samachara
www.samachara.com
‘ಮಿಸಾಲ್‌ ಮುಂಬೈ’: ವಾಣಿಜ್ಯ ನಗರಿಯ ಸ್ಲಂ ಗೋಡೆಗಳೆಲ್ಲಾ ಈಗ ‘ವರ್ಣಮಯ’!
ಪಾಸಿಟಿವ್

‘ಮಿಸಾಲ್‌ ಮುಂಬೈ’: ವಾಣಿಜ್ಯ ನಗರಿಯ ಸ್ಲಂ ಗೋಡೆಗಳೆಲ್ಲಾ ಈಗ ‘ವರ್ಣಮಯ’!

ಸ್ಲಂ ಎಂದರೆ ಸಾಕು ಮೂಗು ಮುರಿಯುವವರೇ ಹೆಚ್ಚು. ಆದರೆ ಇಲ್ಲೊಂದು ತಂಡ ಸ್ಲಂಗಳ ನೋಟವನ್ನೇ ಬದಲಾಯಿಸಲು ಹೊರಟಿದೆ. ಇವರಿಂದ ಇಂದು ಮುಂಬೈನ ಸ್ಲಂಗಳು ಕಲರ್‌ಫುಲ್‌ ಆಗಿವೆ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಸ್ಲಂ ಎಂಬ ಪದ ಕೇಳಿದಾಕ್ಷಣ ಮೂಗು ಮುರಿಯುವವರ ಸಂಖ್ಯೆಯೇ ಹೆಚ್ಚು. ಸ್ಲಂ ಜನರು ಶುಚಿತ್ವವನ್ನು ಕಾಪಾಡಿಕೊಳ್ಳುವುದಿಲ್ಲ, ರಸ್ತೆಗಳಲ್ಲೆ ಕೊಳಚೆ ನೀರು ಹರಿಯುತ್ತದೆ, ಆದ್ದರಿಂದಾಗಿಯೇ ಸ್ಲಂಗಳೆಂದರೆ ಹೇವರಿಕೆ ಎನ್ನುವ ಮಂದಿ, ಸ್ಲಂ ಜನರೇಕೆ ಹೀಗೆ ವಾಸಿಸುತ್ತಿದ್ದಾರೆ ಎಂಬ ಯೋಚನೆ ಮಾಡುವುದಿಲ್ಲ. ಸಮಸ್ಯೆಗಳ ಕುರಿತು ಆಲಿಸುವುದಿಲ್ಲ. ವಾಸಸ್ಥಳದ ಮೇಲೆಯೇ ಸ್ಲಂ ಜನರನ್ನು ಅಳೆದುಬಿಡುತ್ತಾರೆ.

ಸ್ಲಂಗಳಲ್ಲಿ ವಾಸಿಸುವ ಬಡ, ಹಿಂದುಳಿದ ವರ್ಗಗಳ ಜನರ ಗೋಳನ್ನು ಕೇಳುವವರು ಕಡಿಮೆ. ಅವರ ಬಗ್ಗೆ ಯೋಚಿಸುವವರೂ ಕಡಿಮೆ. ಈಗ ಮುಂಬೈನ ಸ್ವಯಂ ಸೇವಾ ಸಂಸ್ಥೆಯೊಂದು ಸ್ಲಂಗಳನ್ನು ಅಂದಗಾಣಿಸುವ ಕೆಲಸಕ್ಕೆ ಮುಂದಾಗಿದೆ. ಮುಂಬೈನ ಧೋಬಿ ಘಾಟ್‌, ಅಂಬೇಡ್ಕರ್‌ ನಗರ, ಕಾಮಾಟಿಪುರ ಸೇರಿದಂತೆ, ಪಕ್ಕದ ಥಾಣೆ ನಗರದ ಒಟ್ಟು 13 ಸ್ಲಂಗಳನ್ನು ಕಲರ್‌ಫುಲ್‌ ಆಗಿಸಿದೆ. ಈ ಸ್ಲಂಗಳು ಈಗ ದೂರದಿಂದಲೇ ಕಂಗೊಳಿಸುತ್ತವೆ. ನೋಡಿದವರ ಮನಸೂರೆಗೊಳ್ಳುತ್ತಿವೆ.

‘ಮಿಸಾಲ್‌ ಮುಂಬೈ’: ವಾಣಿಜ್ಯ ನಗರಿಯ ಸ್ಲಂ ಗೋಡೆಗಳೆಲ್ಲಾ ಈಗ ‘ವರ್ಣಮಯ’!
/misaal mumbai 

ಈ ಕಾರ್ಯಕ್ಕೆ ಕೈ ಹಾಕಿರುವುದು ಮೂಲತಃ ಚಿತ್ರ ಕಲಾವಿದೆಯಾಗಿರುವ ಸಾಮಾಜಿಕ ಕಾರ್ಯಕರ್ತೆ ರೋಬೆಲ್‌ ನಗಿ. ಈ ವರ್ಷದ ಜನವರಿ ತಿಂಗಳಿಂದ ‘ಮಿಸಾಲ್‌ ಮುಂಬೈ’ ಹೆಸರಿನ ಸ್ವಯಂ ಸೇವಾ ಸಂಸ್ಥೆಯ ಮೂಲಕ ಮುಂಬೈ ಸ್ಲಂಗಳಿಗೆ ಬಣ್ಣ ಬಳಿಯುವ ಕಾರ್ಯ ಕೈಗೊಂಡಿರುವ ರೋಬೆಲ್‌ ನಗಿ, ಅದಾಗಲೇ ಸ್ಲಂಗಳಲ್ಲಿನ 24,000 ಮನೆಗಳ ಗೋಡೆಗಳಲ್ಲಿ ರಂಗು ಮೂಡಿಸಿದ್ದಾರೆ.

ರೋಬೆಲ್‌ ನಗಿಯವರ ತಂಡ ಭಿತ್ತಿಚಿತ್ರಗಳಿಂದ ತುಂಬಿ, ಕೊಳೆಹಿಡಿದಿದ್ದ ಮುಂಬೈನ 300ಕ್ಕೂ ಹೆಚ್ಚು ರಸ್ತೆ ಬದಿಯ ಗೋಡೆಗಳಿಗೆ ಬಣ್ಣ ಬಳಿದಿದೆ. ಹಿಂದೆ ನೋಡಲೂ ಕೂಡ ಸಾಧ್ಯವಾಗದಂತಹ ಸ್ಥಿತಿಗೆ ತಲುಪಿದ್ದ ಗೋಡೆಗಳು ಇಂದು ಆಕರ್ಷಕ ಬಣ್ಣಗಳಿಂದ ಅಲಂಕರಿಸಿಕೊಂಡಿವೆ.

/misaal mumbai 
/misaal mumbai 

“ಮನೆಗಳ ಒಳಾಂಗಣದಲ್ಲಿ ಬಣ್ಣ ಬಳಿಯುವುದು, ಮನೆಯೊಳಗಿನ ಕತ್ತಲೆಯನ್ನು ಕಳೆದು ಬೆಳಕು ಮೂಡಿಸುವುದು ಇವೆಲ್ಲಾ ಎರಡನೇ ಪ್ರಶ್ನೆ. ಸ್ಲಂಗಳಲ್ಲಿ ವಾಸಿಸುತ್ತಿರುವ ಜನರ ಜೀವನ ಮಟ್ಟವನ್ನು ಸುಧಾರಿಸುವುದು ನಮ್ಮ ಮೊದಲ ಆದ್ಯತೆ,” ಎನ್ನುತ್ತಾರೆ ರೋಬೆಲ್‌ ನಗಿ.

