‘ಇವರನ್ನು ಮರೆತರೇನು?’: ಹಂಗಾಮಿ ಸ್ಪೀಕರ್‌ ಬೋಪಯ್ಯ ನಟೋರಿಯಸ್‌ ಹಿಸ್ಟರಿ
UPDATE

‘ಇವರನ್ನು ಮರೆತರೇನು?’: ಹಂಗಾಮಿ ಸ್ಪೀಕರ್‌ ಬೋಪಯ್ಯ ನಟೋರಿಯಸ್‌ ಹಿಸ್ಟರಿ

2011ರಲ್ಲಿ ಬಂಡಾಯ ಎದ್ದಿದ್ದ ಶಾಸಕರನ್ನು ಅನರ್ಹಗೊಳಿಸುವ ಮೂಲಕ ಬೋಪಯ್ಯ ಸುದ್ದಿಯಾಗಿದ್ದರು. ಸುಪ್ರೀಂಕೋರ್ಟ್‌ ಬೋಪಯ್ಯ ನಿರ್ಧಾರವನ್ನು ಅವಸರದ ಮತ್ತು ಸ್ವಜನ ಪಕ್ಷಪಾತದ ನಡೆ ಎಂದು ಚೀಮಾರಿ ಹಾಕಿತ್ತು.

ಕರ್ನಾಟಕ ವಿಧಾನಸಭೆಯ ಹಂಗಾಮಿ ಸ್ಪೀಕರ್‌ ಆಗಿ ಬಿಜೆಪಿ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ರಾಜ್ಯಪಾಲ ವಜೂಬಾಯ್‌ ವಾಲಾ ನೇಮಕ ಮಾಡಿದ್ದಾರೆ. ತಮಗೆ ಬೇಕಾದವರನ್ನು ಸ್ಪೀಕರ್‌ ಆಗಿ ನೇಮಿಸಿಕೊಳ್ಳುವ ಮೂಲಕ ಬಿಜೆಪಿ ಶನಿವಾರದ ಮತಯಾಚನೆಯ ರಂಗಪ್ರಯೋಗಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಸ್ಪೀಕರ್‌ ಆಗಿ ಬೋಪಯ್ಯ ನೇಮಕವನ್ನು ಪ್ರಶ್ನಿಸಿ ಕಾಂಗ್ರೆಸ್‌ ವಕೀಲರ ತಂಡ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಶನಿವಾರ ವಜಾಗೊಳಿಸಿದೆ. ಅರ್ಜಿಯನ್ನು ತುರ್ತು ವಿಚಾರಣೆಗೆ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್‌ ಪರ ವಕೀಲರು ಸುಪ್ರೀಂಕೋರ್ಟ್‌ ರಿಜಿಸ್ಟ್ರಾರ್‌ಗೆ ಮನವಿ ಸಲ್ಲಿಸಿದ್ದರು.

ಶನಿವಾರ ಬೆಳಿಗ್ಗೆ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌ನ ನ್ಯಾಯಪೀಠ, “ಈ ಹಿಂದೆ ಸದನದ ಹಿರಿಯ ಸದಸ್ಯರಲ್ಲದವರನ್ನು ಸ್ಪೀಕರ್‌ ಆಗಿ ನೇಮಿಸಿದ ಉದಾಹರಣೆಗಳಿವೆ. ಅಲ್ಲದೆ ವಿಚಾರಣೆಯನ್ನು ಮುಂದುವರಿಸಬೇಕಾದರೆ ಬೋಪಯ್ಯ ಅವರಿಗೆ ನೋಟಿಸ್‌ ಜಾರಿ ಮಾಡಬೇಕು. ಆಗ ವಿಶ್ವಾಸ ಮತಯಾಚನೆ ಪ್ರಕ್ರಿಯೆಯನ್ನೂ ಮುಂದೂಡಬೇಕಾಗುತ್ತದೆ” ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿದೆ.

ಯಾರು ಈ ಬೋಪಯ್ಯ?

