samachara
www.samachara.com
ದೌರ್ಜನ್ಯ ತಡೆ ಕಾಯ್ದೆ ಬದಲಾವಣೆಗೆ ಆದೇಶ: ಹಿಂಸೆಗೆ ತಿರುಗಿದ ದಲಿತರ ಆಕ್ರೋಶ
UPDATE

ದೌರ್ಜನ್ಯ ತಡೆ ಕಾಯ್ದೆ ಬದಲಾವಣೆಗೆ ಆದೇಶ: ಹಿಂಸೆಗೆ ತಿರುಗಿದ ದಲಿತರ ಆಕ್ರೋಶ

ಮಧ್ಯಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕರೆ ನೀಡಿದ್ದ ‘ಭಾರತ್ ಬಂದ್’ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಈ ಸಮಯದಲ್ಲಿ ಹಾರಿದ ಗುಂಡುಗಳಿಗೆ ನಾಲ್ವರು ಮೃತಪಟ್ಟಿದ್ದಾರೆ. 

samachara

samachara

‘ಪರಿಶಿಷ್ಟ ಜಾತಿ, ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ –1989 ಅನ್ನು ಕೇಂದ್ರ ಸರಕಾರ ದುರ್ಬಲಗೊಳಿಸುತ್ತಿದೆ’ ಎಂದು ಆರೋಪಿಸಿ ದಲಿತ ಸಂಘಟನೆಗಳು ಕರೆನೀಡಿದ್ದ ಸೋಮವಾರದ 'ಭಾರತ್‌ ಬಂದ್‌' ಹಿಂಸೆಗೆ ತಿರುಗಿದೆ.

ಉತ್ತರ ಭಾರತದ ಹಲವು ರಾಜ್ಯಗಳ ಜಿಲ್ಲಾ ಕೇಂದ್ರಗಳು ಅಕ್ಷರಶಃ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವಿನ ಕಾಳಗಕ್ಕೆ ಸಾಕ್ಷಿಯಾಗಿವೆ. ಈವರೆಗೆ ನಾಲ್ವರು ಮೃತಪಟ್ಟ ಬಗ್ಗೆ ವರದಿಗಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್‌, ಭಿಂಡ್‌, ಮೊರೆನಾ, ಸಾಗರ್‌, ಬಾಲಘಾಟ್‌ ಮತ್ತು ಸತ್ನಾ ಜಿಲ್ಲೆಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಈ ಹಿಂದೆ ಉತ್ತರ ಪ್ರದೇಶದ ಮುಜಾಫರ್‌ನಗರ ಕೋಮು ಹಿಂಸಾಚಾರದಿಂದಾಗಿ ಸುದ್ದಿಕೇಂದ್ರಕ್ಕೆ ಬಂದಿತ್ತು. ಇಲ್ಲೀಗ ವಾಹನಗಳು, ಅಂಗಡಿ ಮುಗ್ಗಟ್ಟುಗಳು ಸೋಮವಾರ ಬೆಳಗ್ಗೆಯಿಂದ ಹೊತ್ತಿ ಉರಿಯುತ್ತಿವೆ. ಪೊಲೀಸರು ಪ್ರತಿಭಟನಾಕರಿಂದ ತಪ್ಪಿಸಿಕೊಂಡು, ಠಾಣೆಯ ಒಳಾಂಗಣದಿಂದಲೇ ಗುಂಡು ಹಾರಿಸುತ್ತಿದ್ದಾರೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವ ರಾಜ್‌ನಾಥ್ ಸಿಂಗ್, ಕಾಯ್ದೆಯ ಮರುಪರಿಶೀಲನೆಗೆ ಸುಪ್ರಿಂ ಕೋರ್ಟ್‌ಗೆ ಮನವಿ ಮಾಡಿರುವುದಾಗಿ ಸಮಜಾಯಿಷಿ ನೀಡಿದ್ದಾರೆ.

ಹಿಂಸಾಚಾರವನ್ನು ಪೊಲೀಸರು ನಿಯಂತ್ರಿಸಲು ಕರ್ಫ್ಯೂ ಮೊರೆಹೋಗಿದ್ದಾರೆ. ಮಧ್ಯ ಪ್ರದೇಶದ ಗ್ವಾಲಿಯರ್‌, ಮುರೇನಾದಲ್ಲಿ ಕರ್ಪ್ಯೂ ಹಾಗೂ ಸಾಗರದಲ್ಲಿ ಸೆಕ್ಷನ್‌ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಉತ್ತರ ಭಾರತದಾದ್ಯಂತ ನಡೆದ ಪ್ರತಿಭಟನೆಯ ಪ್ರಮುಖ ಬೆಳವಣಿಗೆಗಳು ಇಲ್ಲಿವೆ:

 • ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಟ್ರಾಫಿಕ್ ಜಾಮ್ ತೆರವುಗೊಳಿಸಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಕೆಲವು ಪೊಲೀಸ್ ಅಧಿಕಾರಿಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ.
 • ದೆಹಲಿ-ಡೆಹ್ರಾಡೂನ್ ಹೆದ್ದಾರಿಯನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಲಾಗಿದೆ.
 • ಉತ್ತರ ಪ್ರದೇಶ, ಪಂಜಾಬ್, ಒಡಿಶಾ, ರಾಜಸ್ಥಾನ, ಜಾರ್ಖಂಡ್ ಮತ್ತು ಬಿಹಾರದ ಭಾಗಗಳಲ್ಲಿ ಪ್ರತಿಭಟನೆ ಕಾವು ಜೋರಾಗಿದೆ.
 • ರಾಜಸ್ಥಾನದ ಬಾರ್ಮರ್ ನಗರದಲ್ಲಿ ದಲಿತರ ಮತ್ತು ಪೊಲೀಸ್ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ ಸುಮಾರು 25 ಮಂದಿ ಗಾಯಗೊಂಡಿದ್ದಾರೆ.
 • ಬಿಹಾರದ ಮುಜಫರ್‌ಪುರದಲ್ಲಿ, ‘ಭೀಮ್ ಆರ್ಮಿ’ ದಲಿತ ಹಕ್ಕುಗಳ ಸಂಘಟನೆಯು ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.
 • ಮೀರತ್ ನಲ್ಲಿ ಕೆಲವು ಕಾರುಗಳು ಹಾನಿಗೊಳಗಾಗಿದೆ.
 • ಬಿಹಾರದ ಅರಾಹ್‌ನಲ್ಲಿ, ಪಂಜಾಬ್ನ ಪಟಿಯಾಲಾದಲ್ಲಿ ಹಾಗೂ ದೇಶದಲ್ಲಿ ಇತರ ರಾಜ್ಯಗಳಲ್ಲಿ ಪ್ರತಿಭಟನಾಕಾರರು ರೈಲುಗಳನ್ನು ನಿರ್ಬಂಧಿಸಿದ್ದಾರೆ.
 • ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯ ದುರ್ಬಲಗೊಳಿಸುವ ಆದೇಶವನ್ನು ಹಿಂಪಡೆಯಬೇಕು ಎನ್ನುವುದು ಪ್ರತಿಭಟನಾಕಾರ ಪ್ರಮುಖ ಬೇಡಿಕೆಯಾಗಿದೆ.
 • ಪಂಜಾಬ್‌ನಲ್ಲಿ ಇಂದು ಸಿಬಿಎಸ್ಇ 10 ಹಾಗೂ 12ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ.
 • ದೆಹಲಿ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಪಂಜಾಬ್‌, ಬಿಹಾರ, ಉತ್ತರಾಖಂಡ್‌, ಗುಜರಾತ್‌ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ ಮಾಡಲಾಗುತ್ತಿದೆ. ಹಲವು ಕಡೆಗಳಲ್ಲಿ ಗಲಾಟೆ ಜರುಗಿದ್ದು, ಆಸ್ತಿ-ಪಾಸ್ತಿ ಹಾನಿಯಾಗಿದೆ.
 • ಈ ನಡುವೆ  ಮಧ್ಯ ಪ್ರದೇಶದ ಮೋರೆನಾ ಪ್ರದೇಶದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇದರಿಂದ ಕರ್ಫ್ಯೂ ಜಾರಿ ಮಾಡಲಾಗಿದೆ. ಅಲ್ಲದೇ, ಬಿಂದ್‌ ಜಿಲ್ಲೆಯಲ್ಲಿ ಕಲ್ಲು ತೂರಾಟ ನಡೆಸಲಾಗಿದೆ.
 • ರಾಜಸ್ಥಾನ, ಬಿಹಾರದಲ್ಲಿ ರೈಲುಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಲಾಗಿದೆ.
 • ಉತ್ತರ ಪ್ರದೇಶದ ಮೀರತ್‌ನಲ್ಲಿ ಪ್ರತಿಭಟನಾನಿರತ ಮೇಲೆ ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ.
 • ರಾಜಸ್ಥಾನದ ಬಾರ್ಮರ್‌ ಮತ್ತು ಕರೌಲಿ ಜಿಲ್ಲೆಯ ಹಿಂದೌನ್‌ಗಳಲ್ಲಿ 144ನೇ ಸೆಕ್ಷನ್‌ ಜಾರಿಯಾಗಿದೆ.

ಏನಿದು ಕಾಯ್ದೆ?:

‘ಪರಿಶಿಷ್ಟ ಜಾತಿ, ಪಂಗಡಗಳ ಜನರ ಮೇಲಿನ ದೌರ್ಜನ್ಯದ ಬಗ್ಗೆ ದೂರು ನೀಡಿದ ಕೂಡಲೇ ಆರೋಪಿಗಳ ಬಂಧನ ಮತ್ತು ಪ್ರಕರಣ ದಾಖಲು ಅಗತ್ಯ ಇಲ್ಲ’ ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಇದನ್ನು ವಿರೋಧಿಸಿ ದಲಿತ ಸಂಘಟನೆಗಳು ಸೋಮವಾರ ಭಾರತ ಬಂದ್‌ಗೆ ಕರೆ ನೀಡಿದ್ದವು.