samachara
www.samachara.com
ಟ್ವಿಟರ್ ಪಾಲಿಗೆ ‘ಅಸಂವಿಧಾನಿಕ ಸಿಎಂ’ ಆದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ!
UPDATE

ಟ್ವಿಟರ್ ಪಾಲಿಗೆ ‘ಅಸಂವಿಧಾನಿಕ ಸಿಎಂ’ ಆದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ!

ಯಾವುದೇ ಮುಖ್ಯಮಂತ್ರಿಯೊಬ್ಬರು ಅಧಿಕಾರ ಸ್ವೀಕರಿಸಿದ ನಂತರ ಸಾಮಾನ್ಯವಾಗಿ ವ್ಯಕ್ತವಾಗುವುದು ಅಭಿನಂದನೆಗಳು. ಆದರೆ ಯಡಿಯೂರಪ್ಪ ಪಾಲಿಗೆ ಹಾಗಾಗಲಿಲ್ಲ. ಗುರುವಾರ ಟ್ವಿಟರ್‌ನಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಈ ನಿಟ್ಟಿನಲ್ಲಿ ಗಮನ ಸೆಳೆಯುವಂತಿದೆ. 

ಅತಂತ್ರವಾಗಿರುವ ಕರ್ನಾಟಕದ ಚುನಾವಣಾ ಫಲಿತಾಂಶ ಮೂರು ಪ್ರಮುಖ ಪಕ್ಷಗಳ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ರಾಜ್ಯ ಮಾತ್ರವಲ್ಲದೇ ಇಡೀ ದೇಶದ ಜನತೆ ಕರ್ನಾಟಕ ರಾಜ್ಯ ರಾಜಕಾರಣದತ್ತ ತಿರುಗಿ ನೋಡುವಂತಾಗಿದೆ. ಈ ಮಧ್ಯೆಯೇ ಗುರುವಾರ ಬೆಳಗ್ಗೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಜೆಪಿ ಪರವಾಗಿ ಬ್ಯಾಟಿಂಗ್‌ ಮಾಡುತ್ತಿರುವವರು ಎಷ್ಟು ಖುಷಿಯಾಗಿದ್ದಾರೋ, ಅದರಷ್ಟೇ ವಿರೋಧ ದೇಶದ ಮಟ್ಟದಲ್ಲಿ ಕಂಡು ಬರುತ್ತಿದೆ.

ಕರ್ನಾಟಕದ ರಾಜ್ಯಪಾಲ ವಜೂಬಾಯ್ ವಾಲಾ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಮನವಿಯನ್ನು ತಳ್ಳಿಹಾಕಿ, ಬಿಜೆಪಿ ಸರಕಾರ ರಚಿಸಲು ಕೈಜೋಡಿಸಿದ್ದಾರೆ. ಬಹುಮತವನ್ನು ಸಾಬೀತು ಪಡಿಸಲು 15 ದಿನಗಳ ಕಾಲಾವಕಾಶವನ್ನೂ ನೀಡಿದ್ದಾರೆ. ಬಿ. ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ಏರಿದ್ದಾಗಿದೆ. ಬಿಜೆಪಿ ಕಾರ್ಯಕರ್ತರ ಸಂತೋಷಕ್ಕೂ ಪಾರವಿಲ್ಲದಂತಾಗಿದೆ. ಸಧ್ಯಕ್ಕೆ ಬಿಜೆಪಿ ಮುಂದಿರುವ ದೊಡ್ಡ ಕೆಲಸ ಬಹುಮತವನ್ನು ಸಾಭೀತುಪಡಿಸುವುದು.

ಇನ್ನೇನು ಅಧಿಕಾರ ರಚಿಸಿಯೇ ಬಿಡುತ್ತೇವೆ ಎಂಬ ಹುಮ್ಮಸ್ಸಿನಲ್ಲಿದ್ದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಬಳಗದವರ ಮುಖಗಳು ಕಳೆಗುಂದಿವೆಯಾದರೂ, ಬಿಜೆಪಿ ಹೆಚ್ಚು ದಿನಗಳ ಕಾಲ ಅಧಿಕಾರದಲ್ಲಿರುವುದಿಲ್ಲ ಎಂಬ ವಿಶ್ವಾಸವನ್ನು ಇರಿಸಿಕೊಂಡಿವೆ. ಕಾಂಗ್ರೆಸ್‌ ಸ್ಥಿತಿಯೂ ಭಿನ್ನವೇನಲ್ಲ. ಈಗ ಈ ಎರಡೂ ಪಕ್ಷಗಳ ಮುಂದಿರುವ ಸವಾಲು ತಮ್ಮ ಶಾಸಕರು ಹೊರಹೋಗದಂತೆ ಕಾಯುವುದು.