ಕೊಡಗು ಗೌಡ ಕುಟುಂಬದಲ್ಲಿ 1955ರ ಅಕ್ಟೋಬರ್‌ 17ರಂದು ಜನಿಸಿದ ಬೋಪಯ್ಯ ಮೊದಲಿನಿಂದಲೂ ಆರ್‌ಎಸ್‌ಎಸ್‌, ಸಂಘ ಪರಿವಾರದ ಜತೆಗೆ ಗುರುತಿಸಿಕೊಂಡವರು. 1974ರಲ್ಲಿ ಸೋಮವಾರಪೇಟೆಯ ಗೌರ್ನಮೆಂಟ್‌ ಸೀನಿಯರ್‌ ಕಾಲೇಜಿನಲ್ಲಿ ಬಿಎಸ್‌ಸಿ ಮುಗಿಸಿದ ಬೋಪಯ್ಯ, ಬೆಂಗಳೂರಿನ ಬಿಎಂಎಸ್‌ ಕಾಲೇಜಿನಲ್ಲಿ ಕಾನೂನು ಪದವಿ ಪೂರೈಸಿ 1980ರಲ್ಲಿ ಮಡಿಕೇರಿಗೆ ಮರಳಿ ವಕೀಲಿಕೆ ಆರಂಭಿಸಿದರು.

ಕಾಲೇಜು ದಿನಗಳಲ್ಲಿ ಬೋಪಯ್ಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸದಸ್ಯರಾಗಿದ್ದರು. 1990ರಲ್ಲಿ ಬೋಪಯ್ಯ ಕೊಡಗು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು. 2004ರಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಬೋಪಯ್ಯ 2008ರಲ್ಲಿ ವಿರಾಜಪೇಟಿ ಕ್ಷೇತ್ರದಿಂದ ಮರು ಆಯ್ಕೆಯಾದರು.

ಹಂಗಾಮಿ ಸ್ಪೀಕರ್‌ ಆಗಿ ಬೋಪಯ್ಯ ಅವರನ್ನು ನೇಮಕ ಮಾಡಿರುವ ರಾಜ್ಯಪಾಲರ ಆದೇಶದ ಪ್ರತಿ
ಹಂಗಾಮಿ ಸ್ಪೀಕರ್‌ ಆಗಿ ಬೋಪಯ್ಯ ಅವರನ್ನು ನೇಮಕ ಮಾಡಿರುವ ರಾಜ್ಯಪಾಲರ ಆದೇಶದ ಪ್ರತಿ

2008ರಲ್ಲಿ ಬಿಜೆಪಿ 110 ಸ್ಥಾನಗಳನ್ನು ಪಡೆದಿದ್ದ ಸಂದರ್ಭದಲ್ಲಿ ಹಂಗಾಮಿ ಸ್ಪೀಕರ್‌ ಆಗಿದ್ದು ಇದೇ ಬೋಪಯ್ಯ. ಬಳಿಕ ಸ್ಪೀಕರ್‌ ಆಗಿ ಆಯ್ಕೆಯಾದ ಜಗದೀಶ್‌ ಶೆಟ್ಟರ್‌ ಸ್ಪೀಕರ್‌ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ 2009ರ ಡಿಸೆಂಬರ್‌ನಲ್ಲಿ ಬೋಪಯ್ಯ ಮತ್ತೆ ವಿಧಾನಸಭೆಯ ಸ್ಪೀಕರ್‌ ಆದರು.

ಬಿಜೆಪಿ ಬೋಪಯ್ಯ ಅವರನ್ನು ವಿಧಾನಸಭೆಯ ಸ್ಪೀಕರ್‌ ಆಗಿ ಮರು ಆಯ್ಕೆ ಮಾಡಿದ 2009ರ ಡಿಸೆಂಬರ್‌ 30ರಂದು ನಟ ವಿಷ್ಣುವರ್ಧನ್‌ ನಿಧನರಾಗಿದ್ದರು. ಟಿ.ಬಿ. ಜಯಚಂದ್ರ ಅವರನ್ನು ಸ್ಪೀಕರ್‌ ಹುದ್ದೆಗೆ ಅಭ್ಯರ್ಥಿಯಾಗಿಸಿದ್ದ ಕಾಂಗ್ರೆಸ್ ವಿಷ್ಣುವರ್ಧನ್‌ ನಿಧನದ ಕಾರಣಕ್ಕೆ ಸ್ಪೀಕರ್‌ ಆಯ್ಕೆಯನ್ನು ಮುಂದೂಡುವಂತೆ ಸರಕಾರಕ್ಕೆ ಮನವಿ ಮಾಡಿತ್ತು. ಆದರೆ, ಬಿಜೆಪಿ ಅದೇ ದಿನ ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ಮುಗಿಸಿ ಬೋಪಯ್ಯ ಅವರನ್ನು ಸ್ಪೀಕರ್‌ ಆಗಿ ಗೆಲ್ಲಿಸಿಕೊಂಡಿತ್ತು.

