samachara
www.samachara.com
ಕರ್ನಾಟಕದ ಚುನಾವಣಾ ಹಿನ್ನೆಲೆ: ಸುಳ್ಳು ಸುದ್ದಿಗಳ ವಿರುದ್ಧ ಹೋರಾಟಕ್ಕೆ ಇಳಿದ ಫೇಸ್‌ಬುಕ್‌
UPDATE

ಕರ್ನಾಟಕದ ಚುನಾವಣಾ ಹಿನ್ನೆಲೆ: ಸುಳ್ಳು ಸುದ್ದಿಗಳ ವಿರುದ್ಧ ಹೋರಾಟಕ್ಕೆ ಇಳಿದ ಫೇಸ್‌ಬುಕ್‌

ಕರ್ನಾಟಕದ ಚುನಾವಣೆಯಲ್ಲಿ ಫೇಸ್‌ಬುಕ್‌ ಕೂಡ ನ್ಯಾಯಯುತ ಮತದಾನಕ್ಕಾಗಿ ಶ್ರಮಿಸಲು ಮುಂದಾಗಿದೆ. ತನ್ನೊಳಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ವಿವರ ಇಲ್ಲಿದೆ. 

ಕರ್ನಾಟಕದ ವಿಧಾನಸಭಾ ಚುನಾವಣೆ ದೇಶಾದ್ಯಂತ ಬಿಸಿಯೇರಿಸುತ್ತಿದೆ. ಇದೇ ವೇಳೆ ಫೇಸ್‌ಬುಕ್‌ ಕೂಡ ತನ್ನ ಚುನಾವಣಾ ಕಾರ್ಯಯೋಜನೆಯನ್ನು ರೂಪಿಸಿದೆ. ಪೇಸ್‌ಬುಕ್‌ನಲ್ಲಿ ಎಗ್ಗಿಲ್ಲದೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ತಡೆಗಟ್ಟಿ ‘ಮತಗ್ರಹಣ’ವನ್ನು ತಪ್ಪಿಸುವ ಪ್ರಯತ್ನಕ್ಕೆ ಫೇಸ್‌ಬುಕ್‌ ಸಜ್ಜಾಗಿದೆ.

‘ಬೂಮ್‌ ಲೈವ್‌’ ಎಂಬ ಸತ್ಯಾಂಶ ಪರಿಶೀಲನಾ ಸಂಸ್ಥೆಯ ಜತೆ ಕೈ ಜೋಡಿಸಿ, ಸುಳ್ಳು ಸುದ್ದಿಗಳ ವಿರುದ್ಧ ಹೋರಾಡಲು ಫೇಸ್‌ಬುಕ್‌ ಮುಂದಾಗಿದೆ. ಸಾಮಾಜಿಕ ಜಾಲತಾಣಗಳ ಪೈಕಿ ದೈತನಾಗಿ ನಿಂತಿರುವ ಫೇಸ್‌ಬುಕ್‌ ಸಂಸ್ಥೆ, ತನ್ನ ಮೂಲಕ ಜನರನ್ನು ತಲುಪುವ ಸುದ್ದಿಗಳಲ್ಲಿನ ಸತ್ಯಾಂಶದ ಪರಿಶೀಲನೆ ನಡೆಸಿ, ಸತ್ಯವನಷ್ಟೇ ಜನರಿಗೆ ತಲುಪಿಸುವತ್ತ ಹೆಜ್ಜೆ ಇಟ್ಟಿದೆ.

ಕೆಬ್ರಿಂಜ್‌ ಅನಾಲಿಟಿಕಾದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಸುಳ್ಳು ಸುದ್ದಿಗಳು ಫೇಸ್‌ಬುಕ್‌ಗೆ ಕಂಟಕಪ್ರಾಯವಾಗಿ ಪರಿಣಮಿಸಿವೆ. ಫೇಸ್‌ಬುಕ್‌ ವಿಶ್ವಾಸಾರ್ಹತೆಗೆ ಈ ಸುಳ್ಳು ಸುದ್ದಿಗಳು ಸೆಡ್ಡು ಹೊಡೆದು ನಿಂತಿವೆ. ಹೀಗಾಗಿ ಫೇಸ್‌ಬುಕ್‌ ಸುಳ್ಳು ಸುದ್ದಿಗಳ ವಿರುದ್ಧ ಸಮರ ಸಾರುವುದು ಅನಿವಾರ್ಯವಾಗಿದೆ.

