ಬರಡು ನೆಲವೊಂದು ದಟ್ಟ ಅರಣ್ಯವಾಗಲು ತೆಗೆದುಕೊಂಡಿದ್ದು 35 ವರ್ಷ ಹಾಗೂ ಒಬ್ಬ ವ್ಯಕ್ತಿಯ ಶ್ರಮ!
ಪಾಸಿಟಿವ್

ಬರಡು ನೆಲವೊಂದು ದಟ್ಟ ಅರಣ್ಯವಾಗಲು ತೆಗೆದುಕೊಂಡಿದ್ದು 35 ವರ್ಷ ಹಾಗೂ ಒಬ್ಬ ವ್ಯಕ್ತಿಯ ಶ್ರಮ!

ಜಾದವ್ ಪಯಾಂಗ್ ಪ್ರತಿದಿನ ಗುಡ ನೆಡುತ್ತಾ ಹೋದರು. ಕೊನೆಗೊಂದು ದಿನ 35 ವರ್ಷ ಬಿಟ್ಟು ನೋಡಿದಾಗ ಬೆನ್ನ ಹಿಂದೆ ದೊಡ್ಡ ಕಾಡು ಎದ್ದು ನಿಂತಿತ್ತು.

ಅದು ನದಿಯ ಮಧ್ಯದಲ್ಲಿರುವ ವಿಶ್ವದ ಅತೀ ದೊಡ್ಡ ದ್ವೀಪ. ಹೆಸರು ಮಜುಲಿ. ಅಸ್ಸಾಂನ ಬ್ರಹ್ಮಪುತ್ರಾ ನದಿಯ ಮಧ್ಯದಲ್ಲಿದೆ. ಸುಮಾರು 136 ಚದರ ಮೈಲಿ ವಿಸ್ತೀರ್ಣವನ್ನು ಹೊಂದಿರುವ ಈ ದ್ವೀಪ 1969ರಲ್ಲಿ ಭೀಕರ ಪ್ರವಾಹಕ್ಕೆ ಗುರಿಯಾಯಿತು. ಪ್ರವಾಹ ಕಳೆದಾಗ ಬರಡು ನೆಲ ಮಾತ್ರ ಉಳಿದಿತ್ತು. ಬೇಸಿಗೆ ಬಂದಾಗ ನೂರಾರು ಹಾವುಗಳ ಬಿಸಿಲಿನ ತಾಪ ತಾಳಲಾರದೆ ಸತ್ತು ಹೋದವು. ವಿಜ್ಞಾನಿಗಳು ಮಜುಲಿಯ ಕತೆ ಮುಗಿಯಿತು, ಇದು ಇನ್ನೊಂದು ಮರುಭೂಮಿ ಎಂದು ಷರಾ ಬರೆದರು.

ಆದರೆ, ಮಜುಲಿ ಹಾಗಾಗಲಿಲ್ಲ. ಇವತ್ತು ಅದೇ ಮಜುಲಿಯಲ್ಲಿ ಆನೆ, ಸಿಂಹಗಳು ಓಡಾಡುತ್ತಿವೆ. ಇಲ್ಲಿ ದಟ್ಟ ಕಾಡಿದೆ. ವಿಜ್ಞಾನಿಗಳ ಮಾತು ಯಾಕೆ ಸುಳ್ಳಾಯಿತು? ಮರುಭೂಮಿಯಾಗಬೇಕಿದ್ದ ಮುಜುಲಿ ಹಸಿರಿನಿಂದ ಕಂಗೊಳಿಸುತ್ತಿರುವುದು ಯಾಕೆ ಎಂದು ಹುಡುಕುತ್ತಾ ಹೊರಟರೆ ಎದುರಾಗುತ್ತಾರೆ ಜಾದವ್ ಪಯಾಂಗ್.

