samachara
www.samachara.com
‘ಆಧಾರ್ ಅಪಸವ್ಯ’: ನಿಮ್ಮ ಜಾತಿ ಧರ್ಮ ಯಾವುದು? ಬ್ಯಾಂಕ್‌ ಖಾತೆಯಲ್ಲಿ ಎಷ್ಟು ಹಣ ಇದೆ? ಎಲ್ಲವೂ ಇಲ್ಲಿ ಮುಕ್ತ ಮುಕ್ತ!
UPDATE

‘ಆಧಾರ್ ಅಪಸವ್ಯ’: ನಿಮ್ಮ ಜಾತಿ ಧರ್ಮ ಯಾವುದು? ಬ್ಯಾಂಕ್‌ ಖಾತೆಯಲ್ಲಿ ಎಷ್ಟು ಹಣ ಇದೆ? ಎಲ್ಲವೂ ಇಲ್ಲಿ ಮುಕ್ತ ಮುಕ್ತ!

ಆತಂಕಕಾರಿ ವಿಚಾರ ಏನೆಂದರೆ, ಆಂಧ್ರ ಪ್ರದೇಶದಲ್ಲಿ ಆಧಾರ್ ಪಡೆದ ನಾಗರಿಕರ ಜಾತಿ, ಧರ್ಮ, ವಾಸ ಸ್ಥಳ, ಬ್ಯಾಂಕ್‌ ಅಕೌಂಟ್ ನಂಬರ್, ಐಎಫ್‌ಎಸ್‌ಸಿ ಕೋಡ್‌ ಸೇರಿದಂತೆ ಅತ್ಯಂತ ಖಾಸಗಿ ಮಾಹಿತಿಯನ್ನು ಸರಕಾರಿ ಜಾಲತಾಣವೇ ಮುಕ್ತವಾಗಿ ನೀಡಿದೆ.

samachara

samachara

ನಮ್ಮ ಬಳಿ ಇರುವ ಮಾಹಿತಿ ಸುರಕ್ಷಿತವಾಗಿದೆ ಮತ್ತು ಅದನ್ನು ಭೇದಿಸಲು ಕೋಟ್ಯಾಂತರ ವರ್ಷಗಳು ಬೇಕು...

ಹೀಗಂತ ಸುಪ್ರಿಂ ಕೋರ್ಟ್‌ಗೆ ಆಶ್ವಾಸನೆ ನೀಡಿದ್ದು ಯುಐಡಿಎಐ (ಆಧಾರ್) ಮುಖ್ಯಸ್ಥ ಎಬಿಪಿ ಪಾಂಡೆ.

ಹೊಸ ಬೆಳವಣಿಗೆಯೊಂದರಲ್ಲಿ ಆಧಾರ್ ಮುಖ್ಯಸ್ಥರ ಮೇಲಿನ ಮಾತು ಹಸಿ ಸುಳ್ಳು ಎಂಬುದು ಬಹಿರಂಗವಾಗಿದೆ.

ಆತಂಕಕಾರಿ ವಿಚಾರ ಏನೆಂದರೆ, ಪಕ್ಕದ ರಾಜ್ಯ ಆಂಧ್ರ ಪ್ರದೇಶದಲ್ಲಿ ಆಧಾರ್ ಪಡೆದ ನಾಗರಿಕರ ಜಾತಿ, ಧರ್ಮ, ವಾಸ ಸ್ಥಳ, ಬ್ಯಾಂಕ್‌ ಅಕೌಂಟ್ ನಂಬರ್,ಐಎಫ್‌ಎಸ್‌ಸಿ ಕೋಡ್‌ ಸೇರಿದಂತೆ ಅತ್ಯಂತ ಖಾಸಗಿ ಮಾಹಿತಿಯನ್ನು ಸರಕಾರಿ ಜಾಲತಾಣವೇ ಮುಕ್ತವಾಗಿ ನೀಡಿದೆ.

ಈ ಮೂಲಕ ಸರಕಾರಿ ಸಂಸ್ಥೆಗಳು ಆಧಾರ್ ನಂಬರ್‌ ಬಳಸಿಕೊಂಡು ಜನರ ಖಾಸಗಿತನಕ್ಕೆ ಕನ್ನ ಕೊರೆಯುತ್ತವೆ ಎಂಬ ಆರೋಪ ಎಷ್ಟು ಸತ್ಯ ಎಂಬುದನ್ನು ಈ ಬೆಳವಣಿಗೆ ನಿಚ್ಚಳಗೊಳಿಸಿದೆ.