ಸದ್ಯದ ರಾಜಕೀಯ ಬೆಳವಣಿಗೆಗಳ ಬೆಗೆಗಿನ ಅಸಮಾಧಾನ ನಾಡಿನ ಪ್ರಗತಿಪರ ವಲಯದಲ್ಲೂ ಕಾಣಿಸುತ್ತಿದೆ. ಬಿಜೆಪಿ ಸರಕಾರ ರಚನೆಯನ್ನು ವಿರೋಧಿಸಿ ಪತ್ರಿಕಾಗೋಷ್ಠಿಯನ್ನು ನಡೆಸಿರುವ ಪ್ರಗತಿಪರ ಚಿಂತಕರು, ರಾಜಭವನ್‌ ಚಲೋ ಹೆಸರಿನಲ್ಲಿ ಮೆರವಣಿಗೆಯನ್ನೂ ಕೂಡ ನಡೆಸಿದ್ದಾರೆ.

ಇವು ಹೊರಗೆ ಕಾಣಿಸುತ್ತಿರುವ ಬೆಳವಣಿಗೆಗಳು. ಸಾಮಾಜಿಕ ಜಾಲತಾಣಗಳಲ್ಲಿ ಐಪಿಎಲ್‌ ಪಂದ್ಯಗಳ ರೋಚಕತೆಯನ್ನೂ ಮೀರಿಸುವಂತೆ ಕರ್ನಾಟಕ ರಾಜಕೀಯದ ಸುತ್ತು ಅಭಿಪ್ರಾಯಗಳ ಹಂಚಿಕೆ ನಡೆಯುತ್ತಿದೆ. #UnconstitutionalCMYeddy ಹ್ಯಾಷ್‌ ಟ್ಯಾಗ್‌ ಮೂಲಕ ಟ್ವಿಟರಿಗರು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ವರಿಷ್ಠರ ಕಾಲೆಳೆಯುತ್ತಿದ್ದಾರೆ. ಕೆಲವು ಸ್ಯಾಂಪಲ್ಸ್ ಇಲ್ಲಿವೆ.

ಯಡಿಯೂರಪ್ಪನವರ ಪ್ರಮಾಣ ವಚನದ ಕುರಿತು ಅಣಕವಾಡಿರುವ ಟ್ವಿಟ್ಟಿಗರು, “ನಾನು ಬಹುಮತವನ್ನು ಸ್ಪಷ್ಟಪಡಿಸುವುದಾಗಿ ಕರ್ನಾಟಕದ ಜನರ ಹಣವನ್ನು ಲೂಟಿ ಮಾಡಿದ ಮೈನಿಂಗ್‌ ಮಾಫಿಯಾದ ರೆಡ್ಡಿ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ,” ಎಂದು ಯಡಿಯೂರಪ್ಪರ ಕಾಲೆಳೆದಿದ್ದಾರೆ.

ಟ್ವಿಟ್ಟಿಗರಿಗೆ ಕಾಲೆಳೆತದಿಂದ ಪ್ರಧಾನಿ ನರೇಂದ್ರ ಮೋದಿ ಕೂಡ ಹೊರತಾಗಿಲ್ಲ. ಮೋದಿ ಎಂದರೆ ‘ಮರ್ಡರರ್‌ ಆಫ್‌ ಡೆಮಾಕ್ರಟಿಕ್‌ ಇಂಡಿಯಾ’ ಎನ್ನುವ ಪೋಸ್ಟರ್‌ ಇಲ್ಲಿದೆ.

