ಅಕ್ಷರಶಃ ಧೂಳೆಬ್ಬಿಸಿದ ಬಿರುಗಾಳಿ: ಉತ್ತರ ಭಾರತ ತತ್ತರ
UPDATE

ಅಕ್ಷರಶಃ ಧೂಳೆಬ್ಬಿಸಿದ ಬಿರುಗಾಳಿ: ಉತ್ತರ ಭಾರತ ತತ್ತರ

ಭಾರತ ಮತ್ತು ಅರೇಬಿಯ, ಪಾಕಿಸ್ತಾನದಲ್ಲಿನ ಬಿರುಗಾಳಿಗೆ ಮುಖ್ಯವಾಗಿ ಅರಬ್ಬಿ ಸಮುದ್ರದಲ್ಲಿ ಉಂಟಾಗುವ ಅತಿಯಾದ ಹವಾಮಾನ ವೈಪರೀತ್ಯ ಕಾರಣ ಎನ್ನಲಾಗಿದೆ.

ಕಳೆದ 24 ಗಂಟೆಗಳಲ್ಲಿ ಉತ್ತರ ಭಾರತದಾದ್ಯಂತ ಮರಳು ಮತ್ತು ಧೂಳಿನ ಬಿರುಗಾಳಿಗೆ ಸುಮಾರು 70 ಮಂದಿ ಸಾವಿಗೀಡಾಗಿದ್ದಾರೆ.

ಸಾವಿನ ಪ್ರಮಾಣದ ಉತ್ತರ ಪ್ರದೇಶದಲ್ಲಿ ಹೆಚ್ಚಾಗಿದೆ. ಧೂಳು ಬಿರುಗಾಳಿಯಿಂದ ರಾಜ್ಯದಲ್ಲಿ 50 ಮಂದಿ ಮೃತಪಟ್ಟಿದ್ದು, 38 ಮಂದಿ ಗಾಯಗೊಂಡಿದ್ದಾರೆ ಎಂದು ‘ಡೆಕ್ಕನ್ ಕ್ರಾನಿಕಲ್’ ವರದಿ ಮಾಡಿದೆ.

ಆಗ್ರಾ ಜಿಲ್ಲೆಯೊಂದರಲ್ಲೇ ಬರೋಬ್ಬರಿ 36 ಮಂದಿ ಸಾವಿಗೀಡಾಗಿದ್ದು, ಬಿಜ್ನೂರ್ 3, ಶಹರಾನ್ ಪುರ 2, ಬರೇಲಿ, ಮೊರಾದಾಬಾದ, ಚಿತ್ರಕೂಟ, ರಾಮ್ ಪುರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಸಾವಿನ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ.

ಬಿರುಗಾಳಿಯ ವೇಗ ಅಪಾಯದ ಮಟ್ಟವನ್ನು ಮೀರಿದ್ದು, ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿದೆ.

ಆಗ್ರಾದಲ್ಲಿ ಸಾವಿನ ಪ್ರಮಾಣ 50ಕ್ಕೂ ಹೆಚ್ಚಿರಬಹುದು ಎಂದು ಪ್ರಕೃತಿ ವಿಕೋಪ ಪರಿಹಾರ ಬೋರ್ಡ್ ನ ಮುಖ್ಯಸ್ಥ ಸಂಜಯ್ ಕುಮಾರು ಹೇಳಿದ್ದಾರೆ. ಸಾವು, ನೋವಿನ ಪ್ರಮಾಣ ಹೆಚ್ಚಾಗಿರುವ ಜಿಲ್ಲೆಯ ಸಂತ್ರಸ್ತ ಪ್ರದೇಶಗಳಿಗೆ ಅಧಿಕಾರಿಗಳು ದೌಡಾಯಿಸಿದ್ದು, ಪರಿಹಾರ ಕಾರ್ಯದಲ್ಲಿ ತೊಡಿಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸಂತ್ರಸ್ತರಿಗೆ ಅಗತ್ಯ ಮಾಹಿತಿ ಮತ್ತು ನಿರ್ದೇಶನ ನೀಡುತ್ತಿರುವ ಅಧಿಕಾರಿಗಳೂ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಈ ನಡುವೆ ಸರ್ಕಾರ ಮೃತಪಟ್ಟವರಿಗೆ ತಲಾ 4 ಲಕ್ಷ ಪರಿಹಾರ ಘೋಷಿಸಿದ್ದರೆ , ಗಾಯಾಗಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದೆ.

ರಾಜಸ್ತಾನದಲ್ಲಿ 27 ಮಂದಿ ಸಾವಿಗೀಡಾಗಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶ, ಪಂಜಾಬ್ ಗಳೂ ಬಿರುಗಾಳಿಯ ಹೊಡೆತಕ್ಕೆ ಸಿಲುಕಿವೆ ಎಎನ್ಐ ಸುದ್ದಿ ಸಂಸ್ಥೆ ತಿಳಿಸಿದೆ.

ರಾಜಸ್ತಾನದ ಪೂರ್ವ ಜಿಲ್ಲೆಗಳಾದ ಭರತ್ ಪುರ, ಧೊಲಾಪುರ್, ಅಲ್ವರ್ ಮುಂತಾದ ಜಿಲ್ಲೆಗಳಲ್ಲಿ ಬಿರುಗಾಳಿ ಅಬ್ಬರಿಸತೊಡಗಿದೆ. ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿದೆ. ಪರಿಣಾಮ ನೂರಾರು ಮರಗಳು ನೆಲಕ್ಕುಳಿದ್ದರೆ , ನೂರಾರು ಮನೆಗಳು ಕುಸಿದಿವೆ. ವಿದ್ಯುತ್, ದೂರವಾಣಿ ಕಂಬಗಳು ಕುಸಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ರಾಜಸ್ಥಾನದಲ್ಲಿ ಧರೆಗುರುಳಿದ ಮರಗಳು. 
ರಾಜಸ್ಥಾನದಲ್ಲಿ ಧರೆಗುರುಳಿದ ಮರಗಳು. 

ರಾಜಾಸ್ತಾನ ಸರ್ಕಾರ ಸಂಕಷ್ಟದಲ್ಲಿರುವವರಿಗೆ ನೆರವು ನೀಡಲು ಸ್ಥಳಕ್ಕೆ ಅಧಿಕಾರಿಗಳ ತಂಡವನ್ನು ಕಳಿಸುತ್ತಿದೆ. ಆದರೆ ಬಿರುಗಾಳಿಯ ಭೀತಿಯಿಂದಾಗಿ ಪ್ರಕೃತಿ ವಿಕೋಪ ಪರಿಹಾರ ಅಧಿಕಾರಿಗಳ ಸಮಸ್ಯೆ ಪೀಡಿತ ಪ್ರದೇಶಗಳಿಗೆ ತೆರಳಲು ಹಿಂಜರಿಯುತ್ತಿದ್ದಾರೆ.

ಸಾಕಷ್ಟು ಮನೆಗಳ ಚಾವಣಿ ಕುಸಿದಿದ್ದು, ಸಂತ್ರಸ್ತರು ಸಂಬಂಧಿಕರು ಹಾಗೂ ಅಕ್ಕಪಕ್ಕದ ಹಳ್ಳಿಗಳ ಮನೆಗಳಲ್ಲಿ ಆಶ್ರಯ ಕೋರುತ್ತಿದ್ದಾರೆ. ಮನೆ ಕುಸಿತದ ಘಟನೆಗಳಿಂದಲೂ ಮೂರೂ ಜಿಲ್ಲೆಗಳಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ.

ದೋಲಾಪುರ ಜಿಲ್ಲೆಯೊಂದರಲ್ಲೇ  40 ಮನೆಗಳು ಕುಸಿದಿರುವ ಬಗ್ಗೆ ಅಧಿಕಾರಿಗಳು ಎಎನ್ ಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ದೆಹಲಿಯಿಂದ 164 ಕಿಲೋಮಿಟರ್ ದೂರದಲ್ಲಿ ಇರುವ ಆಲ್ವಾರ್ ಜಿಲ್ಲೆ ಧೂಳು ಮತ್ತು ಮರಳು ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿದ ಮೇಲೆ ವಿದ್ಯುತ್ ಕಂಬಗಳು ಹಾಗೂ ಮರಗಳು ಉರುಳಿ ಬಿದ್ದಿವೆ. ಹೀಗಾಗಿ ಎರಡು ದಿನಗಳಿಂದ ಜಿಲ್ಲೆಯಲ್ಲಿ ವಿದ್ಯುತ್ ಸಂಪೂರ್ಣ ಬಂದ್ ಆಗಿದೆ. ಭರತ್ ಪುರದಲ್ಲಿ ಹೆಚ್ಚಿನ ಜೀವಹಾನಿಯಾಗಿದ್ದು ಸುಮಾರು 12 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಧೂಳಿನ ಅಲೆ ಎದ್ದಾಗ ಸೆರೆ ಸಿಕ್ಕ ಚಿತ್ರ. 
ಧೂಳಿನ ಅಲೆ ಎದ್ದಾಗ ಸೆರೆ ಸಿಕ್ಕ ಚಿತ್ರ. 

ಈ ಮಧ್ಯೆ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣೆ ವಿಭಾಗದ (ಎಸ್ ಡಿಆರ್ಇ) ಕಾರ್ಯದರ್ಶಿ ಹೇಮಂತ್ ಗೇರಾ ಬಿರುಗಾಳಿ ಪೀಡಿತವಾಗಿರುವ ಭರತ್ ಪುರ, ಆಲ್ವಾರ್, ಧೋಲಾಪುರ ಜಿಲ್ಲೆಗಳಿಗೆ ಪರಿಹಾರ ತಂಡಗಳನ್ನು ಕಳಿಸಲಾಗಿದೆ. ಮೃತಪಟ್ಟವರಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಆಸ್ಪತ್ರೆ ಸೇರಿದ ಗಾಯಾಗಳುಗಳಿಗೆ ತಲಾ 4 ಸಾವಿರ 300 ರೂ. ಚಿಕಿತ್ಸಾ ವೆಚ್ಚವನ್ನು ಭರಿಸಲಾಗಿದೆ ಎಂದು ಹೇಳದ್ದಾರೆ.

ಈ ಮದ್ಯೆ ಬಿರುಗಾಳಿಯಲ್ಲಿ ಮೃತಪಟ್ಟವರಿಗೆ ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಸಂತಾಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ತಮ್ಮ ಹುಟ್ಟುಹಬ್ಬವನ್ನು ರದ್ದು ಮಾಡಿ ಪರಿಹಾರ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

ರಾಜಾಸ್ಥಾನದಲ್ಲಿ ಹಲವು ಜಿಲ್ಲೆಗಳಲ್ಲಿ 45.5 ಡಿಗ್ರಿ ಬಿಸಿಲಿದ್ದು, ಸಂಜೆ ವೇಳೆಗೆ ಮತ್ತೆ ಬಿರುಗಾಳಿ ಏಳುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬುಧವಾರ ದೆಹಲಿಯಲ್ಲೂ ಗಂಟೆಗೆ 59 ಕಿಲೋಮೀಟರ್ ವೇಗದಲ್ಲಿ ಅಲ್ಪ ಸಮಯ ಬಿರುಗಾಳಿ ಬೀಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಬಿರುಗಾಳಿ ನಂತರ ಸಂಜೆ ವೇಳೆಗೆ ದೆಹಲಿಯಲ್ಲಿ ಭಾರಿ ಪ್ರಮಾಣದ ಮಳೆ ಸುರಿದಿದೆ. ಕೆಟ್ಟ ಹವಾಮಾನದಿಂದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ಎರಡು ವಿದೇಶಿ ವಿಮಾನಗಳೂ ಸೇರಿದಂತೆ ಸುಮಾರು 15 ಫ್ಲೈಟ್ ಗಳ ಹಾರಾಟಕ್ಕೆ ತಡೆ ನೀಡಿದ್ದಾರೆ.

ಬಿರುಗಾಳಿ ಪಂಜಾಬ್ ಗೂ ವ್ಯಾಪಿಸುತ್ತಿದ್ದು, ಮೊಹಾಲಿ, ಪಾಟಿಯಾಲ, ಲೂಧಿಯಾನದಲ್ಲಿ ಭಾರಿ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಜೊತೆ ಜೊತೆಗೆ ಮಳೆಯೂ ಬಿರುಗಾಳಿಯನ್ನು ಸೇರಿಕೊಂಡಿದೆ. ಇದರಿಂದಾಗಿ ವಾಹನ ಸವಾರರು ಪರಾಡುವಂತಾಗಿದೆ. ಪಂಜಾಬ್ ಸರ್ಕಾರ ಬಿರುಗಾಳಿಯಿಂದ ಆಗುವ ತೊಂದರೆಗಳನ್ನು ಎದುರಿಸಲು ಸಿದ್ದವಾಗಿರುವಂತೆ ಪ್ರಕೃತಿ ವಿಕೋಪ ಪರಿಹಾರ ವಿಭಾಗಕ್ಕೆ ತುರ್ತು ಕರೆ ನೀಡಿದೆ. ಮನೆಯ ಹೊರಗೆ ಹಾಗೂ ರಾಜ್ಯದ ಇತರೆಡೆ ಪ್ರವಾಸದಲ್ಲಿರುವ ಪ್ರವಾಸಿಗರಿಗೆ ಎಚ್ಚರಿಕೆಯಿಂದ ಇರುವಂತೆ ಅದು ಕರೆ ನೀಡಿದೆ.

ಸಾವು ನೋವುಗಳಿಗೆ ಕಾರಣವಾದ ಧೂಳಿನ ಬಿರುಗಾಳಿಯ ಒಂದು ನೋಟ. 
ಸಾವು ನೋವುಗಳಿಗೆ ಕಾರಣವಾದ ಧೂಳಿನ ಬಿರುಗಾಳಿಯ ಒಂದು ನೋಟ. 

ಧೂಳು ಬಿರುಗಾಳಿಗೆ ಕಾರಣವೇನು?

ಪ್ರತಿವರ್ಷ ಮರಳು ಬಿರುಗಾಳಿ ಜಗತ್ತಿನ ಹಲವು ಪ್ರದೇಶಗಳನ್ನು ಕಾಡಿಸುತ್ತಿದೆ. ಆಫ್ರಿಕಾದ ಶುಷ್ಕ ಪ್ರದೇಶಗಳು, ಅಮೆರಿಕ, ಚೀನಾ ಹಾಗೂ ಅರೆಬೀಯ, ಪಾಕಿಸ್ತಾನದ ಹಲವು ದೇಶಗಳು ಮರಳು ಬಿರುಗಾಳಿಗೆ ಈಡಾಗುತ್ತಿವೆ. ಭಾರತ ಮತ್ತು ಅರೇಬಿಯ, ಪಾಕಿಸ್ತಾನದಲ್ಲಿನ ಬಿರುಗಾಳಿಗೆ ಮುಖ್ಯವಾಗಿ ಅರಬ್ಬಿ ಸಮುದ್ರದಲ್ಲಿ ಉಂಟಾಗುವ ಅತಿಯಾದ ಹವಾಮಾನ ವೈಪರೀತ್ಯ ಕಾರಣ ಎನ್ನಲಾಗಿದೆ.

ಶುಷ್ಕ ಮತ್ತು ಒಣ ಹವೆಯ ಪ್ರದೇಶಗಳ ಮಣ್ಣಿನ ಕಣಗಳು ವೇಗದ ಗಾಳಿಯೊಂದಿಗೆ ಸೇರುವುದರೊಂದಿಗೆ ಬಿರುಗಾಳಿ ವ್ಯಾಪಿಸತೊಡಗುತ್ತದೆ. ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಏರಿಕೆ, ಹಸಿರು ಮನೆ ಪರಿಣಾಮ ಇತ್ಯಾದಿಗಳು ಮರಳು ಬಿರುಗಾಳಿಗೆ ಕಾರಣ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾನ್ಯವಾಗಿ ರಾಜಾಸ್ತಾನ ಮರಳು ಮಿಶ್ರಿತ ಥಾರ್ ಮರುಭೂಮಿಯಾದ ಕಾರಣ ವೇಗದ ಗಾಳಿ ಮರಗಳನ್ನೂ ಹೊತ್ತೊಯ್ಯುತ್ತದೆ. ಗಾಳಿಯ ವೇಗ ಗಂಟೆಗೆ 60 ಕಿಲೋಮೀಟರ್ ಮೀರಿದಲ್ಲಿ ಜನ ಜೀವನ ಹಾನಿಯಾಗುವ ಸಂಭವವೇ ಹೆಚ್ಚು. 100 ಕಿಲೋಮೀಟರ್ ಮೀರಿದಲ್ಲಿ ಮರಳು ಮಿಶ್ರಿತ ಧೂಳಿನ ಗಣಗಳು ಸುಮಾರು 9 ಕಿಲೋಮೀಟರ್ ( 9 ಸಾವಿರ ಮೀಟರ್) ಎತ್ತರದವರೆಗೂ ಆಕಾಶವನ್ನು ವ್ಯಾಪಿಸುತ್ತವೆ. ಈ ಬಿರುಗಾಳಿ ಭಾರಿ ಅಪಾಯದ ಮುಟ್ಟಿರುತ್ತದೆ.