆ. ಕಾಂಗ್ರೆಸ್‌ನ 78, ಜೆಡಿಎಸ್‌ನ 37 ಮತ್ತು ಇಬ್ಬರು ಪಕ್ಷೇತರರು ಸೇರಿ ಒಟ್ಟು 117 ಶಾಸಕರ ಬಲ ಸಮ್ಮಿಶ್ರ ಸರಕಾರದ ಪರವಾಗಿ ಸದನದಲ್ಲಿ ಸಾಬೀತಾಗಿದೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಧ್ವನಿ ಮತದ ಮೂಲಕ ಕುಮಾರಸ್ವಾಮಿ ಸರಕಾರಕ್ಕೆ ವಿಶ್ವಾಸ ಮತ ನೀಡಿದ್ದಾರೆ. ವಿಶ್ವಾಸ ಮತ ಯಾಚನೆಗೆ ಕರೆಯಲಾಗಿದ್ದ ಶುಕ್ರವಾರದ ವಿಶೇಷ ಅಧಿವೇಶನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ನಡುವಿನ ಆರೋಪ- ಪ್ರತ್ಯಾರೋಪಗಳಿಗೆ ಸಾಕ್ಷಿಯಾಯಿತು.

ಮಧ್ಯಾಹ್ನ 1.44ಕ್ಕೆ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆಯ ಪ್ರಸ್ತಾವ ಮಂಡಿಸಿದರು. ಬಳಿಕ ಒಂದು ಗಂಟೆ ಕಾಲ ಮಾತನಾಡಿದ ಕುಮಾರಸ್ವಾಮಿ ಪ್ರತಿ ಪಕ್ಷ ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

“ನಾನೊಬ್ಬ ವಿವಾದಿತ ವ್ಯಕ್ತಿಯೇನೋ ಎಂಬ ಭಾವನೆ ನನ್ನನ್ನು ಕಾಡುತ್ತಿರುತ್ತದೆ. ಹಿಂದೆಯೂ, ಇಂದಿಗೂ ನಾವು ಅಧಿಕಾರಕ್ಕಾಗಿ ದುಂಬಾಲು ಬಿದ್ದವರಲ್ಲ. ದೇವೇಗೌಡರೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ನಾವು ಎಂದೂ ಅಧಿಕಾರ ಬಯಸಿ ಹೋದವರಲ್ಲ. ಮುಖ್ಯಮಂತ್ರಿಯಾಗುತ್ತೇನೆ ಎಂದು ಓಡಿ ಬಂದಿದ್ದೇನೆ ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ” ಎಂದರು ಕುಮಾರಸ್ವಾಮಿ.

“ಹಿಂದೆ ನಾನು ನನ್ನ ಪಕ್ಷ, ನನ್ನ ಶಾಸಕರನ್ನು ಉಳಿಸಿಕೊಳ್ಳಬೇಕಿತ್ತು. ಹೀಗಾಗಿ 2006ರಲ್ಲಿ ಬಿಜೆಪಿ ಜತೆ ಕೈ ಜೋಡಿ ಸಮ್ಮಿಶ್ರ ಸರಕಾರ ರಚಿಸಬೇಕಾದ ಸಂದರ್ಭ ಬಂದಿತ್ತು. ಈಗ ನನ್ನ ತಂದೆಗೆ ಇದ್ದ ಕಪ್ಪು ಚುಕ್ಕೆ ಅಳಿಸಲು ಅವಕಾಶ ವಿಧಿ, ದೇವರ ಆಶೀರ್ವಾದದ ಮೂಲಕ ಸಿಕ್ಕಿದೆ. ಆದರೆ, ನಾಡಿನ ಜನತೆ ನನ್ನ ಮೇಲೆ ವಿಶ್ವಾಸ ತೋರಿಲ್ಲ. ನಮಗೆ ಬಹುಮತವನ್ನು ನಾಡಿನ ಜನ ಕೊಟ್ಟಿಲ್ಲ” ಎಂದರು.

