‘ನುಡಿದಂತೆ ನಡೆಯದ ಮೋದಿ’: ತಿರುಗೇಟು ನೀಡಿದ ರಾಹುಲ್ ಗಾಂಧಿ
UPDATE

‘ನುಡಿದಂತೆ ನಡೆಯದ ಮೋದಿ’: ತಿರುಗೇಟು ನೀಡಿದ ರಾಹುಲ್ ಗಾಂಧಿ

ರಾಜ್ಯ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಆರೋಪಗಳಿಗೆ ತಿರುಗೇಟು ನೀಡಲು ಕಲಬುರಗಿ ವೇದಿಕೆಯನ್ನು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಬಳಸಿಕೊಂಡರು.

ರಾಜ್ಯ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಆರೋಪಗಳಿಗೆ ತಿರುಗೇಟು ನೀಡಲು ಕಲಬುರಗಿ ವೇದಿಕೆಯನ್ನು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಬಳಸಿಕೊಂಡರು.

ಬಸವಣ್ಣ ವಚನದ ಮೂಲಕ ಮಾತು ಆರಂಭಿಸಿದ ರಾಹುಲ್ ಗಾಂಧಿ, “ಕರ್ನಾಟಕ ಬಸವಣ್ಣನವರ ವಿಚಾರಧಾರೆ ಇರುವ ನೆಲ. ಹಾಗಾಗಿ ಇಲ್ಲಿನ ಚುನಾವಣೆ ಬಿಜೆಪಿ, ಮೋದಿ, ಯಡಿಯೂರಪ್ಪ, ರೆಡ್ಡಿ ಸಹೋದರರು ಹಾಗೂ ಕಾಂಗ್ರೆಸ್, ಸಿದ್ದರಾಮಯ್ಯ, ಅವರು ಮಾಡಿದ ಕೆಲಸಗಳ ನಡುವೆ ನಡೆಯುತ್ತಿರುವ ನೇತ ಹಣಾಹಣಿ,’’ ಎಂದರು.

“ನರೇಂದ್ರ ಮೋದಿಯವರು ಬಸವಣ್ಣನವರಿಗೆ ಹೂಮಾಲೆ ಹಾಕ್ತಾರೆ. ನಮಸ್ಕರಿಸುತ್ತಾರೆ. ಆದರೆ ಬಸವಣ್ಣನವರು ಹೇಳಿದಂತೆ ಅವರು ನುಡಿದಂತೆ ನಡೆಯುತ್ತಿಲ್ಲ. ಅವರು ಆಡಿದ ಮಾತನ್ನು ಕಾರ್ಯರೂಪಕ್ಕೆ ತರಬೇಕು,” ಎನ್ನುವ ಮೂಲಕ ಎರಡು ದಿನಗಳ ಹಿಂದೆ ರಾಜ್ಯದಲ್ಲಿ ಮೋದಿ ಆಡಿದ ಮಾತುಗಳಿಗೆ ರಾಹುಲ್ ತಿರುಗೇಟು ನೀಡಿದ್ದಾರೆ.

“ದೇಶದಲ್ಲಿ ದಲಿತರು, ಹಿಂದುಳಿದವರ ಮೇಲೆ ನಿತ್ಯ ಹಲ್ಲೆ, ದಾಳಿಗಳಾಗ್ತಿವೆ. ಆದರೂ ಮೋದಿಯವರು ಇದನ್ನು ತಡೆಯುವ ಕೆಲಸವನ್ನು ಮಾಡುತ್ತಿಲ್ಲ. ಕನಿಷ್ಠ ಅದನ್ನು ವಿರೋಧಿಸಿ ಮಾತನಾಡಲ್ಲ. ಅವರು ಕೇವಲ ಭಾಷಣ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ದಲಿತರಿಗಾಗಿ ತಂದ ಯೋಜನೆಗಳಿಗೆ ಹೋಲಿಸಿದರೆ ಕಿಂಚಿತ್ ಕೆಲಸವನ್ನು ಮೋದಿ ಸರ್ಕಾರ ಮಾಡಲಾಗಿಲ್ಲ,” ಎಂದು ಹೇಳಿದರು.

