samachara
www.samachara.com
ಮೋದಿ ಹೇಳಿಕೆಗೆ ಸ್ಪಷ್ಟೀಕರಣ: ಪ್ರೆಸ್‌ಕ್ಲಬ್‌ನಲ್ಲಿ  ದೇವೇಗೌಡರ ಮಾತು ಮಂಥನ
UPDATE

ಮೋದಿ ಹೇಳಿಕೆಗೆ ಸ್ಪಷ್ಟೀಕರಣ: ಪ್ರೆಸ್‌ಕ್ಲಬ್‌ನಲ್ಲಿ ದೇವೇಗೌಡರ ಮಾತು ಮಂಥನ

ತಮ್ಮ ಮಾತುಗಳ ಉದ್ದಕ್ಕೂ ಸಿದ್ಧರಾಮಯ್ಯನವರನ್ನು ಜರಿದ ಗೌಡರು, ಜೆಡಿಎಸ್‌ ಪಕ್ಷ ಗೆಲ್ಲುತ್ತದೆ ಎಂಬ ಅಭಿಪ್ರಾಯವನ್ನು ದೇವೇಗೌಡರು ವ್ಯಕ್ತಪಡಿಸಿದರು. ತಮ್ಮನ್ನು ಹೊಗಳಿದ ಮೋದಿಗೆ ಅಷ್ಟೇ ಗೌರವಪೂರಕವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಬಿಜೆಪಿ ಜತೆಗೆ ಸಮ್ಮಿಶ್ರ ಸರಕಾರ ರಚಿಸುತ್ತೇವೆ ಎನ್ನುವುದಕ್ಕಿಂತ ನಾವೇ ಸರಕಾರ ರಚನೆ ಮಾಡುತ್ತೇವೆ ಎಂಬ ನಂಬಿಕೆ ನನಗಿದೆ ಎಂದು ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್. ಡಿ. ದೇವೇಗೌಡ ಹೇಳಿದರು.

‘ವಿಧಾನಸಭಾ ಚುನಾವಣೆ-18 ಮಾತು ಮಂಥನ’ ಹೆಸರಿನಲ್ಲಿ ಬೆಂಗಳೂರು ಪ್ರೆಸ್‌ಕ್ಲಬ್‌ ಬುಧವಾರ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ದೇವೇಗೌಡರು ಹಲವು ವಿಚಾರಗಳನ್ನು ಹಂಚಿಕೊಂಡರು.

ಮಂಗಳವಾರ ಮಧ್ಯಾಹ್ನ ಉಡುಪಿಯಲ್ಲಿ ಭಾಷಣವನ್ನು ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡರನ್ನು ಹಾಡಿ ಹೊಗಳಿದ್ದರು. ಈ ನಡೆ ರಾಜ್ಯದ ರಾಜಕೀಯ ವಲಯದಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿ ಕುರಿತು ಚರ್ಚೆಯನ್ನು ಹುಟ್ಟುಹಾಕಿತ್ತು.

ಈ ಹಿನ್ನೆಲೆಯಲ್ಲಿ ಬುಧವಾರ ಎಚ್‌ಡಿಡಿ ಮಾಧ್ಯಮ ಸಂವಾದ ಹಲವು ವಿಚಾರಗಳಲ್ಲಿ ಸ್ಪಷ್ಟತೆ ನೀಡಬಹುದು ಎಂಬ ನಿರೀಕ್ಷೆ ಮೂಡಿಸಿತ್ತು.

“ಮೋದಿ ತಾವು ಭೇಟಿ ನೀಡುವ ರಾಜ್ಯಗಳ ಹಿನ್ನೆಲೆಯನ್ನು ಮುಂಚೆಯೇ ತಿಳಿದುಕೊಂಡಿರುತ್ತಾರೆ. ಮೋದಿ ನನ್ನ ಮೇಲಿನ ಗೌರವದಿಂದ ಮಾತನಾಡಿದ್ದಾರೆಯೇ ಹೋರತು ಇದರ ಹಿಂದೆ ಯಾವುದೇ ಹಿತಾಸ್ತಕಿ ಇಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಜತೆ ಹೋರಾಟಕ್ಕೆ ಇಳಿದಿದ್ದೇನೆ. ರಾಜಕೀಯದಲ್ಲಿ ನನಗೆ ಯಾರೂ ಮಿತ್ರರಲ್ಲ. ಹಾಗೂ ಶತ್ರುಗಳೂ ಅಲ್ಲ,’’ ಎಂದು ದೇವೇಗೌಡರು ಮಾರ್ಮಿಕವಾಗಿ ನುಡಿದಿದ್ದಾರೆ.

