samachara
www.samachara.com
‘ಹ್ಯಾಪಿ ಫ್ರೆಂಡ್‌ಶಿಪ್‌ ಡೇ’; ಸ್ನೇಹ ಸಂಭ್ರಮದ ಈ ಒಂದು ದಿನ ಹುಟ್ಟಿದ್ದೆಲ್ಲಿ?
ಪಾಸಿಟಿವ್

‘ಹ್ಯಾಪಿ ಫ್ರೆಂಡ್‌ಶಿಪ್‌ ಡೇ’; ಸ್ನೇಹ ಸಂಭ್ರಮದ ಈ ಒಂದು ದಿನ ಹುಟ್ಟಿದ್ದೆಲ್ಲಿ?

ಭಾರತದಾದ್ಯಂತ ಇಂದು ಫ್ರೆಂಡ್‌ಶಿಪ್‌ ಡೇ ಶುಭಾಷಯಗಳದ್ದೇ ಸದ್ದು. ಆದರೆ ಫ್ರೆಂಡ್‌ಶಿಪ್‌ ಡೇ ಶುರುವಾಗಿದ್ದೇಗೆ ಎಂಬ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಅದಕ್ಕಾಗಿಯೇ ಈ ಲೇಖನ...

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಇಂದು ಎಲ್ಲರ ಸೆಲ್‌ ಫೋನ್‌ಗಳಲ್ಲೂ ‘ಫ್ರೆಂಡ್‌ಶಿಪ್‌ ಡೇ’ನದ್ದೇ ಸಂಭ್ರಮ. ಹಲವಾರು ಜನರಿಂದ ಶುಭಾಷಯಗಳು, ಜಿಫ್‌ಗಳು, ಇಮೇಜ್‌ಗಳ ಜತೆಗೆ ಎಂದೋ ಒಡನಾಟ ಕಳೆದುಹೋದ ಸ್ನೇಹಿತರಿಂದ ವಿಷಸ್‌ ಮೆಸೇಜ್‌ ಕಂಡಾಗ ಆಗುವ ಆನಂದಕ್ಕೆ ಪಾರವೇ ಇಲ್ಲ. ಬಹುಪಾಲು ಜನ ಫ್ರೆಂಡ್‌ಶಿಪ್‌ ಡೇ ಆಚರಿಸುತ್ತಿದ್ದೇವೆ ಎನ್ನುವುದೇನೋ ನಿಜ. ಆದರೆ ಅದರ ಹಿನ್ನೆಲೆಯ ಬಗ್ಗೆ ಮಾಹಿತಿ ಇರುವುದಿಲ್ಲ. ಆದ್ದರಿಂದ ಈ ಕುರಿತು ಮಾಹಿತಿ ನೀಡುವ ಪ್ರಯತ್ನವೇ ಈ ಲೇಖನ.

ಫ್ರೆಂಡ್‌ಶಿಪ್‌ ಡೇ ಎಂಬ ಆಚರಣೆಯನ್ನು ಮೊದಲಿಗೆ ಆಚರಣೆಗೆ ತಂದಿದ್ದು ಜೋಯ್ಸ್‌ ಹಾಲ್‌ ಎಂಬ ಅಮೆರಿಕಾದ ವ್ಯಕ್ತಿ. ರಜೆ ಇರುವ ದಿನದಂದು ಫ್ರೆಂಡ್‌ಶಿಪ್‌ ಡೇ ಆಚರಿಸುವುದಾಗಿ ಜೋಯ್ಸ್‌ ಹಾಲ್‌ ತಿಳಿಸಿದ್ದ. ನಂತರದಲ್ಲಿ ಈ ದಿನವನ್ನು ಅಮೆರಿಕಾದ ಗ್ರೀಟಿಂಗ್‌ ಕಾರ್ಡ್‌ ನ್ಯಾಷನಲ್‌ ಅಸೋಸಿಯೇಷನ್‌ ಮುನ್ನೆಲೆಗೆ ತರುವಲ್ಲಿ ನಿರತವಾಯಿತು. ಆದರೆ ಸಂಸ್ಥೆಯ ಈ ಕೆಲಸ ‘ಕರ್ಮಷಿಕಲ್‌ ಗಿಮಿಕ್‌’ ಎಂದೆನಿಸಿಕೊಂಡ ಕಾರಣ ಸಂಸ್ಥೆ ಹಿಂದೆ ಸರಿಯಿತು. ಮುಂದಿನ ದಿನಗಳಲ್ಲಿ ಫ್ರೆಂಡ್‌ಶಿಪ್‌ ಡೇ ಗ್ರೀಟಿಂಗ್‌ ಕಾರ್ಡ್‌ ಹಂಚುವವರ ಸಂಖ್ಯೆಯೂ ಹೆಚ್ಚಾಗಿ, ಯುರೋಪ್‌, ಏಷ್ಯಾ ಖಂಡಗಳಿಗೂ ಕೂಡ ಫ್ರೆಂಡ್‌ಶಿಪ್‌ ಡೇ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿತು.

ಮೊದಲು ಸ್ನೇಹಿತರ ದಿನವನ್ನು ವಿಶ್ವದ ಮಟ್ಟದಲ್ಲಿ ಆಚರಿಸುವ ಯೋಚನೆ ಮಾಡಿದ್ದು 1958ರ ಜುಲೈ 20ರಂದು. ಪೆರುಗ್ವೆಯ ಡಾ.ರೋಮಿಯೋ ಆರ್ಟೆಮಿನೋ ಎಂಬ ವ್ಯಕ್ತಿಗೆ ಸ್ನೇಹಿತರೊಟ್ಟಿಗೆ ಭೋಜನ ಕೂಟ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಯೋಚನೆ ಹೊಳೆದಿತ್ತು. ಅದರ ಭಾಗವಾಗಿ ಇಡೀ ವಿಶ್ವದಲ್ಲಿ ಫ್ರೆಂಡ್‌ಶಿಪ್‌ ಡೇಯನ್ನು ಪ್ರಚಾರ ಮಾಡಲು ಸಂಸ್ಥೆಯೊಂದು ಸಿದ್ಧವಾಯಿತು. ವರ್ಗ, ವರ್ಣ, ಧರ್ಮಗಳನ್ನು ಮೀರಿ ಜಗತ್ತಿನ ಹಲವಾರು ಜನ ಈ ಸಂಸ್ಥೆಯ ಸದಸ್ಯತ್ವ ಪಡೆದರು. ಜುಲೈ 30ನ್ನು ವಿಶ್ವ ಸ್ನೇಹಿತರ ದಿನ ಎಂದು ಕರೆಯಲಾಯಿತು. ಅಂದಿನಿಂದ ಹಲವಾರು ದೇಶಗಳ ಜನರು ಸ್ನೇಹಿತರ ದಿನದ ಆಚರಣೆಗೆ ಮುಂದಾದರು.

ಹಲವಾರು ವರ್ಷಗಳಿಂದ ವಿಶ್ವಸಂಸ್ಥೆ ಜುಲೈ 30ರಂದು ವಿಶ್ವ ಸ್ನೇಹಿತರ ದಿನವನ್ನು ಅಚರಿಸಿಕೊಂಡು ಬರುತ್ತಿದೆ. ತನ್ನೆಲ್ಲಾ ಸದಸ್ಯರನ್ನು ಕರೆದು ಸ್ನೇಹ ಹಂಚಿಕೊಳ್ಳುತ್ತಿದೆ. ಎಲ್ಲಾ ಸಮುದಾಯಗಳ ಕಲೆ ಮತ್ತು ಸಂಪ್ರದಾಯಗಳ ಜತೆಗೆ ವಿಶ್ವ ಸ್ನೇಹಿತರ ದಿನವನ್ನು ಆಚರಿಸುತ್ತಿದೆ. ಶಿಕ್ಷಣ ಮತ್ತು ಅರಿವು ಮೂಡಿಸುವುದರ ಮೂಲಕ ಜಗತ್ತಿನಲ್ಲಿ ಸ್ನೇಹ ಬಿತ್ತುವ ಕಾರ್ಯ ನಡೆಸುತ್ತಿದೆ.

ಸದ್ಯ ಭಾರತ, ನೇಪಾಳ, ಬಾಂಗ್ಲಾದೇಶ ಮತ್ತು ದಕ್ಷಿಣ ಅಮೆರಿಕಾಶದ ದೇಶಗಳಲ್ಲಿ ಫ್ರೆಂಡ್‌ಶಿಪ್‌ ಡೇ ದೊಡ್ಡ ಪ್ರಮಾಣದಲ್ಲಿ ಚಾಲ್ತಿಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಜಗತ್ತು ತೆರೆದುಕೊಂಡ ನಂತರ ಫ್ರೆಂಡ್‌ಶಿಪ್‌ ಡೇ ಆಚರಣೆಯೂ ಕೂಡ ಜೋರಾಗಿದೆ. ಇದೊಂದು ‘ಮಾರ್ಕೆಟಿಂಗ್‌ ಗಿಮಿಕ್‌’ ಎಂಬ ಅನುಮಾನದ ನಡುವೆಯೂ ಕೂಡ ಜನ ತಮ್ಮ ಸ್ನೇಹಿತರನ್ನು ನೆನೆದು ಶುಭಾಶಯಗಳನ್ನು ತಿಳಿಸಿ, ಸಾಧ್ಯವಾದರೆ ಉಡುಗೊರೆಗಳನ್ನೂ ಕೂಡ ನೀಡುತ್ತಾರೆ.

ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಫ್ರೆಂಡ್‌ಶಿಪ್‌ ಡೇ ನಡೆಯುತ್ತಿದೆಯಾದರೂ ಎಲ್ಲೆಡೆಯೂ ಒಂದೇ ದಿನ ನಡೆಯುವುದಿಲ್ಲ. ಭಾರತದಲ್ಲಿ ಆಗಸ್ಟ್‌ ತಿಂಗಳ ಮೊದಲನೇ ಭಾನುವಾರವನ್ನು ಫ್ರೆಂಡ್‌ಶಿಪ್‌ ಡೇ ಆಗಿ ಆಚರಿಸಿದರೆ, ಅಮೆರಿಕಾದಲ್ಲಿ 2ನೇ ಭಾನುವಾರದಂದು ಸ್ನೇಹಿತರ ದಿನ ಆಚರಿಸಲಾಗುತ್ತದೆ. ಬ್ರೆಜಿಲ್‌ ಮತ್ತು ಅರ್ಜೆಂಟೈನಾದ ಜನರು ಜುಲೈ 20ರಂದು ಸ್ನೇಹವನ್ನು ಸಂಭ್ರಮಿಸುತ್ತಾರೆ. ಅದು ಸಾರ್ವತ್ರಿಕ ರಜೆಯಲ್ಲದಿದ್ದರೂ ಸಂಜೆಯ ವೇಳೆ ಸೇರಿ ಪಾರ್ಟಿ ಮಾಡುತ್ತಾರೆ.

ಫಿನ್‌ಲ್ಯಾಂಡ್‌ ಮತ್ತು ಎಸ್ಟೋನಿಯಾ ದೇಶಗಳಲ್ಲಿ ಫೆಬ್ರವರಿ 14ರ ಪ್ರೇಮಿಗಳ ದಿನವನ್ನೆ ಸ್ನೇಹಿತರ ದಿನವನ್ನಾಗಿ ಆಚರಿಸುತ್ತಾರೆ. ಪೆರುಗ್ವೆಯಲ್ಲಿ ಜುಲೈ 30ರಂದು ಬಾರ್‌ ಮತ್ತು ನೈಟ್‌ಕ್ಲಬ್‌ಗಳಲ್ಲಿ ಸ್ನೇಹಿತರ ದಿನಾಚರಣೆ ನಡೆಯುತ್ತದೆ. ಪೆರು ದೇಶದಲ್ಲಿ 2009ರಿಂದ ಜುಲೈ ಮೊದಲನೇ ಶನಿವಾರ ಸ್ನೇಹಿತರ ದಿನವಾಗಿ ಗುರುತಿಸಿಕೊಂಡಿದೆ. ಅರಬ್‌ ದೇಶಗಳಲ್ಲಿ ಜುಲೈ 19ರ ಸಂಜೆ ಸ್ನೇಹಿತರ ದಿನಾಚರಣೆಯ ಹೆಸರಿನಲ್ಲಿ ಬಾರ್‌, ಪಬ್‌, ಕ್ಲಬ್‌ಗಳೆಲ್ಲಾ ರಿಸರ್ವ್‌ ಆಗಿರುತ್ತವೆ.

ಭಾರತದಲ್ಲಿ ಬಹುಪಾಲು ಜನರ ಫ್ರೆಂಡ್‌ಶಿಪ್‌ ಡೇ ಅಚರಣೆ ಆನ್‌ಲೈನ್‌ ಶುಭಾಷಯಗಳು, ಫೋಟೊ ಕೊಲಾಜ್‌ಗಳು, ಇಮೇಜ್‌ಗಳಲ್ಲೇ ಮುಗಿದು ಹೋಗುತ್ತದೆ. ಹತ್ತಿರ ಇರುವವರಿಗಷ್ಟೇ ಫ್ರೆಂಡ್‌ಶಿಪ್‌ ಬ್ಯಾಂಡ್‌ ಅಥವಾ ಗ್ರೀಟಿಂಗ್‌ ಭಾಗ್ಯ ದೊರೆಯುತ್ತದೆ. ಇಂತಹ ಆಚರಣೆಗಳೆಲ್ಲಾ ಕೇವಲ ಬಂಡವಾಳಶಾಹಿಗಳು ಹುಟ್ಟುಹಾಕುತ್ತಿರುವ ಕೊಳ್ಳುಬಾಕ ಸಂಸ್ಕೃತಿಯ ಭಾಗ ಎಂಬ ಆರೋಪವೂ ಈ ಆಚರಣೆಗಿದೆ.

ಇದೆಲ್ಲಕ್ಕಿಂತ ಹೆಚ್ಚಾಗಿ ಸ್ನೇಹ ಗಟ್ಟಿಗೊಳ್ಳಲು ಇಂತಹದ್ದೊಂದು ದಿನದ ಅಗತ್ಯವೂ ಕೂಡ ಇದೆ. ನಿಮ್ಮ ನಿಮ್ಮ ಸ್ನೇಹಿತರೊಂದಿಗೆ ಜಗಳವಾಡಿ ಮಾತು ಬಿಟ್ಟಿದ್ದೀರಾದರೆ ಇಂದೇ ಫ್ರೆಂಡ್‌ಶಿಪ್‌ ಡೇ ವಿಶ್‌ ಮಾಡಿ. ಸ್ನೇಹ ಮತ್ತೆ ಮುಂದುವರಿಯಲೂಬಹುದು. ದ್ವೇಷ ಸಾಧಿಸುವುದರಿಂದ ಯಾವ ಲಾಭವೂ ಇಲ್ಲ. ಕೊನೆಗೆ ಉಳಿಯುವುದು ಸ್ನೇಹ ಪ್ರೀತಿಗಳಷ್ಟೇ.