'ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ಸರಳಗೊಳಿಸುತ್ತೇವೆ': ಜನಾಶೀರ್ವಾದ ಯಾತ್ರೆಯಲ್ಲಿ ರಾಹುಲ್
UPDATE

'ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ಸರಳಗೊಳಿಸುತ್ತೇವೆ': ಜನಾಶೀರ್ವಾದ ಯಾತ್ರೆಯಲ್ಲಿ ರಾಹುಲ್

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ನಡೆಸಿದ ನಾಲ್ಕು ದಿನಗಳ ಜನಾಶೀರ್ವಾದ ಯಾತ್ರೆ ಮಂಗಳವಾರ ಮುಗಿದಿದೆ. ಕಲಬುರಗಿ ಮತ್ತು ಬೀದರ್‌ನಲ್ಲಿ ಮಂಗಳವಾರ ಸಭೆ ನಡೆಸಿದ ರಾಹುಲ್, “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ವ್ಯವಸ್ಥೆಯನ್ನು ಸರಳಗೊಳಿಸುತ್ತೇವೆ” ಎಂಬ ಭರವಸೆ ನೀಡಿದ್ದಾರೆ.

ಈ ಹಿಂದೆ ಜಿಎಸ್‌ಟಿಯನ್ನು ‘ಗಬ್ಬರ್‌ ಸಿಂಗ್ ಟ್ಯಾಕ್ಸ್‌’ ಎಂದು ಕರೆದಿದ್ದ ರಾಹುಲ್ ಈಗ ಅದೇ ವ್ಯವಸ್ಥೆಯನ್ನು ಸರಳಗೊಳಿಸುವ ಮಾತನ್ನಾಡಿದ್ದಾರೆ. ಕಲಬುರಗಿಯಲ್ಲಿ ವೃತ್ತಿಪರರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿರುವ ರಾಹುಲ್, “ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ವ್ಯವಸ್ಥೆಯನ್ನು ಸರಳಗೊಳಿಸಿ ಒಂದೇ ರೀತಿಯ ತೆರಿಗೆಯನ್ನು ಜಾರಿಗೆ ತರುತ್ತೇವೆ. ಜಿಎಸ್‌ಟಿ ವ್ಯವಸ್ಥೆಯಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಉದ್ದೇಶ. ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಿ ಜನರಲ್ಲಿರುವ ಗೊಂದಲವನ್ನು ನಿವಾರಿಸುತ್ತೇವೆ” ಎಂದಿದ್ದಾರೆ.

“ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಐದು ಹಂತದ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುವುದು ಬೇಡ ಎಂಬುದು ಕಾಂಗ್ರೆಸ್‌ನ ಒತ್ತಾಯವಾಗಿತ್ತು. ಜಿಎಸ್‌ಟಿ ಜಾರಿಗೆ ಮುನ್ನಾ ಪ್ರಾಯೋಗಿಕ ಯೋಜನೆ ತನ್ನಿ, ಇಲ್ಲವಾದರೆ ಇದು ವಿಕೋಪ ಉಂಟುಮಾಡುತ್ತದೆ ಎಂದು ಮೋದಿ ಮತ್ತು ಅರುಣ್‌ ಜೇಟ್ಲಿ ಅವರಿಗೆ ಹೇಳಿದ್ದೆವು” ಎಂದು ರಾಹುಲ್ ತಿಳಿಸಿದ್ದಾರೆ.

“ಜಿಎಸ್‌ಟಿ ಜಾರಿಗೆ ಮೊದಲು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಅವರು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಭೇಟಿಯಾಗಿ ಈ ಬಗ್ಗೆ ತಿಳಿಸಿದ್ದರು. ಜಿಎಸ್‌ಟಿಯಲ್ಲಿರುವ ಐದು ಹಂತದ ತೆರಿಗೆ ವ್ಯವಸ್ಥೆಗೆ ನಮ್ಮ ಸಮ್ಮತಿ ಇರಲಿಲ್ಲ. ಆದರೆ, “ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ” ಎಂದು ಅರುಣ್‌ ಜೇಟ್ಲಿ ಹೇಳಿದ್ದರು” ಎಂದಿದ್ದಾರೆ ರಾಹುಲ್.

“ಜಿಎಸ್‌ಟಿ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಸರಿಯಾಗಿ ತಿಳಿಸಿಹೇಳಿ. ವ್ಯವಸ್ಥೆಗೆ ಪೂರಕವಾಗಿ ಇನ್ನೂ ವೆಬ್‌ಸೈಟ್‌ ಪರೀಕ್ಷೆ ನಡೆದಿಲ್ಲ, ಮೂರು ತಿಂಗಳು ಜಿಎಸ್‌ಟಿ ಜಾಲದ ಪ್ರಯೋಗ ಪರೀಕ್ಷೆ ನಡೆಸಿ, ಬಳಿಕ ಅದನ್ನು ಜಾರಿಗೆ ತನ್ನಿ ಎಂದು ಅರುಣ್‌ ಜೇಟ್ಲಿ ಅವರಿಗೆ ಮನವಿ ಮಾಡಿದ್ದೆವು. ಆದರೆ, ಅವರು ಅದ್ಯಾವುದನ್ನೂ ಮಾಡಲಿಲ್ಲ. ಜಿಎಸ್‌ಟಿ ಜಾರಿ ನಂತರ ಉಂಟಾದ ಗೊಂದಲಕ್ಕೆ ಇದೇ ಕಾರಣ” ಎಂದು ರಾಹುಲ್ ತಿಳಿಸಿದ್ದಾರೆ.

ಮೊದಲ ಹಂತದ ನಾಲ್ಕು ದಿನಗಳ ಜನಾಶೀರ್ವಾದ ಯಾತ್ರೆ ಮಂಗಳವಾರ ಕೊನೆಯಾಗಿದೆ. ಯಾತ್ರೆಯ ನಡುವೆ ರಾಹುಲ್‌ ದರ್ಗಾ- ದೇಗುಲ ಭೇಟಿ ಕೂಡಾ ಚರ್ಚೆಗೆ ಗ್ರಾಸವಾಗಿತ್ತು. ರಾಹುಲ್ ಜನಸಂಪರ್ಕ ಸಭೆಯ ಜತೆಗೆ ಹುಲಿಗಿಯ ಹುಲಿಗೆಮ್ಮ ದೇವಾಲಯ, ಕನಕಗಿರಿಯ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ, ಕಲಬುರಗಿಯ ಕ್ವಾಜಾ ಬಂದೇನವಾಜ್‌ ದರ್ಗಾ ಮತ್ತು ಬೀದರ್‌ನ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಿದ್ದಾರೆ.

ರಾಹುಲ್ ಜನಾಶೀರ್ವಾದ ಯಾತ್ರೆಯ ಎರಡನೇ ದಿನವೇ ದಲಿತರ ಪ್ರತಿಭಟನೆ ಎದುರಿಸಬೇಕಾಯಿತು. ಸದಾಶಿವ ಆಯೋಗದ ವರದಿಯ ಜಾರಿಗೆ ಆಗ್ರಹಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು ಕುಷ್ಟಗಿ ಮತ್ತು ಗಂಗಾವತಿಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದ್ದರು.