ನಡೆದಿದ್ದೇನು?:

ಆಧಾರ್ ಕಡ್ಡಾಯ ವಿಚಾರದಲ್ಲಿ ಸುಪ್ರಿಂ ಕೋರ್ಟ್ ನಡೆಸುತ್ತಿರುವ ವಿಚಾರಣೆ ವೇಳೆ ಯುಐಡಿಎಐ, ಯಾವುದೇ ಕಾರಣಕ್ಕೂ ನಾಗರಿಕ ಖಾಸಗಿ ಮಾಹಿತಿಯನ್ನು ಬಳಸಿಕೊಳ್ಳುವುದಿಲ್ಲ ಹಾಗೂ ಆಧಾರ್ ನಂಬರ್ ಪಡೆಯುವ ವೇಳೆ ನೀಡಿದ ಮಾಹಿತಿಯ ಗೌಪ್ಯತೆ ಕಾಪಾಡಲಾಗುವುದು ಎಂದು ತಿಳಿಸಿತ್ತು.

ಆದರೆ ಆಂಧ್ರಪ್ರದೇಶದ ರಾಜ್ಯ ಗೃಹ ಮಂಡಳಿಯ ಜಾಲತಾಣದಲ್ಲಿ ಸುಮಾರು 1.3 ಲಕ್ಷ ಜನರ ಆಧಾರ್ ನಂಬರ್ ಮಾಹಿತಿಯನ್ನು ಸಾರ್ವಜನಿಕವಾಗಿ ನೀಡಿತ್ತು. ಅಷ್ಟೆ ಅಲ್ಲ, ರಾಜ್ಯದ ಸುಮಾರು 50 ಲಕ್ಷ ನಾಗರಿಕರನ್ನು ಅವರ ಜಾತಿ, ಧರ್ಮ ಹಾಗೂ ವಾಸಸ್ಥಳದ ಆಧಾರದ ಮೇಲೆ ಜಾಲಾಡುವ ಅವಕಾಶವನ್ನು ಗೃಹ ಮಂಡಳಿಯ ಜಾಲತಾಣ ನೀಡಿತ್ತು.

ಉದಾಹರಣೆಗೆ, ಈ ಜಾಲತಾಣಕ್ಕೆ ಭೇಟಿ ನೀಡುವ ಯಾರಾದರೂ, ದಲಿತರನ್ನು ಮಾತ್ರವೇ ಹುಡುಕುವ, ಧರ್ಮದ ಆಧಾರದ ಮೇಲೆ ಯಾರು ಎಲ್ಲಿ ವಾಸ ಮಾಡುತ್ತಿದ್ದಾರೆ ಎಂದು ತಿಳಿಯುವ, ವೈಯಕ್ತಿಕ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆಯುವ ಅವಕಾಶ ನೀಡಲಾಗಿದೆ.

ಆಧಾರ್ ನಂಬರ್ ಜತೆಗೆ ಪ್ರತಿಯೊಬ್ಬರ ವಾಸಸ್ಥಳವನ್ನೂ ಸಾರ್ವಜನಿಕರು ಗುರುತಿಸುವ ಅವಕಾಶ ನೀಡಿತ್ತು ಆಂಧ್ರ ಪ್ರದೇಶದ ಗೃಹ ಮಂಡಳಿ ಜಾಲತಾಣ. (ಚಿತ್ರ ಕೃಪೆ: ಹಫ್‌ಪೋಸ್ಟ್‌ ಇಂಡಿಯಾ)
ಆಧಾರ್ ನಂಬರ್ ಜತೆಗೆ ಪ್ರತಿಯೊಬ್ಬರ ವಾಸಸ್ಥಳವನ್ನೂ ಸಾರ್ವಜನಿಕರು ಗುರುತಿಸುವ ಅವಕಾಶ ನೀಡಿತ್ತು ಆಂಧ್ರ ಪ್ರದೇಶದ ಗೃಹ ಮಂಡಳಿ ಜಾಲತಾಣ. (ಚಿತ್ರ ಕೃಪೆ: ಹಫ್‌ಪೋಸ್ಟ್‌ ಇಂಡಿಯಾ)

ಶ್ರೀನಿವಾಸ್ ಕೊಡಲಿ ಎಂಬ ಹೈದ್ರಾಬಾದ್ ಮೂಲಕ ಸಂಶೋಧಕರೊಬ್ಬರು ರಾಜ್ಯ ಸರಕಾರದ ಅಡಿಯಲ್ಲಿ ಬರುವ ಗೃಹ ಮಂಡಳಿ ಎಸಗಿದ ಈ ಅಪಚಾರವನ್ನು ಪತ್ತೆ ಹಚ್ಚಿದ್ದಾರೆ.