“ನಾನು ಬಿಜೆಪಿಗೆ ಅಧಿಕಾರ ಬಿಟ್ಟುಕೊಡದ ವಚನ ಭ್ರಷ್ಟ ಎಂಬ ಕೆಟ್ಟ ಹೆಸರು ನನ್ನ ಮೇಲೆ ಬಂದಿದೆ. ಆದರೆ, ನಾವು ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಿದ್ದೆ. ಬಿಜೆಪಿ ರಾಷ್ಟ್ರೀಯ ನಾಯಕರು ಯಾರೂ ನನ್ನನ್ನು ಭೇಟಿ ಮಾಡಲಿಲ್ಲ. ಬಿಜೆಪಿ ರಾಷ್ಟ್ರೀಯ ನಾಯಕರು ದೇವೇಗೌಡರನ್ನು ಭೇಟಿ ಮಾಡಿ ಅಗ್ರಿಮೆಂಟ್‌ ಎಂದು ಏನೋ ಮಾಡಿಕೊಂಡರು. ನನ್ನನ್ನು ಅಂದು ಕತ್ತಲೆಯಲ್ಲಿ ಇಡಲಾಗಿತ್ತು” ಎಂದು ಹೇಳಿದರು.

‘ಸಾಲಮನ್ನಾ ವಿಚಾರ ಬಿಜೆಪಿಯಿಂದ ಕಲಿಯಬೇಕಿಲ್ಲ’:

“ರೈತರ ಸಂಕಷ್ಟಗಳ ಬಗ್ಗೆ ಬಿಜೆಪಿಯಿಂದ ಕಲಿಯಬೇಕಿಲ್ಲ. ರೈತರ ಸಾಲಮನ್ನಾ ವಿಚಾರವನ್ನು ನಿಮ್ಮಿಂದ ಕಲಿಯುವ ಅಗತ್ಯವಿಲ್ಲ. ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ, ಅದನ್ನೇ ಮುಂದೆ ಮಾಡಿಕೊಂಡು ಟೀಕೆ ಮಾಡುವುದು ಸರಿಯಲ್ಲ. ನಮಗೆ ಸಂಪೂರ್ಣ ಬಹುಮತ ಸಿಕ್ಕಿಲ್ಲ. ಜನ ನನ್ನನ್ನು ತಿರಸ್ಕರಿಸಿದ್ದಾರೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು ರಾಜ್ಯವನ್ನು ವಿಂಗಡಣೆ ಮಾಡಬೇಡಿ. ಅಖಂಡ ಕರ್ನಾಟಕವಾಗಿ ನಮ್ಮ ನಾಡನ್ನು ನೋಡಿ. ರಾಜ್ಯದ ಎಲ್ಲಾ ಭಾಗದ ಜನರಿಗಾಗಿ ಕೆಲಸ ಮಾಡಲು ನಾವು ಅಧಿಕಾರಕ್ಕೆ ಬಂದಿದ್ದೇವೆ. 5 ವರ್ಷ ಸುಭದ್ರವಾಗಿ ಜನರಿಗಾಗಿ ಸಮ್ಮಿಶ್ರ ಸರಕಾರ ಕೆಲಸ ಮಾಡಲಿದೆ” ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

“ಎರಡೂ ಪಕ್ಷಗಳ ಪ್ರಣಾಳಿಕೆಯ ಕಾರ್ಯಕ್ರಮಗಳನ್ನು ಜಾರಿಗೆ ತರಲು ಎರಡೂ ಪಕ್ಷಗಳ ಜನಪ್ರತಿನಿಧಿಗಳು ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. ಅವಸರದಲ್ಲಿ ನಾನು ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಸಾಲ ಮನ್ನಾ ವಿಚಾರದ ಬಗ್ಗೆ ಕಾಂಗ್ರೆಸ್‌ ಜತೆಗೆ ಚರ್ಚೆ ನಡೆಸುತ್ತೇನೆ. ಅಧಿಕಾರ ಸಿಗದಿದ್ದರೆ ಪ್ರಾಣ ಕಳೆದುಕೊಳ್ಳುತ್ತೇನೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನಾನು ಹೇಳಿಲ್ಲ. ನಾನೂ ಈ ನಾಡಿನ ಜನರ ಕಷ್ಟಗಳನ್ನು ಹತ್ತಿರದಿಂದ ಕಂಡಿದ್ದೇನೆ” ಎಂದರು.

“2008ರಲ್ಲೂ ಬಿಜೆಪಿಗೆ ಬಹುಮತ ಸಿಕ್ಕಿರಲಿಲ್ಲ. ಕಾಂಗ್ರೆಸ್‌ನ ಕೆಲ ಬಂಡಾಯ ಶಾಸಕರ ಬೆಂಬಲ ಸಿಕ್ಕಿತ್ತು. ಅಂದು ಸಮ್ಮಿಶ್ರ ಸರಕಾರಕ್ಕೆ ಸೋನಿಯಾ ಗಾಂಧಿ ಸಮ್ಮತಿ ಕೊಟ್ಟಿದ್ದರೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿರಲಿಲ್ಲ. ಕಾಂಗ್ರೆಸ್‌ನವರೇ ಆಗ ಬಿಜೆಪಿಗೆ ಸರಕಾರ ರಚಿಸಲು ಅವಕಾಶ ಕೊಟ್ಟಿದ್ದರು. 2008ರಲ್ಲಿ ಅಧಿಕಾರ ಸಿಕ್ಕಾಗ ಬಿಜೆಪಿಯವರು ಏನು ಮಾಡಿದಿರಿ? ಪರ್ಸೆಂಟೇಜ್‌ ಲೆಕ್ಕಾಚಾರ ಶುರುವಾಗಿದ್ದು ಎಲ್ಲಿಂದ? ಆಪರೇಷನ್‌ ಕಮಲದ ಮೂಲಕ ಬಹುಮತ ಸಾಬೀತು ಪಡಿಸಿಕೊಂಡಿರಿ. 5 ವರ್ಷದ ಅಧಿಕಾರವನ್ನು ನೀವು ಯಾಕೆ ಸದ್ಬಳಕೆ ಮಾಡಿಕೊಳ್ಳಲಿಲ್ಲ?” ಎಂದು ಕುಮಾರಸ್ವಾಮಿ ಬಿಜೆಪಿಯನ್ನು ಪ್ರಶ್ನಿಸಿದರು.

‘ಅಕ್ಷಮ್ಯ ಅಪರಾಧ’:

ಕುಮಾರಸ್ವಾಮಿ ವಿಶ್ವಾಸ ಮತ ಯಾಚಿಸಿ ಮಾತನಾಡಿದ ಬಳಿಕ ಭಾಷಣ ಮಾಡಿದ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ, “ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ 20 ತಿಂಗಳ ಕಾಲ ನಾನು ಒಂದು ಪ್ರಶ್ನೆಯನ್ನೂ ಮಾಡಲಿಲ್ಲ. ಎಲ್ಲವನ್ನೂ ಸಹಿಸಿಕೊಂಡು ಬಂದೆ. 20 ತಿಂಗಳ ಬಳಿಕ ಅಧಿಕಾರ ಹಸ್ತಾಂತರಿಸಬೇಕಾದಾಗ ಹೊಸ ಷರತ್ತುಗಳನ್ನು ಹಾಕಿದರು. 20 ತಿಂಗಳ ಕಾಲ ಕುಮಾರಸ್ವಾಮಿ ಅವರ ಜೊತೆ ಅಧಿಕಾರ ಹಂಚಿಕೊಂಡಿದ್ದು ನನ್ನ ಜೀವನದಲ್ಲಿ ನಾನು ಮಾಡಿದ ಅಕ್ಷಮ್ಯ ಅಪರಾಧ” ಎಂದರು.

“ಕುಮಾರಸ್ವಾಮಿ ನೀವು ಜಮೀರ್‌ ಅಹಮದ್‌ಗೆ ಕೈ ಕೊಟ್ಟಿರಿ, ಬಾಲಕೃಷ್ಣಗೆ ಕೈ ಕೊಟ್ಟಿರಿ, ಚೆಲುವರಾಯಸ್ವಾಮಿಗೆ ಕೈ ಕೊಟ್ಟಿರಿ. ನಿಮ್ಮನ್ನು ನಂಬಿದವರಿಗೆಲ್ಲಾ ಕೈ ಕೊಟ್ಟಿರಿ. ಇಂಥವರನ್ನು ಮುಖ್ಯಮಂತ್ರಿ ಮಾಡಿ, ಡಿ.ಕೆ. ಶಿವಕುಮಾರ್ ಅವರೇ ಈಗ ನೀವು ಅಕ್ಷಮ್ಯ ಅಪರಾಧ ಮಾಡಿದ್ದೀರಿ. ಕುಮಾರಸ್ವಾಮಿ ಅವರ ಮುಳುಗೋ ದೋಣಿಯಲ್ಲಿ ನೀವೂ ಮುಳಗಬೇಕು ಎಂಬ ಆಸೆ ಡಿ.ಕೆ. ಶಿವಕುಮಾರ್‌ ಅವರೇ ನಿಮಗಿದ್ದರೆ ನಮ್ಮದೇನೂ ಅಭ್ಯಂತರವಿಲ್ಲ. ನಿಮ್ಮೆಲ್ಲರಿಗಿಂತ ಚೆನ್ನಾಗಿ ಕುಮಾರಸ್ವಾಮಿ ಅವರ ಬಗ್ಗೆ ನನಗೆ ಗೊತ್ತಿದೆ” ಎಂದು ಯಡಿಯೂರಪ್ಪ ಹೇಳಿದರು.

‘ಅಪ್ಪ ಮಕ್ಕಳ ವಿರುದ್ಧದ ಹೋರಾಟ’:

“ನಮ್ಮ ಹೋರಾಟ ಅಧಿಕಾರಕ್ಕಾಗಿ ಕುಣಿದು ಕುಪ್ಪಳಿಸುತ್ತಿರುವ ಅಪ್ಪ ಮಕ್ಕಳ ವಿರುದ್ಧವೇ ಹೊರತು ಕಾಂಗ್ರೆಸ್‌ ವಿರುದ್ಧ ಅಲ್ಲ. ಕುಮಾರಸ್ವಾಮಿ ಅವರೇ “ನಿಮ್ಮಪ್ಪನಿಗೆ ಬೇಜಾರಾಗಿದ್ದರೆ ನನ್ನ ಜತೆ ಯಾಕೆ ಬಂದಿರಿ. ನಾನು ಹಣಕಾಸು ಸಚಿವನಾಗಿದ್ದಾಗ ದೇವೇಗೌಡರು ಎಷ್ಟು ಪತ್ರ ಬರೆದಿದ್ದಾರೆ ಎಂಬುದಕ್ಕೆ ನನ್ನ ಬಳಿ ದಾಖಲೆ ಇದೆ. ಡಿ.ಕೆ. ಶಿವಕುಮಾರ್‌ ಅವರೇ ಜೆಡಿಎಸ್‌ನವರು ಕಾಂಗ್ರೆಸ್‌ ಎಂಬ ಹೆಸರನ್ನು ಇನ್ನು ಸ್ವಲ್ಪ ದಿನಗಳಲ್ಲಿ ಇಲ್ಲವಾಗಿಸದಿದ್ದರೆ ಯಡಿಯೂರಪ್ಪ ಎಂದು ನನ್ನನ್ನು ಕರೆಯಬೇಡಿ. ದುರ್ಯೋಧನ ಕುಮಾರಸ್ವಾಮಿ ಅವರ ಮನೆದೇವರಾಗಿರಬೇಕು. ವಿನಾಶಕೋರನ ಬಾಯಲ್ಲಿ ವಿಕಾಸದ ಮಾತು ಕೇಳಬೇಕಾದ ಪರಿಸ್ಥಿತಿ ಬಂದಿದೆ” ಎಂದರು ಬಿಎಸ್‌ವೈ.

“ಕುಮಾರಸ್ವಾಮಿ ನೇತೃತ್ವದ ಈ ಸರಕಾರಕ್ಕೆ ಹಿಂದೆ ಗೊತ್ತಿಲ್ಲ, ಮುಂದೆ ಗೊತ್ತಿಲ್ಲ. ಇದು ದಿನಗೂಲಿ ಸರಕಾರ. ಈ ಸರಕಾರವನ್ನು ನೋಡಿದರೆ ಕವಿ ಗೋಪಾಲಕೃಷ್ಣ ಅಡಿಗರ, ‘ಹೆಳವನ ಹೆಗಲ ಮೇಲೆ ಕುರುಡ ಕುಂತಿದ್ದಾನೆ, ದಾರಿ ಸಾಗುವುದೆಂತೋ ನೋಡಬೇಕು’ ಎಂಬ ಸಾಲುಗಳು ನೆನಪಾಗುತ್ತವೆ” ಎಂದ ಯಡಿಯೂರಪ್ಪ, “ಕುಮಾರಸ್ವಾಮಿಯಂಥವರ ಜತೆಗೆ ಹೆಣಗುವ ಹಣೆಬರಹ ನಿಮ್ಮದು ಕಾಂಗ್ರೆಸ್‌ನವರೆ. ನಾನ್ಯಾರು ಅದನ್ನು ತಡೆಯುವುದಕ್ಕೆ? ಜೆಡಿಎಸ್‌ ಪ್ರಣಾಳಿಕೆಯಲ್ಲಿ ಹೇಳಿದಂತೆ ಸಾಲಮನ್ನಾ ಮಾಡದಿದ್ದರೆ ಸೋಮವಾರ ರಾಜ್ಯ ಬಂದ್‌ ಮಾಡುತ್ತೇವೆ” ಎಂದು ಯಡಿಯೂರಪ್ಪ ಮಾತು ಮುಗಿಸಿದ ಬಳಿಕ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು.

ಆದಾಯ ತೆರಿಗೆ (ಐಟಿ), ಜಾರಿ ನಿರ್ದೇಶನಾಲಯದ (ಇಡಿ) ಮೂಲಕ ಹೆದರಿಸಿ ಕೇಂದ್ರ ಬಿಜೆಪಿ ಸರಕಾರ ರಾಜಕಾರಣ ಮಾಡುತ್ತಿದೆ.
- ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ರಮೇಶ್‌ ಕುಮಾರ್‌ ಅವಿರೋಧ ಆಯ್ಕೆ:

ಮಧ್ಯಾಹ್ನ 12.20ರ ಸುಮಾರಿಗೆ ಕಲಾಪ ಆರಂಭವಾಯಿತು. ಹಂಗಾಮಿ ಸ್ಪೀಕರ್‌ ಕೆ.ಜಿ. ಬೋಪಯ್ಯ ನೂತನ ಸ್ಪೀಕರ್‌ ಆಯ್ಕೆಯ ಪ್ರಸ್ತಾವ ಮಂಡಿಸಿದರು. ಬಿಜೆಪಿಯ ಎಸ್‌. ಸುರೇಶ್ ಕುಮಾರ್‌ ನಾಮಪತ್ರ ಹಿಂಪಡೆದಿದ್ದ ಕಾರಣ ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ಆರ್‌. ರಮೇಶ್‌ ಕುಮಾರ್‌ ಅವರನ್ನು ನೂತನ ಸ್ಪೀಕರ್‌ ಆಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಪ್ರತಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ, ಪ್ರತಿ ಪಕ್ಷದ ಉಪ ನಾಯಕ ಗೋವಿಂದ ಕಾರಜೋಳ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ನೂತನ ಸ್ಪೀಕರ್‌ ರಮೇಶ್‌ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಕುಮಾರಸ್ವಾಮಿ ಅಭಿನಂದನೆ ಸಲ್ಲಿಸುವ ವೇಳೆ ಈ ಹಿಂದೆ ಸ್ಪೀಕರ್‌ ಆಗಿದ್ದ ವೈಕುಂಠ ಬಾಳಿಗಾ, ಕೆ.ಎಸ್‌. ನಾಗರತ್ನಮ್ಮ ಸ್ಮರಿಸಿದರು. ಅಲ್ಲದೆ, “ನಮ್ಮ ತಂದೆ ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ವೇಳೆ ನೀವೇ ಸ್ಪೀಕರ್‌ ಆಗಿದ್ದಿರಿ. ಈಗ ದೇವೇಗೌಡರ ಮಗನಾಗಿ ನಾನು ಈಗ ಮುಖ್ಯಮಂತ್ರಿ ಸ್ಥಾನದಲ್ಲಿರುವಾಗ ಮತ್ತೆ ನೀವು ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವುದು ನನ್ನ ಸುದೈವ” ಎಂದು ಕುಮಾರಸ್ವಾಮಿ ಹೇಳಿದರು.

ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, “ಆಡಳಿತ ಪಕ್ಷದ ಕಡೆಗೆ ಮಾತ್ರ ಗಮನ ಕೊಡದೆ ವಿರೋಧ ಪಕ್ಷದ ಕಡೆಗೆ ಹೆಚ್ಚು ಗಮನ ಕೊಟ್ಟು ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕೊಡಬೇಕು. ನಿಮ್ಮ ಕಾರ್ಯಕ್ಕೆ ನಮ್ಮ ಸಂಪೂರ್ಣ ಸಹಕಾರವಿರುತ್ತದೆ” ಎಂದರು.

“ವಕೀಲ ವೃತ್ತಿ ಅಭ್ಯಾಸ ಮಾಡದಿದ್ದರೂ ಕಾನೂನುಗಳ ಬಗ್ಗೆ ಉತ್ತಮ ಅರಿವಿದೆ. ಸಂವಿಧಾನದ ಬಗ್ಗೆ ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದೀರಿ. ಕಾನೂನು, ನಿಯಮಗಳ ಬಗ್ಗೆ ಜ್ಞಾನವನ್ನು ಮೈಗೂಡಿಸಿಕೊಂಡಿದ್ದೀರಿ. ವಿಧಾನಸಭೆಯಲ್ಲಿ ಬೇರೆ ಬೇರೆ ವಿಚಾರಗಳ ಬಗ್ಗೆ ಚರ್ಚೆ ಮಾಡುವುದು ಬಿಟ್ಟು ನಾಡಿನ ಜನರ ಸಮಸ್ಯೆಗಳ ಬಗ್ಗೆ, ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯಲು ಅವಕಾಶ ಸಿಗಬೇಕು” ಎಂದು ಸಿದ್ದರಾಮಯ್ಯ ಹೇಳಿದರು.