ಬಂಡಾಯ ಎದ್ದಿದ್ದ ಶಾಸಕರನ್ನು ಅನರ್ಹಗೊಳಿಸುವ ಮೂಲಕ ಬೋಪಯ್ಯ 2011ರಲ್ಲಿ ಸುದ್ದಿಯಾಗಿದ್ದರು. ಅಂದು ಹೈಕೋರ್ಟ್‌ ಕೂಡಾ ಬೋಪಯ್ಯ ನಿರ್ಧಾರವನ್ನು ಎತ್ತಿಹಿಡಿದಿತ್ತು. ಆದರೆ, ಸುಪ್ರೀಂಕೋರ್ಟ್‌ ಬೋಪಯ್ಯ ನಿರ್ಧಾರವನ್ನು ಅವಸರದ ಮತ್ತು ಸ್ವಜನ ಪಕ್ಷಪಾತದ ನಡೆ ಎಂದು ಚೀಮಾರಿ ಹಾಕಿತ್ತು.

2011ರ ಅಕ್ಟೋಬರ್‌ ತಿಂಗಳಲ್ಲಿ ಬಿಜೆಪಿಯ 11 ಮಂದಿ ಶಾಸಕರು ಪಕ್ಷೇತರ ಶಾಸಕರೊಂದಿಗೆ ಸೇರಿ ಯಡಿಯೂರಪ್ಪ ನಾಯಕತ್ವದ ವಿರುದ್ಧ ಬಂಡಾಯ ಸಾರಿ, ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ನೀಡಿದ್ದ ತಮ್ಮ ಬೆಂಬಲವನ್ನು ವಾಪಸ್‌ ತೆಗೆದುಕೊಳ್ಳುತ್ತಿರುವುದಾಗಿ ರಾಜ್ಯಪಾಲರಿಗೆ ಪತ್ರ ಸಲ್ಲಿಸಿದ್ದರು. ಆಗ ಬಿಜೆಪಿ ಸರಕಾರದ ಕೈ ಹಿಡಿದಿದ್ದು ಇದೇ ಬೋಪಯ್ಯ. ಈ ಸಮಯದಲ್ಲಿ ಗೂಳಿಹಟ್ಟಿ ಶೇಖರ್ ಹಾಕಿದ್ದ ಶರ್ಟ್ ಬಿಚ್ಚಿ, ವಿಧಾನ ಸಭೆಯ ಡಯಾಸ್ ಮೇಲೆ ನಿಂತಿದ್ದನ್ನು ಕರ್ನಾಟಕ ಜನ ಕಣ್ತುಂಬಿಕೊಂಡಿದ್ದರು.

ಹಿಂದೆ ಬಿಜೆಪಿ ಸರಕಾರ ಬೀಳುವ ಸಂದರ್ಭದಲ್ಲಿ ‘ಅನರ್ಹತೆ’ಯ ಅಸ್ತ್ರ ಪ್ರಯೋಗಿಸಿದ್ದ ಬೋಪಯ್ಯ ಅವರನ್ನೇ ಮತ್ತೆ ಬಿಜೆಪಿ ತನ್ನ ತುರ್ತು ಪರಿಸ್ಥಿತಿಯ ಹಂಗಾಮಿ ಸ್ಪೀಕರ್‌ ಆಗಿ ನೇಮಕ ಮಾಡಿಸಿಕೊಂಡಿದೆ. ಶನಿವಾರ ನಡೆಯುವ ವಿಶ್ವಾಸ ಮತಯಾಚನೆಯಲ್ಲಿ ಬೋಪಯ್ಯ ಯಾವ ಶಾಸಕರ ಮೇಲೆ ಅನರ್ಹತೆಯ ಅಸ್ತ್ರವನ್ನು ಪ್ರಯೋಗಿಸುತ್ತಾರೆ, ಬಿಜೆಪಿ ಕೃಪಾ ಪೋಷಿತ ಕಲಾಪದಲ್ಲಿ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ , ಎಂಬುದು ಸದ್ಯ ರಾಜಕೀಯ ವಲಯದಲ್ಲಿರುವ ದೊಡ್ಡ ಪ್ರಶ್ನೆ.