ಜಾದವ್ ಪಯಾಂಗ್ ಇದೇ ಪ್ರವಾಹಕ್ಕೆ ಗುರಿಯಾಗಿದ್ದ ನಜುಲಿಯವರು. ಮಿಶಿಂಗ್‌ ಎಂಬ ಸಣ್ಣ ಬುಡಕಟ್ಟು ಸಮುದಾಯಕ್ಕೆ ಸೇರಿದವರು ಇವರು. ಪ್ರವಾಹ ಬಂದ ಹೊತ್ತಲ್ಲಿ ಪಯಾಂಗ್‌ ಇದ್ದ ಜಾಗಕ್ಕೆ ಹಕ್ಕಿಗಳು ಬರುವುದು ಕಡಿಮೆಯಾಯಿತು. ಪ್ರಾಣಿಗಳು ಅಪರೂಪವಾದವು. ಆಗ ಊರಿನ ಕಥೆ ಮುಗಿಯಿತು ಎಂದು ಮಾತನಾಡಿಕೊಂಡರು ಅಲ್ಲಿದ್ದ ಹಿರಿಯರು. ಇದು ಪಯಾಂಗ್‌ಗೆ ಬೇಸರ ತರಿಸಿತು. ಇದಕ್ಕೇನು ಮಾಡಬೇಕು ಎಂದು ಅವರು ಆ ಹಿರಿಯರನ್ನೇ ಕೇಳಿದರು. ಆಗ ಪಯಾಂಗ್‌ ಕೈಗೆ ಬಿದಿರಿನ ಸಸಿಗಳನ್ನು ಎತ್ತಿಕೊಟ್ಟರು ಈ ಬಿಳಿ ತಲೆಯ ಮನುಷ್ಯರು.

ಆಗ ಪಯಾಂಗ್‌ಗೆ ಕೇವಲ 16 ವರ್ಷ ವಯಸ್ಸು. ಪ್ರವಾಹದ ಭೀಕರತೆಗಳು, ಅದರ ನಂತರದ ಬೇಸಿಗೆಯ ಕ್ಷಾಮವನ್ನು ನೋಡಿದ್ದ ಪಯಾಂಗ್ ನೇರವಾಗಿ ಬಂದು ಆ ಬಿದಿರಿನ ಸಸಿಗಳನ್ನು ಶಿಸ್ತಿನಿಂದ ನೆಡುತ್ತಾ ಹೋದರು. ಬರಡು ನೆಲ ಹಸುರಾಗಬೇಕು ಎಂಬುದಷ್ಟೇ ಅವರ ಸರಳ ಉದ್ದೇಶವಾಗಿತ್ತು. ತನ್ನಿಂದ ಒಬ್ಬನಿಂದ ಇದೆಲ್ಲಾ ಸಾಧ್ಯವೇ ಎಂದವರು ಎಂದೂ ಯೋಚಿಸಲಿಲ್ಲ. ಬಿದಿರು ಮತ್ತು ಒಂದಷ್ಟು ಇತರ ಉಪಯೋಗವಿಲ್ಲದ ಮರಗಳನ್ನು ನೆಡುತ್ತಾ ಹೋದರು. ಹೀಗೆ ದಿನ ಕಳೆಯುತ್ತಿತ್ತು.

ಹಾಗಂಥ ದಿನಪೂರ್ತಿ ಗಿಡ ನೆಟ್ಟರೆ ಪಯಾಂಗ್‌ ಹೊಟ್ಟೆ ತುಂಬುತ್ತಿರಲಿಲ್ಲ. ಅದಕ್ಕಾಗಿ ಮನೆಯಲ್ಲಿ ಹೈನುಗಾರಿಕೆ ಮಾಡುತ್ತಿದ್ದರು. ಅದರ ಮಧ್ಯೆ ಈ ಗಿಡ ನೆಡುವ ಕಾಯಕ ಮುಂದುವರಿಯುತ್ತಿತ್ತು. ಬೆಳಿಗ್ಗೆ ಸ್ವಲ್ಪ ಗಿಡ ನೆಡುವುದು. ನಂತರ ಮನೆಯ ಜಾನುವಾರುಗಳ ಕೆಲಸ. ಅವುಗಳನ್ನು ಹಾಲನ್ನು ವ್ಯಾಪಾರ ಮಾಡುವುದು ನಡೆಯುತ್ತಿತ್ತು. ಪುನಃ ಸಂಜೆ ಗಿಡು ನೆಡುವ ಕೆಲಸ ಮಾಡಿಕೊಂಡು ಬಂದರು. ಕೊನೆಗೆ 15 ವರ್ಷ ಬಿಟ್ಟು ನೋಡಿದಾಗ ದೊಡ್ಡ ಕಾಡು ಬೆನ್ನ ಹಿಂದೆ ನಿಂತಿತ್ತು.

