ಲಿಂಗಾಯತ ಸ್ವತಂತ್ರ ಧರ್ಮ; ನಾಗಮೋಹನ್‌ ದಾಸ್‌ ವರದಿಗೆ ಸಂಪುಟ ಅಸ್ತು
UPDATE

ಲಿಂಗಾಯತ ಸ್ವತಂತ್ರ ಧರ್ಮ; ನಾಗಮೋಹನ್‌ ದಾಸ್‌ ವರದಿಗೆ ಸಂಪುಟ ಅಸ್ತು

ಲಿಂಗಾಯತರು ಹಾಗೂ ಬಸವ ತತ್ವವನ್ನು ಒಪ್ಪಿ ಆಚರಿಸುವ ವೀರಶೈವರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂಬ ಬಗ್ಗೆ ತಜ್ಞರ ಸಮಿತಿ ನೀಡಿರುವ ವರದಿಯನ್ನು ಸಚಿವ ಸಂಪುಟ ಯಥಾವತ್‌ ಆಗಿ ಒಪ್ಪಿಕೊಂಡಿದೆ. 

ಲಿಂಗಾಯತ ಸ್ವತಂತ್ರ ಧರ್ಮದ ವಿಚಾರವಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದ ಸಮಿತಿ ನೀಡಿದ್ದ ವರದಿಯನ್ನು ರಾಜ್ಯ ಸಚಿವ ಸಂಪುಟ ಅಂಗೀಕರಿಸಿದೆ. ವರದಿಯನ್ನು ಅಂಗೀಕರಿಸಿ ಕೇಂದ್ರ ಅಲ್ಪಸಂಖ್ಯಾತ ಆಯೋಗಕ್ಕೆ ಕಳಿಸಲು ಸೋಮವಾರ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

“ಲಿಂಗಾಯತರು ಹಾಗೂ ಬಸವ ತತ್ವವನ್ನು ಒಪ್ಪಿ ಆಚರಿಸುವ ವೀರಶೈವರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂಬ ಬಗ್ಗೆ ತಜ್ಞರ ಸಮಿತಿ ನೀಡಿರುವ ವರದಿಯನ್ನು ಸಚಿವ ಸಂಪುಟ ಯಥಾವತ್‌ ಒಪ್ಪಿಕೊಂಡಿದೆ. ಈ ವರದಿಗೆ ಸಂಪುಟ ಯಾವ ಸಚಿವರೂ ವಿರೋಧ ವ್ಯಕ್ತಪಡಿಸಿಲ್ಲ. ಎಲ್ಲಾ ಸಚಿವರೂ ಸಂತೋಷದಿಂದಲೇ ಈ ವರದಿಗೆ ಅಂಗೀಕಾರ ನೀಡಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮವಾಗುವುದರಿಂದ ಇತರೆ ಧಾರ್ಮಿಕ ಅಲ್ಪಸಂಖ್ಯಾತರ ಮೀಸಲಾತಿಯಲ್ಲಿ ಯಾವುದೇ ಕಡಿತವಾಗುವುದಿಲ್ಲ” ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.

Also read: ಲಿಂಗಾಯತ ಸ್ವತಂತ್ರ ಧರ್ಮ; ಲಾಭ- ನಷ್ಟದ ಲೆಕ್ಕಾಚಾರದಲ್ಲಿ ಇಬ್ಬರಿಗೂ ಸಮಪಾಲು?

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ವೀರಶೈವ ಮಹಾಸಭಾ ಮತ್ತು ವೀರಶೈವ ಸ್ವಾಮೀಜಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಳೆದ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ವೀರಶೈವ ಸ್ವಾಮೀಜಿಗಳು ಯಾವುದೇ ಕಾರಣಕ್ಕೂ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ವರದಿಯನ್ನು ಅಂಗೀಕರಿಸಬಾರದು ಎಂದು ಒತ್ತಾಯಿಸಿದ್ದರು.

ಸೋಮವಾರ ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಬಾಳೇಹೊನ್ನೂರಿನ ರಂಭಾಪುರಿ ಸ್ವಾಮೀಜಿ, “ರಾಜ್ಯ ಸರಕಾರ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡಿದರೆ ಧರ್ಮಯುದ್ಧ ಆರಂಭಿಸುತ್ತೇವೆ” ಎಂದು ಹೇಳಿದ್ದರು. ಆದರೆ, ಇದಾವುದಕ್ಕೂ ಸೊಪ್ಪು ಹಾಕದ ರಾಜ್ಯ ಸರಕಾರ ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ತಜ್ಞರ ಸಮಿತಿ ನೀಡಿದ್ದ ವರದಿಯನ್ನು ಅಂಗೀಕರಿಸಿದೆ.

Also read: 'ಅಲ್ಪಸಂಖ್ಯಾತ ಲಿಂಗಾಯತ ಧರ್ಮ'ದ ಘೋಷಣೆ ಹೇಗೆ?: ಮೀಸಲಾತಿ ಕೋಟದಲ್ಲಿ ಆಗುವ ವ್ಯತ್ಯಾಸಗಳೇನು?

ವೀರಶೈವರಿಗೂ ಬಾಗಿಲು ತೆರೆದಿದೆ:

“ಲಿಂಗಾಯತ ಸ್ವತಂತ್ರ ಧರ್ಮವಾಗಬೇಕೆಂಬ ಹೋರಾಟಕ್ಕೆ ರಾಜ್ಯದಲ್ಲಿ ಜಯ ಸಿಕ್ಕಿದೆ. ವೀರಶೈವರೆಂದು ಹೇಳಿಕೊಳ್ಳುವ ಬಹುತೇಕರ ಬಳಿ ಇರುವುದು ಲಿಂಗಾಯತರು ಎಂಬ ಜಾತಿ ಪ್ರಮಾಣಪತ್ರಗಳೇ. ಆದರೆ, ಇಷ್ಟು ದಿನ ವೀರಶೈವರೆಂದು ಹೇಳಿಕೊಂಡಿದ್ದವರಿಗೆ ಈಗ ಲಿಂಗಾಯತ ಧರ್ಮದಲ್ಲಿ ಬೆರೆಯಲು ಮನಸ್ಸು ಹಿಂದೇಟು ಹಾಕುತ್ತಿದೆ. ಲಿಂಗಾಯತ ಸ್ವತಂತ್ರ ಧರ್ಮದೊಳಗೆ ಸೇರಲು ವೀರಶೈವರಿಗೂ ಸರಕಾರ ಬಾಗಿಲು ತೆರೆದಿದೆ. ಹೀಗಾಗಿ ಬಸವತತ್ವ ಒಪ್ಪುವ ವೀರಶೈವರೂ ಲಿಂಗಾಯತ ಧರ್ಮದೊಳಗೆ ಬರಲು ಮುಕ್ತ ಅವಕಾಶವಿದೆ. ಇಲ್ಲವೇ ವೀರಶೈವರು ಲಿಂಗಾಯತರಿಂದ ಪ್ರತ್ಯೇಕವಾಗಿ ಉಳಿಯಬಹುದು” ಎನ್ನುತ್ತಾರೆ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಜಾಮದಾರ್.

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದ ಹಿನ್ನೆಲೆಯಲ್ಲಿ ಸರಕಾರ ರಚಿಸಿದ್ದ ತಜ್ಞರ ಸಮಿತಿ ಮಾರ್ಚ್‌. 2ರಂದು ಒಟ್ಟು 710 ಪುಟಗಳ ವರದಿಯನ್ನು ಸರಕಾರಕ್ಕೆ ನೀಡಿತ್ತು. ಇದರಲ್ಲಿ ವರದಿಯು 210 ಪುಟಗಳನ್ನು ಒಳಗೊಂಡಿತ್ತು. ಅನುಬಂಧಗಳೇ ಸುಮಾರು 500 ಪುಟಗಳಷ್ಟಿತ್ತು.

ಕೊನೆಯಲ್ಲಿ ಒಟ್ಟು ಐದು ಅಂಶಗಳನ್ನು ಸಮಿತಿ ಶಿಫಾರಸು ಮಾಡಿತ್ತು. ಲಿಂಗಾಯತವನ್ನು, ಲಿಂಗಾಯತ ಧರ್ಮ ಎಂದು ಅಂಗೀಕರಿಸಬಹುದು ಎಂಬುದು ಪ್ರಮುಖ ಅಂಶವಾಗಿತ್ತು. ಹಾಗೆಯೇ, ಬಸವಣ್ಣನವರನ್ನು ಲಿಂಗಾಯತ ಧರ್ಮ ಸಂಸ್ಥಾಪಕ ಎಂದು ನಂಬುವ, ವಚನಗಳನ್ನು ಧರ್ಮ ಗ್ರಂಥಗಳು ಎಂದು ಸ್ವೀಕರಿಸುವ, ಲಿಂಗಾಯತ ಧರ್ಮದ ಆಚರಣೆಗಳನ್ನು ಆಚರಿಸುವ, ಅನುಸರಿಸುವ, ಪ್ರಚಾರ ಮಾಡುವ ವೀರಶೈವರೂ (ಜಾತಿ) ಕೂಡ ಲಿಂಗಾಯತ ಧರ್ಮದ ಭಾಗವಾಗಿರುತ್ತಾರೆ ಎಂದು ಸಮಿತಿ ಶಿಫಾರಸಿನಲ್ಲಿ ತಿಳಿಸಿತ್ತು.

ರಾಜ್ಯ ಅಲ್ಪಸಂಖ್ಯಾತ ಅಯೋಗ ರಾಜ್ಯ ಸರಕಾರಕ್ಕೆ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಶಿಫಾರಸು ಕಳುಹಿಸಬೇಕು ಮತ್ತು ರಾಜ್ಯ ಸರಕಾರ ಕೇಂದ್ರ ಅಲ್ಪಸಂಖ್ಯಾತ ಆಯೋಗಕ್ಕೆ ಒಪ್ಪಿಗೆಗಾಗಿ ಶಿಫಾರಸನ್ನು ಕಳುಹಿಸಬೇಕು ಎಂದು ಸಮಿತಿ ಹೇಳಿತ್ತು.