“ಬಡವರು ಹಣವನ್ನು ಬ್ಯಾಂಕ್ ನಲ್ಲಿ ಹಾಕಿದರೆ ಅದು ನೇರವಾಗಿ ನೀರವ್ ಮೋದಿ ಜೇಬಿಗೆ ಹೋಗುತ್ತದೆ. ಲಲಿತ್ ಮೋದಿ, ನೀರವ್ ಮೋದಿ ಬಡವರ ಸಾವಿರಾರು ಕೋಟಿ ಹಣವನ್ನು ಹೊತ್ತೊಯ್ದರು. ಮೋದಿಯವರು ಜೈಲಿಗೆ ಹೋಗಿ ಬಂದಿದ್ದ ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಸಂಪುಟದ ನಾಲ್ಕು ಭ್ರಷ್ಟ ಸಚಿವರನ್ನು ಅಕ್ಕಪಕ್ಕ ಕೂರಿಸಿಕೊಂಡು ಭ್ರಷ್ಟಾಚಾರವನ್ನು ವಿರೋಧಿಸಿ ಮಾತನಾಡುತ್ತಾರೆ. ರೆಡ್ಡಿ ಸಹೋದರರು ಕರ್ನಾಟಕದ ನೆಲಜಲ ಕೊಳ್ಳೆ ಹೊಡೆದರು. ಗಣಿಗಾರಿಯಿಂದ ಅಕ್ರಮವಾಗಿ 35 ಸಾವಿರ ಕೋಟಿ ಸಂಪಾದಿಸಿದರು. ಇಂಥವರನ್ನು ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ನಾವು ನಂಬಬೇಕಾ ಮೋದಿಯವರೇ,” ಎಂದು ರಾಹುಲ್ ತರಾಟೆ ತೆಗೆದುಕೊಂಡರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರನ ಆಸ್ತಿ ರಾತ್ರೋರಾತ್ರಿ ನೂರಾರು ಪಟ್ಟು ಹೆಚ್ಚಾಗುತ್ತದೆ. ಅವರ ಸರ್ಕಾರದ ಪ್ರಭಾವಿ ಸಚಿವ ಪಿಯುಷ್ ಗೋಯಲ್ ಅವರು ಕಂಪನಿ ಸಂಪತ್ತು ನೂರಾರು ಪಟ್ಟು ಹೆಚ್ಚಾಗುತ್ತದೆ. ಆದರೂ ಮೋದಿ ಮಾತನಾಡುವುದಿಲ್ಲ. ವಿದೇಶ ಪ್ರವಾಸ ಮಾಡಿಕೊಂಡು ಕಾಲ ಕಳೆವ ಮೋದಿಯವರು ಬಸವಣ್ಣನವರ ವಚನದಂತೆ ನುಡಿದಂತೆ ನಡೆಯಬೇಕಾಗಿತ್ತು. ಆದರೆ ದೇಶದ ಜನರನ್ನು ನಂಬಿಸಿ ಲೂಟಿ ಮಾಡಿಬಿಟ್ಟರು ಎಂದು ಟೀಕಿಸಿದರು.

"2019ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದರೆ ಕೇವಲ 10 ದಿನಗಳಲ್ಲಿ ಸಾಲ ಮನ್ನಾ ಮಾಡ್ತೇವೆ,” ಎಂದು ಭರವಸೆ ನೀಡಿದ ರಾಹುಲ್, "ಕರ್ನಾಟಕದಲ್ಲಿ ನಾವು ಕೊಟ್ಟ ಭರವಸೆಗಳಲ್ಲಿ ಶೇ. 90ರಷ್ಟು ಈಡೇರಿಸಿದ್ದೇವೆ. ಇಲ್ಲಿ ಯಾರು ಈಗ ಹಸಿದ ಹೊಟ್ಟೆಯಲ್ಲಿ ಮಲಗುವುದಿಲ್ಲ. ಸತತವಾಗಿ ಆಡಳಿತ ಮಾಡಿಕೊಂಡು ಬಂದಿರುವ ಗುಜರಾತ್ ನಲ್ಲಿ ಇಂಥ ಉತ್ತಮ ಸ್ಥಿತಿ ಇಲ್ಲ. ಇಲ್ಲಿ ಉಚಿತ ಅಕ್ಕಿ, ಇಂದಿರಾ ಕ್ಯಾಂಟೀನ್ ಮೂಲಕ ಅಗ್ಗದ ದರದಲ್ಲಿ ಪೌಷ್ಠಿಕ ಆಹಾರ ನೀಡಲಾಗ್ತಿದೆ. ನೀವು ಮೋದಿಯವರನ್ನ ಕೇಳಿ ಬಿಜೆಪಿ ಆಡಳಿತ ಇರುವ ಯಾವುದೇ ರಾಜ್ಯದಲ್ಲಿ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡಿದ್ದಾರಾ? ಎಂದು ಪ್ರಶ್ನಿಸಿದ ರಾಹುಲ್ ರೈತರ ಸಾಲ ಭರಿಸಲು ಒಂದು ಪೈಸೆಯನ್ನೂ ಕೊಡಲಿಲ್ಲ. ಇನ್ನು ಹಸಿದವರ ಹೊಟ್ಟೆ ಹೇಗೆ ತುಂಬಿಸುತ್ತಾರೆ,” ಎಂದರು.