ರೋಬೆಲ್‌ ನಗಿಯವರ ‘ಮಿಸಾಲ್‌ ಮುಂಬೈ’ ಸಂಸ್ಥೆ ಸ್ಲಂಗಳಲ್ಲಿನ ಮನೆಯ ಗೋಡೆಗಳಿಗೆ ಬಣ್ಣ ಬಳಿಯುವುದಕ್ಕೆ ಮಾತ್ರವೇ ತನ್ನನ್ನು ತಾನು ಸೀಮಿತಗೊಳಿಸಿಕೊಂಡಿಲ್ಲ. ಅದರ ಜತೆಗೆ ಸ್ಲಂನಲ್ಲಿ ವಾಸಿಸುತ್ತಿರುವ ಮಕ್ಕಳು ಮತ್ತು ಮಹಿಳೆಯರಿಗಾಗಿ ಮೆಡಿಕಲ್‌ ಕ್ಯಾಂಪ್‌ಗಳನ್ನು ನಡೆಸುತ್ತಿದೆ. ಸ್ವಚ್ಛತೆ ಮತ್ತು ಆರೋಗ್ಯಪೂರ್ಣ ವಾಸಸ್ಥಳವನ್ನು ರೂಪಿಸಿಕೊಳ್ಳುವುದು ಹೇಗೆ ಎಂದು ಕಾರ್ಯಾಗಾರಗಳನ್ನು ನಡೆಸುತ್ತಿದೆ. ಮುಂಬೈನ ಸ್ಲಂಗಳಲ್ಲಿರುವ 32 ಬಾಲವಾಡಿಗಳಲ್ಲಿ ಕಲೆಯ ಕುರಿತು ಕಾರ್ಯಗಾರಗಳನ್ನು ಕೂಡ ಕೈಗೆತ್ತಿಕೊಂಡಿದೆ.

“ಜನರ ಮನೆಗಳು ಚಿಕ್ಕವೋ ಅಥವಾ ದೊಡ್ಡವೋ ಎನ್ನುವುದು ಮುಖ್ಯವಲ್ಲ, ವಾಸಿಸುವ ಪ್ರದೇಶ ಸ್ವಚ್ಛವಾಗಿರಬೇಕು ಅಷ್ಟೇ. ಯಾವ ಪ್ರದೇಶಗಳು ಸ್ವಚ್ಛವಾಗಿ ಇಲ್ಲವೋ ಅಲ್ಲಿ ವಾಸುತ್ತಿರುವವರೆಲ್ಲರೂ ನನ್ನ ಸಂಬಂಧಿಗಳು. ಅವರನ್ನು ನಾನು ನನ್ನ ಕುಟುಂಬದ ಮುಂದುವರಿದ ಭಾಗ ಎಂದೇ ಭಾವಿಸುತ್ತೇನೆ,” ಎನ್ನುತ್ತಾರೆ ರೋಬೆಲ್‌ ನಗಿ.

ರೋಬೆಲ್‌ ನಗಿ.
ರೋಬೆಲ್‌ ನಗಿ.
/misaal mumbai 

ಮಿಸಾಲ್‌ ಮುಂಬೈ ತಂಡ ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಕೆಲವು ಪ್ರದೇಶಗಳಲ್ಲಿನ ಹಲವಾರು ಜೋಪಡಿಗಳಲ್ಲಿ ಮಳೆಗಾಲದಲ್ಲಿ ನೀರು ಒಳಸೋರದಂತೆ ವ್ಯವಸ್ಥೆ ಮಾಡಿಕೊಟ್ಟಿದೆ.

ನಗಿಯವರ ತಂಡ ಮುಂಬೈನ ಜಾಫರ್‌ ಬಾಬಾ ಕಾಲೋನಿಯಲ್ಲಿನ ಮಹಿಳೆಯೊಬ್ಬರ ಮನೆಯ ಗೋಡೆಗಳಿಗೆ ರಂಗು ಮೂಡಿಸಿತ್ತು. ಈ ಕುರಿತು ಮಹಿಳೆ ಸಂಸತ ವ್ಯಕ್ತಪಡಿಸಿದ್ದಾರೆ.

“ಯಾರೋ ಬಂದು ನಮ್ಮ ಮನೆಯ ಗೋಡೆಗಳಿಗೆ ಸುಂದರವಾಗಿ ಕಾಣುವಂತೆ ಬಣ್ಣ ಬಳಿದು ದುಡ್ಡು ಪಡೆಯದೇ ಹೋಗುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ನಮ್ಮ ಮನೆಯ ಗೋಡೆಗಳು ನಮಗೇ ಸುಂದರವಾಗಿ ಕಾಣಿಸುತ್ತಿವೆ. ಈ ಗೋಡೆಗಳನ್ನು ಹೀಗೇ ಉಳಿಸಿಕೊಳ್ಳಬೇಕು ಎಂಬ ಜವಾಬ್ದಾರಿ ಈಗ ನಮ್ಮೊಳಗೆಯೇ ಮೂಡುತ್ತಿದೆ,” ಎನ್ನುವುದು ಆ ಮಹಿಳೆಯ ಮಾತು.

‘ಮಿಸಾಲ್‌ ಮುಂಬೈ’: ವಾಣಿಜ್ಯ ನಗರಿಯ ಸ್ಲಂ ಗೋಡೆಗಳೆಲ್ಲಾ ಈಗ ‘ವರ್ಣಮಯ’!
/misaal mumbai 

ಕಲಾವಿದರ ಆಸಕ್ತಿ ವೈಯಕ್ತಿಕ ಸಾಧನೆಯಿಂದ ಸಾಮಾಜಿಕ ಅಭಿವೃದ್ಧಿಯ ಕಡೆಗೆ ತಿರುಗದೇ ಹೋದರೆ, ಕಲಾವಿದರು ಬೆಳೆಯಲು ಸಾಧ್ಯವೇ ಇಲ್ಲ ಎನ್ನುವುದು ರೋಬೆಲ್‌ ನಗಿ ಅಭಿಪ್ರಾಯ. ಇಂತಹದ್ದೇ ಮನಸ್ಥಿತಿಯುಳ್ಳ ಕಲಾವಿದರನ್ನು ಒಟ್ಟುಗೂಡಿಸಿಕೊಂಡು ಮುಂದಿನ ದಿನಗಳಲ್ಲಿ ಛತ್ತೀಸ್‌ಗಢ, ಮಧ್ಯ ಪ್ರದೇಶ ಮತ್ತು ಒಡಿಶಾದ ಸ್ಲಂ ಪ್ರದೇಶಗಳಿಗಲ್ಲೂ ಕೂಡ ರಂಗು ಮೂಡಿಸಬೇಕು ಎಂಬ ಆಶಯವನ್ನು ರೋಬೆಲ್‌ ನಗಿ ಹೊಂದಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಮತ್ತು ಬಾಲಿವುಡ್‌ನ ಸೂಪರ್‌ಸ್ಟಾರ್‌ ಅಮಿರ್‌ ಖಾನ್‌ ಕೂಡ ‘ಮಿಸಾಲ್‌ ಮುಂಬೈ’ ನಡೆಸುತ್ತಿರುವ ಈ ಕಾರ್ಯವನ್ನು ಶ್ಲಾಘಿಸಿದ್ದರು. ಸಾಮಾಜಿಕ ಕಳಕಳಿಯುಳ್ಳ ಯಾರೇ ಆಗಲಿ, ಈ ಕಾರ್ಯವನ್ನು ಶ್ಲಾಘಿಸಲೇಬೇಕಿದೆ. ಇಂತಹ ಸಾಮಾಜಿಕ ಅಭಿವೃದ್ಧಿಯತ್ತ ಚಿಂತಿಸುವ ಸಂಘ ಸಂಸ್ಥೆಗಳ ಸಂಖ್ಯೆಯೂ ಕೂಡ ಹೆಚ್ಚಾಗಬೇಕಿದೆ.

When your work becomes your passion and your passion becomes your life is when you create magic and give unconditionally 🙏🏻😊 #rnaf #misaalmumbai #firsttrailer #art #artist #colours #happiness #smiles #passion #love #hardwork #teamwork ... Let’s spread happiness through colours 😊🙏🏻😍 @poonammahjan @ashishshelar

Posted by Misaal Mumbai on Monday, January 22, 2018