ಇವರೆಲ್ಲರೂ ಸೇರಿ ಮೋದಿಯ ಅಚ್ಚೇ ದಿನ್‌ಗಳನ್ನು ಕನ್ನಡಿಗರಿಗೆ ದಯಪಾಲಿಸುತ್ತಾರೆ ಎಂಬ ಟ್ವಿಟ್ ಇಲ್ಲಿದೆ.

2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಾದರೂ ಮ್ಯಾಜಿಕ್‌ ನಂಬರ್‌ 113 ದೊರೆತಿರಲಿಲ್ಲ. 110 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿಗೆ ಇನ್ನೂ ಮೂರು ಶಾಸಕರ ಅಗತ್ಯವಿತ್ತು. ಆಗ ನಡೆದದ್ದೇ ‘ಆಪರೇಷನ್‌ ಕಮಲ’ ಎಂಬ ಕರ್ಮಕಾಂಡ. ಕುದುರೆ ವ್ಯಾಪಾರ ನಡೆಸಿ ಬಹುಮತ ಸಾಧಿಸಿ ಸರಕಾರ ರಚಿಸಿದ ಯಡಿಯೂರಪ್ಪ, ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರಗಳ ಕಾರಣದಿಂದ 2012ರಲ್ಲಿ ಜೈಲು ಸೇರಿದ್ದರು. ಮತ್ತೊಮ್ಮೆ ಕರ್ನಾಟಕದಲ್ಲಿ ಇಂತಹ ಪರಿಸ್ಥಿತಿ ಬರಲಿದೆಯೇ ಎಂಬ ಭಾವಾರ್ಥವನ್ನು ಹೊಂದಿರುವ ಪೋಸ್ಟ್ ಇಲ್ಲಿದೆ.

ಕರ್ನಾಟಕದ ಹೆಚ್ಚಿನ ಜನರು ಬಿಜೆಪಿಗೆ ಮತ ನೀಡಿ, ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲಿಸಿ ಸರಕಾರ ರಚಿಸುವ ಅವಕಾಶವನ್ನು ನೀಡಿದ್ದಾರೆ ಎಂಬ ಬಿಜೆಪಿ ವಾದವನ್ನು ಟ್ವಿಟ್ಟಿಗರು ಅಲ್ಲಗೆಳದಿದ್ದಾರೆ.

ಕಾಂಗ್ರೆಸ್‌ ಪಕ್ಷವನ್ನು ಶೇ.38ರಷ್ಟು ಜನ ಬೆಂಬಲಿಸಿದ್ದಾರೆ. ಜೆಡಿಎಸ್‌ ಪಕ್ಷವನ್ನು ಶೇ.18.3ರಷ್ಟು ಮಂದಿ ಬೆಂಬಲಿಸಿದ್ದಾರೆ. ಎರಡನ್ನೂ ಕೂಡಿದರೆ ಶೇ.56.3ರಷ್ಟು ಬೆಂಬಲ ದೊರೆತಂತಾಗುತ್ತದೆ. ಆದರೆ ಬಿಜೆಪಿ ಗಳಿಸಿರುವುದು ಕೇವಲ ಶೇ.36.2 ಮತಗಳನ್ನಷ್ಟೇ. ಈ ಸಂಖ್ಯೆ ಕಾಂಗ್ರೆಸ್‌ ಪಕ್ಷವೊಂದೇ ಗಳಿಸಿರುವ ಶೇಕಡವಾರು ಮತಗಳಿಗಿಂತ ಕಡಿಮೆಯಿದೆ. ಹೀಗಿದ್ದಲ್ಲಿ ಜನ ಸರಕಾರ ರಚಿಸುವಂತೆ ಬಿಜೆಪಿಗೆ ಆದೇಶ ನೀಡಿದ್ದಾರೆ ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ ಎಂಬ ಭಾವಾರ್ಥವನ್ನು ಈ ಕೆಳಗಿನ ಪೋಸ್ಟ್‌ ಹೇಳುತ್ತದೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಳು ಮೈತ್ರಿ ಮಾಡಿಕೊಂಡು ಬಹುಮತ ಸೂಚಿಸಿದವು. ಆದರೆ ರಾಜ್ಯಪಾಲರು ಬಿಜೆಪಿಯವರಾಗಿದ್ದರು. ಮುಂದಿನ ಹಂತವಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸುಪ್ರಿಂ ಕೋರ್ಟ್‌ನ ಮೊರೆಹೋದವು. ಮುಖ್ಯ ನ್ಯಾಯಮೂರ್ತಿಗಳೂ ಕೂಡ ಬಿಜೆಪಿಯವರೇ ಆಗಿದ್ದರು. ಇನ್ನು ನಮಗೆ ಪ್ರಜಾಪ್ರಭುತ್ವವಿಲ್ಲ. ಬಿಜೆಪಿ ಹೊಸ ನಾಝೀ ಪಕ್ಷವಾಗಿದೆ ಎಂದಿದ್ದಾರೆ ಟ್ವಿಟ್ಟಿಗರೊಬ್ಬರು.