ಕರ್ನಾಟದಲ್ಲಿ ಕಾಂಗ್ರೆಸ್ ಸರ್ಕಾರ ಕಿಂಡರ್ ಗಾರ್ಡನ್ ನಿಂದ ಸ್ನಾತಕೋತ್ತರ ಪದವಿ ವರೆಗೂ ಉಚಿತ ಶಿಕ್ಷಣ ನೀಡುವ ಘೋಷಣೆ ಮಾಡಿದೆ. ಮೋದಿಯವರು ಬೇಟಿ ಬಚಾವ್ ಎಂದು ಘೋಷಣೆ ಕೊಟ್ಟರು. ಆದರೆ ಹೌದು ಬಿಜೆಪಿ ಶಾಸಕರಿಂದ ಬೇಟಿ ಬಚಾವ್ ಮಾಡಬೇಕಾದ ಸ್ಥಿತಿ ಇಂದು ದೇಶದಲ್ಲಿದೆ ಎಂದು ಲೇವಡಿ ಮಾಡಿದರು. ಅವರು ಹೋದ ಎಲ್ಲ ಕಡೆ ‘ಮೋದಿಯವರೇ ಹೆಣ್ಣುಮಕ್ಕಳನ್ನು ಕಾಪಾಡಿ’ ಎಂದು ಕೂಗು ಕೇಳಿ ಬಂತು. ಇಲ್ಲಿಯವರೆಗೆ ಯಾವ ಪ್ರಧಾನಿಗೂ ಇಂಥ ಅವಮಾನದ ಪ್ರಶ್ನೆಗಳು ಕೇಳಿ ಬಂದಿರಲಿಲ್ಲ. ಮೋದಿಯವರು ದೇಶದ ಮಾನವನ್ನು ಹರಾಜು ಹಾಕಿದರು ಎಂದು ರಾಹುಲ್ ಆರೋಪಿಸಿದರು.

“ಸಿದ್ದರಾಮಯ್ಯ ಅವರಿಗೆ ಒಂದು ಮತ್ಸದ್ದಿತವಿದೆ, ಅನುಭವವಿದೆ. ಅವರು ಎಂದೂ ವೈಯಕ್ತಿ ದಾಳಿ ಮಾಡಿಲ್ಲ, ಕೀಳು ಭಾಷೆ ಬಳಸಿಲ್ಲ. ಬಿಜೆಪಿಯವರಿಗೆ ಇದು ಏಕೆ ಸಾಧ್ಯವಿಲ್ಲ. ಅವರ ನನ್ನ ಮೇಲೂ ವೈಯಕ್ತಿಕ ದಾಳಿ ಮಾಡಿದ್ರು. ರಾಹಲ್ ಗೆ ಭಾಷಣ ಬರುವುದಿಲ್ಲ ಎಂದು ಗೇಲಿ ಮಾಡಿದರು. ಆದರೆ ಅವರು ಕನಿಷ್ಠ ನುಡಿದಂತೆ ನಡೆದಿದ್ದಾರೆಯೇ,” ಎಂದು ರಾಹುಲ್ ಪ್ರಶ್ನಿದರು.

ಈ ದೇಶದ ಪ್ರಧಾನಿಯ ಮೇಲೆ ನಾನು ವೈಯಕ್ತಿಕ ದಾಳಿ ಮಾಡುವುದಿಲ್ಲ. ಆದರೆ ರೈತರು, ಮಹಿಳೆಯರು, ಕೃಷಿಕರು, ಕಾರ್ಮಿಕರು, ದಲಿತರ ಪರವಾಗಿ ಪ್ರಶ್ನೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಕರ್ನಾಟಕದಿಂದಲೇ ಬಿಜೆಪಿ ಸೋಲಿನ ಆರಂಭವಾಗಿದೆ. ಮುಂದೆ ಇದು ಮಧ್ಯಪ್ರದೇಶ, ರಾಜಾಸ್ತಾನಲ್ಲೂ ಅವರ ಸೋಲು ನಿಶ್ಚಿತ, ಹಾಗೆ 2019ಕ್ಕೆ ನಾವು ಕೇಂದ್ರದಲ್ಲಿ ಸರ್ಕಾರ ರಚಿಸುವುದೂ ಗ್ಯಾರಂಟಿ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದರು.