“ಮೋದಿ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿರಲಿಲ್ಲ. ಸಂಸದನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದೆ. ಅದರಂತೆಯೇ ರಾಜೀನಾಮೆಯನ್ನೂ ಸಹ ನೀಡಿದ್ದೆ. ಆದರೆ ನನ್ನೊಟ್ಟಿಗೆ 15 ನಿಮಿಷಗಳ ಕಾಲ ಮಾತನಾಡಿದ್ದ ಮೋದಿ, ರಾಜೀನಾಮೆಯನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸಿದ್ದರು. ಇದು ನಮ್ಮ ಮೊದಲ ಭೇಟಿ, ಇದನ್ನು ಎಂದಿಗೂ ಮರೆಯಲಾರೆ,” ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡರು.

ಮುಂದವರಿದ ಅವರು, “ಹಲವು ಬಾರಿ ರಾಜ್ಯದ ವಿ‍ಷಯಗಳನ್ನು ಮೋದಿಯವರೊಂದಿಗೆ ಚರ್ಚಿಸಿದ್ದೇನೆ. ಆದರೆ ಅವರು ಪ್ರತಿಕ್ರಿಯಿಸುವುದಿಲ್ಲ. ಮಹಾದಾಯಿಯ ಕುರಿತು ಅವರು ಮಾತನಾಡುತ್ತಾರೆ ಎಂದು ನಿರೀಕ್ಷಿಸಿದ್ದೆ. ಆದರೆ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ,’’ ಎಂದು ಮೋದಿ ವಿರುದ್ಧ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು.

ತಮ್ಮ ಮಾತುಗಳ ಉದ್ದಕ್ಕೂ ಕಾಂಗ್ರೆಸ್‌ ವಿರುದ್ಧ ಪ್ರಹಾರ ನಡೆಸಿರುವ ದೇವೇಗೌಡರು, “ರಾಹುಲ್‌ ಇನ್ನು ಚಿಕ್ಕವರು, ಅವರಿನ್ನ ಬೆಳಯಬೇಕು,” ಎಂದರು. “ಜೆ. ಎಚ್‌. ಪಟೇಲ್‌ ಅಧಿಕಾರದಲ್ಲಿದ್ದಾಗ ನನ್ನ ಫೋಟೊವನ್ನು ವಿಧಾನಸೌಧದಲ್ಲಿ ಹಾಕಿದ್ದರು. ಆದರೆ ಸಿದ್ಧರಾಮಯ್ಯ ಅದನ್ನು ತೆಗಿಸಿದ್ದಾರೆ,” ಎಂದು ಸಿದ್ದರಾಮಯ್ಯ ಬಗೆಗಿನ ತಮ್ಮ ಅಸಮಾಧಾನವನ್ನು ಹೊರಹಾಕಿದರು.

ಮೋದಿ ಹೇಳಿಕೆಗೆ ಸ್ಪಷ್ಟೀಕರಣ: ಪ್ರೆಸ್‌ಕ್ಲಬ್‌ನಲ್ಲಿ  ದೇವೇಗೌಡರ ಮಾತು ಮಂಥನ

ಕುಟುಂಬ ರಾಜಕಾರಣದ ಕುರಿತು ಪ್ರತಿಕ್ರಿಯಿಸಿದ ದೇವೇಗೌಡರು, "ಪಕ್ಷದ ನಾಯಕತ್ವವನ್ನು ವಹಿಸಲು ಯಾರೂ ಮುಂದೆ ಬಾರದಿದ್ದಾಗ ಕುಮಾರಸ್ವಾಮಿಯವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದೇನೆ. ಹಾಗೆಯೇ ಗೊಲ್ಲ ಸಮಾಜದ ಎ. ಕೃಷ್ಣಪ್ಪನವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲು ನಿರಾಕರಿಸಿದಾಗ, ಅವರ ಮನೆ ಬಾಗಿಲಿಗೆ ಹೋಗಿ ಅವರನ್ನು ಕರೆತಂದು ಅಧ್ಯಕ್ಷರನ್ನಾಗಿ ಮಾಡಿದ್ದೆ. ಕುರುಬ ಸಮುದಾಯದ ಸಿದ್ಧರಾಮಯ್ಯನವರನ್ನು ಡಿಸಿಎಂ ಮಾಡಿದ್ದೆ. ನನಗೆ ಸಾಮಾಜಿಕ ನ್ಯಾಯ ಗೊತ್ತಿದೆ,” ಎಂದು ಖಾರವಾಗಿ ಪ್ರತಿಕ್ರಿಸಿದ್ದಾರೆ.

ಪ್ರಾದೇಶಿಕ ಪಕ್ಷದ ಅಗತ್ಯತೆಯನ್ನು ಕುರಿತು ಮಾತನಾಡಿರುವ ದೇವೇಗೌಡರು ಇದಕ್ಕೆ ಜನ ಉತ್ತರಿಸಬೇಕು ಎಂದಿದ್ದಾರೆ. ಪಕ್ಷವನ್ನು ಉಳಿಸಿಕೊಳ್ಳಲು ತಾನು ಸಾಕಷ್ಟು ನೋವು ಅನುಭವಿಸಿರುವುದಾಗಿ ದೇವೇಗೌಡರು ತಿಳಿಸಿದ್ದಾರೆ. “ಕೆಂಗಲ್‌ ಹನುಮಂತಪ್ಪ, ಬಂಗಾರಪ್ಪ, ಯಡಿಯೂರಪ್ಪ ಎಲ್ಲರೂ ಪ್ರಾದೇಶಿಕ ಪಕ್ಷವನ್ನು ಕಟ್ಟಿದ್ದರು. ಆದರೆ ಅವು ಉಳಿಯಲಿಲ್ಲ. ಪ್ರಾದೇಶಿಕ ಪಕ್ಷವನ್ನು ಕಟ್ಟುವುದು ಅಷ್ಟು ಸುಲಭವಲ್ಲ. ಒಂದು ಪಕ್ಷವನ್ನು ಕಟ್ಟುವುದು ಹೇಗೆ ಎಂದು ದೇವೇಗೌಡನಿಗೆ ಗೊತ್ತಿದೆ,” ಎಂದಿದ್ದಾರೆ.

ಸೋಲು ಗೆಲುವುಗಳ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಜೆಡಿಎಸ್‌ಗೆ ಮಾಯಾವತಿ, ಓವೈಸಿ, ಚಂದ್ರಬಾಬು ನಾಯ್ಡು, ಕೆ‌.ಸಿ.ಚಂದ್ರಶೇಖರ್ ಸೇರಿದಂತೆ ಅನೇಕರು ಬೆಂಬಲ ನೀಡಿದ್ದಾರೆ. ಯಾವುದೇ ಸಮೀಕ್ಷೆಯನ್ನ ನಾನು ನಡೆಸಿಲ್ಲ. ಸಮೀಕ್ಷೆ ಬಗ್ಗೆ ತಲೆ ಕೆಡಿಸಿಕೊಳ್ಳುವುದೂ ಇಲ್ಲ. ನಮ್ಮ ಪ್ರಾಮಾಣಿಕ ಕೆಲಸದ ನನಗೆ ನಂಬಿಕೆ ಇದೆ ಎಂದಿದ್ದಾರೆ.