ಚುನಾವಣೆ ಸಮಯದಲ್ಲಿ ಮತದಾರರ ಮನಸ್ಸನ್ನು ಪಲ್ಲಟಗೊಳಿಸುವಲ್ಲಿ ಈ ಸುಳ್ಳು ಸುದ್ದಿಗಳ ಪಾತ್ರವೂ ಕೂಡ ಮಹತ್ತರವಾದದ್ದು. ಆದ ಕಾರಣ ಕರ್ನಾಟಕದಲ್ಲಿ ಮತದಾನ ಪ್ರಕ್ರಿಯೆ ಮುಗಿಯುವವರೆಗೆ ಸುಳ್ಳು ಸುದ್ದಿಗಳ ವಿರುದ್ಧ ಹೋರಾಡುವುದಾಗಿ ಫೇಸ್‌ಬುಕ್‌ ನಿರ್ಣಯಿಸಿದೆ.

ಕರ್ನಾಟಕ ಚುನಾವಣೆಯ ಹೊಸ್ತಿಲ್ಲಿ ಇರುವಾಗಲೇ ಪೋಸ್ಟ್‌ಕಾರ್ಡ್‌ ಜಾಲತಾಣದ ಸಂಪಾದಕ ಮಹೇಶ್‌ ವಿಕ್ರಮ್‌ ಹೆಗಡೆ ಎಂಬಾತ ಬಂಧನಕ್ಕೆ ಒಳಪಟ್ಟಿದ್ದ. ಜೈನ ಮುನಿಯೊಬ್ಬರ ಮೇಲೆ ಅಲ್ಪಸಂಖ್ಯಾತ ಸಮುದಾಯದ ಯುವಕನೊಬ್ಬ ದಾಳಿ ನಡೆಸಿ ಗಾಯಗೊಳಿಸಿದ್ದ ಎಂಬ ಸುಳ್ಳು ಸುದ್ದಿಯನ್ನು ಪ್ರಕಟಿಸಿದ ಕಾರಣಕ್ಕಾಗಿ ಮಹೇಶ್‌ ವಿಕ್ರಮ್‌ ಹೆಗಡೆಯ ಬಂಧನವಾಗಿತ್ತು.

ಇದಲ್ಲದೇ ಸುಳ್ಳು ಇಂಟೆಲಿಜೆನ್ಸ್‌ ವರದಿಗಳು, ಅಭ್ಯರ್ಥಿಗಳ ನಕಲಿ ಪಟ್ಟಿ, ಚುನಾವಣಾ ಪೂರ್ವ ಸಮೀಕ್ಷೆಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ನಂತರದ ದಿನಗಳಲ್ಲಿ ಮುಖ್ಯಮಂತ್ರಿಗಳು ರಾಂಚಿ ಹಾಡೊಂದಕ್ಕೆ ನರ್ತಿಸುತ್ತಿರುವಂತೆ ವೀಡಿಯೋವೊಂದನ್ನು ಸೃಷ್ಟಿಸಿ ಹರಿಬಿಡಲಾಗಿತ್ತು. ಇಂತಹದ್ದೇ ಸಹಸ್ರಾರು ನಕಲಿ ವಿಷಯಗಳು ಫೇಸ್‌ಬುಕ್‌ ಮತ್ತು ವಾಟ್ಸ್‌ಆಪ್‌ ತುಂಬಾ ತುಂಬಿದ್ದವು.

ಈ ಬೆಳವಣಿಗೆಗಳನ್ನು ತಪ್ಪಿಸುವ ಸಲುವಾಗಿ ಫೇಸ್‌ಬುಕ್‌ ಟೊಂಕ ಕಟ್ಟಿ ನಿಂತಿದೆ. ಬೂಮ್‌ ಲೈವ್‌ನ ಉದ್ಯೋಗಿಗಳು ಇದಕ್ಕಾಗಿ ದುಡಿಯುತ್ತಿದ್ದಾರೆ. ಹಿಂದಿನ ಪತ್ರಿಕೋದ್ಯಮ ವಿಧಾನಗಳು ಮತ್ತು ಹೊಸ ಕಾಲದ ತಂತ್ರಜ್ಞಾನಗಳೆರಡನ್ನೂ ಬಳಸಿ ಬೂಮ್‌ ಲೈವ್‌ ಸತ್ಯಾಂಶಗಳನ್ನು ಹೊರಗೆಳೆಯುವ ಪ್ರಯತ್ನದಲ್ಲಿ ನಿರತವಾಗಿದೆ.

ಸಾರ್ವಜನಿಕವಾಗಿ ದೊರೆಯುತ್ತಿರುವ ಸುದ್ದಿಗಳ ಬೆನ್ನುಬಿದ್ದು ಪೋಟೋ, ವೀಡಿಯೋಗಳ ಮೂಲಗಳನ್ನು ಹುಡುಕುತ್ತಿದೆ. ಮುಂದುವರಿದು ಜನರೊಟ್ಟಿಗೂ ಕೂಡ ಸಂಭಾಷಿಸಿ ಸುದ್ದಿಗಳ ಸತ್ಯಾಸತ್ಯತೆಯನ್ನು ಬಯಲು ಮಾಡುವಲ್ಲಿ ಬೂಮ್‌ ಲೈವ್‌ ಶ್ರಮಿಸುತ್ತಿದೆ.

ಬೂಮ್‌ ಲೈವ್‌ 1 ವರ್ಷ 4 ತಿಂಗಳ ಹಿಂದೆ ಜನ್ಮ ತಳೆದ ಸುದ್ದಿಗಳ ಸತ್ಯಶೋಧನಾ ಕಂಪನಿ. ಮುಂಬೈ ಮೂಲದ ಈ ಕಂಪನಿಯಲ್ಲಿ 5 ಜನ ಸತ್ಯ ಪರಿಶೀಲಕರಿದ್ದಾರೆ. ಕರ್ನಾಟಕದ ಚುನಾವಣೆಯ ಕಾರಣದಿಂದಾಗಿಯೇ ಇನ್ನಿಬ್ಬರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಬೂಮ್‌ ಲೈವ್‌ ಮುಂದಾಗಿದೆ.

ಬಹುಮುಖ್ಯವಾಗಿ ಇಂಗ್ಲೀಷ್‌ ಭಾಷೆಯಲ್ಲಿರುವ ಸುದ್ದಿಯ ಲಿಂಕ್‌ಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಿದ್ದು, ಸುಳ್ಳು ಸುದ್ದಿಗಳು ಎಂದಾದಲ್ಲಿ ಆ ಸುದ್ದಿಗಳ ಪ್ರಸರಣಕ್ಕೆ ಫೇಸ್‌ಬುಕ್‌ ಆ ಕ್ಷಣವೇ ನಿಷೇಧ ಹೇರುತ್ತಿದೆ. ಇಂತಹ ಸುದ್ದಿಗಳನ್ನು ಸೃಷ್ಟಿಸಿ, ಪಸರಿಸುವ ಪೇಸ್‌ಬುಕ್‌ ಪೇಜ್‌ಗಳಿಗೆ ಫೇಸ್‌ಬುಕ್‌ ದಂಡ ವಿಧಿಸಲು ಮುಂದಾಗಿದೆ.

ಈ ಕಾರ್ಯಯೋಜನೆ ಫಲಪ್ರದವೇ?:

ಇದಿಷ್ಟನ್ನೂ ಓದಿದ ಮೇಲೆ ಈ ಪ್ರಶ್ನೆ ಉದ್ಭವಿಸುವುದು ಸಾಮಾನ್ಯ. ಈ ಪ್ರಶ್ನೆಗೆ ಫೇಸ್‌ಬುಕ್‌ ‘ಹೌದು' ಎನ್ನುವ ಉತ್ತರವನ್ನು ನೀಡಿದೆ. ಫೇಸ್‌ಬುಕ್‌ ಪ್ರಕಾರ ಬೂಮ್‌ ಲೈವ್‌ ಕಂಪನಿ ನಡೆಸಿರುವ ಸುದ್ದಿ ಪರೀಕ್ಷೆಗಳು ಶೇ.80ರಷ್ಟು ಸುಳ್ಳು ಸುದ್ದಿ ಪ್ರಸರಣವನ್ನು ತಪ್ಪಿಸಿದೆ.

ಅಂತರರಾಷ್ಟ್ರೀಯ ಸತ್ಯ ಪರೀಶಿಲನಾ ಜಾಲದ ನಿರ್ದೇಶಕ ಅಲೆಕ್ಸಿಯೋಸ್‌ ಮನಟ್ಸಾರ್ಲಿಸ್‌ ಹೇಳುವಂತೆ, "ಫೇಸ್‌ಬುಕ್‌ ಇದುವರೆಗೂ ಈ ಸತ್ಯ ಪರಿಶೀಲನೆ ಎಷ್ಟು ಪರಿಣಾಮ ಬೀರಿದೆ ಎಂಬ ದಾಖಲೆಗಳನ್ನು ಬಹಿರಂಗ ಪಡಿಸಿಲ್ಲ. ಹೀಗೆ ಬಹಿರಂಗ ಪಡಿಸುವವರೆಗೂ ಹೊರಗಿನವರಿಗೆ ಫೇಸ್‌ಬುಕ್‌ನ ಈ ಸತ್ಯ ಪರಿಶೀಲನೆ ಎಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಅಂದಾಜಿಸಲು ಸಾಧ್ಯವಿಲ್ಲ,” ಎಂದಿದ್ದಾರೆ. ಬೂಮ್‌ ಲೈವ್‌ ಕಂಪನಿ ಕೂಡ ಇದೇ ಅಂತರರಾಷ್ಟ್ರೀಯ ಸತ್ಯ ಪರಿಶೀಲನಾ ಜಾಲದ ಸದಸ್ಯ ಕಂಪನಿ.

ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವ ನಡೆಗಳು ಎಷ್ಟು ಪರಿಣಾಮಕಾರಿ ಎಂಬ ಪ್ರಶ್ನೆಗಳಿಗೆ ಫೇಸ್‌ಬುಕ್‌ ಇದುವರೆಗೂ ಉತ್ತರಿಸಿಲ್ಲ. ಫೇಸ್‌ಬುಕ್‌ ಬದಲಾಗಿ ಬೂಮ್‌ ಲೈವ್‌ ಈ ಕುರಿತು ಮಾತನಾಡಿದ್ದು, ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ವ್ಯಕ್ತವಾಗುವ ಟೀಕೆಗಳ ಬಗ್ಗೆ ನಮಗೆ ಅರಿವಿದೆ ಎಂದು ತಿಳಿಸಿದೆ. ಮುಂದುವರೆದು, ಬೃಹತ್‌ ಪ್ರಮಾಣ ನಿರೀಕ್ಷೆಗಳನ್ನೇನು ಇಟ್ಟುಕೊಳ್ಳದೆ ಈ ಕಾರ್ಯಯೋಜನೆಯಲ್ಲಿ ಭಾಗಿಯಾಗಿರುವುದಾಗಿ ಹೇಳಿದೆ.

ಸುಳ್ಳು ಸುದ್ದಿಗಳಿಗೆ ಲೇಬಲ್‌:

ಫೇಸ್‌ಬುಕ್‌ ಸುಳ್ಳು ಸುದ್ದಿ ಎಂದೆನಿಸುವ ಪೋಸ್ಟ್‌ಗಳನ್ನು disputed(ವಿವಾದಿತ) ಎಂದು ಕರೆಯುತ್ತದೆ. ಇಂತಹ ಸುದ್ದಿಗಳನ್ನು ಲೇಬಲ್‌ ಕೂಡ ಮಾಡುತ್ತದೆ. ಆದರೆ ಹೀಗೆ ಲೇಬಲ್‌ ಮಾಡುವುದೇ ಜನರ ಕುತೂಹಲಕ್ಕೆ ಕಾರಣವಾಗಬಹುದು ಎನ್ನುವ ವಾದವೂ ಇದೆ.

ಯೆಲೆ ವಿಶ್ವವಿದ್ಯಾಲಯ ಈ ಕುರಿತು ಸಂಶೋಧನೆಯನ್ನು ನಡೆಸಿದೆ. ಈ ಸಂಶೋಧನಾ ವರದಿಯ ಪ್ರಕಾರ ಸುದ್ದಿಗಳ ಮೇಲೆ ‘ವಿವಾದಿತ’ ಎಂಬ ಲೇಬಲ್‌ ಅಂಟಿಸುವುದರಿಂದ ಶೇ.3.7ರಷ್ಟು ಮಂದಿ ಮಾತ್ರ ಆ ಸುದ್ದಿಗಳಿಂದ ದೂರ ಉಳಿಯಬಹುದು. ಉಳಿದವರಲ್ಲಿ ಈ ಸುದ್ದಿಯನ್ನು ಓದಬೇಕು ಎಂಬ ಕಾತರತೆ ಉಂಟಾಗಬಹುದು. ಅಲ್ಲದೇ ಇಂದಿನ ದಿನಗಳಲ್ಲಿ ಜಾಲತಾಣದ ತುಂಬಾ ಪಸರಿಸಿರುವ ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲು ಇನ್ನೂ ಹೆಚ್ಚಿನ ಶ್ರಮವೇ ಬೇಕು.

ಬೂಮ್‌ ಲೈವ್‌ನ ನಿರ್ವಾಹಕ ಸಂಪಾದಕ ಜಾಕೋಬ್‌ ಹೇಳುವಂತೆ, ಸುದ್ದಿಗಳಲ್ಲಿನ ಸತ್ಯ ಪರಿಶೀಲನೆ ಎನ್ನುವುದು ಎಂದಿಗೂ ಮುಗಿಯದ ಕೆಲಸ. ಸತ್ಯ ಪರಿಶೀಲನೆಗೆ ಎಂದು ಕುಳಿತವರ ತಲೆಯೊಳಗಿನ ಸಿದ್ಧಾಂತಗಳೂ ಕೂಡ ಇಲ್ಲಿ ಪ್ರಭಾವವನ್ನು ಬೀರುತ್ತದೆ. ಹಲವಾರು ತೊಡಕುಗಳಿದ್ದರೂ ಕೂಡ ಈ ಸುಳ್ಳು ಸುದ್ದಿಗಳ ಪರೀಕ್ಷೆ ಸ್ವಲ್ಪ ಮಟ್ಟಿಗಾದರೂ ಪರಿಣಾಮ ಬೀರುತ್ತದೆ ಎನ್ನುತ್ತಾರವರು.

ಸುಳ್ಳು ಸುದ್ದಿಗಳ ವಿರುದ್ಧ ಹೋರಾಡುವುದಾಗಿ ಫೇಸ್‌ಬುಕ್‌ ತಿಳಿಸಿದೆ. ಆದರೆ ನಮ್ಮ ಫೇಸ್‌ಬುಕ್‌ ಅಕೌಂಟ್‌ಗಳಲ್ಲಿಯೇ ದಿನನಿತ್ಯ ನೂರಾರು ಸುಳ್ಳು ಸುದ್ದಿಗಳ ಕಾಣಿಸುತ್ತವೆ. ಇದು ನಮ್ಮ ಮುಂದಿರುವ ಸತ್ಯ. ಫೇಸ್‌ಬುಕ್‌ನ ಸತ್ಯದ ಪರಿಶೀಲನೆ ನಡೆಸುವ ಕ್ರಮ ಸ್ವಾಗತಾರ್ಹವೇ ಆದರೂ ಈ ಆನ್‌ ಲೈನ್‌ ಹೋರಾಟದ ಪರಿಣಾಮವೇನು ಎನ್ನುವುದರ ಸತ್ಯಾಸತ್ಯತೆಯನ್ನು ಫೇಸ್‌ಬುಕ್‌ ಮತ್ತು ಬೂಮ್‌ ಲೈವ್‌ ಕಂಪನಿಗಳೇ ಹೊರ ಹಾಕಬೇಕಿದೆ.

ಮಾಹಿತಿ ಮೂಲ: ಹಫ್‌ಪೋಸ್ಟ್.