ಶ್ರೀನಿವಾಸ್ ಆಧಾರ್ ಅಪಸವ್ಯದ ಕುರಿತು ದೇಶದ ಗಮನ ಸೆಳೆಯುತ್ತಿದ್ದಂತೆ ಆಂಧ್ರಪ್ರದೇಶದ ಗೃಹ ಮಂಡಳಿ ತನ್ನ ಜಾಲಾಣದಲ್ಲಿ ಲಭ್ಯ ಮಾಹಿತಿಯನ್ನು ಹಿಂತೆಗೆದುಕೊಂಡಿದೆ.

ಮಹತ್ವಾಕಾಂಕ್ಷಿ ಯೋಜನೆ:

ಕಳೆದ ವರ್ಷ ಆಂಧ್ರ ಸರಕಾರ ಮಹತ್ವಾಕಾಂಕ್ಷಿ ಯೋಜನೆ- ಪೋಪಲ್ ಹಬ್‌ನ್ನು ಆರಂಭಿಸಿತ್ತು. ಸುಮಾರು 29 ಇಲಾಖೆಗಳು ಆಧಾರ್ ನಂಬರ್ ಬಳಸಿಕೊಂಡು ಫಲಾನುಭವಿಗಳನ್ನು ಗುರುತಿಸುವ ಕೆಲಸ ಆರಂಭಿಸಿದ್ದವು. ಮುಂದಿನ ದಿನಗಳಲ್ಲಿ ದೇಶದ ಇತರೆ ರಾಜ್ಯಗಳಲ್ಲೂ ಇಂತಹದ್ದೇ ಯೋಜನೆ ಜಾರಿಗೆ ಸಿದ್ಧತೆಗಳು ನಡೆಯುತ್ತಿವೆ.

ಜನ ಆಧಾರ್ ನಂಬರ್ ಪಡೆಯಲು ನೀಡಿದ ಖಾಸಗಿ ಮಾಹಿತಿಯನ್ನೇ ಬಳಸಿಕೊಂಡು ಯಾರು, ಎಲ್ಲಿ ವಾಸ ಮಾಡುತ್ತಿದ್ದಾರೆ. ಅವರ ಬಳಿ ಬ್ಯಾಂಕ್‌ನಲ್ಲಿ ಇರುವ ಹಣ ಎಷ್ಟು? ಅವರ ಜಾತಿ ಯಾವುದು? ಧರ್ಮ ಯಾವುದು ಎಂಬುದನ್ನು ಸರಕಾರಗಳು ಗುರುತಿಸಲು ಆರಂಭಿಸಿವೆ. ಅಷ್ಟೆ ಅಲ್ಲ, ಈ ಸೂಕ್ಷ್ಮ ಮಾಹಿತಿಯನ್ನು ಜಾಲತಾಣದಲ್ಲಿಯೇ ನೀಡುವ ಮೂಲಕ ಯಾರು ಬೇಕಾದರೆ ಮನಸೋ ಇಚ್ಚೆ ಬಳಸಿಕೊಳ್ಳುವ ಮುಕ್ತ ಅವಕಾಶವನ್ನೂ ನೀಡಲಾಗಿತ್ತು.

ಚುನಾವಣೆ ಸಮಯದಲ್ಲಿ ಅಥವಾ ಕೋಮು ಗಲಭೆಗಳನ್ನು ಸೃಷ್ಟಿಸುವ ಸಮಯದಲ್ಲಿ ಈ ಮಾಹಿತಿ ಅತ್ಯಂತ ಹಾನಿಕಾರಕ ಪರಿಣಾಮಗಳನ್ನು ಬೀರಬಹುದಾಗಿದೆ.

ಖಾಸಗಿತನದ ಧಕ್ಕೆ:

2017ರ ಮೇ ತಿಂಗಳಿನಲ್ಲಿ ಸುಪ್ರಿಂ ಕೋರ್ಟ್ ಆಧಾರ್ ವಿಚಾರದಲ್ಲಿ ಖಾಸಗಿತನ ಧಕ್ಕೆ ಸಂಬಂಧಪಟ್ಟ ಹಾಗೆ ವಿಚಾರಣೆ ಕೈಗೆತ್ತಿಕೊಂಡಿತ್ತು. ಈ ಸಮಯದಲ್ಲಿ ಸರಕಾರದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ "ಕೇವಲ ಆಧಾರ್ ನಂಬರ್ ಮಾತ್ರ ಸೋರಿಕೆಯಾಗಿದೆ. ಯಾವುದೇ ಕಾರಣಕ್ಕೂ ಬಯೋಮೆಟ್ರಿಕ್ ಸೋರಿಕೆಯಾಗಿಲ್ಲ,” ಎಂದು ಸುಪ್ರೀಂ ಕೋರ್ಟಿಗೆ ಸಮಜಾಯಿಷಿ ನೀಡಿದ್ದರು.

ಜತೆಗೆ ಆಧಾರ್‌ ವಿಚಾರದಲ್ಲಿ ಹಲವು ಗೊಂದಲಳಿವೆ ಎಂಬುದನ್ನು ಸರಕಾರ ಒಪ್ಪಿಕೊಂಡಿತ್ತು. ಆಧಾರ್ ನೀಡಲು ಸರಿಯಾದ ಕ್ರಮಗಳನ್ನು ಅನುಸರಿಸದ ಹಿನ್ನಲೆಯಲ್ಲಿ ಆಧಾರ್ ಸೇವೆ ನೀಡುತ್ತಿದ್ದ 34,000 ಸಂಸ್ಥೆಗಳನ್ನು ಸರಕಾರ ಬ್ಲಾಕ್ ಮಾಡಿತ್ತು.

ಎರಡು ವರ್ಷದ ಹಿಂದೆ ತನ್ನ ನಾಯಿಗೂ ಆಧಾರ್ ನಂಬರ್ ಪಡೆದುಕೊಂಡ ವ್ಯಕ್ತಿಯೊಬ್ಬರು ಜೈಲುಪಾಲಾಗಿದ್ದನ್ನೂ ಇಲ್ಲಿ ಸ್ಮರಿಸಬಹುದು. ಸರಿಯಾದ ದಾಖಲೆಗಳು ನೀಡಿಲ್ಲ ಎಂಬ ಕಾರಣಕ್ಕೆ ಸುಮಾರು 8.5 ಕೋಟಿ ಆಧಾರ್ ಸಂಖ್ಯೆಗಳನ್ನು ಸರಕಾರವೇ ರದ್ದು ಮಾಡಿತ್ತು. ಬ್ಯಾಂಕುಗಳು ಸರಿಯಾಗಿ ಆಧಾರ್ ನಂಬರನ್ನು ನಮೂದಿಸದ ಕಾರಣಕ್ಕೆ 40,00 ರೈತರಿಗೆ ನೀಡಬೇಕಾಗಿದ್ದ ಪರಿಹಾರವನ್ನೂ ನೀಡಲಾಗಿರಲಿಲ್ಲ. ಗರ್ಭಿಣಿಯೊಬ್ಬರ ಹೆರಿಗೆಗೂ ಆಧಾರ್‌ ಅಡ್ಡಿಯಾಗಿದ್ದು ಸುದ್ದಿಯಾಗಿತ್ತು. 500 ರೂಪಾಯಿಗೆ ಲಕ್ಷಾಂತರ ಆಧಾರ್ ನಂಬರ್‌ಗಳು ಮಾರಾಟಕ್ಕಿದ್ದವು.

ಒಂದು ಕಡೆ ಆಧಾರ್ ಅನುಷ್ಠಾನದ ಗೊಂದಲ ನಡುವೆ, ಆಂದ್ರಪ್ರದೇಶದಲ್ಲಿ ನಡೆದ ಹೊಸ ಬೆಳವಣಿಗೆ ಆತಂಕ ಮೂಡಿಸುವಂತಿದೆ. ಖಾಸಗಿ ಮಾಹಿತಿಯನ್ನು ಸಂಗ್ರಹಿಸುವ ಆಧಾರ್, ಅದನ್ನು ಗೌಪ್ಯವಾಗಿ ಇಡುವಲ್ಲಿ ವಿಫಲವಾಗಿದ ಎಂಬುದು ಮತ್ತೊಮ್ಮೆ ಸಾಭೀತಾಗಿದೆ. ಜತೆಗೆ, ಸೂಕ್ಷ್ಮ ಮಾಹಿತಿಯನ್ನು ಯಾರು ಬೇಕಾದರೂ ವಿನಾಶಕಾರಿ ಪ್ರಕ್ರಿಯೆಗಳಿಗೆ ಬಳಸುವ ಅವಕಾಶವೂ ನೀಡುವ ಮೂಲಕ ಭಾರಿ ಪರಿಣಾಮಗಳಿಗೆ ಎಡೆಮಾಡಿಕೊಡುವಂತಿದೆ ಸರಕಾರಗಳ ನಡೆ.

ಈ ಬೆಳವಣಿಗೆಯ ಬಗ್ಗೆ ಎನ್‌ಡಿಟಿವಿಗೆ ಪ್ರತಿಕ್ರಿಯಿಸಿರುವ ಆಂಧ್ರ ಸರಕಾರ, ಸಂಪೂರ್ಣ ಮಾಹಿತಿ ಪಡೆದುಕೊಂಡ ನಂತರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದೆ. ಆದರೆ, ವಿಚಾರ ಅಷ್ಟು ಸರಳವಾಗಿಲ್ಲ ಎಂಬುದನ್ನು ಬಹಿರಂಗಗೊಂಡ ಮಾಹಿತಿ ಸಾರಿ ಹೇಳುತ್ತಿದೆ.