samachara
www.samachara.com
ವಿಶ್ವದ ಮಾಲಿನ್ಯಗೊಂಡ ನಗರಗಳ ಪಟ್ಟಿ ಬಿಡುಗಡೆ: ಭಾರತದ್ದೇ ಸಿಂಹಪಾಲು!
UPDATE

ವಿಶ್ವದ ಮಾಲಿನ್ಯಗೊಂಡ ನಗರಗಳ ಪಟ್ಟಿ ಬಿಡುಗಡೆ: ಭಾರತದ್ದೇ ಸಿಂಹಪಾಲು!

ಉತ್ತರ ಭಾರತದ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಕಡಿಮೆ ಪ್ರಮಾಣದ ವಾಯು ಮಾಲಿನ್ಯವನ್ನು ಹೊಂದಿದೆ. ಹೀಗೆಂದ ಮಾತ್ರಕ್ಕೆ ಬೆಂಗಳೂರಿಗರಿಗೆ ಸಮಸ್ಯೆಯಿಲ್ಲ ಎಂದೇನೂ ಅಲ್ಲ. ಹೆಚ್ಚು ಮಾಲಿನ್ಯಗೊಂಡಿರುವ 100 ನಗರಗಳಲ್ಲಿ ಬೆಂಗಳೂರು ಕೂಡ ಒಂದು.

samachara

samachara

ವಿಶ್ವ ಆರೋಗ್ಯ ಸಂಸ್ಥೆ ವಿಶ್ವದಲ್ಲೇ ಅತಿ ಹೆಚ್ಚು ವಾಯು ಮಾಲಿನ್ಯಕ್ಕೆ ತುತ್ತಾಗಿರುವ ನಗರಗಳನ್ನು ಪಟ್ಟಿ ಮಾಡಿದೆ. ಬುಧವಾರ ಈ ವರದಿ ಬಿಡುಗಡೆಗೊಂಡಿದ್ದು, ಅತಿ ಹೆಚ್ಚು ಮಾಲಿನ್ಯದಿಂದ ಬಳಲುತ್ತಿರುವ ಮೊದಲ 20 ನಗರಗಳ ಪಟ್ಟಿಯಲ್ಲಿ 14 ನಗರಗಳು ಭಾರತದಲ್ಲಿವೆ. 

ವರದಿ ಹೇಳುವಂತೆ, ವಿಶ್ವದ ಪ್ರತಿ 10 ಜನರಲ್ಲಿ 9 ಜನರು ಕಲುಷಿತಗೊಂಡಿರುವ ಗಾಳಿಯನ್ನು ಉಸಿರಾಡುತ್ತಿದ್ದಾರೆ. ಪ್ರತಿ ವರ್ಷ ವಾಯು ಮಾಲಿನ್ಯದ ಕಾರಣದಿಂದಾಗಿ ಸರಿ ಸುಮಾರು 70 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ಈ ಸಾವಿನ ಸಂಖ್ಯೆಯಲ್ಲಿ ಹೆಚ್ಚು ಹಿಂದುಳಿದ ದೇಶಗಳನ್ನು ಒಳಗೊಂಡಿರುವ ಏಷ್ಯಾ ಮತ್ತು ಆಫ್ರಿಕಾ ಖಂಡಗಳದ್ದೇ ಸಿಂಹಪಾಲು.

ವಾಯು ಮಾಲಿನ್ಯದಿಂದಾಗಿ ಹೃದಯ ಸಂಬಂಧಿ ರೋಗಗಳು, ಪಾಶ್ವವಾಯು ಹಾಗೂ ಶ್ವಾಸಕೋಶ ಕ್ಯಾನ್ಸರ್‌ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಲಕ್ಷಾಂತರ ಜನರ ಸಾವಿಗೆ ಕಾರಣವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ.

ವಾಯು ಮಾಲಿನ್ಯದಿಂದಾಗಿ ಮೃತಪಟ್ಟಿರುವ 70 ಲಕ್ಷ ಜನರ ಪೈಕಿ ವಿಶ್ವಾದ್ಯಂತ 38 ಲಕ್ಷ ಜನರು ಮನೆಯೊಳಗೆ ಉಂಟಾಗುತ್ತಿರುವ ವಾಯು ಮಾಲಿನ್ಯದ ಕಾರಣದಿಂದಾಗಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಭಾರತದ ಪಾಲು 15 ಲಕ್ಷ. ಅಡುಗೆಗೆ ನೈಸರ್ಗಿಕ ಅನಿಲ ಅಥವಾ ವಿದ್ಯುಚ್ಛಕ್ತಿಯನ್ನು ಬಳಸದೆ ಈಗಲೂ ಕೂಡ ಸೀಮೆ ಎಣ್ಣೆ, ಸೌದೆಗಳನ್ನು ಬಳಸುತ್ತಿರುವುದು ಮನೆಯೊಳಗಿನ ವಾಯು ಮಾಲಿನ್ಯಕ್ಕೆ ಕಾರಣವಾಗಿದೆ.