“ಜಗತ್ತಿನ ಎಲ್ಲ ಕಡೆ ತೈಲ ಬೆಲೆ ಕುಸಿದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಕುಸಿದಿದ್ದರೂ ಭಾರತದಲ್ಲಿ ಮಾತ್ರ ಏಕೆ ಏರಿಕೆ ಆಗ್ತಿದೆ. ನರೇಂದ್ರ ಮೋದಿಯವರು ಪೆಟ್ರೋಲ್ ಬೆಲೆಯ ಲಾಭವನ್ನೂ, ತಮ್ಮ ದೇಶದ ಜನರ ಲಕ್ಷಾಂತರ ಕೋಟಿ ರೂಪಾಯಿಗಳನ್ನು ತಮ್ಮ ಉದ್ಯೋಗಪತಿಗಳಿಗೆ ನೀಡಿದರು. ರೆಡ್ಡಿ ಬ್ರದರ್ಸ್, ಯಡಿಯೂರಪ್ಪ ಕರ್ನಾಟಕದ ನೆಲಜಲಗಳನ್ನು ಲೂಟಿ ಮಾಡಿದರು ಎಂದು ವಾಗ್ದಾಳಿ ಮಾಡಿದರು. ಜೈಲಿನಲ್ಲಿದ್ದ ಭ್ರಷ್ಟವ್ಯಕ್ತಿ ಯಡಿಯೂರಪ್ಪ ಅಂತವರನ್ನು ಬಿಜೆಪಿ ಸಿಎಂ ಅಭ್ಯರ್ಥಿ ಮಾಡಿದೆ ಎಂದರೆ ಅವರ ಯೋಜನೆ ಏನಿರಬೇಕು ಹೇಳಿ,” ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ನಂತರ ಮಾತನಾಡಿದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, “ಮೋದಿಯವರೇ ನಾವು ಸ್ನಾತಕೋತ್ತರ ಪದವಿ ವರೆಗೂ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತೇವೆ. ನೀವೇನು ಕೊಡುತ್ತೀರಿ ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಹೌದ್ರಾಬಾದ್ ಕರ್ನಾಟಕಕ್ಕೆ 371ಜೆ ಜಾರಿಗೆ ತಂದ ಮೇಲೆ ಈ ಭಾಗ 30 ಸಾವಿರ ಮಂದಿಗೆ ಉದ್ಯೋಗ ಸಿಕ್ಕಿದೆ. ಅಧಿಕಾರ ಇದ್ದರೂ ಇದನ್ನು ಮಾಡಲಾಗದವರು ಈಗ ಮತ ಕೇಳುತ್ತಿರುವುದಕ್ಕೆ ನಾಚಿಕೆ ಆಗಬೇಕು,” ಎಂದು ಟೀಕಿಸಿದರು.

ಕರ್ನಾಟಕ ಸರ್ಕಾರ ತೊಗರಿಗೆ ಸಾಕಷ್ಟು ಬೆಂಬಲ ಬೆಲೆ ನೀಡಿದೆ, ಸಾಲ ಮನ್ನಾ ಮಾಡಿದ್ವಿ. ನೀವೇನು ಮಾಡಿದ್ರಿ? ನೀವು ದೊಡ್ಡ ದೊಡ್ಡ ಮಂದಿ ಬಡವರ ಹಣವನ್ನು ಹೊತ್ತು ಹೋಗುವಾಗ ಲಲಿತ್ ಮೋದಿ, ನೀರವ್ ಮೋದಿಗೆ ಸಫೋರ್ಟ್ ಮಾಡಿದ್ರಿ ಅಷ್ಟೆ ಎಂದು ಲೇವಡಿ ಮಾಡಿದರು.

ದಲಿತರಿಗೆ, ಖರ್ಗೆಗೆ ಅನ್ಯಾಯವಾಯ್ತು ಎನ್ನುತ್ತೀರಿ. ಹಾಗಿದ್ದರೆ ಸಂಸತ್ತಿನಲ್ಲಿ ನನಗೆ ಏಕೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಲಿಲ್ಲ. ಹಾಗೆ ಮಾಡಿದ್ದರೆ ನಿಮಗೆ ದಲಿತರ ಬಗ್ಗೆ ನಿಜವಾಗಿ ಕಾಳಜಿ ಇದೆ ಎನ್ನಬಹುದುದಿತ್ತು. ನೀವು ಆರೆಸೆಸ್, ಬಿಜೆಪಿಯವರ ಕಪಿಮುಷ್ಟಿಯಲ್ಲಿ ಇದ್ದೀರಿ. ನಿಮ್ಮಿಂದ ದಲಿತರು, ಹಿಂದುಳಿದವರ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ನಿಮ್ಮ ಬಳಿ ಇರೋದು ಒಂದೇ ಭಾಷಣ ಮಾಡುವುದು ಎಂದು ಲೇವಡಿ ಮಾಡಿದರು.