ಬರಡು ನೆಲವೊಂದು ದಟ್ಟ ಅರಣ್ಯವಾಗಲು ತೆಗೆದುಕೊಂಡಿದ್ದು 35 ವರ್ಷ ಹಾಗೂ ಒಬ್ಬ ವ್ಯಕ್ತಿಯ ಶ್ರಮ!
ಚಿತ್ರ ಕೃಪೆ: ಇಂಡಿಯಾ ಟುಡೇ

ಆದರೆ ನಾನು ಇಷ್ಟು ವರ್ಷ ನೆಟ್ಟದ್ದು ಕೇವಲ ಉಪಯೋಗವಿಲ್ಲದ ಗಿಡಗಳು ಎಂದು ಅವರಿಗೆ ಅರ್ಥವಾಗಿತ್ತು. ಕೊನೆಗೆ ಬೆಲೆ ಬಾಳುವ ಸಾಗುವಾನಿ ರೀತಿಯ ಗಿಡಗಳನ್ನು ನೆಡಲು ಆರಂಭಿಸಿದರು. ಸ್ವಲ್ಪ ವರ್ಷಗಳಲ್ಲಿ ದಟ್ಟ ಅರಣ್ಯ ಸೃಷ್ಟಿಯಾಯಿತು. ಹೀಗೆ ಒಂದಲ್ಲ ಎರಡಲ್ಲ ಬರೋಬ್ಬರಿ 35 ವರ್ಷ ನಡೆಯಿತು.

ಇದರ ಮಧ್ಯೆ ತಾವೇ ಸೃಷ್ಟಿಸಿದ್ದ ಕಾಡುಗಳಲ್ಲಿ ಆನೆಗಳು ಘೀಳಿಡಲು ಆರಂಭಿಸಿದವು, ಹುಲಿಗಳು ಓಡಾಟ ಕಂಡು ಬಂತು. ಘೇಂಡಾಮೃಗಗಳು, ಕಾಡು ಹಂದಿಗಳು, ನರಿಗಳು, ಜಿಂಕೆಗಳೆಲ್ಲಾ ದಾಗುಂಡಿ ಇಟ್ಟವು. ಸ್ವಲ್ಪ ದಿನದಲ್ಲಿ ಅವುಗಳದ್ದೇ ಹೊಸ ಸಮಸ್ಯೆ ಸೃಷ್ಟಿಯಾಯಿತು. ಪ್ರಾಣಿಗಳು ಆಹಾರಕ್ಕಾಗಿ ಪಕ್ಕದಲ್ಲಿದ್ದ ಊರಿನ ಹೊಲ ಗದ್ದೆಗಳಿಗೆ ನುಗ್ಗಲು ಆರಂಭಿಸಿದವು. ತೋಟಗಳನ್ನು ಆನೆಗಳು ನೆಲಸಮ ಮಾಡಲು ಶುರುವಿಟ್ಟವು. ಆಗ ಊರಿನವರೆಲ್ಲರೂ ಜಾದವ್ ಪಯಾಂಗ್‌ರ ಬಗ್ಗೆ ಆಕ್ರೋಶಿತರಾದರು. ಈಗ ತಾವೇ ಸೃಷ್ಟಿಸಿದ್ದ ಸಮಸ್ಯೆಗೆ ಅವರು ಉತ್ತರ ಕಂಡುಕೊಳ್ಳಲೇಬೇಕಿತ್ತು.

ಆಗ ಅವರು ಪ್ರಾಣಿಗಳಿಗೆ ಆಹಾರವಾಗುವ ಗಿಡಗಳನ್ನು ನೆಡಲು ಆರಂಭಿಸಿದರು. ಮೊದಲಿಗೆ ಬಾಳೆ ಗಿಡಗಳನ್ನು ನೆಟ್ಟರು. ಅದನ್ನೇ ಪ್ರಾಣಿಗಳು ತಿನ್ನಲು ಆರಂಭಿಸಿದ್ದರಿಂದ ಅವುಗಳ ಉಪಟಳ ನಿಂತು ಹೋಯಿತು. ಇವೆಲ್ಲದರ ಪರಿಣಾಮ ಇವತ್ತು ಒಂದೆರಡು ಮರಗಳಲ್ಲ 1,360 ಎಕರೆ ಅರಣ್ಯವೇ ಎದ್ದು ನಿಂತಿದೆ. ಮತ್ತದು ಸುಸ್ಥಿರ ಕಾಡಿನ ರೂಪ ಪಡೆದುಕೊಂಡಿದೆ. ಅಲ್ಲಿ ಪ್ರಾಣಿ-ಪಕ್ಷಿ, ಹುಳ-ಹುಪ್ಪಟೆ ಎಲ್ಲವೂ ಇದೆ. ಯಾವ ದ್ವೀಪ ಸತ್ತು ಹೋಗುತ್ತದೆ ಎಂದು ವಿಜ್ಞಾನಿಗಳು ಘೋಷಣೆ ಮಾಡಿದ್ದರೋ ಆ ದ್ವೀಪವೇ ಇವತ್ತು ಹಸಿರಿನಿಂದ ನಳ ನಳಿಸುತ್ತಿದೆ.

