samachara
www.samachara.com
ಮತದಾನೋತ್ತರ ಸಮೀಕ್ಷೆ: ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ?
UPDATE

ಮತದಾನೋತ್ತರ ಸಮೀಕ್ಷೆ: ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ?

‘ಇಂಡಿಯಾ ಟುಡೇ- ಆಕ್ಸಿಸ್‌ ಮೈ ಇಂಡಿಯಾ’ ಸಮೀಕ್ಷೆ ಕಾಂಗ್ರೆಸ್‌ 106-118, ಬಿಜೆಪಿ 79-92, ಜೆಡಿಎಸ್‌ 22-30 ಮತ್ತು ಇತರರು 1-4 ಸ್ಥಾನ ಪಡೆಯಲಿದ್ದಾರೆ ಎಂದು ಹೇಳಿದೆ. 

samachara

samachara

ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಶನಿವಾರ ಸಂಜೆ ತೆರೆಬಿದ್ದಿದೆ. ವಿವಿಧ ಸಂಸ್ಥೆಗಳು ಹಾಗೂ ಮಾಧ್ಯಮಗಳು ನಡೆಸಿರುವ ಚುನಾವಾಣೋತ್ತರ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್‌ ಪಕ್ಷ ಸ್ಥಾನ ಗಳಿಕೆಯಲ್ಲಿ ಮುಂಚೂಣಿಯಲ್ಲಿದೆ. ಈ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್‌ ಪ್ರಥಮ, ಬಿಜೆಪಿ ದ್ವಿತೀಯ, ಜೆಡಿಎಸ್‌ ತೃತೀಯ ಸ್ಥಾನದಲ್ಲಿದೆ.

ಇಂಡಿಯಾ ಟುಡೇ- ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆಯಲ್ಲಿ ಕಾಂಗ್ರೆಸ್‌ 106-118, ಬಿಜೆಪಿ 79-92, ಜೆಡಿಎಸ್‌ 22-30 ಮತ್ತು ಇತರರು 1-4 ಸ್ಥಾನ ಪಡೆಯಲಿದ್ದಾರೆ. ಟೈಮ್ಸ್‌ ನೌ- ವಿಎಂಆರ್‌ ಸಮೀಕ್ಷೆಯಲ್ಲಿ ಸಮೀಕ್ಷೆಯಲ್ಲಿ ಕಾಂಗ್ರೆಸ್‌ 90-103, ಬಿಜೆಪಿ 80-93, ಜೆಡಿಎಸ್‌ 31-39 ಮತ್ತು ಇತರರು 2-4 ಸ್ಥಾನ ಗಳಿಸಲಿದ್ದಾರೆ.