ಫಲಿತಾಂಶ ಸಂಪೂರ್ಣವಾಗಿ ಹೊರಬರುವ ಮೋದಲೇ ಬಿಜೆಪಿ ನಾಯಕರು ರಾಜ್ಯಪಾಲ ವಜೂಬಾಯ್‌ ವಾಲಾರನ್ನು ಭೇಟಿ ಮಾಡಿ ಬಹುಮತ ಸಾಬೀತು ಮಾಡಲು ಒಂದು ವಾರ ಅವಕಾಶ ನೀಡುವಂತೆ ಕೇಳಿದ್ದರು. ಆದರೆ ಈಗ ವಜೂಬಾಯ್‌ ವಾಲಾ ಬಿಜೆಪಿ ಎರಡು ವಾರಗಳ ಕಾಲಾವಕಾಶವನ್ನು ನೀಡಿದೆ. ಈ ಕುರಿತ ಟ್ವಿಟರ್‌ ಪೋಸ್ಟ್ ಇಲ್ಲಿದೆ.

ಬಹುಮತವನ್ನು ಸಾಧಿಸಿ ಸರಕಾರ ರಚನೆಗೆ ಅವಕಾಶ ಮಾಡಿಕೊಡುವಂತೆ ಮನವಿಯಿಟ್ಟ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟವನ್ನು ಹಿಂದಕ್ಕಿಟ್ಟು, ಬಿಜೆಪಿಗೆ ಸರಕಾರ ರಚಿಸಲು ಅನುವು ಮಾಡಿಕೊಟ್ಟ ರಾಜ್ಯಪಾಲ ವಜೂಬಾಯ್‌ ವಾಲಾರ ಕುರಿತು ಟೆಲಿಗ್ರಾಫ್‌ ಪತ್ರಿಕೆ “ವಾಹ್‌, ವಾಲಾ, ವಾಹ್‌!” ಎಂಬ ತಲೆಬರಹವನ್ನು ನೀಡಿತ್ತು. ಇದನ್ನೂ ಕೂಡ ಟ್ವಿಟ್ಟಿಗರು ಬಳಸಿಕೊಂಡಿದ್ದಾರೆ.

ಇವು ಕೇವಲ ಕೆಲವು ಝಲಕ್‌ಗಳಷ್ಟೇ. ಇವುಗಳನ್ನು ಹೊರತುಪಡಿಸಿ ಸಹಸ್ರಾರು ಪೋಸ್ಟ್‌ಗಳು ಟ್ವಿಟರ್‌ನಲ್ಲಿ ಹರಿದಾಡುತ್ತಿವೆ. ಫೇಸ್‌ಬುಕ್‌, ವಾಟ್ಸ್‌ಆಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಮುಖ್ಯಮಂತ್ರಿ ಯಡಿಯೂರಪ್ಪರ ವಿರೋಧಿ ಟ್ರೆಂಡ್‌ ಚಲಾವಣೆಯಲ್ಲಿದೆ. ಬಹುಶಃ ಯಾವುದೇ ರಾಜ್ಯದ ನೂತನ ಮುಖ್ಯಮಂತ್ರಿಗೆ ಅಭಿನಂದನೆ ಜತೆಗೆ ಇಷ್ಟೊಂದು ವಿರೋಧ ವ್ಯಕ್ತವಾಗುತ್ತಿರುವುದು ಇದು ಮೊದಲಿರಬಹುದು.