ಅವರ ಈ ಶ್ರಮವನ್ನು ಗುರುತಿಸಿದ ಅಸ್ಸಾಂ ರಾಜ್ಯ ಸರಕಾರ ಪಯಾಂಗ್‌ ಬೆಳೆಸಿದ ಅರಣ್ಯಕ್ಕೆ ಅವರದೇ ಅಡ್ಡ ಹೆಸರಿಟ್ಟಿತು. ಮುಲಾಯ್‌ ಎಂಬುದು ಅವರ ಪೆಟ್‌ ನೇಮ್, ಹೀಗಾಗಿ ಅರಣ್ಯಕ್ಕೆ ಮುಲಾಯ್‌ ಕಥೋನಿ ಬರಿ ಎಂದು ಹೆಸರಿಡಲಾಯಿತು. ಸ್ವಂತ ಶ್ರಮದ ಮೇಲೆ ಅರಣ್ಯ ಬೆಳೆಸಿದ್ದಕ್ಕಾಗಿ ಅವರನ್ನು ಜೆಎನ್‌ಯು (ಜವಹರ್‌ಲಾಲ್‌ ನೆಹರೂ ಯುನಿವರ್ಸಿಟಿ) 2012ರಲ್ಲಿ ‘ಫಾರೆಸ್ಟ್‌ ಮ್ಯಾನ್‌ ಆಫ್‌ ಇಂಡಿಯಾ’ ಎಂದು ಕರೆಯಿತು. 2015ರಲ್ಲಿ ಭಾರತ ಸರಕಾರ ನಾಗರಿಕ ಸಮ್ಮಾನ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.

ಹಾಗಂಥ ಇದೆಲ್ಲಾ ಪ್ರಶಸ್ತಿಗಳನ್ನು ಪಡೆದುಕೊಂಡು ಅವರು ಇಂದು ಸುಮ್ಮನೆ ಕುಳಿತಿಲ್ಲ. ಇವತ್ತಿಗೂ ಬೆಳಿಗ್ಗೆ 3 ಗಂಟೆಗೆ ಏಳುವ ಪಯಾಂಗ್‌ 5 ಗಂಟೆಗೆ ಮಜುಲಿ ತಲುಪುತ್ತಾರೆ. ತಾವು ಹಿಂದಿನ ದಿನ ನೆಟ್ಟ ಗಿಡಗಳ ಆರೈಕೆಗೆ ಇಳಿಯುತ್ತಾರೆ. ಜತೆಗೆ ಈ ಹಿಂದೆ ನೆಟ್ಟ ಗಿಡಗಳಿಂದ ಬೀಜಗಳನ್ನು ಸಂಗ್ರಹಿಸಿ ಮತ್ತಷ್ಟು ಸಸಿಗಳಿಗಾಗಿ ಬಿತ್ತನೆ ಮಾಡುತ್ತಾರೆ. ಇದೇ ರೀತಿ ಇನ್ನೂ ಸುಮಾರು 5,000 ಎಕರೆಗಳಷ್ಟು ಅರಣ್ಯ ನಿರ್ಮಿಸುವ ಗುರಿಯನ್ನು ಜಾದವ್‌ ಪಯಾಂಗ್‌ ಹಾಕಿಕೊಂಡಿದ್ದಾರೆ. ಮತ್ತು ಆ ದಾರಿಯಲ್ಲಿ ನಡೆಯುತ್ತಿದ್ದಾರೆ.

ಸಂದೇಶ ಇಷ್ಟೆ, ಯಾವುದೇ ಕೆಲಸವನ್ನಾದರೂ ಶ್ರದ್ಧೆಯಿಂದ ದೀರ್ಘಕಾಲ ಮುನ್ನಡೆಸಿದರೆ ಫಲ ಸಿಕ್ಕೇ ಸಿಗುತ್ತದೆ. ಜತೆಗೆ, ಹೆಸರು, ಕೀರ್ತಿಗಳು ಹಿಂಬಾಲಿಸುತ್ತವೆ. ಅದಕ್ಕಿಂತ ಹೆಚ್ಚಾಗಿ ಭೂಮಿ ಮೇಲೆ ಹುಟ್ಟಿದ್ದಕ್ಕೆ ಅರ್ಥವೂ ಸಿಗುತ್ತದೆ.