samachara
www.samachara.com
ಜೂ. 1ರಿಂದ ದೇಶದ ಎಲ್ಲಾ ನಗರಗಳಿಗೆ ರೈತರ ಉತ್ಪಾದನೆ ಪೂರೈಕೆ ಸ್ಥಗಿತ?
UPDATE

ಜೂ. 1ರಿಂದ ದೇಶದ ಎಲ್ಲಾ ನಗರಗಳಿಗೆ ರೈತರ ಉತ್ಪಾದನೆ ಪೂರೈಕೆ ಸ್ಥಗಿತ?

110 ರೈತ ಸಂಘಟನೆಗಳನ್ನು ಒಳಗೊಂಡಿರುವ ರಾಷ್ಟ್ರೀಯ ಕಿಸಾನ್‌ ಮಹಾಸಂಘ ಇಂತಹದ್ದೊಂದು ಮುನ್ನೆಚ್ಚರಿಕೆಯನ್ನು ನೀಡಿದೆ. 10 ದಿನಗಳ ಕಾಲ ದೇಶದ ಎಲ್ಲಾ ನಗರಗಳಿಗೆ ಹಾಲು, ಹಣ್ಣು, ತರಕಾರಿಗಳ ಪೂರೈಕೆ ನಿಲ್ಲಿಸಿ, ಬಿಸಿ ಮುಟ್ಟಿಸಲು ಮುಂದಾಗಿದೆ.

samachara

samachara

ತಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದಿರುವ ಕೇಂದ್ರ ಸರಕಾರದ ವಿರುದ್ಧ ಭಾರತದ ರೈತ ಸಂಘಟನೆಗಳು ಬೃಹತ್ ಹೋರಾಟಕ್ಕೆ ಮುನ್ನುಡಿ ಬರೆಯಲು ಸಿದ್ಧವಾಗಿವೆ. 10 ದಿನಗಳ ಕಾಲ ಭಾರತ್‌ ಬಂದ್‌ ನಡೆಸಿ ರೈತರ ಶಕ್ತಿಯೇನು ಎನ್ನುವುದನ್ನು ಸರಕಾರಗಳಿಗೆ ಮನವರಿಕೆ ಮಾಡಿಸಲು ಮುಂದಾಗಿವೆ.

ಒಟ್ಟು 110 ರೈತ ಸಂಘಟನೆಗಳನ್ನು ಒಳಗೊಂಡಿರುವ ರಾಷ್ಟ್ರೀಯ ಕಿಸಾನ್‌ ಮಹಾಸಂಘ ಇಂತಹದ್ದೊಂದು ಯೋಜನೆ ಹಾಕಿಕೊಂಡಿದೆ. ಜೂನ್‌ 1ರಿಂದ 10 ದಿನಗಳ ಕಾಲ ದೇಶದ ಎಲ್ಲಾ ನಗರಗಳಿಗೆ ಹಾಲು, ಹಣ್ಣು, ತರಕಾರಿಗಳ ಪೂರೈಕೆ ನಿಲ್ಲಿಸಿ, ಇಡೀ ದೇಶಕ್ಕೆ 'ಬೆನ್ನೆಲುಬಿನ’ ಮಹತ್ವ ತಿಳಿಸಲು ಹೊರಟಿದೆ.

ದೇಶದಲ್ಲಿನ ಆಳುವ ಸರಕಾರಗಳು ರೈತನ ಮನವಿಗೆ ಕಿವಿಗೊಡದೇ ತರುತ್ತಿರುವ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಈ ಪ್ರತಿಭಟನೆಗೆ ಕರೆನೀಡಲಾಗಿದೆ. ರಾಷ್ಟ್ರೀಯ ಕಿಸಾನ್‌ ಮಹಾಸಂಘದ ಬಂದ್‌ಗೆ ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕರ ಯಶವಂತ್‌ ಸಿನ್ಹಾ ಕೂಡ ಬೆಂಬಲವಾಗಿ ನಿಂತಿದ್ದಾರೆ.

“ರಾಷ್ಟ್ರವ್ಯಾಪಿ ಭಾರತ್‌ ಬಂದ್‌ ಜೂನ್‌ 1ರಿಂದ ಆರಂಭಗೊಂಡು ಜೂನ್‌ 10ರ ಮಧ್ಯಾಹ್ನ 1 ಗಂಟೆಯ ವೇಳೆಗೆ ಕೊನೆಗೊಳ್ಳಲಿದೆ,” ಎಂದು ಯಶವಂತ್‌ ಸಿನ್ಹಾ ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಜೂ. 1ರಿಂದ ದೇಶದ ಎಲ್ಲಾ ನಗರಗಳಿಗೆ ರೈತರ ಉತ್ಪಾದನೆ ಪೂರೈಕೆ ಸ್ಥಗಿತ?
ದೇಶದ ಉದ್ದಗಲಕ್ಕೂ ಹರಡಿರುವ ನಗರಗಳಿಗೆ ರೈತರು ಜೂನ್‌ 1ರಿಂದ 10 ದಿನಗಳ ಕಾಲ ಹಾಲು, ಹಣ್ಣು, ತರಕಾರಿಗಳ ಪೂರೈಕೆಯನ್ನು ನಿಲ್ಲಿಸಲಿದ್ದಾರೆ. ರೈತರ ಅಸಹಾಕಾರವನ್ನು ಇಡೀ ದೇಶ ಅನುಭವಿಸಲಿದೆ. 
ಯಶವಂತ್‌ ಸಿನ್ಹಾ, ಮಾಜಿ ವಿದೇಶಾಂಗ ಸಚಿವ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿರುವ ರಾಷ್ಟ್ರೀಯ ಕಿಸಾನ್‌ ಮಹಾಸಂಘದ ಪ್ರಮುಖ ನಾಯಕರು ಕೇಂದ್ರ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ರೈತರ ಕಷ್ಟಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ.

ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಬಜೆಟ್‌ ಮಂಡನೆ ಮಾಡುವ ವೇಳೆ, ಸ್ವಾಮಿನಾಥನ್‌ ವರದಿ ಶಿಫಾರಸ್ಸಿನ ಅನ್ವಯ ರೈತರಿಗೆ ನೀಡಬೇಕಾದ ಶೇ. 150ರ ಕನಿಷ್ಟ ಬೆಂಬಲ ಬೆಲೆಯನ್ನು ನೀಡುವುದಾಗಿ ಘೋಷಿಸಿದ್ದರು. ಭೂಮಿಯ ಬೆಲೆ, ಬಿತ್ತನೆ ಬೀಜ, ಗೊಬ್ಬರ, ರಾಸಾಯನಿಕಗಳು, ಕೂಲಿ, ಇಂಧನ, ನೀರಾವರಿ ಸೇರಿದಂತೆ ಕೃಷಿಯ ಮೇಲೆ ಹೂಡಿದ ಇತರೆ ಬಂಡವಾಳವನ್ನು ಆಧರಿಸಿ ಕನಿಷ್ಟ ಬೆಂಬಲ ಬೆಲೆಯನ್ನು ನಿಗಧಿ ಪಡಿಸುವುದಾಗಿ ತಿಳಿಸಿದ್ದರು. ಆದರೆ ಈವರೆಗೆ ಈ ಕುರಿತು ಯಾವುದೇ ಕ್ರಮಗಳನ್ನು ಕೇಂದ್ರ ಸರಕಾರ ಕೈಗೊಂಡಿಲ್ಲ. ಆದ್ದರಿಂದ ಇಂತಹದ್ದೊಂದು ಪ್ರತಿಭಟನೆಗೆ ಮುಂದಾಗುತ್ತಿರುವುದಾಗಿ ರಾಷ್ಟ್ರೀಯ ಕಿಸಾನ್‌ ಮಹಾಸಂಘ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಯಶವಂತ್‌ ಸಿನ್ಹಾ, ರೈತರಿಗೆ ಹುಸಿ ಭರವಸೆಗಳನ್ನು ನೀಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಜತೆಗೆ ಮಹಾರಾಷ್ಟ್ರ ಸರಕಾರವನ್ನೂ ಕೂಡ ಛೇಡಿಸಿದ್ದಾರೆ.

ರೈತರ ಬೃಹತ್‌ ಪ್ರತಿಭಟನೆ ಜಾಥಾವನ್ನು ನಿಲ್ಲಿಸುವ ಸಲುವಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ರೈತರ ಎಲ್ಲಾ ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದರು. ಆದರೆ ಈಗ ರೈತರನ್ನು ಮರೆತಿದ್ದಾರೆ ಎಂದು ಸಿನ್ಹಾ ಆರೋಪಿಸಿದರು.

ಈ ಮುಂಚೆ ಬಿಜೆಪಿ ಪಕ್ಷದ ಅಟಲ್‌ ಬಿಹಾರಿ ವಾಜಪೇಯಿ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದ ಸಂಧರ್ಭದಲ್ಲಿ ವಿದೇಶಾಂಗ ಸಚಿವರಾಗಿದ್ದ ಯಶವಂತ್‌ ಸಿನ್ಹಾ, ನರೇಂದ್ರ ಮೋದಿ ಪ್ರಧಾನಿ ಪಟ್ಟ ಸ್ವೀಕರಿಸಿದ ನಂತರದ ದಿನಗಳಲ್ಲಿ ಆಡಳಿತದ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದರು. ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವಕ್ಕೆ ದಕ್ಕೆಯುಂಟಾಗುತ್ತದೆ ಎಂದಿದ್ದ ಸಿನ್ಹಾ ಬಿಜೆಪಿ ತೊರೆದು, ‘ರಾಷ್ಟ್ರೀಯ ಮಂಚ್‌’ ಎಂಬ ರಾಜಕೀಯೇತರ ವೇದಿಕೆಯನ್ನು ಸ್ಥಾಪಿಸಿದ್ದರು. ‘ಪ್ರಜಾಪ್ರಭುತ್ವ ಉಳಿಸಿ’ ಎಂಬ ಹೆಸರಿನಲ್ಲಿ ಹೋರಾಟವನ್ನೂ ಆರಂಭಿಸಿದ್ದರು. ಈಗ ರೈತರಿಗೆ ಧ್ವನಿಯಾಗಹೊರಟಿದ್ದಾರೆ.

ಕೆಲ ದಿನಗಳ ಹಿಂದೆ ಮುಂಬೈಗೆ ಹರಿದು ಬಂದಿದ್ದ ಸಹಸ್ರಾರು ರೈತರ ಪಾದಗಳು ಮಹಾರಾಷ್ಟ್ರದ ಸರಕಾರವನ್ನು ಅಲ್ಲಾಡಿಸಿ, ಇಡೀ ದೇಶದ ಗಮನವನ್ನು ಸೆಳೆದಿದ್ದವು. ಈಗ ಇದಕ್ಕಿಂತಲೂ ದೊಡ್ಡದೊಂದು ಹೋರಾಟಕ್ಕೆ ಮುಂದಾಗಿರುವ ಕಿಸಾನ್‌ ಮಹಾಸಂಘ ಇಡೀ ದೇಶ ತಲ್ಲಣಿಸುವಂತೆ ಮಾಡುತ್ತದೆಯೇ ಎಂಬ ಚಿತ್ರಣ ಜೂನ್ ಮೊದಲ ವಾರದಲ್ಲಿ ಲಭ್ಯವಾಗಲಿದೆ.