ಇಂಡಿಯಾ ಟುಡೇ ಸಮೀಕ್ಷೆ
ಇಂಡಿಯಾ ಟುಡೇ ಸಮೀಕ್ಷೆ
ಟೈಮ್ಸ್‌ ನೌ ಸಮೀಕ್ಷೆ

ಟೈಮ್ಸ್‌ ನೌ ಸಮೀಕ್ಷೆ

ಇಷ್ಟು ದಿನ ಪ್ರಚಾರ ಸಭೆ, ಆರೋಪ – ಪ್ರತ್ಯಾರೋಪಗಳಲ್ಲಿ ನಿರತರಾಗಿದ್ದ ರಾಜಕೀಯ ಮುಖಂಡರ ಗಮನವೆಲ್ಲಾ ಸದ್ಯ ಮತಯಂತ್ರಗಳ ಮೇಲಿದೆ. ಕರ್ನಾಟಕದ ಮತದಾರ ಪ್ರಭು ಯಾರ ಕೈ ಹಿಡಿದಿದ್ದಾನೆ ಎಂಬುದು ಮಂಗಳವಾರ ಬಹಿರಂಗವಾಗಲಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಕಣದಲ್ಲಿರುವ 2,655 ಅಭ್ಯರ್ಥಿಗಳ ಪೈಕಿ ಶಾಸಕತ್ವ ಪಡೆಯುವ 222 ಮಂದಿ ಯಾರು ಎಂಬ ಪ್ರಶ್ನೆಗೆ ಮಂಗಳವಾರ ಮಧ್ಯಾಹ್ನದ ವೇಳೆಗೆ ಉತ್ತರ ಸಿಗಲಿದೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ ಚುನಾವಣಾ ಅಕ್ರಮದ ಕಾರಣದಿಂದ ರಾಜರಾಜೇಶ್ವರಿನಗರ ಹಾಗೂ ಬಿಜೆಪಿ ಅಭ್ಯರ್ಥಿ ನಿಧನದ ಕಾರಣಕ್ಕೆ ಜಯನಗರ ವಿಧಾನಸಭಾ ಕ್ಷೇತ್ರದ ಮತದಾನವನ್ನು ಮುಂದೂಡಲಾಗಿದೆ.

ಶನಿವಾರ ಸಂಜೆ 5 ಗಂಟೆಯವರೆ ಶೇಕಡ 64.35ರಷ್ಟು ಮತದಾನ ನಡೆದಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 70.23ರಷ್ಟು ಮತದಾನವಾಗಿತ್ತು.

ರಾಜ್ಯದ ಕೆಲವು ಮತಗಟ್ಟೆಗಳಲ್ಲಿ ಮತಯಂತ್ರ, ವಿವಿಪ್ಯಾಟ್ ದೋಷ ಕಾಣಿಸಿಕೊಂಡಿದೆ. ಕೆಲವು ಕಡೆಗಳಲ್ಲಿ ಚುನಾವಣೆ ಬಹಿಷ್ಕಾರದ ಘಟನೆಗಳೂ ನಡೆದಿವೆ. ತಮ್ಮ ಗ್ರಾಮಕ್ಕೆ ಪಂಚಾಯತಿ ಕಾರ್ಯಾಲಯ ಒದಗಿಸದ ಕಾರಣಕ್ಕೆ ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ತರ್ಕಸ್‌ಪೇಟೆ ಗ್ರಾಮದ ಸುಮಾರು 3,500 ಮತದಾರರು ಚುನಾವಣೆ ಬಹಿಷ್ಕರಿಸಿದ್ದಾರೆ.

ಮಾರ್ಚ್‌ 27ರಂದು ಚುನಾವಣಾ ಆಯೋಗ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋ‍ಷಣೆ ಮಾಡಿತ್ತು. ಅಂದಿನಿಂದಲೇ ಮಾದರಿ ನೀತಿ ಸಂಚಿಕೆ ಕೂಡಾ ರಾಜ್ಯದಲ್ಲಿ ಜಾರಿಯಾಗಿತ್ತು. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ರಾಜ್ಯದಲ್ಲಿ ಚುನಾವಣಾ ಕಾವು ನಿಧಾನವಾಗಿ ಏರತೊಡಗಿತ್ತು.

ದಕ್ಷಿಣ ಚುನಾವಣಾ ಯಾತ್ರೆ:

ರಾಷ್ಟ್ರಮಟ್ಟದ ನಾಯಕರು ಮೇಲಿಂದ ಮೇಲೆ ದಕ್ಷಿಣ ಯಾತ್ರೆ ನಡೆಸಿದರು. ಬಿಜೆಪಿಯಂತೂ ಕರ್ನಾಟಕದ ಮೂಲಕ ದಕ್ಷಿಣ ಭಾರತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಪಣ ತೊಟ್ಟಿತ್ತು. ಕಾಂಗ್ರೆಸ್‌ ಕೂಡಾ ತನ್ನ ಪಟ್ಟು ಸಡಿಲಿಸಲಿಲ್ಲ. ಈ ನಡುವೆ ಜೆಡಿಎಸ್‌ ಈಗಿರುವ ಸ್ಥಾನಗಳ ಜತೆಗೆ ಇನ್ನೊಂದಿಷ್ಟು ಸ್ಥಾನಗಳ ಆಸೆಯೊಂದಿಗೆ ಕಣಕ್ಕಿಳಿದಿತ್ತು.

ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವವೂ ನಡೆಯಿತು. ಒಂದು ಪಕ್ಷದ ಅಭ್ಯರ್ಥಿಗಳು ಇನ್ನೊಂದು ಪಕ್ಷಕ್ಕೆ, ಇನ್ನೊಂದು ಪಕ್ಷದ ಅಭ್ಯರ್ಥಿಗಳು ಮತ್ತೊಂದು ಪಕ್ಷಕ್ಕೆ ಪಾದ ಬೆಳೆಸುವ ಬೆಳವಣಿಗೆಗಳಿಗೂ ರಾಜ್ಯ ಸಾಕ್ಷಿಯಾಯಿತು. ಟಿಕೆಟ್‌ ಹಂಚಿಕೆಯ ವಿಚಾರಕ್ಕೆ ಎಲ್ಲಾ ಪಕ್ಷಗಳಲ್ಲೂ ಬಂಡಾಯ ನಡೆಯಿತು. ಆದರೆ, ಆ ಎಲ್ಲಾ ಬೆಳವಣಿಗೆಗಳೂ ತಹಬದಿಗೆ ಬಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಬಹಿರಂಗ ಪ್ರಚಾರಕ್ಕೆ ಮುಂದಾಗುವ ಹೊತ್ತಿಗೆ ರಾಜ್ಯದಲ್ಲಿ ಚುನಾವಣಾ ಕಣ ಲಯಕ್ಕೆ ಬಂದಿತ್ತು.

ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಕುತೂಹಲ ಮೂಡಿಸಿದ ಕ್ಷೇತ್ರಗಳು ಚಾಮುಂಡೇಶ್ವರಿ ಮತ್ತು ಬಾದಾಮಿ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಕಷ್ಟ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಉತ್ತರ ಕರ್ನಾಟಕದ ಬಾದಾಮಿಯ ಕಡೆಗೆ ಮುಖ ಮಾಡಿದರೆ, ವರುಣಾ ಕ್ಷೇತ್ರದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಬಿಜೆಪಿ ಕೊನೆ ಕ್ಷಣದಲ್ಲಿ ಹಿಂದೇಟು ಹಾಕಿತು. ಅತ್ತ ಬಾದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಖಚಿತವಾದ ಬಳಿಕ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಬಾದಾಮಿಯಿಂದಲೂ ಉಮೇದುವಾರಿಕೆ ಸಲ್ಲಿಸಿದ್ದರು.

ಮತದಾನದ ದಿನವಾದ ಶನಿವಾರ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ, ಉತ್ತರ ಕರ್ನಾಟಕದ ಹಲವೆಡೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಮಳೆಯಾಗಿದೆ. ಬೀದರ್‌, ರಾಯಚೂರು, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಬೆಂಗಳೂರಿನಲ್ಲಿ ಸಂಜೆಯವರೆಗೂ ಮಳೆಯಾಗಲೇ ಇಲ್ಲ.

ಚುನಾವಣೋತ್ತರ ಸಮೀಕ್ಷೆ ಸಹಜವಾಗಿಯೇ ಕಾಂಗ್ರೆಸ್‌ ಪಾಳಯದಲ್ಲಿ ಸಂತಸ ಮೂಡಿಸಲಿದೆ. ಆದರೆ, ಈ ಸಮೀಕ್ಷೆಗಳೇ ಅಂತಿಮ ಫಲಿತಾಂಶವಲ್ಲ. ಅಸಲಿ ಫಲಿತಾಂಶಕ್ಕಾಗಿ ಮಂಗಳವಾರದವರೆಗೂ ಕಾಯುವುದು ಅನಿವಾರ್ಯ.