ಮನೆ ಹೊರಗಿನ ವಾತಾವರಣದಲ್ಲಿ ವಿಶ್ವಾದ್ಯಂತ ವಾಯು ಮಾಲಿನ್ಯದ ಕಾರಣಕ್ಕಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ 42 ಲಕ್ಷ. ಈ ಪೈಕಿ ಭಾರತದ ಪಾಲು 13 ಲಕ್ಷ. ಇದು ಭಾರತದ ಚಿಂತಾಜನಕ ಸ್ಥಿತಿಯನ್ನು ಸೂಚಿಸುತ್ತದೆ. ವಾತಾವರಣದೊಳಗೆ ಹೆಚ್ಚಾಗುತ್ತಿರುವ ಸಲ್ಫೇಟ್‌, ನೈಟ್ರೇಟ್‌ ಹಾಗೂ ಕಾರ್ಬನ್‌ ಡೈ ಆಕ್ಸೈಡ್‌ ಈ ಸಾವುಗಳಿಗೆ ಪ್ರಮುಖ ಕಾರಣಗಳಾಗಿ ನಿಂತಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳು ಹೇಳುವ ಪ್ರಕಾರ 180 ದೇಶಗಳ 4,300 ನಗರಗಳಲ್ಲಿ ಸಂಶೋಧನೆಯನ್ನು ನಡೆಸಲಾಗಿದೆ. ಈ ಪಟ್ಟಿಯಲ್ಲಿ ಅತೀವ್ರವಾದ ವಾಯು ಮಾಲಿನ್ಯಕ್ಕೆ ತುತ್ತಾಗಿರುವ ನಗರ ಪ್ರದೇಶಗಳ ಪೈಕಿ ಭಾರತದ ನಗರಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ರಾಷ್ಟ್ರೀಯ ರಾಜಧಾನಿ ದೆಹಲಿ, ವಾರಣಾಸಿ, ಕಾನ್ಪುರ, ಗಯಾ, ಫರೀದಾಬಾದ್‌, ಪಾತ್ನಾ, ಆಗ್ರಾ, ಮುಝಾಫರ್‌ನಗರ, ಶ್ರೀನಗರ, ಗುರ್ಗಾಂವ್‌, ಜೈಪುರ, ಪಾಟಿಯಾಲ ಮತ್ತು ಜೋಧ್‌ಪುರಗಳ ಹೆಸರು ಕಲುಷಿತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಚೀನಾ ಹಾಗೂ ಮಂಗೋಲಿಯಾದ ಕೆಲವು ನಗರಗಳೂ ಕೂಡ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.

ಕಳೆದ 4-5 ವರ್ಷಗಳ ಹಿಂದೆ ಚೀನಾದ ಕ್ಸಿಂಟಾಯ್‌ ಮತ್ತು ಶಿಝಿಯಾಝುಂಗ್‌ ನಗರಗಳು ಅತೀವ್ರವಾದ ವಾಯು ಮಾಲಿನ್ಯದಿಂದ ಬಳಲುತ್ತಿದ್ದವು. ಆದರೆ ಚೀನಾ ಕೈಗೊಂಡಿರುವ ಪರಿಸರ ಪೂರಕ ಯೋಜನೆಗಳು ಈ ನಗರಗಳನ್ನು ವಾಯು ಮಾಲಿನ್ಯ ಮುಕ್ತ ನಗರಗಳನ್ನಾಗಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಸ್ಥೆ ಮರಿಯಾ ನೈರಾ ಈ ಕುರಿತು ಭಾರತಕ್ಕೆ ಚೀನಾದ ಮಾದರಿಗಳನ್ನು ಅನುಸರಿಸುವಂತೆ ಸಲಹೆ ನೀಡಿದ್ದಾರೆ. ನಗರಗಳಲ್ಲಿನ ವಾಯು ಮಾಲಿನ್ಯವನ್ನು ತಡೆಗಟ್ಟುವಲ್ಲಿ ಚೀನಾ ಹಲವಾರು ಪರಿಣಾಮಕಾರಿ ಯೋಜನೆಗಳನ್ನು ಕೈಗೊಂಡಿದೆ. ಇಂತಹದ್ದೇ ಕ್ರಮಗಳನ್ನು ಭಾರತ ಕೂಡ ಶೀಘ್ರವಾಗಿ ಕೈಗೊಂಡರೆ ವೇಗವಾಗಿ ವಾಯು ಮಾಲಿನ್ಯದ ಸಮಸ್ಯೆಯಿಂದ ಹೊರಬರಬಹುದು ಎಂದು ಮರಿಯಾ ನೈರಾ ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಕರ್ನಾಟಕದ ರಾಜಧಾನಿ ಬೆಂಗಳೂರಿನ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಉತ್ತಮವಾಗಿದೆ. ಉತ್ತರ ಭಾರತದ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಕಡಿಮೆ ಪ್ರಮಾಣದ ವಾಯು ಮಾಲಿನ್ಯವನ್ನು ಹೊಂದಿದೆ. ಹೀಗೆಂದ ಮಾತ್ರಕ್ಕೆ ಬೆಂಗಳೂರಿಗರಿಗೆ ಸಮಸ್ಯೆಯಿಲ್ಲ ಎಂದೇನೂ ಅಲ್ಲ. ಹೆಚ್ಚು ಮಾಲಿನ್ಯಗೊಂಡಿರುವ 100 ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಈಗಲೇ ವಾಯು ಮಾಲಿನ್ಯ ತಡೆಗಟ್ಟುವಿಕೆ ಕುರಿತಾದ ಅಗತ್ಯ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳದಿದ್ದಲ್ಲಿ ಬೆಂಗಳೂರು ಕೂಡ 20 ನಗರಗಳ ಪೈಕಿ ಒಂದಾಗಬಹುದು.