samachara
www.samachara.com
ಭೂಮಿಯ ಮೇಲೆ ಮನುಷ್ಯನ ಅಸ್ತಿತ್ವ ಜಸ್ಟ್ 0.01%; ನಶಿಸಿಹೋದ ಜೀವಿಗಳು 83%...
ಪಾಸಿಟಿವ್

ಭೂಮಿಯ ಮೇಲೆ ಮನುಷ್ಯನ ಅಸ್ತಿತ್ವ ಜಸ್ಟ್ 0.01%; ನಶಿಸಿಹೋದ ಜೀವಿಗಳು 83%...

ಒಟ್ಟಾರೆ ಜೀವ ಸಂಕುಲದ ಪೈಕಿ ಮನುಷ್ಯ ಜೀವಿಯ ಪ್ರಮಾಣ ಶೇ.0.01 ಅಷ್ಟೇ. ಆದರೆ ನಮ್ಮಿಂದ ಶೇ.83ರಷ್ಟು ಪ್ರಾಣಿಗಳು ನಶಿಸಿಹೋಗಿವೆ. 

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಇಂದು ಇಡೀ ಭೂಮಿಯ ಮೇಲೆ ಸುಮಾರು 760 ಕೋಟಿ ಜನ ಮನುಷ್ಯರಿದ್ದೇವೆ. ಈ ಸಂಖ್ಯೆಯನ್ನು ಭೂಮಿಯ ಮೇಲಿನ ಎಲ್ಲಾ ಜೀವ ಸಂಕುಲಗಳ ಜತೆಯಿಟ್ಟು ನೋಡಿದರೆ ಮಾನವನ ಪ್ರಮಾಣ ಜೀವ ಸಂಕುಲದ ಶೇ.0.01ರಷ್ಟು ಮಾತ್ರ. ಆದರೆ 0.01ರಷ್ಟಿರುವ ಮನುಷ್ಯ ಜೀವಿಗಳಿಂದ ಶೇ.83ರಷ್ಟು ಅರಣ್ಯದಲ್ಲಿ ವಾಸಿಸುತ್ತಿದ್ದ ಜೀವ ಸಂಕುಲವೇ ಕಾಣೆಯಾಗಿದೆ. ಅರ್ಧದಷ್ಟು ಗಿಡಮರದ ತಳಿಗಳು ನಶಿಸಿಹೋಗಿವೆ. ಭೂಮಿಯ ಸಮತೋಲನವನ್ನು ಕಾಪಾಡುವಲ್ಲಿ ಅಗತ್ಯಕ್ಕಿಂತಲೂ ಹೆಚ್ಚಾಗಿರುವುದೆಂದರೆ ಮಾನವ ತನ್ನ ಅಗತ್ಯಗಳಿಗಾಗಿ ಅವಲಂಭಿಸಿರುವ ಸಾಕುಪ್ರಾಣಿಗಳು.

ವರದಿಯೊಂದು ಹೇಳಿರುವ ಪ್ರಕಾರ ಭೂಮಿಯ ಮೇಲೆ ವಾಸಿಸುತ್ತಿರುವ ಜೀವ ಸಂಕುಲಗಳ ಪೈಕಿ ಅತೀ ಹೆಚ್ಚಿನ ಪ್ರಮಾಣವನ್ನು ಹೊಂದಿರುವುದು ಗಿಡಮರಗಳು. ಒಟ್ಟು ಜೀವಸಂಕುಲದ ಶೇ.82ರಷ್ಟನ್ನು ಗಿಡಮರಗಳು ಪ್ರತಿನಿಧಿಸುತ್ತಿವೆ. ಗಿಡಮರಗಳ ನಂತರದ ಸ್ಥಾನ ಬ್ಯಾಕ್ಟೀರಿಯಾಗಳದ್ದು. ಶೇ13ರಷ್ಟು ಜೀವಸಂಕುಲದ ಭಾಗವನ್ನು ಬ್ಯಾಕ್ಟೀರಿಯಾಗಳು ಆಕ್ರಮಿಸಿವೆ. ಕೀಟಗಳಿಂದ ಶಿಲೀಂಧ್ರಗಳವರೆಗೂ, ಜಲಚರಗಳಿಂದ ದೊಡ್ಡ ದೊಡ್ಡ ಪ್ರಾಣಿಗಳೆಲ್ಲವೂ ಪ್ರತಿನಿಧಿಸುವುದು ಉಳಿದ ಕೇವಲ ಶೇ.5ರಷ್ಟನ್ನು ಮಾತ್ರ.