ಮುಂದುವರೆದು 2008 ಹಾಗೂ 2013ರ ಚುನಾವಣೆಯ ಸಮಯದಲ್ಲಿ ಬಿಜೆಪಿಗೆ ಕುಮಾರಸ್ವಾಮಿ ಅಧಿಕಾರ ನೀಡಿಲ್ಲ ಎಂದು ಅಪಪ್ರಚಾರ ಮಾಡಲಾಗಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು, ಕುಮಾರಸ್ವಾಮಿ ಹೋದ ಎಲ್ಲ ಕಡೆ ಜನಬೆಂಬಲ‌ ಸಿಗುತ್ತಿದೆ ಎಂದು ಮಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಜೆಡಿಎಸ್‌ ಹಾಗೂ ಬಿಎಸ್‌ಪಿ ಮೈತ್ರಿ ಕುರಿತೂ ಸಹ ದೇವೆಗೌಡರು ಮಾತನಾಡಿದ್ದು, ಬಿಎಸ್‌ಪಿ ಜತೆಗೆ ತಾನೇ ಹೊಂದಾಣಿಕೆಗೆ ಮುಂದಾಗಿದ್ದಾಗಿ ತಿಳಿಸಿದ್ದಾರೆ. ಕಳೆದ ಬಾರಿ 48 ಕ್ಷೇತ್ರಗಳಲ್ಲಿ ಜೆಡಿಎಸ್‌ ಅಲ್ಪ ಮತಗಳ ಅಂತರದಲ್ಲಿ ಸೋಲು ಕಂಡಿತ್ತು. ಅದನ್ನು ತಪ್ಪಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ದೇವೇಗೌಡರು ಹೇಳಿದ್ದಾರೆ.

ಇಷ್ಟು ಕೀಳು ಮಟ್ಟದ ಸರಕಾರವನ್ನು ನಾನು ನೋಡಿಲ್ಲ ಎಂದು ಸಿದ್ಧರಾಮಯ್ಯ ಸರಕಾರವನ್ನು ಛೇಡಿಸಿರುವ ದೇವೇಗೌಡರು ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ಸಿಎಂ ಗೆಲುವು ಸಲುಭವಲ್ಲ ಎಂದಿದ್ಧಾರೆ. ಈ ಕ್ಷೇತ್ರಗಳಲ್ಲಿ ಬೇರೆ ಬೇರೆ ಶಕ್ತಿಗಳು ಕೆಲಸ ನಿರ್ವಹಿಸುತ್ತಿವೆ ಎಂದು ಮಾರ್ಮಿಕವಾಗಿ ನುಡಿದಿರುವ ದೇವೇಗೌಡರು ಲಿಂಗಾಯತ ಧರ್ಮವನ್ನು ಒಡೆಯುವ ಕಾರಣಕ್ಕಾಗಿಯೇ ಇಬ್ಬರು ಮಂತ್ರಿಗಳನ್ನು ಸಿಎಂ ನಿಯೋಜಿಸಿದ್ದಾರೆ. ಯಡಿಯೂರಪ್ಪ ಜೈಲಿಗೆ ಹೋದರು. ಆದರೆ ಸಿದ್ಧರಾಮಯ್ಯ ಸೋ ಸ್ಮಾರ್ಟ್, ಭ್ರಷ್ಟಾಚಾರ ನಿಗ್ರಹ ದಳವನ್ನು ತಂದಿದ್ದಾರೆ ಎಂದು ಸಿದ್ಧರಾಮಯ್ಯನವರನ್ನು ಅಲ್ಲಗೆಳೆದಿದ್ದಾರೆ.

ತಮ್ಮ ಮಾತುಗಳ ಉದ್ದಕ್ಕೂ ಸಿದ್ಧರಾಮಯ್ಯನವರನ್ನು ಜರಿದ ಗೌಡರು, ಜೆಡಿಎಸ್‌ ಪಕ್ಷ ಗೆಲ್ಲುತ್ತದೆ ಎಂಬ ಅಭಿಪ್ರಾಯವನ್ನು ದೇವೇಗೌಡರು ವ್ಯಕ್ತಪಡಿಸಿದರು. ತಮ್ಮನ್ನು ಹೊಗಳಿದ ಮೋದಿಗೆ ಅಷ್ಟೇ ಗೌರವಪೂರಕವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ.