samachara
www.samachara.com
ಅಮೆರಿಕಾದ ಶಾಲೆಯೊಂದರಲ್ಲಿ ಮತ್ತೆ ಗುಂಡಿನ ಮೊರೆತ: ಮಾಜಿ ವಿದ್ಯಾರ್ಥಿಯೇ ಕೊಲೆಗಡುಕ
UPDATE

ಅಮೆರಿಕಾದ ಶಾಲೆಯೊಂದರಲ್ಲಿ ಮತ್ತೆ ಗುಂಡಿನ ಮೊರೆತ: ಮಾಜಿ ವಿದ್ಯಾರ್ಥಿಯೇ ಕೊಲೆಗಡುಕ

ಅಮೆರಿಕದ ಫ್ಲೋರಿಡಾದಲ್ಲಿನ ಶಾಲೆಯೊಂದಕ್ಕೆ ಮಾಜಿ ವಿದ್ಯಾರ್ಥಿಯೊಬ್ಬ ನುಗ್ಗಿ ಎಆರ್-15 ಎಂಬ ಸೆಮಿ-ಆಟೋಮ್ಯಾಟಿಕ್ ರೈಫಲ್‌ನಿಂದ ಮನಬಂದಂತೆ ಗುಂಡು ಹಾರಿಸಿದ್ದಾನೆ. ಇದರ ಪರಿಣಾಮ ವಿದ್ಯಾರ್ಥಿಗಳೂ ಸೇರಿದಂತೆ ಕನಿಷ್ಠ 17 ಮಂದಿ ಮೃತಪಟ್ಟು, ಸುಮಾರು 12 ಮಂದಿ ಗಾಯಗೊಂಡಿದ್ದಾರೆ . ಗನ್ ಸಂಸ್ಕೃತಿ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿಯೇ ಅಮೆರಿಕಾದ ೧೮ನೇ ಶಾಲೆ, ಮತ್ತೊಂದು ದಾರುಣ ಘಟನೆಗೆ ಸಾಕ್ಷಿಯಾಗಿದೆ. 

ಘಟನೆ ನಡೆದ ಒಂದು ಗಂಟೆಯ ಒಳಗಡೆ ಪಕ್ಕದ ನಗರ ಕೋರಲ್ ಸ್ಪ್ರಿಂಗ್ಸ್ ಟೌನ್ ಬಳಿ ಬಂದೂಕುದಾರಿ ಹಂತಕನನ್ನು ಬಂಧಿಸಲಾಗಿದೆ. ಈತನನ್ನು ನಿಕೋಲೌಸ್ ಕ್ರೂಜ್ (19) ಎಂದು ಗುರುತಿಸಲಾಗಿದ್ದು,  ಎಫ್‍ಬಿಐ ನೆರವಿನೊಂದಿಗೆ ಸ್ಥಳೀಯ ಪೊಲೀಸರು ತೀವ್ರ ತನಿಖೆಗೆ ಒಳಪಡಿಸಿದ್ದಾರೆ.

"ನಾವು ಈಗಾಗಲೇ ಆತನ (ನಿಕೋಲೌಸ್ ಕ್ರೂಜ್) ವೆಬ್‍ಸೈಟ್‍ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಅಂಶಗಳನ್ನ ಪರಿಶೀಲಿಸುತ್ತಿದ್ದೇವೆ. ಕೆಲವು ಅಂಶಗಳು ತುಂಬಾ ಆತಂಕಕಾರಿಯಾಗಿದೆ," ಎಂದು ಬ್ರೋವಾರ್ಡ್ ಕೌಂಟಿಯ ಶೆರಿಫ್ ಸ್ಕಾಟ್ ಇಸ್ರೇಲ್ ತಿಳಿಸಿದ್ದಾರೆ.

ದಾಳಿಗೆ ಕಾರಣವೇನು?

ನಿಕೋಲಸ್ ಕ್ರೂಜ್ ಪ್ರೋರಿಡಾದ ಪಾರ್ಕ್‍ಲ್ಯಾಂಡ್‍ನ ಮಾರ್ಜೊರಿ ಸ್ಟೋನ್‍ಮ್ಯಾನ್ ಡಗ್ಲಾಸ್ ಹೈಸ್ಕೂಲ್‍ನ ವಿದ್ಯಾರ್ಥಿಯಾಗಿದ್ದ. ಈತನು ಶಾಲಾ ನಿಯಮಗಳನ್ನು ಉಲ್ಲಂಘಿಸಿ ಕೆಲವು ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿದ್ದ ಎನ್ನಲಾಗಿತ್ತು. ಇದೇ ಕಾರಣಕ್ಕಾಗಿ ಆತನ ಮೇಲೆ ಶಿಸ್ತುಬದ್ಧ ಕ್ರಮ ಜರುಗಿಸಿ ಆತನನ್ನು ಶಾಲೆಯಿಂದ ಉಚ್ಛಾಟಿಸಲಾಗಿತ್ತು. ಹೀಗಾಗಿ ಇದರ ವಿರುದ್ಧ ಆತ ಪ್ರತೀಕಾರ ತೀರಿಸಿಕೊಳ್ಳಲು ಈ ರೀತಿ ಮಾಡಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಂತಕನಿಂದ ಒಂದು ಎಆರ್-15 ರೈಫಲ್ ಮತ್ತು ಹಲವಾರು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆತನ ಬಳಿ ಮತ್ತಷ್ಟು ಶಸ್ತ್ರಾಸ್ತ್ರಗಳು ಇರುವ ಸಾಧ್ಯತೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇನ್ನೂ ಶೋಧ ಮುಂದುವರಿದಿದೆ. ಈ ದುರ್ಘಟನೆಯಲ್ಲಿನ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಶಾಲೆಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳೂ ವ್ಯಾಸಂಗ ಮಾಡುತ್ತಿದ್ದರು ಎನ್ನುವುದು ಭಾರತೀಯರಿಗೂ ಹೆಚ್ಚಿನ ಆತಂಕವನ್ನು ಉಂಟುಮಾಡಿದೆ.

ಗುಂಡಿನ ದಾಳಿ ಇಂಡಿಯನ್ ಗ್ರೀನ್ ವಿಚ್ ಟೈಮ್ ಪ್ರಕಾರ, ಬುಧವಾರ ಮದ್ಯಾಹ್ನ 1.10 ಕ್ಕೆ ಸಂಭವಿಸಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ 'ಗನ್ ನಿಂದ ಬುಲೆಟ್‌ಗಳು ಹೊರಡುತ್ತಿರುವ ಶಬ್ಧ' ಕೇಳುತ್ತಿದ್ದಂತೆಯೇ ಹೊರಗಡೆ ಓಡಿದ್ದಾರೆ. ಪೋಲಿಸ್ ಮತ್ತು ತುರ್ತು ಸೇವೆಗಳ ಸಿಬ್ಬಂದಿಗಳು ರಕ್ಷಣೆಗಾಗಿ ಶಾಲೆಗೆ ಧಾವಿಸುವಾಗ ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂಧಿ ತಮ್ಮ ಪ್ರಾಣ ರಕ್ಷಣೆಗಾಗಿ ಹೊರಗೆ ಓಡುತ್ತಿದ್ದರು ಎಂದು ರಾಯಿಟರ್ಸ್ ವರದಿ ಮಾಡಿದೆ.

ಈ ದಾಳಿಯನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಖಂಡಿಸಿದ್ದು, ಮಡಿದವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. 'ಮಕ್ಕಳು, ಶಿಕ್ಷಕರು ಸೇರಿದಂತೆ ಯಾರೂ ಕೂಡ ಅಮೆರಿಕನ್‌ ಶಾಲೆಗಳು ಅಸುರಕ್ಷಿತವೆಂದು ಭಾವಿಸುವಂತಾಗಬಾರದು. ದಾಳಿಕೋರನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ಅಧ್ಯಕ್ಷ ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

READ MORE: