samachara
www.samachara.com
‘ಅಣಬೆ’: ಇದು ಕೇವಲ ಆರೋಗ್ಯ ವರ್ಧಕ ಮಾತ್ರವಲ್ಲ, ಇಡೀ ಜೀವ ಜಗತ್ತಿನ ರಕ್ಷಕ
ಪಾಸಿಟಿವ್

‘ಅಣಬೆ’: ಇದು ಕೇವಲ ಆರೋಗ್ಯ ವರ್ಧಕ ಮಾತ್ರವಲ್ಲ, ಇಡೀ ಜೀವ ಜಗತ್ತಿನ ರಕ್ಷಕ

ಹಲವಾರು ಔಷದೀಯ ಗುಣಗಳನ್ನು ಹೊಂದಿರುವ ಅಣಬೆ ಕೇವಲ ಮನುಷ್ಯನ ಅಪೌಷ್ಟಿಕತೆಯನ್ನು ಮಾತ್ರವೇ ನೀಗಿಸುತ್ತಿಲ್ಲ. ಬದಲಾಗಿ, ಇಡೀ ಜಗತ್ತನ್ನು ರಕ್ಷಿಸುವ ಗುಣವನ್ನೂ ಹೊಂದಿದೆ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

‘ಅಣಬೆ’ - ಈ ಪದ ನಮ್ಮೆಲ್ಲರಿಗೂ ತಿಳಿದಿರುವುದೇ. ಹಳ್ಳಿಗಳಲ್ಲಿ ಜೀವಿಸುತ್ತಿರುವವರಾದರೆ ನಿತ್ಯ ಕಸದ ತಿಪ್ಪೆಯ ಮೇಲೋ, ಮರ ಬುಡದಲ್ಲೋ, ಕಲ್ಲು ಸಂದಿಗಳಲ್ಲೋ ಅಣಬೆಯನ್ನು ಆಗಾ ನೋಡುತ್ತಿರುತ್ತಾರೆ. ಬಾಲ್ಯದಲ್ಲಿದ್ದಾಗ, ಒಮ್ಮೆಮ್ಮೆ ಈಗಲೂ ಕೂಡ ಅಣಬೆ ಕಂಡಾಗ ಖುಷಿಯಿಂದ ಅವನ್ನು ಕಿತ್ತು ಹೊಸಕುವವರೇ ಹೆಚ್ಚು. ಈ ಲೇಖನವನ್ನು ಓದಿದ ನಂತರವಾದರೂ ಅಣೆಬೆ ಕಂಡಾಗ ಇನ್ನಷ್ಟು ಪ್ರೀತಿ, ಗೌರವಗಳು ಹೆಚ್ಚಾಗಿ ಅಣೆಬೆಗಳನ್ನು ಹೊಸಕುವ ಬದಲು ನಯವಾಗಿ ನೇವರಿಸಿ ಸಂತಸ ಪಡಬಹುದೇನೋ. 

ಶಿಲೀಂಧ್ರ ಎಂದು ಕರೆಸಿಕೊಳ್ಳುವ ಅಣಬೆ ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಹಾರ ವಿಷಯದ ಕಾರಣದಿಂದಾಗಿ ಹೆಚ್ಚು ಸುದ್ದಿಯಾಗಿತ್ತು. ಅಣಬೆ ಶ್ರೀಮಂತರ ತಿನಿಸು ಎನ್ನುವುದಕ್ಕಿಂತ ಹೆಚ್ಚಾಗಿ ಅದರ ಚಿಕಿತ್ಸಕ ಗುಣಗಳಿಂದ ಹೆಸರು ಪಡೆದಿತ್ತು. ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಅಣಬೆ ಕೇವಲ ಮನುಷ್ಯನ ಅಪೌಷ್ಟಿಕತೆಯನ್ನು ಮಾತ್ರವೇ ನೀಗಿಸುತ್ತಿಲ್ಲ. ಬದಲಾಗಿ, ಇಡೀ ಜಗತ್ತನ್ನು ರಕ್ಷಿಸುವ ಗುಣವನ್ನೂ ಹೊಂದಿದೆ.

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.

ಫಂಗಸ್‌ ಅಥವಾ ಫಂಗೈ ಎಂಬ ವೈಜ್ಞಾನಿಕ ಹೆಸರಿಂದ ಕರೆಸಿಕೊಳ್ಳುವ ಅಣಬೆಗಳು ಭೂಮಿಯ ಮೇಲಿರುವ ಜೀವ ಜಗತ್ತಿನ 5ನೇ ಸಾಮ್ರಾಜ್ಯ ಎಂದು ಕರೆಸಿಕೊಂಡಿವೆ. ಅಣಬೆಗಳು ಸಸ್ಯವೂ ಆಗಿರಬಹುದು, ಪ್ರಾಣಿಯೂ ಆಗಿರಬಹುದು. ಮತ್ತೊಂದೆಡೆ ಸೂಕ್ಷ್ಮ ಜೀವಿಯೂ ಆಗಿರಬಹುದು, ಏಕಕೋಶ ಜೀವಿಯೂ ಆಗಿರಬಹುದು. ಅಣಬೆ ಇವೆಲ್ಲವೂ ಹೌದು ಹಾಗೂ ಇವ್ಯಾವುದೂ ಅಲ್ಲ ಎನ್ನುತ್ತಾರೆ ವಿಜ್ಞಾನಿಗಳು.

ಅಣಬೆಗೆ ಇಲ್ಲೇ ಬೆಳಯಬೇಕು ಎಂಬ ಯಾವ ಕಟ್ಟುಪಾಡುಗಳೂ ಇಲ್ಲ. ಎಷ್ಟು ತಾಪಮಾನವಿದ್ದರೂ ಕೂಡ ಅಣಬೆ ಬೆಳೆಯಬಲ್ಲದು, ತಾಪಮಾನವಿಲ್ಲದಿದ್ದರೂ ಸಹ ಬೆಳೆಯಬಲ್ಲದು. ಕೊನೆಗೆ ಅಂತರಿಕ್ಷದಲ್ಲೂ ಕುಡ ಅಣೆಬೆ ತನ್ನ ಅಸ್ತಿತ್ವವನ್ನು ಸ್ಥಾಪಸಿಕೊಳ್ಳುವ ಶಕ್ತಿಯನ್ನು ಹೊಂದಿದೆ. 1988ರಲ್ಲಿ ಗಗನಯಾತ್ರಿಗಳು ಮಿರ್‌ ಬಾಹ್ಯಾಕಾಶ ನಿಲ್ದಾಣದ ಕಿಟಿಕಿಯ ಹೊರಭಾಗದಲ್ಲಿ ಅಣಬೆ ಬೆಳೆಯುತ್ತಿದ್ದನ್ನು ಗುರುತಿಸಿದ್ದರು.

ಭೂಮಿಯ ಮೇಲೆ ಜೀವಿಸುತ್ತಿರುವ ಅತಿದೊಡ್ಡ ಜೀವ ಸಂಕುಲವೆಂದರೆ ಅದು ಒಂಟಿ ಫಂಗಸ್‌. ಸಿಹಿ ರುಚಿಯನ್ನು ಹೊಂದಿರುವ ಕಾರಣದಿಂದ ಇದಕ್ಕೆ ‘ಹನಿ ಫಂಗಸ್‌’ ಎಂಬ ಹೆಸರನ್ನು ಇಡಲಾಗಿದೆ. ಮೊದಲು ಈ ಹನಿ ಫಂಗಸ್‌ ಅಮೆರಿಕಾದ ಒರೆಂಗಾನ್‌ ಬಳಿಯ ಪರ್ವತ ಪ್ರದೇಶದಲ್ಲಿ ಪತ್ತೆಯಾಗಿತ್ತು. ಸುಮಾರು 2.4 ಮೈಲಿ (3.8 ಕಿಲೋ ಮೀಟರ್ ವಿಸ್ರೀರ್ಣದಲ್ಲಿ ಹಬ್ಬಿದ್ದ ಈ ಹನಿ ಫಂಗಸ್‌ ಸುಮಾರು 22,000 ಪೌಂಡ್ಸ್‌ ಅಂದರೆ, 9,979 ಕೆಜಿ ತೂಗುತ್ತದೆ ಎಂದು ಅಂದಾಜಿಸಲಾಗಿತ್ತು.

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.

ಫಂಗೈ ಎಲ್ಲಿ ಬೇಕಾದರೂ ಬೆಳೆಯಬಲ್ಲದು. ನೀರಿನ ಆಳದಲ್ಲಿ, ಮರದ ಮೇಲೆ, ಮಣ್ಣಿನ ಮಧ್ಯೆ, ಅಥವಾ ಗಾಳಿಯಲ್ಲಿ ತೇಲುತ್ತಲೂ ಕೂಡ ಬೆಳವಣಿಗೆ ಕಾಣಬಲ್ಲದು. ಒಮ್ಮೆಮ್ಮೆ ನಮ್ಮ ದೇಹಗಳಲ್ಲೂ ಕೂಡ ಫಂಗೈ ಅಸ್ತಿತ್ವ ಸ್ಥಾಪಿಸಬಲ್ಲದು. ನಮ್ಮ ಚರ್ಮದ ಮೇಲೆ ಅಷ್ಟೇ ಅಲ್ಲದೇ ಕರುಳಿನ ಒಳಗೆ ಬೇಕಾದರೂ ಬೆಳೆಯುವ ಶಕ್ತಿ ಫಂಗೈಗಳಿಗಿದೆ ಎಂಬುದು ವಿಜ್ಞಾನಿಗಳ ವಾದ.

ಅಣಬೆಗಳು ಅತ್ಯದ್ಭುತವಾದ ರುಚಿಯನ್ನು ಹೊಂದಿವೆ, ಆದರೆ ಬೇಯಿಸದೇ ತಿಂದರೆ ಜೀರ್ಣವಾಗದೇ ಉಳಿಯುತ್ತವೆ. ಆಹಾರವನ್ನು ಬೇಯಿಸುವ ಕ್ರಮ ನಮ್ಮ ಆರೋಗ್ಯಯುತ ಜೀವನಕ್ಕೆ ಬೇಕಾದ ಪ್ರೊಟೀನ್‌, ವಿಟಮಿನ್‌ ಬಿ, ಸಿ ಮತ್ತು ಡಿ ಅನ್ನು ಬಿಡುಗಡೆಗೊಳಿಸುತ್ತದೆ. ಇವುಗಳ ಜತೆಗೆ ಕ್ಯಾನ್ಸರ್‌ ಕಾಯಿಲೆಯನ್ನು ತಡೆಗಟ್ಟಬಲ್ಲ ಸೆಲೆನಿಯಂ ಎಂಬ ಅಂಶವೂ ಕೂಡ ಬೇಯಿಸಿದ ಅಣಬೆಯಲ್ಲಿ ದೊರೆಯುತ್ತದೆ.

ಅಣಬೆಗಳು ನಮ್ಮ ದೇಹಕ್ಕೆ ಅತ್ಯಗತ್ಯವಾದ ಕಬ್ಬಿಣ, ತಾಮ್ರ, ರಿಬೋಫ್ಲಾವಿನ್‌, ನಿಯಾಸಿನ್‌ ಅಂಶಗಳ ಆಕರ ಎನ್ನುತ್ತಾರೆ ವಿಜ್ಞಾನಿಗಳು. ಜತೆಗೆ ನಮಗೆ ಅಗತ್ಯವಾದ ನಾರಿನ ಅಂಶವನ್ನೂ ಕೂಡ ಅಣಬೆ ಹೊಂದಿದೆ. ಅಧ್ಯಯನಗಳು ಹೇಳುವಂತೆ ಒಂದು ಪೋರ್ಟೋಬೆಲ್ಲೋ ಅಣಬೆ ಒಂದು ಬಾಳೆ ಹಣ್ಣಿಗಿಂತ ಹೆಚ್ಚು ಪೊಟ್ಯಾಷಿಯಂ ಸತ್ವವನ್ನು ಶೇಖರಣೆ ಮಾಡಿಕೊಳ್ಳಬಲ್ಲದು.

ತಿನ್ನಲು ಸಾಧ್ಯವಾಗುವ ಮತ್ತು ಸಾಧ್ಯವಾಗದ ಎರಡೂ ರೀತಿಯ ಅಣಬೆಗಳು ಸಹಸ್ರಾರು ವರ್ಷಗಳಿಂದ ಮಾನವನ ವೈದ್ಯಕೀಯ ಚಿಕಿತ್ಸೆಗಳ ಭಾಗವಾಗಿವೆ. ಆಧುನಿಕ ವೈದ್ಯ ಶಾಸ್ತ್ರದ ಪಿತಾಮಹ ಎನಿಸಿರುವ ಗ್ರೀಕ್‌ ತತ್ವಜ್ಞಾನಿ ಹಿಪ್ಪೋಕ್ರಟಿಸ್‌ ಗಾಯಗಳಿಗೆ ಫೋಮ್ಸ್‌ ಫೊಮೆಂಟರಿಯಸ್‌ ಎಂಬ ಹೆಸರಿನ ಮರದ ತೊಗಟೆಗಳ ಮೇಲೆ ಬೆಳೆಯುವ ಅಣಬೆಯನ್ನು ಔಷಧಿಯಾಗಿ ಬಳಸುತ್ತಿದ್ದ. ಪುಫ್ಬಾಲ್‌ ಹೆಸರಿನ ದೊಡ್ಡ ಗಾತ್ರದ ಅಣಬೆಯನ್ನು ಅಮೆರಿಕಾದ ಮೂಲ ನಿವಾಸಿಗಳು ರಕ್ತಸ್ರಾವವನ್ನು ತಡೆಗಟ್ಟಲು ಬಳಸುತ್ತಿದ್ದರು.