ಭೂಮಿಯ ಮೇಲೆ ಮನುಷ್ಯನ ಅಸ್ತಿತ್ವ ಜಸ್ಟ್ 0.01%; ನಶಿಸಿಹೋದ ಜೀವಿಗಳು 83%...

ಬಿಬಿಸಿ ಸುದ್ದಿ ವಾಹಿನಿಯ ‘ಬ್ಲೂ ಪ್ಲಾನೆಟ್‌’ ಹೆಸರಿನ ಸರಣಿ ಕಾರ್ಯಕ್ರಮ ಸಮುದ್ರದಾಳದ ಜೀವ ಸಂಕುಲಗಳ ಬಗ್ಗೆ ಬೆಳಕು ಚೆಲ್ಲಿತ್ತು. ಇಡೀ ವಿಶ್ವ ಅದನ್ನು ಅಚ್ಚರಿಯಿಂದ ಕಂಡಿತ್ತು. ಜಲಚರಗಳೇ ಜಗತ್ತಿನ ಅತಿದೊಡ್ಡ ಜೀವ ಸಂಕುಲ ಎಂದು ಕೂಡ ನಂಬಲಾಗಿತ್ತು. ಆದರೆ ಈ ವರದಿ ಬಿಬಿಸಿಯ ಸರಣಿಯನ್ನು ಉಲ್ಟಾ ಆಗಿಸಿದೆ. ಸಮುದ್ರದಾಳದಿಂದ ಕೆರೆ, ಹೊಳೆಗಳಲ್ಲೆಲ್ಲಾ ಜೀವಿಸುವ ಜಲಚರಗಳ ಒಟ್ಟು ಪ್ರಮಾಣ ಜೀವಸಂಕುಲದ ಶೇ.1ರಷ್ಟು ಅಷ್ಟೇ.

ಇಡೀ ಜೀವ ಸಂಕುಲದ ಪೈಕಿ ತನ್ನನ್ನು ತಾನು ಶ್ರೇಷ್ಟ ಜೀವಿ ಎಂದುಕೊಂಡಿರುವ ಮಾನವ ತನ್ನ ಅನುಕೂಲತೆಗಳಿಗಾಗಿ ಇಡೀ ಭೂಮಿಯ ಜೀವಿಗಳ ಮೇಲೆ ಎಸಗಿರುವ ಕ್ರೌರ್ಯವೇನು ಎನ್ನುವುದನ್ನು ಈ ವರದಿ ಬಿಡಿಸಿಟ್ಟಿದೆ. ಇಂದು ಇಡೀ ಭೂಮಿಯ ಮೇಲಿರುವ ಪಕ್ಷಿ ಸಂಕುಲದ ಪೈಕಿ ಶೇ.70ರಷ್ಟನ್ನು ಕೋಳಿಗಳೇ ತುಂಬಿವೆ. ಉಳಿದ ಶೇ.30ರಷ್ಟು ಭಾಗವನ್ನಷ್ಟೇ ಇತರೆ ಪಕ್ಷಿಗಳು ತುಂಬಿವೆ.

ಭೂಮಿಯ ಮೇಲೆ ಮನುಷ್ಯನ ಅಸ್ತಿತ್ವ ಜಸ್ಟ್ 0.01%; ನಶಿಸಿಹೋದ ಜೀವಿಗಳು 83%...

ಸಸ್ತನಿಗಳ ಕತೆಯೂ ಇದೇ. ಒಟ್ಟಾರೆ ಸಸ್ತನಿಗಳ ಪೈಕಿ ಶೇ.60ರಷ್ಟು ಭಾಗದಷ್ಟು ಮನುಷ್ಯನ ಸಾಕುಪ್ರಾಣಿಗಳೇ ತುಂಬಿವೆ. ಶೇ.34ರಷ್ಟನ್ನು ಮಾನವ ಆಕ್ರಮಿಸಿಕೊಂಡಿದ್ದಾನೆ. ಉಳಿದ ಶೇ.4ರಷ್ಟು ಮಾತ್ರವೇ ವನ್ಯ ಸಸ್ತನಿಗಳು.

ಭೂಮಿಯ ಮೇಲೆ ಮನುಷ್ಯನ ಅಸ್ತಿತ್ವ ಜಸ್ಟ್ 0.01%; ನಶಿಸಿಹೋದ ಜೀವಿಗಳು 83%...

ವನ್ಯಮೃಗಗಳ ಕುರಿತಾದ ಸಾಕ್ಷ್ಯ ಚಿತ್ರಗಳನ್ನು ನೋಡುವಾಗ ದೊಡ್ಡ ದೊಡ್ಡ ಪಕ್ಷಿಗಳ ಹಿಂಡು ಕಾಣಿಸುತ್ತದೆ. ಹೆಸರೇ ತಿಳಿಯದ ಸಹಸ್ರಾರು ಪಕ್ಷಿ ಜಾತಿಗಳಿವೆ. ಲೆಕ್ಕಕ್ಕೆ ಸಿಗುವ ಕಾರಣದಿಂದ ಕೆಲವು ಕಾಡು ಪ್ರಾಣಿಗಳ ಸಂತತಿ ನಶಿಸುತ್ತಿರುವ ಬಗ್ಗೆ, ಹಲವು ಪ್ರಾಣಿ ಸಂತತಿಗಳು ಈಗಾಗಲೇ ನಶಿಸಿರುವ ಬಗ್ಗೆ ಮಾಹಿತಿಯಿದೆ. ಹೀಗೆ ನೋಡುವಾಗ ಈ ಅಂಕಿ ಅಂಶಗಳು ಅಷ್ಟು ದೊಡ್ಡವೆನಿಸುವುದಿಲ್ಲ. ಒಟ್ಟಾರೆ ಜೀವ ಜಗತ್ತಿನ ಜತೆಗಿಟ್ಟು ಕಂಡಾಗ ಮಾತ್ರವೇ ಮಾನವ ಕೃತ್ಯಗಳಿಂದ ಪಕೃತಿಯ ಮೇಲೆ ಉಂಟಾಗುತ್ತಿರುವ ಹಾನಿಯ ಬಗ್ಗೆ ಸ್ಪಷ್ಟತೆ ದೊರೆತಿದೆ.

ಭೂಮಿಯ ನಾಲ್ಕು ಬಿಲಿಯನ್‌ ವರ್ಷಗಳ ಇತಿಹಾಸದಲ್ಲಿ ಮಾನವನಿಂದ ಅಳಿದಿರುವಷ್ಟು ಜೀವಿಗಳು ಇನ್ಯಾರಿದಂದಲೂ ಅಳಿದಿಲ್ಲ. ಅಧುನಿಕತೆಯತ್ತ ಶರವೇಗದಲ್ಲಿ ಸಾಗುತ್ತಿರುವ ಮಾನವನಿಂದ ಕಳೆದ 50 ವರ್ಷಗಳ ಅವಧಿಯಲ್ಲಿ ಅಳಿದುಹೋದ ಜೀವ ಜಗತ್ತಿನ ವಿಶಿಷ್ಠ ಜೀವಿಗಳ ಪ್ರಮಾಣ ಶೇ.50ರಷ್ಟು.

ಭೂಮಿಯ ಮೇಲೆ ಮನುಷ್ಯನ ಅಸ್ತಿತ್ವ ಜಸ್ಟ್ 0.01%; ನಶಿಸಿಹೋದ ಜೀವಿಗಳು 83%...

ಭೂಮಿಯ ಇತಿಹಾಸದಲ್ಲಿ ಪ್ರಾಕೃತಿಕ ವಿಕೋಪಗಳನ್ನು ಹೊರತುಪಡಿಸಿ ಜೀವಿಗಳ ಅಳಿವು ಪ್ರಾರಂಭಗೊಂಡಿದ್ದು ಮಾನವ ಕೃಷಿಕನಾದ ಕಾಲದಿಂದ. ಭೂಮಿಯ ಇತಿಹಾಸಕ್ಕೆ ಹೋಲಿಸಿಕೊಂಡರೆ ಇತ್ತೀಚಿಗಷ್ಟೇ ಅರಂಭಗೊಂಡ ಕೈಗಾರಿಕಾ ಕ್ರಾಂತಿ ಭೂಮಿಯ ಮೇಲಿನ ಬಹುಪಾಲು ಜೀವ ಸಂತತಿಯನ್ನು ಇಲ್ಲವಾಗಿಸಿದೆ.ಅಂದಿನ ದಿನಗಳ ಜತೆಗೆ ತಾಳೆ ಹಾಕಿದರೆ ಇಂದು ಇಲಿಯಿಂದ ಆನೆಯವರೆಗೂ ಬದುಕಿರುವ ಸಸ್ತನಿಗಳ ಸಂಖ್ಯೆ 1/6 ಭಾಗವಷ್ಟೇ. ಅಧ್ಯಯನದಿಂದ ಬಹಿರಂಗಗೊಂಡಿರುವ ಈ ಸಂಗತಿ ವಿಜ್ಞಾನಿಗಳಿಗೂ ಕೂಡ ಆಶ್ಚರ್ಯವನ್ನು ಉಂಟುಮಾಡಿದೆ.

ಅಧ್ಯಯನಕಾರರ ಮುಖ್ಯಸ್ಥ ಮಿಲೋ ಹೇಳುವಂತೆ ಇಡೀ ಭೂಮಿಯ ಮೇಲಿನ ಜೀವ ಸಂಕುಲವನ್ನೇ ಮಾನವ ಅದಲು ಬದಲಾಗಿಸಿದ್ದಾನೆ. “ನಾನು ನನ್ನ ಮಗಳೊಂದಿಗೆ ಪಝಲ್‌ ಜತೆ ಆಟ ಆಡುವಾಗ ಆನೆಯ ಪಕ್ಕ ಜಿರಾಫೆಯನ್ನು ನಿಲ್ಲಿಸುತ್ತೇನೆ. ಜಿರಾಫೆಯ ಪಕ್ಕ ಘೇಂಡಾಮೃಗಗಳನ್ನು ನಿಲ್ಲಿಸುತ್ತೇನೆ. ಆದರೆ ನೈಜವಾಗಿ ಇದು ಸಾಧ್ಯವಿಲ್ಲದ ಮಾತಾಗಿದೆ. ನಿಜ ಜೀವನದಲ್ಲಿ ಹೀಗೆ ಪ್ರಾಣಿಗಳನ್ನು ಜೋಡಿಸುತ್ತಾ ಸಾಗಿದರೆ ಹಸುವಿನ ಪಕ್ಕ ಹಸು, ಆದರ ಪಕ್ಕ ಮತ್ತೊಂದು ಹಸು, ನಂತರ ಇನ್ನೊಂದು ಹಸು, ಆಮೇಲೆ ಮತ್ತೆ ಹಸು, ನಂತರದಲ್ಲಿ ಕೋಳಿಗಳು ಸಿಗುತ್ತವೆ,” ಎನ್ನುತ್ತಾರೆ ಮಿಲೋ.

ತೂಕದ ವಿಚಾರಕ್ಕೆ ಬರುವುದಾದರೆ ವಿಶ್ವದ ಎಲ್ಲಾ ಮಾನವರ ತೂಕ ಇತರೆ ಜೀವ ಪ್ರಬೇಧಗಳ ತೂಕಕ್ಕಿಂತ ಕಡಿಮೆ. ಭೂಮಿಯ ಮೇಲಿರುವ ಒಟ್ಟು ವೈರಾಣುಗಳೇ ಇಡೀ ಮಾನವರ ತೂಕಕ್ಕಿಂತ 3 ಪಟ್ಟು ಹೆಚ್ಚು ತೂಕವನ್ನು ಹೊಂದಿವೆ. ಹುಳಗಳೂ ಕೂಡ 3 ಪಟ್ಟು ಜಾಸ್ತಿ ತೂಗುತ್ತವೆ. ಒಟ್ಟಾರೆ ಎಲ್ಲ ಪ್ರಬೇಧದ ಮೀನುಗಳು ಮಾನವನಿಗಿಂತ 12 ಹೆಚ್ಚು ತೂಕವನ್ನು ಹೊಂದಿದ್ದರೆ, ಶಿಲೀಂಧ್ರಗಳು ಜಗತ್ತಿನ 760 ಕೋಟಿ ಮಾನವರ ತೂಕಕ್ಕಿಂತ 200 ಪಟ್ಟು ಹೆಚ್ಚು ತೂಕ ಹೊಂದಿವೆ. ಬ್ಯಾಕ್ಟೀರಿಯಾಗಳು ಮಾನವ ಪ್ರಭೇದಕ್ಕಿಂತ 1,200 ಪಟ್ಟು ಹೆಚ್ಚು ತೂಕ ಹೊಂದಿದ್ದರೆ, ಸಸ್ಯಗಳು ಮಾನವರಿಗಿಂತ 7,500 ಪಟ್ಟು ಹೆಚ್ಚು ತೂಕವನ್ನು ಹೊಂದಿವೆ.

ಭೂಮಿಯ ಮೇಲೆ ಮನುಷ್ಯನ ಅಸ್ತಿತ್ವ ಜಸ್ಟ್ 0.01%; ನಶಿಸಿಹೋದ ಜೀವಿಗಳು 83%...

ಈ ಸಂಗತಿಗಳನ್ನು ತಿಳಿದ ನಂತರ ಭೂಮಿಯ ಮೇಲೆ ಮಾನವನ ಅಸ್ಥಿತ್ವ ತೃಣಮಾತ್ರ ಎನಿಸುತ್ತದೆ. ಆದರೆ ಭೂಮಿಯ ಮೇಲೆ ಮಾನವನಿಂದ ಉಂಟಾಗಿರುವ ಹಾನಿ ಮಾತ್ರ ಅಪಾರವಾದದ್ದು. “ನಾವು ರೂಢಿಸಿಕೊಂಡಿರುವ ಆಹಾರ ಕ್ರಮಗಳು ಪ್ರಾಣಿಗಳ, ಗಿಡಮರಗಳ ಮತ್ತು ಇತರೆ ಜೀವಿಗಳ ಆವಾಸಸ್ಥಾನಗಳ ಮೇಲೆ ಅಗಾಧ ಪರಿಣಾಮವನ್ನು ಬೀರಿವೆ.” ಎನ್ನುತ್ತಾರೆ. ಮಿಲೋ.

“ಈ ವರದಿಯ ಅಂಶಗಳನ್ನು ಜನ ಗಂಭೀರವಾಗಿ ಪರಿಗಣಿಸಿದರೆ ಅವರ ಅಹಾರ ಕ್ರಮಗಳ ಮೇಲಿನ ದೃಷ್ಟಿಕೋನ ಬದಲಾಗುತ್ತದೆ ಎಂಬ ನಂಬಿಕೆಯಿದೆ. ನನಗಂತೂ ಸಸ್ಯಹಾರಿಯಾಗಲು ಸಾಧ್ಯವಿಲ್ಲ. ಆದರೆ ನನ್ನ ನಿರ್ಧಾರಗಳಿಂದ ಪ್ರಕೃತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ ಪ್ರಯತ್ನಿಸುತ್ತೇನೆ. ದನದ ಮಾಂಸ ಅಥವಾ ಕೋಳಿಯ ಮಾಂಸದ ಬದಲು ಸೋಯಾ ಉತ್ಪನ್ನಗಳನ್ನು ಬಳಸಬಹುದೇ ಎಂದು ಚಿಂತಿಸುತ್ತೇನೆ,” ಎನ್ನುತ್ತಾರೆ ಮಿಯೋ.

ಅಧ್ಯಯನಕಾರರು ಈ ವರದಿಯನ್ನು ತಯಾರಿಸಲು 100ಕ್ಕೂ ಅಧಿಕ ಅಧ್ಯಯನಗಳನ್ನು ನಡೆಸಿ ಅಂಕಿ ಅಂಶಗಳನ್ನು ಸಂಗ್ರಹಿಸಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಬಳಸಿ ಜೀವ ಸಂಕುಲದ ಅಧ್ಯಯನ ನಡೆಸಿದ್ದಾರೆ. ಅಗಾಧ ಭೂಪ್ರಮಾಣವನ್ನು ಸ್ಕ್ಯಾನ್‌ ಮಾಡಬಲ್ಲ ಸ್ಯಾಟಲೈಟ್‌ ರಿಮೋಟ್‌ ಸೆನ್ಸಿಂಗ್‌ ವ್ಯವಸ್ಥೆಯನ್ನು ಬಳಸಿಕೊಂಡಿದ್ದಾರೆ. ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳನ್ನೂ ಕೂಡ ಸಮಗ್ರವಾಗಿ ಸಂಶೋಧನೆ ನಡೆಸಿದ್ದಾರೆ.

ಅಮೆರಿಕಾದ ರೂಟ್ಜರ್‌ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಶೋಧಕ ಪೌಲ್‌ ಫಾಲ್ಕೋವಸ್ಕಿ ಹೇಳುವಂತೆ, ಇದು ಭೂಗೋಳದ ಮೇಲಿನ ಇಡೀ ಜೀವರಾಶಿಯ ಬಗ್ಗೆ ನಡೆದಿರುವ ಮೊದಲ ಸಂಶೋಧನೆ. ವೈರಸ್‌ಗಳಿಂದ ಹಿಡಿದು ದೊಡ್ಡ ದೊಡ್ಡ ಪ್ರಾಣಿಗಳವರೆಗೆ ಎಲ್ಲಾ ರೀತಿಯ ಜೀವಿಗಳು ಈ ಸಂಶೋಧನೆಯ ಭಾಗವಾಗಿವೆ.

ಪೌಲ್‌ ಹೇಳುವಂತೆ ಈ ಸಂಶೋಧನೆ ಎರಡು ಮುಖ್ಯ ಸಂಗತಿಗಳನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಮೊದಲನೆಯದು, ಮಾನವ ಅತಿಯಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಆಹಾರ ಕ್ರಮ, ಮನರಂಜನೆ ಹೆಸರಿನಲ್ಲಿ ಕೆಲವು ಜೀವರಾಶಿಗಳನ್ನು ವಿನಾಶದಂಚಿಗೆ ತಂದು ನಿಲ್ಲಿಸಿರುವುದಲ್ಲದೇ, ಹಲವು ಜೀವರಾಶಿಗಳನ್ನು ನಿರ್ನಾಮ ಮಾಡಿದ್ದಾನೆ. ಎರಡನೇ ಸಂಗತಿಯೆಂದರೆ, ಇಂದಿಗೂ ಕೂಡ ಭೂಮಿಯ ಮೇಲೆ ಪ್ರಾಬಲ್ಯ ಸಾಧಿಸಿರುವುದು ಗಿಡಮರಗಳು. ಜೀವಜಗತ್ತಿನ ಬಹುಭಾಗ ಗಿಡಮರಗಳ ರೂಪದಲ್ಲಿ ಅಸ್ತಿತ್ವದಲ್ಲಿದೆ.

ಎರಡೂ ಮಾತುಗಳೂ ಕೂಡ ಸತ್ಯವೆನಿಸುತ್ತವೆ. ಮಿತಿ ಮೀರಿದ ಅಭಿವೃದ್ಧಿಯ ಹಿಂದೆ ಓಡುತ್ತಿರುವ ಮಾನವನಿಗೆ ತನಗೆ ತಕ್ಕಂತಹ ಅನುಕೂಲಗಳನ್ನು ಮಾಡಿಕೊಳ್ಳುವುದು ಮುಖ್ಯವಾಗಿದೆಯೇ ಹೊರತು ಪ್ರಕೃತಿಯ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಕಾಳಜಿ ಇಲ್ಲವಾಗಿದೆ. ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಪರಿಕಲ್ಪನೆಯಾಗಿಯಷ್ಟೇ ಉಳಿದಿದೆ. ಈ ವರದಿ ಅಂಕಿ ಅಂಶಗಳಿಂದಾರೂ ಮಾನವ ಸ್ವಲ್ಪ ವಿಚಲಿತನಾಗಬಹುದೇ ಎಂಬುದು ಎಲ್ಲಾ ಪರಿಸರ ಪ್ರೇಮಿಗಳ ನಿರೀಕ್ಷೆಯಷ್ಟೇ.