- ಸಾಂದರ್ಭಿಕ ಚಿತ್ರ
UPDATE

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಈ ಬಾರಿಯೂ ವಿದ್ಯಾರ್ಥಿನಿಯರದ್ದೇ ಮೇಲುಗೈ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2017-18ನೇ ಸಾಲಿನ ಎಸ್ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಬಿಡುಗಡೆಗೊಳಿಸಿದೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮುಂದಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೋಮವಾರ 2017-18ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಬಿಡುಗಡೆಗೊಳಿಸಿದೆ. ಕರ್ನಾಕದಲ್ಲಿ ಚುನಾವಣೆ ಸನ್ನಿಹಿತವಾಗಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಶಿಕ್ಷಣ ಸಚಿವರ ಬದಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕಾರಿಗಳು ಫಲಿತಾಂಶವನ್ನು ಬಿಡುಗಡೆಗೊಳಿಸಿದ್ದಾರೆ.

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕೃತ ಜಾಲತಾಣ – kseeb.kar.nic.in ನಲ್ಲಿ ಫಲಿತಾಂಶ ಲಭ್ಯವಿದೆ. Results.nic.in ಮತ್ತು examaresults.net ಜಾಲತಾಣಗಳಲ್ಲೂ ಕೂಡ ಫಲಿತಾಂಶವನ್ನು ನೋಡಬಹುದಾಗಿದೆ. Karresults.nic.in ಮತ್ತು indiaresults.com ಜಾಲತಾಣಗಳಲ್ಲೂ ಕೂಡ ಎಸ್ಎಸ್ಎಲ್‌ಸಿ ಫಲಿತಾಂಶ ದೊರೆಯಲಿದೆ.ಇದಷ್ಟೇ ಅಲ್ಲದೇ ಮೊಬೈಲ್‌ ಆಪ್‌ಗಳಲ್ಲೂ ಕೂಡ ಫಲಿತಾಂಶ ನೋಡಬಹುದಾಗಿದೆ.

ಚುನಾವಣೆಯ ಕಾರಣದಿಂದಾಗಿ ಅವಧಿಗೂ ಮುಂಚೆಯೇ ಫಲಿತಾಂಶ ಪ್ರಕಟವಾಗಿದೆ. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಶಿಕ್ಷಣ ಇಲಾಖೆ ಕಾರ್ಯದರ್ಶಿ ಶಾಲಿನಿ ರಜನೀಶ್ ಫಲಿತಾಂಶ ಬಿಡುಗಡೆಗೊಳಿಸಿದ್ದಾರೆ.

ಉತ್ತಿರ್ಣಗೊಂಡ ವಿದ್ಯಾರ್ಥಿಗಳ ಸಂಖ್ಯೆ ಆಧಾರದ ಮೇಲೆ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಉತ್ತರ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಚಿಕ್ಕೋಡಿ ಮೂರನೇ ಸ್ಥಾನದಲ್ಲಿದೆ. ಅತೀ ಕಡಿಮೆ ಉತ್ತೀರ್ಣಗೊಂಡಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿರುವ ಯಾದಗಿರಿ ಜಿಲ್ಲೆ ಈ ವರ್ಷ ಕೊನೆಯ ಸ್ಥಾನದಲ್ಲಿ ನಿಂತಿದೆ.

ಪರೀಕ್ಷೆ ಬರೆದ 8.5 ಲಕ್ಷ ವಿದ್ಯಾರ್ಥಿಗಳಲ್ಲಿ ಶೇ.71.93ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷಕ್ಕಿಂತ ಶೇ.4ರಷ್ಟು ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಈ ಬಾರಿಯೂ ಕೂಡ ವಿದ್ಯಾರ್ಥಿನಿಯರದ್ದೇ ಮೇಲುಗೈ. ಪರೀಕ್ಷೆ ಬರೆದ ವಿದ್ಯಾರ್ಥಿನಿಯರ ಪೈಕಿ ಶೇ. 78.01ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣಗೊಂಡಿದ್ದಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ತೋರಿಸಿದ್ದು, ಪರೀಕ್ಷೆ ಬರೆದ ಗ್ರಾಮೀಣ ವಿದ್ಯಾರ್ಥಿಗಳ ಪೈಕಿ ಶೇ.74ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಈ ಬಾರಿಯ ಪರೀಕ್ಷೆಯಲ್ಲಿ ಒಟ್ಟು 8 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕಗಳನ್ನೂ ಗಳಿಸಿ ಸಾಧನೆ ಮೆರೆದಿದ್ದಾರೆ.