‘ಅಣಬೆ’: ಇದು ಕೇವಲ ಆರೋಗ್ಯ ವರ್ಧಕ ಮಾತ್ರವಲ್ಲ, ಇಡೀ ಜೀವ ಜಗತ್ತಿನ ರಕ್ಷಕ

ಪೆನ್ಸಿಲಿನ್‌ ಎಂಬ ಔಷಧಿಯನ್ನು ನಾವೆಲ್ಲರೂ ಪಡೆದೇ ಇರುತ್ತೇವೆ. ಈ ಔಷಧಿಯ ಮೂಲ ಫಂಗೈಗಳ ಭಾಗವೇ ಆಗಿರುವ ಪೆನ್ಸಿಲಿಯಂ ಎಂಬ ಜೀವಿಗಳು. 1920ರ ನಂತರದಲ್ಲಿ ಪಿನ್ಸಿಲಿನ್‌ ಔಷಧಿಯನ್ನು ಕಂಡುಹಿಡಿದ ಮೇಲೆ ಲೆಕ್ಕಕ್ಕೇ ಸಿಗದಷ್ಟು ಮನುಷ್ಯರು ಇದರಿಂದಲೇ ಬದುಕಿದ್ದಾರೆ.

ಸಿಡುಬು, ಗುಲ್ಮ ಜ್ವರ (ಆಂಥ್ರಾಕ್ಸ್) ಇತ್ಯಾದಿ ರೋಗಗಳಿಗೆ ಮರದ ಮೇಲೆ ಬೆಳೆಯುವ ಫಂಗಸ್‌ ಒಂದು ನೈಸರ್ಗಿಕ ಆಯುಧವಾಗಿ ಬಳಕೆಯಾಗುತ್ತಿದೆ. ಹಲವಾರು ತೆರನಾದ, ಹೆಸರೇ ಇಲ್ಲ ಫಂಗೈಗಳು ನಾನಾ ತರಹದ ರೋಗಗಳಿಗೆ, ವೈರಾಣುಗಳಿಗೆ ಔಷಧಿಯಾಗಿ ಬಳಕೆಯಾಗುತ್ತಿವೆ. ಆದರೆ ನಮ್ಮ ತಪ್ಪಿನಿಂದಾಗಿ ಇಂದು ಯುರೋಪ್‌ನಿಂದ ಅಮೆರಿಕಾ ಖಂಡಗಳವರೆಗೆ ಫಂಗಸ್‌ಗಳು ಕಾಣೆಯಾಗುತ್ತಾ ಸಾಗಿವೆ.

ಬಹುಪಾಲು ವಿಧದ ಫಂಗೈಗಳು ನಮ್ಮ ಔಷಧಿಗಳಾಗಿ ಬಳಕೆಯಾಗುತ್ತಿವೆ ಎನ್ನುವುದೇನೋ ನಿಜ. ಆದರೆ ಫಂಗೈಗಳ ನೈಜವಾದ ಕೆಲಸ ನೈಸರ್ಗಿಕ ಜಗತ್ತಿನ ಸುಸ್ಥಿರತೆಯನ್ನು ಕಾಪಾಡುವುದು. ಮಣ್ಣಿನ ಆಹಾರ ಸರಪಳಿಯಲ್ಲಿ ಬ್ಯಾಕ್ಟೀರಿಯಾಗಳ ಜತೆಗೆ ಫಂಗೈಗಳೂ ಕೂಡ ಮಹತ್ತರ ಪಾತ್ರವನ್ನು ವಹಿಸುತ್ತವೆ. ಮಣ್ಣಿನಲ್ಲಿ ಜೀರ್ಣಗೊಳ್ಳದ ವಸ್ತುಗಳನ್ನು ಫಂಗೈಗಳು ನೈಸರ್ಗಿಕ ಗೊಬ್ಬರವಾಗಿ ಪರಿವರ್ತಿಸುತ್ತವೆ. ಫಂಗೈಗಳಿಂದ ಹೊರಟ ಎಳೆಗಳ ರೂಪದ ಭಾಗವು ಮಣ್ಣನ್ನು ಸಡಿಲಗೊಳಿಸಿ, ಭೂಮಿಯಲ್ಲಿ ನೀರು ಇಂಗುವ ಪ್ರಮಾಣವನ್ನು ಹೆಚ್ಚಿಸುತ್ತದೆ.

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.

ತಜ್ಞರು ಹೇಳುವ ಪ್ರಕಾರ ಆರೋಗ್ಯವಂತ ಸಸ್ಯಗಳ ಬೇರುಗಳು ಫಂಗೈಗಳ ಮೇಲೆ ಅವಲಂಭಿತವಾಗಿರುತ್ತವೆ. ಅದೇ ವೇಳೆ ಫಂಗೈ ಕೂಡ ಸಸ್ಯದ ಮೇಲೆ ಅವಲಂಭಿತವಾಗಿರುತ್ತದೆ. ಎರಡರ ಪರಸ್ಪರ ಬೆಳವಣಿಗೆಗೆ ಈ ಹೊಂದಾಣಿಕೆ ಅತ್ಯಗತ್ಯ. ಈ ಹೊಂದಾಣಿಕೆ ಮರಗಿಡಗಳ ಬೆಳವಣಿಗೆಗೆ ಪೂರಕವಾಗಿ ನಿಂತು ಪರಿಸರವನ್ನು ಕಾಯುತ್ತದೆ.

ಫಂಗೈಗಳು ನಮ್ಮ ಜಗತ್ತನ್ನು ಮಾಲಿನ್ಯದಿಂದ ರಕ್ಷಿಸುವ ಕೆಲಸವನ್ನೂ ಕೂಡ ಮಾಡುತ್ತಿವೆ. ಓಯಿಸ್ಟರ್‌ ಮಶ್ರೂಮ್‌ನಂತಹ ಕೆಲವು ಫಂಗೈಗಳು ನಿತ್ಯವೂ ಕಿಣ್ವಗಳ ಉತ್ಪಾದನೆಯಲ್ಲಿ ತೊಡಗಿರುತ್ತವೆ. ಈ ಕಿಣ್ವಗಳು ಪೆಟ್ರೋಲಿಯಂನಲ್ಲಿನ ಹೈಡ್ರೋ ಕಾರ್ಬನ್‌ಗಳನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ಹೊಂದಿವೆ. ಕೆಲವು ಕಿಣ್ವಗಳು ಪಾದರಸವನ್ನೇ ಅರಗಿಸಿಕೊಳ್ಳುವ ಶಕ್ತಿ ಹೊಂದಿದ್ದರೆ, ಮತ್ತೆ ಕೆಲವು ಕಿಣ್ವಗಳು ಪಾಲಿಯುರೆಥೇನ್‌ ಪ್ಲಾಸ್ಟಿಕ್‌ ವಸ್ತುಗಳನ್ನೂ ಕೂಡ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈಗ ವಿಜ್ಞಾನಿಗಳು ಇಂತಹ ಕಿಣ್ವಗಳು ವಾತಾವರಣಕ್ಕೆ ಸೇರಿದ ಅಣು ವಿಕಿರಣಗಳನ್ನು ಕೂಡ ಹೀರಿಕೊಳ್ಳಬಲ್ಲವೇ ಎಂಬ ಪರೀಕ್ಷೆಯಲ್ಲಿ ನಿರತರಾಗಿದ್ದಾರೆ.

ಅಣಬೆಗಳು ನೋಡಲು ಮಾತ್ರವೇ ಸುಂದರವಾದ ಜೀವಿಗಳಲ್ಲ. ಅವು ಮಾಡುವ ಕೆಲಸಗಳೂ ಕೂಡ ಅಷ್ಟೇ ಪರಿಣಾಮಕಾರಿ. ಇಡೀ ಜೀವ ಜಗತ್ತಿಗೆ ಬುನಾದಿಯಾಗಬಲ್ಲ ಅಣಬೆಗಳನ್ನು ಕಂಡಾಗ ಹೊಸಕುವ ಬದಲು ಅವನ್ನು ಪ್ರೀತಿಸಲು ಕಲಿಯೋಣ.