ಮಾರ್ಚ್ ತಿಂಗಳಲ್ಲಿ 2,817 ಪರೀಕ್ಷಾ ಕೇಂದ್ರಗಳಲ್ಲಿ 8.35 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ 51 ವಿದ್ಯಾರ್ಥಿಗಳು ಡಿಬಾರ್‌ ಆಗಿದ್ದರು. ಹಾಜಾರಾತಿ ಕಡಿಮೆಯಿದ್ದ ಕಾರಣಕ್ಕೆ 10,867 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಅವಕಾಶ ನೀಡಿರಲಿಲ್ಲ. ಪರೀಕ್ಷೆಗೆ ನೊಂದಾವಣೆಗೊಂಡಿದ್ದ ವಿದ್ಯಾರ್ಥಿಗಳಲ್ಲಿ ಶೇ.2.73ರಷ್ಟು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿತ್ತು.

ಫಲಿತಾಂಶದ ಪ್ರಿಂಟ್‌ ಔಟ್‌ ತಾತ್ಕಾಲಿಕ ಮಾರ್ಕ್ಸ್ ಕಾರ್ಡ್‌ನಂತೆ ಕೆಲಸ ಮಾಡಲಿದ್ದು, ಪದವಿ ಪೂರ್ವ ಶಿಕ್ಷಣಕ್ಕೆ ದಾಖಲಾಗಲು ಅಗತ್ಯವಾಗಿದೆ. ಉತ್ತೀರ್ಣರಾಗದ ವಿದ್ಯಾರ್ಥಿಗಳು ಜೂನ್ ತಿಂಗಳಿನಲ್ಲಿ ಪೂರಕ ಪರೀಕ್ಷೆಯನ್ನು ಬರೆಯಬಹುದಾಗಿದೆ.

1966ರಿಂದಲೂ ಕೂಡ ಎಸ್ಎಸ್‌ಎಲ್‌ಸಿ ಪರೀಕ್ಷೆ ಕರ್ನಾಟಕ ಶಿಕ್ಷಣದ ಬಹುಮುಖ್ಯ ಹಂತವಾಗಿದ್ದು, ಏಪ್ರಿಲ್‌ ತಿಂಗಳಿನಲ್ಲಿ ಸರಿ ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾ ಬಂದಿದ್ದಾರೆ. ಜೂನ್‌ ತಿಂಗಳಿನಲ್ಲಿ ಪೂರಕ ಪರೀಕ್ಷೆಗಳು ನಡೆಯುತ್ತಾ ಬಂದಿದ್ದು ಅಂದಾಜು 1.5 ಲಕ್ಷ ವಿದ್ಯಾರ್ಥಿಗಳು ಪೂರಕ ಪರೀಕ್ಷೆಯನ್ನು ಬರೆಯುತ್ತಿದ್ದಾರೆ.

ಕಳೆದ ವರ್ಷ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ ಹಿಂದಿನ ವರ್ಷಗಳಿಂತ ಶೇ. 4.82ರಷ್ಟು ಕುಸಿದಿತ್ತು. ಶೇ.67.87ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣಗೊಂಡಿದ್ದರು. ಈ ಕಾರಣಕ್ಕಾಗಿ 2017-18ನೇ ಸಾಲಿನ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡವರ ಸಂಖ್ಯೆಯನ್ನು ಹೆಚ್ಚಾಗಿಸಿಲು ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಪರಿಶ್ರಮವನ್ನು ಹಾಕಿದ್ದವು. ಸೋಮವಾರ ಎಲ್ಲಾ ಶಾಲೆಗಳ ಪ್ರಯತ್ನದ ಫಲ ಹೊರಬಂದಿದೆ. ಕುಸಿದಿದ್ದ ಎಸ್ಎಸ್ಎಲ್‌ಸಿ ಫಲಿತಾಂಶ ಮತ್ತೆ ಹೆಚ್ಚಾಗಿದೆ.